ಆಹಾರ ಕಾಯ್ದೆ; ನೋಂದಣಿ ಅವಧಿ ವಿಸ್ತರಣೆ
ಬೆಂಗಳೂರು: ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ-2006ರ ಪ್ರಕಾರ ನೋಂದಣಿ/ಪರವಾನಗಿ ಪತ್ರ ಪಡೆಯಬೇಕಿದ್ದ ಗಡುವು ಫೆ.4ರಿಂದ ಆ.4ರ ವರೆಗೆ ವಿಸ್ತರಣೆಗೊಂಡಿದೆ.
ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಆಹಾರ ವಹಿವಾಟು ಪರವಾನಗಿ ಮತ್ತು ನೋಂದಣಿ) ನಿಯಮಾವಳಿ, 2011ರ ಉಪ ನಿಯಮ 2.1.2 ಪ್ರಕಾರ ಆಹಾರ ವಹಿವಾಟು ನಡೆಸಲು ತೆಗೆದುಕೊಳ್ಳಬೇಕಿರುವ ನೋಂದಣಿ/ಪರವಾನಗಿ ಪತ್ರ ಪಡೆಯಲು ವಿಧಿಸಲಾಗಿದ್ದ ಗಡುವನ್ನು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಆಗಸ್ಟ್ 4ರ ವರೆಗೆ ವಿಸ್ತರಿಸಿದೆ ಎಂದು ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಂಟಿ ನಿರ್ದೇಶಕ(ಪ್ರಭಾರಿ) ಜಯಕುಮಾರ್ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಯಾವುದೇ ರೀತಿಯ ಆಹಾರ ವಹಿವಾಟು ನಡೆಸುವವರು ಈ ನಿಯಮಾವಳಿ ಪ್ರಕಾರ ಅವರ ವಹಿವಾಟಿನ ಪ್ರಮಾಣಕ್ಕೆ ಅನುಗುಣವಾಗಿ ನೋಂದಣಿ ಅಥವಾ ಪರವಾನಗಿ ಪಡೆಯಬೇಕಿದ್ದು, ಅದಕ್ಕೆ ಫೆ.4 ಅಂತಿಮ ದಿನ ಎಂದು ನಿಗದಿಪಡಿಸಲಾಗಿತ್ತು. ಈಗ ಪ್ರಾಧಿಕಾರ ಆ ಗಡುವನ್ನು ಆ.4ರ ವರೆಗೆ ವಿಸ್ತರಿಸಿರುವುದರಿಂದ ಇನ್ನೂ ನೋಂದಣಿ/ಪರವಾನಗಿ ಪಡೆಯದವರಿಗೆ ಮತ್ತಷ್ಟು ಅವಕಾಶ ಸಿಕ್ಕಿದ್ದು, ಎಲ್ಲರೂ ಅದನ್ನು ಸದುಪಯೋಗಪಡಿಸಿಕೊಂಡು ಕಾಯ್ದೆಯ ನಿಯಮಾವಳಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.