ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಾವಿವಿ ಕುಲಪತಿ ನೇಮಕ ತಾರಕಕ್ಕೆ

Rashmi Kasaragodu
Updated On : 4 Feb 2014, 12:58 pm

ಕ.ಪ್ರ.ವಾರ್ತೆ     ಬೆಂಗಳೂರು     ಫೆ. 3
ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ನೇಮಕ ವಿವಾದ ತಾರಕಕ್ಕೇರಿದ್ದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಗೂ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಪರ ಆರೋಪ- ಪ್ರತ್ಯಾರೋಪಗಳು ತೀವ್ರಗೊಂಡಿವೆ.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿ ಬಹಿರಂಗ ಚರ್ಚೆಗೆ ಬರುವಂತೆ ಪ್ರೊ.ಯು.ಆರ್.ಅನಂತಮೂರ್ತಿ ಅವರಿಗೆ ಶೋಧನಾ ಸಮಿತಿ ಸದಸ್ಯ ಡಾ.ಎನ್.ಎಸ್.ರಾಮೇಗೌಡ ಸವಾಲೆಸೆದಿದ್ದಾರೆ. ಮತ್ತೊಂದೆಡೆ ಅನಂತಮೂರ್ತಿ ಬಗ್ಗೆ ರಾಜ್ಯಪಾಲರು ಮಾಡಿರುವ ಹೇಳಿಕೆ ಕೀಳುಮಟ್ಟದ್ದು, ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಪ್ರಗತಿಪರ ಚಿಂತಕರ ವೇದಿಕೆ ಆಗ್ರಹಿಸಿದೆ. ಇಲ್ಲದಿದ್ದರೆ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಬೆದರಿಕೆಯನ್ನೂ ಒಡ್ಡಿದೆ. ದಾವಣಗೆರೆ ವಿವಿ ಕುಲಪತಿ ನೇಮಕ ಅನೈತಿಕ ಎಂದು ಅನಂತಮೂರ್ತಿ ಹೇಳಿದ ಬಳಿಕ ರಾಜ್ಯಪಾಲರು ಜ್ಞಾನಪೀಠ ಸಾಹಿತಿ ಅನಂತಮೂರ್ತಿ ವಿರುದ್ಧ ಕಿಡಿಕಾರಿದ್ದರು. ಈಗ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದ ಶೋಧನಾ ಸಮಿತಿ ಸದಸ್ಯರೊಬ್ಬರು ತಿರುಗಿಬಿದ್ದಿದ್ದಾರೆ.
ಶೋಧನಾ ಸಮಿತಿಯ ಸಭೆಗಳಲ್ಲಿ ಒಂದು ಅಭ್ಯರ್ಥಿಯ ಪರವಾಗಿ ಲಾಬಿ ನಡೆಸುತ್ತಿದ್ದ ಅನಂತಮೂರ್ತಿ ಅವರು, ಶೋಧನಾ ಸಮಿತಿ ಸದಸ್ಯರ ವಿರುದ್ಧ ಹತಾಶೆಯ ಆರೋಪಗಳನ್ನು ಮಾಡಿದ್ದಾರೆ. ಕುಲಪತಿ ನೇಮಕಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆ ಅಥವಾ ಸಿಐಡಿ, ಸಿಬಿಐನಿಂದ ವಿಚಾರಣೆ ನಡೆಸಲಿ ಎಂದು ವಿಶ್ರಾಂತ ಕುಲಪತಿ ರಾಮೇಗೌಡ ಕಿಡಿಕಾರಿದ್ದಾರೆ.
ಅನಂತಮೂರ್ತಿ ಅವರು ಮಾಧ್ಯಮಗಳ ಎದುರು ಹೋಗಿ ಶೋಧನಾ ಸಮಿತಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ತಾವು ಲಾಬಿ ಮಾಡುತ್ತಿದ್ದ ಅಭ್ಯರ್ಥಿಗೆ ಕುಲಪತಿ ಹುದ್ದೆ ದೊರೆಯಲಿಲ್ಲ ಎಂಬ ಅಸಮಾಧಾನದಿಂದ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ಸಾಬೀತು ಮಾಡಬಲ್ಲೆ. ಅನಂತಮೂರ್ತಿ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಆಹ್ವಾನ ನೀಡಿದ್ದಾರೆ.
ನೇಮಕ ಪ್ರಕ್ರಿಯೆ ಹೇಗಾಗಿದೆ?: ಕಳೆದ ನ.22ರಂದು ನಡೆದ ಶೋಧನಾ ಸಮಿತಿಯ ಮೊದಲ ಸಭೆಯಲ್ಲಿ 112 ಅಭ್ಯರ್ಥಿಗಳಲ್ಲಿ 16 ಪ್ರಾಧ್ಯಾಪಕರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿತ್ತು. ವಿವಿ ಕುರಿತ ದೂರದೃಷ್ಟಿ ಹಾಗೂ ಯೋಜನೆ ಕುರಿತಂತೆ ಸಂದರ್ಶನ ನಡೆಸಲು ತೀರ್ಮಾನಿಸಲಾಯಿತು. ಇದರ ಪ್ರಕಾರ ಡಿ.17ರಂದು ವಿಕಾಸಸೌಧದಲ್ಲಿ ಸಂದರ್ಶನ ನಡೆಸಿ ಮೂವರ ಹೆಸರನ್ನು ಅಂತಿಮಗೊಳಿಸಲಾಯಿತು. ಮೂವರು ಪ್ರಾಧ್ಯಾಪಕರ ಹೆಸರನ್ನು ಇಂಗ್ಲಿಷ್ ಅಕ್ಷರಮಾಲೆಯ ಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿಕೊಡಲಾಗಿತ್ತು.
ಆದರೆ ಕುಲಪತಿ ನೇಮಕದ ಆದೇಶ ಬಂದ ಬಳಿಕ ಮಾಧ್ಯಮದೆದುರು ಹೋಗಿ ಅನಂತಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಸರ್ಕಾರಕ್ಕೆ ಮೂವರು ಅಭ್ಯರ್ಥಿಗಳ ಹೆಸರನ್ನು ಕಳುಹಿಸಿಕೊಟ್ಟ ಬಳಿಕ ಶೋಧನಾ ಸಮಿತಿಯ ಕಾರ್ಯ ಸಮಾಪ್ತಿಯಾಗುತ್ತದೆ. ಈ ಸಾಮಾನ್ಯ ವಿಚಾರವನ್ನು ಅರಿಯದೇ ಅನಂತಮೂರ್ತಿ ಆರೋಪ ಮಾಡುತ್ತಿದ್ದಾರೆ ಎಂದು ರಾಮೇಗೌಡರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.



ರೋಗಿ ಎಂದು ಟೀಕಿಸುವುದು ಕೀಳುತನ. ಅಂಥ ಕೀಳು ಹೇಳಿಕೆ ನೀಡಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಬಗ್ಗೆ ಒಂದು ವಾರದೊಳಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಾದ್ಯಂತ ಸಹಿ ಸಂಗ್ರಹ ಚಳವಳಿ ನಡೆಸಲಾಗುವುದು. ಜತೆಗೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಲಾಗುವುದು.
- ಬಿ.ಸುರೇಶ್, ನಟ-ನಿರ್ದೇಶಕ



ಒಂದು ಅಭ್ಯರ್ಥಿ ಪರ ಸಾಹಿತಿ ಅನಂತಮೂರ್ತಿ ಲಾಬಿ ನಡೆಸಿದ್ದಾರೆ. ಈ ವಿಚಾರವನ್ನು ನಾನು ದಾಖಲೆ ಸಮೇತ ಸಾಬೀತುಮಾಡಬಲ್ಲೆ. ತಮ್ಮ ಆಸೆ ಈಡೇರದಿರುವುದಕ್ಕೆ ಹತಾಶೆಯಿಂದ ರಾಜ್ಯಪಾಲರ ಹಾಗೂ ಶೋಧನಾ ಸಮಿತಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
- ಡಾ.ಎನ್.ಎಸ್.ರಾಮೇಗೌಡ, ದಾವಣಗೆರೆ ವಿವಿ ಕುಲಪತಿ ನೇಮಕದ ಶೋಧನಾ ಸಮಿತಿ ಸದಸ್ಯ




ಕ್ಷಮೆ ಕೇಳಬೇಕು: ಪ್ರಗತಿಪರ ವೇದಿಕೆ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರನ್ನು ರೋಗಿ ಎಂದಿದ್ದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಪ್ರಗತಿಪರ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರೋಗಿ ಎಂದಿರುವುದು ತೀರಾ ಅಮಾನವೀಯ. ದಾವಣಗೆರೆ ವಿವಿ ಕುಲಪತಿ ನೇಮಕ ವಿಷಯದಲ್ಲಿ ರಾಜ್ಯಪಾಲರ ಪರಮಾಧಿಕಾರದ ಬಗ್ಗೆ ನಾವೇನೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ ಕುಲಪತಿ ನೇಮಕ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸುವಾಗ ರಾಜ್ಯಪಾಲರು ಅನಂತಮೂರ್ತಿ ಅವರನ್ನು ರೋಗಿ ಎಂದಿದ್ದು ತಪ್ಪು. ಅವರು ಹಾಗೆ ಹೇಳಿದ ತಪ್ಪಿಗೆ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಜತೆಗೆ, ಎಂಟೇ ತಿಂಗಳಲ್ಲಿ ತುಮಕೂರು ವಿವಿಯಲ್ಲಿ 8 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿರುವುದರ ಬಗ್ಗೆ ಕುಲಾಧಿಪತಿಯಾಗಿರುವ ರಾಜ್ಯಪಾಲರು ಗಮನಹರಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಅವರು ಮಾತನಾಡಿ, ಯಾರದ್ದೇ ಆರೋಗ್ಯ ಹಾಗೂ ವಯಸ್ಸನ್ನು ಟೀಕಿಸುವುದು ಸಲ್ಲ. ಅನಂತಮೂರ್ತಿ ರೋಗಿ ಎಂಬುದನ್ನು ಆತುರದಲ್ಲಿ ಹೇಳಿದ್ದರೂ ರಾಜ್ಯಪಾಲರು ಆ ಬಗ್ಗೆ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು. ಸಾಹಿತಿ ಡಾ.ವಿಜಯಾ, ಪ್ರೊ.ಜಿ.ಕೆ.ಗೋವಿಂದರಾವ್, ದಸಂಸ ಮುಖಂಡ ಮಾವಳ್ಳಿ ಶಂಕರ್, ನಿರ್ದೇಶಕ ಬಿ.ಸುರೇಶ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement