ಶಾಸಕರ ಚಾಲಕನಿಗೆ ಕದೀಮರ ಚಳ್ಳೇಹಣ್ಣು!
ಬೆಂಗಳೂರು: ಶಾಸಕರ ಚಾಲಕನ ಗಮನ ಬೇರೆಡೆ ಸೆಳೆದು ಸರ್ಕಾರಿ ಕಾರಿನಲ್ಲಿಟ್ಟಿದ್ದ ರು. 3.5 ಲಕ್ಷ ನಗದು, ಶಾಸಕತ್ವದ ಗುರುತಿನ ಚೀಟಿಯನ್ನೂ ಕದ್ದ ಕಿಲಾಡಿ ಕದೀಮರು..!
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಚಿಕ್ಕಮಾದು ಕಾರು ಚಾಲಕನ ಗಮನ ಬೇರೆಡೆ ಸೆಳೆದ ಖದೀಮರು ಕಾರಿನಲ್ಲಿಟ್ಟಿದ್ದ ರು. 3.5 ಲಕ್ಷ ನಗದು, ಶಾಸಕರ ಗುರುತಿನ ಚೀಟಿ, ಶಾಸಕರ ಅಣ್ಣನ ಮಗನ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಕದ್ದೊಯ್ದಿದ್ದಾರೆ.
ಈ ಸಂಬಂಧ ಶಾಸಕರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದು 14 ದಿನ ಕಳೆದರೂ ಆರೋಪಿಗಳ ಸಣ್ಣ ಸುಳಿವು ಕೂಡಾ ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ.
ಘಟನೆ: ಶಾಸಕ ಚಿಕ್ಕಮಾದು ಅವರು ಕಾರು ಖರೀದಿಸಲು ಜ.23ರ ರಂದು ಶಾಸಕರ ಭವನ ಆವರಣದಲ್ಲಿರುವ ಅಪೆಕ್ಸ್ ಬ್ಯಾಂಕ್ನಲ್ಲಿ ರು. 3.5 ಲಕ್ಷ ಸಾಲ ಪಡೆದಿದ್ದರು. ಬೆಳಗ್ಗೆ ಹಣ ಪಡೆದ ಶಾಸಕ ಚಿಕ್ಕಮಾದು, ಅವರ ಅಣ್ಣನ ಮಗ ಭೀಮರಾಜ್, ಕಾರು ಚಾಲಕ ಶರಣಗೌಡ ಹಾಗೂ ಆಪ್ತ ಸಹಾಯಕನೊಂದಿಗೆ ಮೈಸೂರಿಗೆ ಹೊರಟಿದ್ದರು. ಮಧ್ಯಾಹ್ನ ಊಟದ ಸಮಯವಾಗಿದ್ದ ಕಾರಣ ಗಾಂಧಿನಗರ 5ನೇ ಮುಖ್ಯರಸ್ತೆಯಲ್ಲಿರುವ ಮುದ್ದೆ ಮಾದಪ್ಪ ಮೆಸ್ಗೆ ಊಟಕ್ಕೆ ಹೋಗಿದ್ದರು.
ಹಿಂದಿಯಲ್ಲಿ ಮಾತಾನಾಡಿ ಚಮಕ್: ಮಧ್ಯಾಹ್ನ 2.45ರ ಸುಮಾರಿಗೆ ಹೊಟೇಲ್ ಬಳಿ ಕಾರು ನಿಲ್ಲಿಸಿ ಬ್ಯಾಗ್ಗಳನ್ನು ಕಾರಿನಲ್ಲೇ ಇಟ್ಟು ಊಟಕ್ಕೆ ಹೋಗಿದ್ದರು. ತನ್ನ ಊಟ ಆಗಿದ್ದ ಕಾರಣ ಚಾಲಕ ಶರಣಗೌಡ ಕಾರಿನಲ್ಲೇ ಕುಳಿತಿದ್ದ. ಈ ವೇಳೆ ಕಾರಿನ ಬಳಿ ಬಂದ ಒಬ್ಬ ಖದೀಮ, ಹಿಂದಿಯಲ್ಲಿ ಮಾತಾಡುತ್ತಾ ಕಾರಿನ ಗಾಜು ಬಡಿದು ನಿಮಗೆ ಸಂಬಂಧಿಸಿದ ದಾಖಲೆ, ಹಣ ಬಿದ್ದಿದೆ ನೋಡಿ ಎಂದು ಹೇಳಿದ್ದಾನೆ. ಹೀಗಾಗಿ, ಚಾಲಕ ಶರಣಗೌಡ ಕಾರಿನ ಬಾಗಿಲು ತೆರೆದು ಕೆಳಗಿಳಿದಿದ್ದಾನೆ. ಈ ವೇಳೆ ಇನ್ನೋವಾ ಕಾರಿನ ಪಕ್ಕದಲ್ಲಿ 10 ಮುಖಬೆಲೆಯ 4 ನೋಟುಗಳು ಬಿದ್ದಿದ್ದನ್ನು ಒಬ್ಬ ಎತ್ತಿ ಕೊಟ್ಟಿದ್ದಾನೆ. ಇದೇ ವೇಳೆ ಮತ್ತೊಬ್ಬ ಕದೀಮ ಇನ್ನಷ್ಟು ನೋಟುಗಳು ಹಿಂದೆ ಬಿದ್ದಿವೆ ನೋಡಿಕೊಳ್ಳಿ ಎಂದು ಹೇಳಿದ್ದಾನೆ. ಕಾರಿನ ಹಿಂಭಾಗದಲ್ಲಿ ರು. 10ರ ಮುಖಬೆಲೆಯ ಇನ್ನೂ ಐದು ನೋಟುಗಳು ಬಿದ್ದಿರುವುದನ್ನು ನೋಡಿದ ಚಾಲಕ ಶರಣಗೌಡ, ಆ ನೋಟುಗಳನ್ನು ಎತ್ತಿಕೊಂಡು ವಾಪಸ್ ಬಂದು ಕಾರಿನಲ್ಲಿ ಕುಳಿತ್ತಿದ್ದಾರೆ.
ಹಣ ಎತ್ತಿಕೊಳ್ಳಲು ಬಗ್ಗುತ್ತಿದ್ದಂತೆ ಪರಾರಿ: ಚಾಲಕ ಹಣ ಎತ್ತಿಕೊಳ್ಳಲು ಬಗ್ಗುತ್ತಿದ್ದಂತೆ ಕದೀಮರು, ಕಾರಿನ ಮಧ್ಯದ ಸೀಟಿನಲ್ಲಿರಿಸಿದ್ದ ಹಣದ ಬ್ರಿಫ್ ಕೇಸ್, ಕಾಲೇಜ್ ಬ್ಯಾಗ್, ಹಾಗೂ ಒಂದು ಹ್ಯಾಂಡ್ ಪರ್ಸ್ ಕದ್ದು ಪರಾರಿಯಾಗಿದ್ದಾರೆ. ಹಣ ಎತ್ತಿಕೊಂಡು ಕಾರಿನ ಒಳಗೆ ಕುಳಿತ ಚಾಲಕ ಶರಣಗೌಡನಿಗೆ ಕಾರಿನಲ್ಲಿದ್ದ ವಸ್ತುಗಳು ಇಲ್ಲದಿರುವ ಬಗ್ಗೆ ಅನುಮಾನ ಬಂದಿದೆ. ಹೀಗಾಗಿ ಶಾಸಕರ ಅಣ್ಣನ ಮಗ ಭೀಮಾರಾಜ್ಗೆ ಕರೆ ಮಾಡಿದ ಶರಣಗೌಡ, ಸಾಹೇಬರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರಾ ನೋಡಿ ಎಂದು ಕೇಳಿದ್ದಾನೆ. ಊಟ ಮಾಡಲು ಕೈ ತೊಳೆದುಕೊಳ್ಳುತ್ತಿದ್ದ ಶಾಸಕರು ತಾವು ಎಲ್ಲಾ ಬ್ಯಾಗ್ಗಳನ್ನು ಕಾರಿನಲ್ಲೇ ಇಟ್ಟು ಬಂದಿರುವುದಾಗಿ ಹೇಳಿದ್ದಾರೆ. ಆಗಲೇ ಹಣ ಬಿದ್ದಿದೆ ಎಂದು ಹೇಳಿದ್ದ ಕದೀಮರು ಹಣ, ಶೈಕ್ಷಣಿಕ ದಾಖಲೆಗಳು ಇದ್ದ ಬ್ಯಾಗ್ಗಳನ್ನು ಕದ್ದಿರುವುದು ಗೊತ್ತಾಗಿದೆ. ತಕ್ಷಣ ಖುದ್ದು ಶಾಸಕರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಕದೀಮನನ್ನು ಬಂಧಿಸಿದ್ದ ವಿಲ್ಸನ್ ಗಾರ್ಡನ್ ಪೊಲೀಸರು, ಕಾರು ಚಾಲಕ ಶರಣಗೌಡನನ್ನು ಕರೆಸಿ ಗುರುತು ಪತ್ತೆ ಪರೇಡ್ ಮಾಡಿಸಿದ್ದರು. ಈ ವೇಳೆ ಚಾಲಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಆರೋಪಿ ಆತ ಅಲ್ಲ ಎನ್ನುವುದು ಗೊತ್ತಾಗಿದೆ.
- ಭೀಮ್ರಾಜ್, ಶಾಸಕ ಚಿಕ್ಕಮಾದು ಅಣ್ಣನ ಮಗ
ಬ್ಯಾಗ್ಗಳಲ್ಲಿ ಏನೇನು ಇತ್ತು?
ಕದೀಮರು ಒಟ್ಟು ಮೂರು ಬ್ಯಾಗ್ಗಳನ್ನು ಕದ್ದೊಯ್ದಿದ್ದಾರೆ. ಬ್ರಿಫ್ ಕೇಸ್ನಲ್ಲಿ ಒಂದು ಜೊತೆ ಶಾಸಕರ ಬಟ್ಟೆ ಹಾಗೂ ರು. 3.5 ಲಕ್ಷ ಇರಿಸಲಾಗಿತ್ತು. ಹ್ಯಾಂಡ್ ಪರ್ಸ್ನಲ್ಲಿ ಚಿಕ್ಕಮಾದು ಅವರ ಶಾಸಕತ್ವದ ಗುರುತಿನ ಚೀಟಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳು, ಬಸ್ ಪಾಸ್ ಹಾಗೂ ಸ್ವಲ್ಪ ನಗದು ಇರಿಸಲಾಗಿತ್ತು. ಇನ್ನು ಶಾಸಕರ ಅಣ್ಣನ ಮಗ ಭೀಮರಾಜ್ ಕಾಲೇಜು ಬ್ಯಾಗ್ನಲ್ಲಿ ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯು ಅಂಕಪಟ್ಟಿ, ಪದವಿ ಸೆಮಿಸ್ಟರ್ ಅಂಕಪಟ್ಟಿಗಳು ಹಾಗೂ ಪ್ರಮಾಣಪತ್ರ ಹಾಗೂ ಎಂ.ಎಸ್ಸಿ 1 ಹಾಗೂ 2ನೇ ಸೆಮಿಸ್ಟರ್ನ ಅಂಕಪಟ್ಟಿಗಳು ಹಾಗೂ ವಾಹನ ಚಾಲನಾ ಪರವಾನಗಿ ಇರಿಸಲಾಗಿತ್ತು.
-ಮಂಜುನಾಥ ನಾಗಲೀಕರ್