ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯಕ್ಕೆ ಕೊಡಬೇಕಾದ್ದನ್ನು ಮೊದಲೇ ಕೊಟ್ಟಿದ್ದೇವೆ

Vishwanath S
Updated On : 13 Feb 2014, 12:58 pm

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಸಂತೋಷದ ಸಂಗತಿ ಎಂದರೆ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೊಡಬೇಕಾದ್ದನ್ನು ಈ ಮೊದಲೇ ಕೊಟ್ಟಿದ್ದೇವೆ. ಆದರೆ, ಜನರ ನಿರೀಕ್ಷೆ ತುಂಬಾ ಇದೆ. ಅವರ ನಿರೀಕ್ಷೆಗೆ ತಕ್ಕಂತೆ ಕೊಡುಗೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಧ್ಯಂತರ ಬಜೆಟ್ ಮಂಡಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಾದಗಿರಿ ಫ್ಯಾಕ್ಟರಿ, ಗುಲ್ಬರ್ಗ ಆಡಳಿತ ಕಚೇರಿ, ಬೀದರ್- ಯಶವಂತಪುರ ರೈಲು, ಹುಬ್ಬಳ್ಳಿ- ಹೈದಾರಾಬಾದ್ ರೈಲು, ಬೆಂಗಳೂರು- ತುಮಕೂರು, ಶಿವಮೊಗ್ಗ- ಮೈಸೂರು, ಚಿಕ್ಕಬಳ್ಳಾಪುರ- ಕೋಲಾರ ರೈಲುಗಳನ್ನು ಈಗಾಗಲೇ ನೀಡಲಾಗಿದೆ. ಚಿಕ್ಕಮಗಳೂರು- ಕಡೂರು ಮಾರ್ಗಕ್ಕೆ ಬಜೆಟ್‌ನಲ್ಲಿ ಅನುದಾನ ಇಲ್ಲದಿದ್ದರೂ ವಿಶೇಷ ಕ್ರಮ ತಗೊಂಡು ಮಾಡಿದ್ದೇವೆ ಎಂದರು.
ಮಧ್ಯಂತರ ಬಜೆಟ್ ನಡುವೆಯೇ ಹೊಸ ಯೋಜನೆ ಪ್ರಕಟಿಸಲು ಅವಕಾಶ ನೀಡಿದ ಪ್ರಧಾನಿ ಮನಮೋಹನ್‌ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕೇವಲ 9 ತಿಂಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಜನರ ನಿರೀಕ್ಷೆ ಬಹಳ ಇದೆ. ಸಾಧ್ಯವಿದ್ದಷ್ಟು ಮಾಡಿದ್ದೇನೆ. ಮೈಸೂರು- ಬೆಂಗಳೂರು ಜೋಡಿ ಮಾರ್ಗ ಬೇಗ ಪೂರ್ಣಗೊಳಿಸುತ್ತೇವೆ. ಕೊಟ್ಟೂರು- ಹರಿಹರ ಮಾರ್ಗಕ್ಕೂ ಆದ್ಯತೆ ನೀಡಿದ್ದೇವೆ ಎಂದರು.
ಘೋಷಿತ ಯೋಜನೆ ಬದಲಾವಣೆ ಇಲ್ಲ: ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದಾಗ ಮಧ್ಯಂತರ ಬಜೆಟ್‌ನ ಘೋಷಿತ ಯೋಜನೆಗಳನ್ನು ಸಾಮಾನ್ಯವಾಗಿ ಬದಲಾವಣೆ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಯೋಜನೆಗಳು ಜನರ ಹಿತದೃಷ್ಟಿಯಿಂದ ರೂಪಿಸಿದವು. ಇದರಲ್ಲಿ ರಾಜಕೀಯ ಇಲ್ಲ. ಇವೆಲ್ಲ ರಾಷ್ಟ್ರೀಯವೂ ಆಸ್ತಿ, ರಾಷ್ಟ್ರೀಯ ಯೋಜನೆ. ಇದನ್ನು ರಾಜಕೀಯ ದೃಷ್ಟಿಯಲ್ಲಿ ನೋಡಬಾರದು ಎಂದರು.
ವಿಷಾದವಿಲ್ಲ: ಪೂರ್ಣ ಬಜೆಟ್ ಮಂಡಿಸಲು ಅವಕಾಶ ಆಗಲಿಲ್ಲ ಅಂತ ವಿಷಾದ ಏನಿಲ್ಲ. ಆದರೆ, ಎಲ್ಲರೂ ಕೂತು ಶಾಂತವಾಗಿ ಕೇಳಲಿಲ್ಲ ಅಂತ ವಿಷಾದ ಇದೆ. ಶಾಂತ ರೀತಿಯಿಂದ ಕೇಳಿದ್ದರೆ ಸಮಾಧಾನ ಆಗ್ತಾ ಇತ್ತು. ಪೂರ್ತಿ ಓದಿ ಮಂಡಿಸುವ ಅಪೇಕ್ಷೆ ಇತ್ತು. ಆದರೆ, ಮಂಡಿಸುವ ಅವಕಾಶ ಸಿಕ್ಕಿದೆ. ನಾನು ಬಯಸಿದ ಅನೇಕ ಕೆಲಸ ಸೇರಿಸಲು ಅವಕಾಶ ಆಯ್ತು. ಅದೇ ಸಮಾಧಾನ ಎಂದೂ ಖರ್ಗೆ ಹೇಳಿದರು.
ರಾಜ್ಯಕ್ಕೆ 1450 ಕೋಟಿ
ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ ವಿವಿಧ ರೇಲ್ವೆ ಯೋಜನೆಗಳಿಗೆ 1450 ಕೋಟಿ ವಿನಿಯೋಗವಾಗುತ್ತಿದೆ. ಈ ಪೈಕಿ ರಾಜ್ಯ ಸರ್ಕಾರ ತನ್ನ ಪಾಲಿನ ಶೇ50.ರಷ್ಟು ವೆಚ್ಚ 600 ಕೋಟಿ ನೀಡಿದೆ. ಉಳಿದ 850 ಕೋಟಿ ರೇಲ್ವೆಯದ್ದು. ರೇಲ್ವೆ ಸಚಿವ ಖರ್ಗೆ ಅವರ ಪ್ರಕಾರ, ಆರಂಭದಲ್ಲಿ 300 ಕೋಟಿ ಅನುದಾನ ಇತ್ತು. ಅದಕ್ಕೆ 350 ಕೋಟಿ ಹೆಚ್ಚಿಸಿ 650 ಕೋಟಿ ಮಂಜೂರು ಮಾಡಲಾಯಿತು. ಜತೆಗೆ ವಿಶೇಷ ಅನುದಾನ 100 ಕೋಟಿ ನೀಡಲಾಯಿತು. 750 ಕೋಟಿ ಪೈಕಿ ರಾಜ್ಯ ಸರ್ಕಾರ 600 ಕೋಟಿ ಭರಿಸಿದೆ. ಇನ್ನು 100 ಕೋಟಿಯನ್ನು ವಿವಿಧ ಕಾಮಗಾರಿಗಳಿಗೆ ವಿಶೇಷವಾಗಿ ವಿನಿಯೋಗಿಸಲಾಗಿದೆ.
ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಅವಕಾಶ ಇಲ್ಲದಿದ್ದರೂ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕಕ್ಕೆ ಉದಾರತೆ ತೋರಿದ್ದಾರೆ. ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ರಮುಖ ಯಾತ್ರಾಸ್ಥಳಗಳಾದ ವಾರಣಾಸಿ ಮತ್ತು ವೈಷ್ಣೋದೇವಿಗೆ ನೇರ ರೈಲು ಪ್ರಕಟಿಸಿದ್ದಾರೆ.
ನಾಲ್ಕು ಪ್ರೀಮಿಯಂ ರೈಲುಗಳು, ಐದು ಎಕ್ಸ್‌ಪ್ರೆಸ್ ರೈಲುಗಳು, ಒಂದು ಫಾಸ್ಟ್ ಪ್ಯಾಸೆಂಜರ್ ರೈಲು ಜತೆಗೆ ಹಾಲಿ ಸಂಚರಿಸುತ್ತಿರುವ ಮೂರು ರೈಲುಗಳ ಸಂಚಾರ ಸಾಂದ್ರತೆ ಹೆಚ್ಚಳ. ಇವು ಕರ್ನಾಟಕಕ್ಕೆ ಖರ್ಗೆ ಅವರ ಮಧ್ಯಂತರ ಬಜೆಟ್ ಕೊಡುಗೆ. ಐದು ಹೊಸ ಮಾರ್ಗ ರೂಪಿಸಲು ಸಮೀಕ್ಷೆಗೆ ಮಂಜೂರಾತಿ ನೀಡಿದ್ದಾರೆ. ಮಧ್ಯಂತರ ಬಜೆಟ್ ಆಗಿರುವುದರಿಂದ ಘೋಷಿತ ಯೋಜನೆಗಳಿಗೆ ನೀಡಿರುವ ಅನುದಾನ ಪ್ರಮಾಣ ಪ್ರಕಟಿಸುವಂತಿಲ್ಲ. ಆದರೆ, ಜನರ ನೀರಿಕ್ಷೆ ಮೀರಿ ಅನುದಾನ ನೀಡಿರುವ ತೃಪ್ತ ಭಾವವನ್ನು ಖರ್ಗೆ ವ್ಯಕ್ತಪಡಿಸಿದ್ದಾರೆ. ಘೋಷಿತ 17 ಜೈಹಿಂದ್ ಪ್ರೀಮಿಯಂ ರೈಲುಗಳ ಪೈಕಿ ಕರ್ನಾಟಕಕ್ಕೆ ನಾಲ್ಕು ನೀಡಿದ್ದಾರೆ. 57 ಎಕ್ಸ್‌ಪ್ರೆಸ್ ಪೈಕಿ ಕರ್ನಾಟಕಕ್ಕೆ 5 ದಕ್ಕಿವೆ.
ಪ್ರೀಮಿಯಮ್ ರೈಲುಗಳಿಗೆ ಡೈನಾಮಿಕ್ ಪ್ರೈಸಿಂಗ್
ಕರ್ನಾಟಕದ ನಾಲ್ಕು ರೈಲು ಸೇರಿದಂತೆ ಘೋಷಿಸಿರುವ ಒಟ್ಟು 17 ಪ್ರೀಮಿಯಂ ರೈಲುಗಳ ಪ್ರಯಾಣ ದರಕ್ಕೆ ಡೈನಾಮಕ್ ಪ್ರೈಸಿಂಗ್ ಅನ್ವಯವಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ. ವಿಮಾನಗಳಲ್ಲಿ ಇರುವಂತೆ ಬೇಡಿಕೆ ಹೆಚ್ಚಿದ್ದಾಗ ಟಿಕೆಟ್ ದರವು ಹೆಚ್ಚಿರುತ್ತದೆ. ಬೇಡಿಕೆ ಕಡಮೆ ಇದ್ದಾಗ ದರ ಕಡಮೆ ಇರುತ್ತದೆ. ಅಲ್ಲದೇ ಬಹಳ ಮುಂಚಿತವಾಗಿ ರಿಸರ್ವೆಷನ್ ಮಾಡಿಸಿದರೆ ದರ ಕಡಮೆ ಇರುತ್ತದೆ. ಪ್ರಯಾಣದ ದಿನ ಸಮೀಪಿಸಿದಷ್ಟು ದರ ಹೆಚ್ಚಳವಾಗುತ್ತದೆ. ಈಗಾಗಲೇ 20 ಪ್ರೀಮಿಯಂ ರೈಲುಗಳಲ್ಲಿ ಡೈನಾಮಿಕ್ ಪ್ರೈಸಿಂಗ್ ವ್ಯವಸ್ಥೆ ಇದೆ.
2010-11ನೇ ಸಾಲಿನ ಮುಂಗಡಪತ್ರದಲ್ಲೇ ಬೆಳಗಾವಿ- ಕಿತ್ತೂರು- ಧಾರವಾಡ ಮಾರ್ಗದಲ್ಲಿ ನೇರ ರೈಲು ಮಾರ್ಗಕ್ಕಾಗಿ ಸಮೀಕ್ಷೆಗೆ ಸೂಚನೆ ನೀಡಲಾಗಿತ್ತು. ಇದೀಗ ಮತ್ತೆ ಅದೇ ಮಾರ್ಗದ ಸಮೀಕ್ಷೆಗೆ ಆದೇಶ ನೀಡಲಾಗಿದೆ. ಇದು ಬೆಟ್ಟ ಅಗೆದು ಇಲಿ ಹಿಡಿದಂತಾಗುವುದು. ಬೆಳಗಾವಿ ಜಿಲ್ಲೆಗೆ ಖರ್ಗೆ ಅನ್ಯಾಯ ಮಾಡಿದ್ದಾರೆ.
- ಸುರೇಶ ಅಂಗಡಿ
ಬೆಳಗಾವಿ ಲೋಕಸಭೆ ಸದಸ್ಯ
ಬಹುದಿನದ ಬೇಡಿಕೆಯಾಗಿರುವ ಹುಬ್ಬಳ್ಳಿ-ಬೆಳಗಾವಿ ನೇರ ರೈಲು ಮಾರ್ಗದ ಸಮೀಕ್ಷೆಗೆ ಮತ್ತೊಮ್ಮೆ ಆದೇಶಿಸಿದ್ದಾರೆ. ಹಲವಾರು ದಿನಗಳಿಂದ ನೆನಗುದಿಗೆ ಬಿದ್ದಿರುವ ಬೇಡಿಕೆ ಈಡೇರಿದಂತಾಗಿದೆ. ಅಲ್ಲದೇ ಬಿಜಾಪುರ ಜತ್ತ ಕರಾಡ ನೂತನ ಮಾರ್ಗಗಳ ಸಮೀಕ್ಷೆಗೆ ಆದೇಶ ನೀಡಿರುವುದಕ್ಕೆ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವೆ.
- ಡಾ.ಪ್ರಭಾಕರ ಕೋರೆ
ರಾಜ್ಯಸಭೆ ಸದಸ್ಯ
ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಳಬೇಕಾದರೆ ಖರ್ಗೆಯವರ ಬರೋಬ್ಬರಿ ರೈಲು ಹತ್ತಿಸ್ಯಾರ. ಲೋಕಸಭೆ ಚುನಾವಣೆಯನ್ನು ದೃಷ್ಟಿಕೋನವಾಗಿಟ್ಟುಕೊಂಡು ತಮ್ಮ ಕ್ಷೇತ್ರ ಗಟ್ಟಿ ಮಾಡಿಕೊಂಡಿದ್ದಾರೆ. ಕರ್ನಾಟಕದ ಎಲ್ಲ ಭಾಗಕ್ಕೆ ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ. ಇದು ನಿರಾಶಾದಾಯಕ ಬಜೆಟ್.
- ಬಸವರಾಜ ಹೊರಟ್ಟಿ
ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement