ಬೆನ್ನು ನೋವಿಗೆ ಚಿಕಿತ್ಸೆ; ಜನಾರ್ದನ ರೆಡ್ಡಿಗೆ ಸಿಕ್ಕಿತು ಮಧ್ಯಂತರ ಜಾಮೀನು
ಗಣಿ ಅಕ್ರಮ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೆನ್ನು ನೋವಿಗೆ ಚಿಕಿತ್ಸೆ...
ಬೆಂಗಳೂರು: ಗಣಿ ಅಕ್ರಮ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಸಿಬಿಐ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾದ ನಂತರ ಜನಾರ್ದನ ರೆಡ್ಡಿಗೆ ಇದೇ ಮೊದಲ ಬಾರಿಗೆ ಜಾಮೀನು ದೊರೆಯುತ್ತಿದೆ. ಹಿಂದೊಮ್ಮೆ ಜಾಮೀನಿಗಾಗಿ ಲಂಚ ಪ್ರಕರಣ ನಡೆದ ನಂತರ ಹಾಗೂ ಅದಕ್ಕೂ ಮೊದಲು ಸಾಕಷ್ಟು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದ್ದವು.
ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ಕೋರಿ ಜನಾರ್ದನ ರೆಡ್ಡಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಫೆ.17ರಿಂದ ಫೆ.24ರವರೆಗೂ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ರೆಡ್ಡಿ ಸ್ವಂತ ವೆಚ್ಚದಲ್ಲಿ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆಸ್ಪತ್ರೆ ಬಿಟ್ಟು ಬೇರೆಲ್ಲೂ ಹೋಗಬಾರದು. ಪತ್ರಿಕೆ, ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಷರತ್ತು ವಿಧಿಸಿದೆ. ಆಸ್ಪತ್ರೆಯಲ್ಲಿರುವ ಅವಧಿಯುದ್ದಕ್ಕೂ ಪೊಲೀಸರ ಬೆಂಗಾವಲು ಇರುವುದು ಕಡ್ಡಾಯ ಎಂದು ತಿಳಿಸಿದೆ.