ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶೀಲಾ ವಿರುದ್ಧ ತನಿಖೆ ಅನುಮತಿ ಕೋರಿ ರಾಷ್ಟ್ರಪತಿಗೆ ದಿಲ್ಲಿ ಸಿಎಂ ಪತ್ರ

ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸುತ್ತಲೇ ಮುಖ್ಯಮಂತ್ರಿ ಅರವಿಂದ...

Rashmi Kasaragodu
Updated On : 4 Feb 2014, 10:54 am

ನವದೆಹಲಿ: ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರೈಸುತ್ತಲೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಿಧಾನಸಭಾ ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲು ಮುಂದಾಗಿದ್ದಾರೆ. ಅನಧಿಕೃತ ಕಾಲೊನಿಗಳಿಗೆ ಸುಳ್ಳು ಪ್ರಮಾಣಪತ್ರ ನೀಡಿದ ಆರೋಪಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ತನಿಖೆಗೆ ರಾಷ್ಟ್ರಪತಿಗೆ ಪತ್ರ ಬರೆದಿರುವ ಅವರು, ಇನ್ನೊಂದೆಡೆ ಜನಲೋಕಪಾಲ ಮಸೂದೆಗೆ ಸಚಿವ ಸಂಪುಟದಿಂದ ಅಂಕಿತ ಹಾಕಿಸಿದ್ದಾರೆ. ಈ ಮೂಲಕ ಫೆ.16ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವುದು ಖಚಿತವಾಗಿದೆ.
ಮೊದಲ ತನಿಖೆ: 2009ರ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಶೀಲಾ ದೀಕ್ಷಿತ್ ಅವರು ಸುಮಾರು ಒಂದು ಸಾವಿರ ಅನಧಿಕೃತ ಕಾಲೊನಿಗಳನ್ನು ಅಧಿಕೃತಗೊಳಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಶೀಲಾ ದೀಕ್ಷಿತ್ರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿತ್ತು.     



ಸರ್ಕಾರ ಕೆಡವಲು ಸಂಚು: ಆರೋಪ
ಆಮ್ ಆದ್ಮಿ ಸರ್ಕಾರ ಉರುಳಿಸಲು ಬಿಜೆಪಿ ನಾಯಕರಾದ ನರೇಂದ್ರ ಮೋದಿ, ಅರುಣ್ ಜೇಟ್ಲಿ ಹಾಗೂ ಹರ್ಷವರ್ಧನ್ 20 ಕೋಟಿ ಆಮಿಷ ಒಡ್ಡಿದ್ದರು ಎಂದು ಆಪ್ ಶಾಸಕ ಮದನ್ಲಾಲ್ ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ಭೇಟಿಯಾಗಿದ್ದ ಮೋದಿ ಬೆಂಬಲಿಗರಿಬ್ಬರು 10 ಶಾಸಕರ ಬೆಂಬಲದೊಂದಿಗೆ ಪಕ್ಷ ಒಡೆದರೆ ಸಿಎಂ ಗದ್ದುಗೆಯಲ್ಲಿ ಕೂರಿಸುವ ಭರವಸೆ ನೀಡಿದ್ದರು ಎಂದು ಮದನ್ಲಾಲ್ ಮಾಹಿತಿ ನೀಡಿದ್ದಾರೆ.  ದೆಹಲಿ ಅಸೆಂಬ್ಲಿ ಚುನಾವಣೆ ಫಲಿತಾಂಶಕ್ಕೂ ಮುನ್ನ ಡಿ.7ರ ಮಧ್ಯರಾತ್ರಿ  ಕರೆ ಬಂದಿತ್ತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಪ್ರಮುಖ ಮುಖಂಡನೊಬ್ಬ ನಿಮ್ಮ ಬಳಿ ಮಾತನಾಡಲು ಬಯಸಿದ್ದಾರೆ ಎಂದಿದ್ದ. ಯಾರೆಂದು ಕೇಳಿದ್ದಕ್ಕೆ ಅರುಣ್ ಜೇಟ್ಲಿ ಹೆಸರು ಹೇಳಿದ್ದ. ಜೇಟ್ಲಿ ಹೆಸರು ಕೇಳುತ್ತಲೇ ನಾನು ಸಿಟ್ಟಿನಿಂದ ಕರೆ ಕಟ್ ಮಾಡಿದ್ದೆ. ಈ ವಿಚಾರವನ್ನು ಪಕ್ಷದ ಹೈಕಮಾಂಡ್ಗೂ ತಿಳಿಸಿದ್ದೇನೆ ಎಂದು ಮದನ್ಲಾಲ್ ಮಾಹಿತಿ ನೀಡಿದ್ದಾರೆ. ಆದರೆ, ಈ ಆರೋಪ ಪುಷ್ಟೀಕರಿಸುವ ಯಾವುದೇ ದಾಖಲೆ ತಮ್ಮ ಬಳಿ ಇಲ್ಲ ಎಂದು ಮದನ್ಲಾಲ್ ಸ್ಪಷ್ಟಪಡಿಸಿದ್ದಾರೆ.



ಆರೋಪ ನಿರಾಕರಿಸಿದ ಜೇಟ್ಲಿ
ಆಮ್ ಆದ್ಮಿ ಪಕ್ಷದ ಆರೋಪವನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆಪ್ನ ಪರ್ಯಾಯ ರಾಜಕೀಯದಲ್ಲಿ ಸುಳ್ಳು ಆರೋಪ ಮಾಡುವ ಮೂಲಭೂತ ಹಕ್ಕು ಕೂಡ ಸೇರಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement