ರಾಮದಾಸ್ ಪ್ರೇಮ ಪ್ರಹಸನ, ಬೇಸತ್ತು ಬೆಂಬಲಿಗನ ಆತ್ಮಹತ್ಯೆ
ಮಹಿಳೆಯೊಬ್ಬರ ಆರೋಪದಿಂದ ಮನನೊಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ...
ಕನ್ನಡಪ್ರಭ ವಾರ್ತೆ , ಮೈಸೂರು , ಫೆ.12
ಮಹಿಳೆಯೊಬ್ಬರ ಆರೋಪದಿಂದ ಮನನೊಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಅರಿತು ಮನ ನೊಂದ ಅವರ ಕಟ್ಟಾ ಬೆಂಬಲಿಗನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ವಿದ್ಯಾರಣ್ಯಪುರಂ ಬಳಿಯ ಕನಕಗಿರಿ ನಿವಾಸಿ ಹಾಗೂ ಆಟೋ ಚಾಲಕ, ಅವಿವಾಹಿತ ನವೀನ್ಕುಮಾರ್(25) ಬುಧವಾರ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಕುಮಾರಿ ಎಂಬವರು ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಮದಾಸ್ ಅವರು ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡು ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿದು ನವೀನ್ ನೊಂದಿದ್ದ.
ಅಲ್ಲದೆ, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದ. ಬುಧವಾರ ಮನೆಯಲ್ಲೇ ಯಾರೂ ಇಲ್ಲದ ಸಮಯದಲ್ಲಿ ನವೀನ್ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ. ಕೆಲವು ಹೊತ್ತಿನ ಬಳಿಕ ನೋಡಿದ ಕುಟುಂಬದವರು ನಂತರ ಅಕ್ಕಪಕ್ಕದವರ ಸಹಾಯದಿಂದ ನವೀನ್ನನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರಲ್ಲೇ ನವೀನ್ನ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಕುರಿತು ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಚ್ಚೆ ಹಾಕಿಸಿಕೊಂಡಿದ್ದ ನವೀನ್: ರಾಮದಾಸ್ ಅವರ ಕಟ್ಟಾ ಅಭಿಮಾನಿಯಾಗಿದ್ದ ನವೀನ್, ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಸ್ವಯಂಪ್ರೇರಿತವಾಗಿ ಭಾಗವಹಿಸಿ ಕೆಲಸ ಮಾಡುತ್ತಿದ್ದ. ಅಲ್ಲದೆ, ನವೀನ್ ತನ್ನ ಕೈ ಹಾಗೂ ಎದೆಯ ಮೇಲೆ ರಾಮದಾಸ್ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮದಾಸ್ ಅವರ ಹೆಸರು ಕಾಣಿಸುವಂತೆ ಕಟಿಂಗ್ ಸಹ ಮಾಡಿಸಿಕೊಂಡಿದ್ದ.
ರಾಜಕೀಯ ಪಿತೂರಿ ಅಲ್ಲ: ಗೋ.ಮ.
ಮೈಸೂರು: ಮಾಜಿ ಸಚಿವ ರಾಮದಾಸ್ ಅವರ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಆರೋಪ ರಾಜಕೀಯ ಪಿತೂರಿ ಅನಿಸುತ್ತಿಲ್ಲ. ಇದು ಸಂಪೂರ್ಣ ವೈಯಕ್ತಿಕ ವಿಚಾರವಾಗಿದೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಹೇಳಿದ್ದಾರೆ. ನಗರದ ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮದಾಸ್ ಅವರನ್ನು ನೋಡಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ನಾನು ಮತ್ತು ತೋಂಟದಾರ್ಯ ಅವರು ರಾಮದಾಸ್ ಅವರನ್ನು ಕರೆದುಕೊಂಡು ಬಂದೆವು. ನನ್ನ ಆತ್ಮೀಯ ಸ್ನೇಹಿತ ಹೀಗೆ ಮಾಡಿಕೊಂಡಿರುವುದು ದುಃಖ ತಂದಿದೆ. ರಾಮದಾಸ್ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ರಕ್ತದೊತ್ತಡ ಬಿಟ್ಟು ಬೇರೆ ಯಾವುದೇ ಸಮಸ್ಯೆ ಇಲ್ಲ. ಬೆಡ್ಶೀಟ್ನಿಂದ ನೇಣು ಬಿಗಿದುಕೊಂಡಿರುವುದರಿಂದ ಜೀವ ಉಳಿದಿದೆ. ಅವರ ಆರೋಗ್ಯ ಚೇತರಿಕೆ ಆಗುತ್ತಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು.
ರಾಮದಾಸ್ ವಿರುದ್ಧ ಪ್ರಕರಣ ದಾಖಲಿಸಿದ ಕಾರು ಚಾಲಕ
ಮೈಸೂರು: ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಸಂಬಂಧ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ರಾಮದಾಸ್ ಅವರ ಕಾರು ಚಾಲಕ ನಾಗೇಂದ್ರ ಎಂಬವರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮದಾಸ್ ಅವರ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆಯಾದ ಮೇಲೆ ಹೇಳಿಕೆ ಪಡೆದು ತನಿಖೆ ಮುಂದುವರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದರು.
ಪ್ರೇಮಾಕುಮಾರಿಯ ಆರೋಪವೇನು?
ಮೂಲತಃ ಚಿಕ್ಕಮಗಳೂರಿನವರಾದ ಪ್ರೇಮಾಕುಮಾರಿ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದಾಗಲೇ ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರೇಮಾಕುಮಾರಿಗೆ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕಿ ಕೆಲಸ ಸಿಕ್ಕಿದೆ. ಮೈಸೂರಿಗೆ ವರ್ಗಾವಣೆ ಮಾಡಿಸಿಕೊಳ್ಳಲು 5 ವರ್ಷದ ಹಿಂದೆ ರಾಮದಾಸ್ ಅವರ ಬಳಿಗೆ ಪ್ರೇಮಾಕುಮಾರಿ ಹೋಗಿದ್ದರು. ಮೈಸೂರಿಗೆ ವರ್ಗಾವಣೆಯಾದ ಮೇಲೆ ರಾಮದಾಸ್ ಪರಿಚಯ ಪ್ರೇಮಕ್ಕೆ ತಿರುಗಿತು. ಅಂದಿನಿಂದಲೂ ನನ್ನನ್ನು ಅನಧಿಕೃತ ಪತ್ನಿಯನ್ನಾಗಿ ಸ್ವೀಕರಿಸಿದ್ದರು. ಮೈಸೂರಿನ ಗೋಕುಲಂನಲ್ಲಿರುವ ಅವರ ಮನೆಯಲ್ಲೇ ಸಿಂಧೂರ ಇರಿಸಿ ವಿವಾಹವಾಗಿದ್ದರು. ಈ ವಿಷಯವನ್ನು ಗೌಪ್ಯವಾಗಿಡುವಂತೆ ರಾಮದಾಸ್ ಕೇಳಿಕೊಂಡಿದ್ದರು ಎಂಬುದು ಪ್ರೇಮಾಕುಮಾರಿ ಹೇಳಿಕೆ. ಇಷ್ಟೆಲ್ಲದರ ನಡುವೆ ನನಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ವರ್ಗವಾಗಿತ್ತು. ಇದಕ್ಕೆ ರಾಮದಾಸ್ ಅವರೇ ಕಾರಣ. ನನ್ನ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ತುಮಕೂರಿಗೆ ಹೋಗಲಿಲ್ಲ. ನನಗೆ ನ್ಯಾಯ ಸಿಗಬೇಕು. ರಾಮದಾಸ್ ಅವರು ನನಗೆ ಜೀವನ ಕೊಡಬೇಕು. ಇದು ಪ್ರೇಮಾಕುಮಾರಿ ಅವರು ಮೈಸೂರಿನ ಸುದ್ದಿಗಾರರಿಗೆ ತಿಳಿಸಿದ ವಿಚಾರ ಮತ್ತು ಆರೋಪ. ಕೆ.ಆರ್. ಉಪ ವಿಭಾಗದ ಪ್ರಭಾರ ಎಸಿಪಿ ಹಾಗೂ ಅಶೋಕಪುರಂ ಠಾಣೆ ಇನ್ಸ್ಪೆಕ್ಟರ್ ಶಾಂತಮಲ್ಲಪ್ಪ ನೇತೃತ್ವದಲ್ಲಿ ಆಸ್ಪತ್ರೆಯ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ರಾಮದಾಸ್ ಆರೋಗ್ಯದಲ್ಲಿ ಚೇತರಿಕೆ
ಮೈಸೂರು: ಮಹಿಳೆಯೊಬ್ಬರು ತಮ್ಮ ವಿರುದ್ಧ ಮಾಡಿದ ಆರೋಪದಿಂದ ಮನ ನೊಂದು ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ರಾಮದಾಸ್ ಅವರಿಂದ ನನಗೆ ಅನ್ಯಾಯವಾಗಿದೆ ಹಾಗೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 5 ವರ್ಷಗಳಿಂದ ಸಂಬಂಧ ಹೊಂದಿದ್ದ ರಾಮದಾಸ್, ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಪ್ರಸ್ತುತ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿರುವ ಎಂ. ಪ್ರೇಮಾಕುಮಾರಿ ಜಡೇದ ಮಂಗಳವಾರ ಆರೋಪಿಸಿದ್ದರು. ಈ ವಿಚಾರವು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಮನ ನೊಂದ ರಾಮದಾಸ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಅಪೋಲೊ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲು ಮಾಡಿದ್ದು, ವೈದ್ಯರಾದ ಡಾ. ಹರೀಶ್ ನಾಯಕ್, ಡಾ. ಸಂಜಯ್, ಡಾ. ಬೋಪಯ್ಯ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಗೋ. ಮಧುಸೂದನ್, ಜೆಡಿಎಸ್ ಶಾಸಕ ಸಾ.ರಾ. ಮಹೇಶ್, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ರಾಮದಾಸ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ರಾಮದಾಸ್, ಪ್ರೇಮಾಕುಮಾರಿ
ದೂರವಾಣಿ ಸಂಭಾಷಣೆ
ಮಾಜಿ ಸಚಿವ ಎಸ್.ಎ. ರಾಮದಾಸ್ ಹಾಗೂ ಪ್ರೇಮಾಕುಮಾರಿ ಅವರ ದೂರವಾಣಿ ಸಂಭಾಷಣೆಯ ಸಂಕ್ಷಿಪ್ತ ವಿವರ ಹೀಗಿದೆ.
* ಪ್ರೇಮಾಕುಮಾರಿ- ನಂಗೆ ಏನ್ ಮಾಡ್ತೀರಾ ಹೇಳಿ?
* ರಾಮದಾಸ್- ನಿಂಗೆ ಏನ್ ಬೇಕೋ ಎಲ್ಲ ಮಾಡ್ತೀನಿ.
* ಪ್ರೆ- ಎಲ್ಲಾ ಮಾಡ್ತೀನಿ ಅಂದ್ರೆ ಏನರ್ಥ, ಇನ್ಮುಂದೆ ನಂಗೆ ಕೆಲಸ ಮಾಡೋಕೆ ಆಗಲ್ಲ, ನನಗೂ ಮರ್ಯಾದೆ ಇದೆ. ಇವಳು ಈ ಮಟ್ಟಕ್ಕೆ ಇಳಿದ್ಲು ಅಂತ ಕಲೀಗ್ಸ್ ಹತ್ರ ಹೇಳಿಸ್ಕೊಂಡು ಕೆಲಸ ಮಾಡೋಕೆ ಆಗಲ್ಲ.
* ರಾ- ಅದಕ್ಕೆಲ್ಲ ತಲೆ ಕೆಡಿಸ್ಕೊಳ್ಬೇಡ. ನಾಳೆ ನಾಡಿದ್ದು ನಿಂಗೆ ಒಂದು ನಾಲ್ಕು ಮನೆ ಹುಡುಕ್ಸಿ ಎಲ್ಲಾದ್ರೂ ವ್ಯವಸ್ಥೆ ಮಾಡಿಸ್ತೀನಿ. ಇನ್ನು ಚುನಾವಣೆ ಮುಗಿಯುವವರೆಗೆ, ಚಿನ್ನಾ ನೀ ಹೇಗಿದ್ದೀಯಾ ಅಂತಷ್ಟೇ ಕೇಳ್ಬೇಕು. ನನ್ನ ಕಷ್ಟ ಸುಖ ವಿಚಾರಿಸ್ಬೇಕು. ಆಗಲೇ ನಮ್ಮಿಬ್ಬರ ಸಂಬಂಧ ಚೆನ್ನಾಗಿರುತ್ತೆ. ಉಳ್ದಿರೋದನ್ನ ನಾನು ನೋಡ್ಕೋತಿನಿ. ನಂಗೆ 5 ವರ್ಷಕ್ಕೊಮ್ಮೆ ಚುನಾವಣೆ ಬರತ್ತೆ. ನಾವು ಯುದ್ಧ ರಂಗದಲ್ಲಿ ಇರ್ತೀವಿ, ರಾಜಕೀಯ ಶತ್ರುಗಳು ಪ್ರತಿಯೊಂದಕ್ಕೂ ಕಾಯ್ತಾ ಇರ್ತಾರೆ. ಈ ಸಂದರ್ಭದಲ್ಲಿ ನಿನ್ನ ಮಾತು ಸ್ವಲ್ಪ ಖುಷಿ ಕೊಡತ್ತೆ ಅಂದೆ ಅಷ್ಟೆ.
* ಪ್ರೆ- ಹಾಗಿದ್ರೆ ನಾನೀಗ ಕೆಲಸಕ್ಕೆ ಹೋಗೋದು ಬೇಡ್ವಾ?
* ರಾ- ನೋಡು ಪುಟ್ಟಕ್ಕ, ನೀನೆ ಡಿಸೈಡ್ ಮಾಡಿದೀಯಲ್ವಾ ಕೆಲಸಕ್ಕೆ ಹೋಗ್ಬೇಕು ಅಂತ. ಚುನಾವಣೆ ಏನೇನೋ ತಲೆಬಿಸಿ ಇರತ್ತೆ. ಚುನಾವಣೆ ಮುಗಿಯುವವರೆಗೆ ಸುಮ್ನೀರು, ಆಮೇಲೆ ಡೆಪ್ಯುಟೇಷನ್ ಏನೋ ವ್ಯವಸ್ಥೆ ಮಾಡೋಣ.
* ಪ್ರೆ- ನಂಗೆ ಅಲ್ಲಿ ಟಾರ್ಚರ್ ತಡೆಯೋಕಾಗಲ್ಲ. ನಾನು ಹೀಗೆ ಇರ್ಬೇಕು ಅನ್ನೋದು ನಿಮ್ಮ ಇಂಟೆನ್ಷನ್ ಅಲ್ವಾ? ನಾನು ಇದೇ ರೀತಿ ಲೈಫ್ ಲೀಡ್ ಮಾಡ್ಬೇಕು, ನಾನು ಎಲ್ಲೂ ಸ್ಟೇಬಲ್ ಆಗಿ ನಿಂತ್ಕೋಬಾರ್ದು ಒಂದು ರೀತಿಯಲ್ಲಿ.
* ರಾ- ಈ ಟೈಮ್ನಲ್ಲಿ ನಿನ್ನ ಕೋ-ಆಪರೇಷನ್ ಬಹಳ ಅವಶ್ಯ. ನನ್ನ ಚುನಾವಣೆ, ಕಷ್ಟ ಕಾಲದಲ್ಲಿ ವಿಚಾರಿಸ್ಕೊಂಡೇ ಅಂತ ನಂಗೂ ಸಮಾಧಾನ ಇರತ್ತೆ ತಾನೆ?
* ಪ್ರೆ- ನಾನು ಸಂತೋಷದಿಂದಿರೋಕೆ ಇಟ್ಟಿದೀರಾ ನೀವು ಹೋಗ್ಲಿ? ಪ್ರತಿ ದಿನ ನಾನು ನರಕದಲ್ಲಿ ಸಾಯ್ಬೇಕು.
* ರಾ- ನೀನು ಹೀಗೆ ನಡೆದ್ಕೋಳ್ಳೋದಾ? ಜೀವನ ತುಂಬಾ ಸಂತೋಷವಾಗಿ ಇರ್ಬೇಕು ಅಂದ್ರೆ ನನ್ನ ಕಷ್ಟ ಕಾಲದಲ್ಲಿ ನೀನು ಸಹಕರಿಸ್ಬೇಕು. ನಂತರ ಎಲ್ಲ ಮಾಡ್ತೀನಿ.
* ಪ್ರೆ- ಏನ್ ಮಾಡ್ತೀರಾ ನೀವು, ಹೆಚ್ಚೆಂದ್ರೆ ಒಂದು ಮನೆ ಕೊಡಿಸ್ಬಹುದು. ಅದರ ಆಚೆಗೆ ನನ್ನ ಲೈಫ್ ಸೆಟ್ಲ್ ಮಾಡಬೇಕು ಅನ್ನೋದು ಇಲ್ಲ ನಿಮಗೆ. ಕಡ್ಡಿ ಮುರ್ದಾಂಗೆ ಸಂಬಂಧ ಕಡ್ಕೋಬೇಕು ಅಂದ್ರೆ ಅದನ್ನು ಮಾಡ್ಬಿಡಿ.
* ರಾ- ನಿನಗೆ ನನ್ನ ಪರಿಸ್ಥಿತಿ ಅರ್ಥ ಆಗ್ತಿಲ್ಲ. ನೀನು ಏನೆಲ್ಲ ನೆಗೆಟಿವ್ ಮಾತಾಡಕೆ ಹೋಗ್ಬೇಡ. ನಾನು ಕಷ್ಟ ಕಾಲದಲ್ಲಿದೀನಿ. ಕಷ್ಟ ಕಾಲ ಅಂದ್ರೆ ಚುನಾವಣೆ ಯುದ್ಧ ರಂಗದಲ್ಲಿದ್ದೀನಿ. ಹೇಗಿದಿರಾ ಅಂತ ಎರಡು ನಿಮಿಷ ಮಾತಾಡಿ ಬಿಟ್ಬಿಡು ಈಗ. ಆದರೆ ಪ್ರತಿ ಸರಿ ಫೋನ್ ಮಾಡಿದಾಗ ಇದೇ ಹೇಳಿದ್ರೆ ತಲೆ ಕೆಟ್ಟೋಗತ್ತೆ.
* ಪ್ರೆ- ಏನ್ ತಲೆ ಕೆಡುತ್ತೆ ನಿಮಗೆ? ನನ್ನ ಜೀವನ ಹಾಳಾಗಿ ಆಯ್ತಲ್ವಾ. ಐದು ವರ್ಷದಿಂದ ಹೀಗೆ ಮಾಡ್ಕೊಂಡು ನನ್ನ ಬೀದಿಗೆ ಬಿಡ್ಬೇಕು ಅಂತಿದೀರಾ ಏನ್ ಕತೆ? ಮದುವೆನೂ ಆಗದೆ ಬೀದಿಗೆ ಬಿಟ್ರಲ್ಲಾ, ಸಮಾಜದಲ್ಲಿ ನಾನು ಯಾವ ರೈಟ್ಸ್ನಲ್ಲಿ ಓಡಾಡ್ಲಿ?
* ರಾ- ಈಗ ಮಾತಾಡ್ಬೇಡ, ನನ್ನ ಮನಸು ಕೆಟ್ಟೋಗತ್ತೆ ಮತ್ತೆ.
* ಪ್ರೆ- ನನ್ನನ ಸಾಯಿಸ್ಬೇಕು ಅನ್ನೋದೆ ನಿಮ್ಮ ಆಲೋಚನೆ ತಾನೆ. ರಿಲೇಷನ್ಶಿಪ್ ಬೇಡ ಅಂತಾಗಿದ್ರೆ ಬಿಡಬೇಕಿತ್ತು, ಅದನ್ನು ಬಿಟ್ಟು ನನ್ನ ಸಾಯಿಸೋ ಪ್ರಯತ್ನ ಏಕೆ ಮಾಡ್ಬೇಕಿತ್ತು. ಬೇರೆಯವರೆಲ್ಲ ಕೇಳಿ ಎಲ್ಲ ಪಡ್ಕೊಂಡ್ರು. ಆದರೆ ನಾನು ಏನು ಕೇಳದೆ ಸುಮ್ನಾದೆ.
* ರಾ- ಕೇಳದೆ ಇರೋದಕ್ಕೆ ನನಗೆ ಸಂತೋಷವಿದೆ. ಆದರೆ ಎಲ್ಲ ಕೊಡ್ತೀನಿ, ಸದ್ಯ ಈಗ ಬಾಯಿ ಮುಚ್ಚಿಕೊಂಡಿರು.
* ಪ್ರೆ- ನಾನೇಕೆ ಬಾಯಿ ಮುಚ್ಕೋಬೇಕು. ನಂಗೂ ಎಲ್ಲ ಬೇಕು, ನಾನು ಮನುಷ್ಯ. ಸಿಟ್ಟು ಮಾಡ್ಬೇಡಿ, ನಂದು ಯಂಗ್ ಬ್ಲಡ್ ಏನು ಬೇಕಾದ್ರೂ ಮಾಡಬಹುದು, ಆದರೆ ಇಷ್ಟು ದಿನ ಸಹಿಸ್ಕೊಂಡು ಬಂದೆ. ಪ್ರೀತಿ ಮಾಡಿ ಮರ್ಯಾದೆಯಿಂದ ನಡೆಸ್ಕೊಂಡಿದ್ರೆ ಯಾರೂ ಏನು ಕೇಳ್ತಿರ್ಲಿಲ್ಲ. ಮರ್ಯಾದೆ ಕಳ್ದಿದೀರಾ. ಅದಕ್ಕೆ ಕೇಳ್ತಾ ಇರೋದು. ಕಳೆದ ಮೂರೂವರೆ ವರ್ಷ ಏನಾದ್ರೂ ಕೇಳಿದ್ನಾ? ಹೇಗೋ ಜೀವನ ನಡೆಸ್ಕೊಂಡು ಹೋಗ್ತಿದ್ದೆ. ಈಗ ತಲೆ ಎತ್ಕೊಂಡು ತಿರುಗದ ಪರಿಸ್ಥಿತಿಯಾಗಿದೆ. ಏನೋ ಒಂದು ಸೆಟ್ರೈಟ್ ಮಾಡಿ, ಇಲ್ದೇ ಇದ್ರೆ ನೋಡಿ.
* ರಾ- ನೀನು ದಿನಾ ಹೀಗೆ ಹೆರಾಸ್ಮೆಂಟ್ ಮಾಡ್ತಿದ್ರೆ ಕಷ್ಟ ಆಗತ್ತೆ. ಮೆಡಿಕಲ್ ಲೀವ್ ಹಾಕ್ಬಿಡು.
* ಪ್ರೆ- ನಾನು ಕೆಲ್ಸಕ್ಕೆ ಹೋಗೊಲ್ಲ, ಐ ಆ್ಯಮ್ ಡಿಸೈಡೆಡ್. ನಾನು ಹುಚ್ಚಿ ತರಹ ಯಾವಂದೋ ಕೈಕಳಗೆ ಏಕೆ ಕೆಲ್ಸ ಮಾಡ್ಬೇಕು. ಅವನ ಕೈಕೆಳಗೆ ಕೆಲ್ಸ ಮಾಡೋ ದುರ್ಗತಿ ಬಂದಿಲ್ಲ. ನಾನು ಯಾವ ಮೆಡಿಕಲ್ ಲೀವ್ ಕೂಡ ಹಾಕಲ್ಲ. ನಂಗೆ ಲೈಫ್ನಲ್ಲಿ ಸೆಟ್ಲ್ ಆಗ್ಬೇಕು ಅಷ್ಟೆ. ಇಲ್ಲಾ ಅಂದ್ರೆ ನಾನು ಏನು ಮಾಡ್ಬೇಕೋ ಅದನ್ನು ಮಾಡ್ತೀನಿ, ನೀವೇನು ಮಾಡ್ತಿರೋ ಅದನ್ನು ಮಾಡಿ. ಇಲ್ಲಾಂದ್ರೆ ನಾನು ಹುಚ್ಚಿನೇ, ಹೆಣ್ಮಕ್ಕಳನ್ನ ಒಳ್ಳೇ ರೀತಿಲಿ ನಡೆಸ್ಕೊಂಡ್ರೆ ಚೆನ್ನಾಗಿರತ್ತೆ.
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರು ಸಂಪೂರ್ಣ ಗುಣಮುಖರಾಗಲು ಒಂದು ವಾರ ಬೇಕು. ರಾಮದಾಸ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಯಾವುದೇ ಸಮಸ್ಯೆ ಕಂಡು ಬಂದಿಲ್ಲ.
- ಡಾ. ಸೋಮನಾಥ್, ಅಪೋಲೊ ಬಿಜಿಎಸ್ ಆಸ್ಪತ್ರೆಯ ವೈದ್ಯ