ಬೇಡಿಕೆ ಅಷ್ಟು... ಕೊಟ್ಟದ್ದು ಇಷ್ಟು..!
ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ! ರಾಜ್ಯದ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ...
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.19
ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ!
ರಾಜ್ಯದ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಂದಿಸಿರುವುದು ಇದೇ ರೀತಿಯಿದೆ. ಕರ್ನಾಟಕದಲ್ಲಿರುವ ಬರೋಬ್ಬರಿ 1203 ಪದವಿಪೂರ್ವ ಸರ್ಕಾರಿ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಫೆ.14ರಂದು ಮಂಡನೆಯಾದ ಬಜೆಟ್ನಲ್ಲಿ ಮೀಸಲಾಗಿರುವ ಅನುದಾನ 3.27 ಕೋಟಿ! ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಸ್ತಾವನೆಗಳ ಪ್ರಕಾರ ಈ ಅನುದಾನವು 3 ಕಾಲೇಜುಗಳ ಅಭಿವೃದ್ಧಿಗೂ ಸಾಕಾಗಲಾರದು. ರಾಜ್ಯಪಾಲರ ಭಾಷಣದಲ್ಲಿ ಪ್ರಚಾರಕ್ಕಾಗಿ ಒಂದೂವರೆ ಸಾವಿರ ಕೋಟಿಯ ಲ್ಯಾಪ್ಟಾಪ್ ಯೋಜನೆ ಹೇಳಿಸುವ ಸರ್ಕಾರ ವಿದ್ಯಾರ್ಥಿಗಳ ಪಾಠಕ್ಕೆ ಬೇಕಾಗಿರುವ ಸೌಕರ್ಯ ಕಲ್ಪಿಸಲು ಅದರ ಒಂದಂಶವನ್ನೂ ನೀಡಲು ಹಿಂದೆ ಬಿದ್ದಿರುವುದು ಸೋಜಿಗವಾಗಿದೆ.
ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪರಿಸ್ಥಿತಿ ಭೀಕರವಾಗಿದೆ. ಹೆಚ್ಚಿನ ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯ ಉಪಯೋಗಕ್ಕೆ ಬಾರದಂತಿದೆ. ಹಲವೆಡೆ ಪ್ರಯೋಗಾಲಯ ಇಲ್ಲದೇ ಇರುವುದರಿಂದ ವಿಜ್ಞಾನ ಕೋರ್ಸ್ಗಳನ್ನೇ ನಡೆಸಲಾಗುತ್ತಿಲ್ಲ. ಆದರೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕಿದ್ದ ಸರ್ಕಾರ ಹಿಂದೇಟು ಹಾಕಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಜಾರಿಗೆ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಅನಿವಾರ್ಯವಾಗಿದೆ. 2015- 16ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಶಾಲಾ ಸಂಯೋಜನೆಯಾಗಲಿದೆ. ಆದರೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ.
ನೆಪ ಮಾತ್ರದ ಅನುದಾನ: ಕರ್ನಾಟಕದಲ್ಲಿ ಒಟ್ಟು 1203 ಸರ್ಕಾರಿ ಪಿಯು ಕಾಲೇಜುಗಳಿವೆ. ಸುಮಾರು ಮೂರೂವರೆ ಲಕ್ಷ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಶೇ.60ಕ್ಕೂ ಅಧಿಕ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯೇ ಹೇಳುತ್ತದೆ. ಸರ್ಕಾರಿ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ 1341 ಕೋಟಿ ಹಾಗೂ ಪ್ರಯೋಗಾಲಯಗಳ ಅಭಿವೃದ್ಧಿಗೆ 1114 ಕೋಟಿ ಅಗತ್ಯವಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಒಟ್ಟಾರೆ 2454 ಕೋಟಿ ಅನುದಾನದ ಬೇಡಿಕೆಯನ್ನು ಶಿಕ್ಷಣ ಇಲಾಖೆಯು ಸರ್ಕಾರದ ಮುಂದಿಟ್ಟಿತ್ತು.
ಆದರೆ ಬಜೆಟ್ನಲ್ಲಿ ದೊರೆತಿದ್ದು ಕೇವಲ 3.27 ಕೋಟಿ. ಪದವಿಪೂರ್ವ ಕಾಲೇಜುಗಳ ಕನಿಷ್ಠ ಮೂಲ ಸೌಕರ್ಯ ಅಭಿವೃದ್ಧಿಗೆ 3.27 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದು ಬಜೆಟ್ ಪುಸ್ತಕದಲ್ಲಿ ಹೇಳಲಾಗಿದೆ. ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ವಿರುದ್ಧವಾಗಿ ಕೇವಲ ಶೇ.0.13ರಷ್ಟು ಹಣ ಮಾತ್ರ ನೀಡಲಾಗಿದೆ. ಸರ್ಕಾರ ನೀಡಿರುವ ಈ ಅನುದಾನದಿಂದ 3 ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವುದು ಕನಸಿನ ಮಾತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಸತತ ಎರಡನೇ ಬಜೆಟ್ನಲ್ಲಿ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ಹಿಂದಿನ ಬಜೆಟ್ನಲ್ಲಿಯೂ ಈ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತಿರಲಿಲ್ಲ.
ಸಂಯೋಜನೆ ಮರೆತಿರುವ ಸರ್ಕಾರ
ರಾಜ್ಯದ ಶಾಲಾ ಸಂಯೋಜನೆ ಕುರಿತಂತೆ ಆರ್. ಗೋವಿಂದ್ ಅವರ ವರದಿ ನಿರೀಕ್ಷಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ 2015- 16ನೇ ಸಾಲಿನಿಂದ ಶಾಲಾ ಸಂಯೋಜನೆ ವ್ಯವಸ್ಥೆ ಜಾರಿಗೆ ಬರುತ್ತದೆ. ಇದರ ಪ್ರಕಾರ ರಾಜ್ಯದಲ್ಲಿ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯ ಬದಲಾಗಿ 9 ರಿಂದ 12ನೇ ತರಗತಿವರೆಗೆ ಹೈಯರ್ ಸೆಕೆಂಡರಿ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುತ್ತದೆ. ಇದಕ್ಕಾಗಿ ಈಗಿರುವ ಪಿಯು ಕಾಲೇಜು ಹಾಗೂ ಪ್ರೌಢ ಶಾಲೆಗಳನ್ನು ಸಂಯೋಜಿಸಿ ಅಭಿವೃದ್ಧಿಪಡಿಸಬೇಕಾಗುತ್ತದೆ. ಆರ್.ಗೋವಿಂದ್ ಅವರು ತಮ್ಮ ಮಧ್ಯಂತರ ವರದಿಯಲ್ಲಿ ಎರಡು ವರ್ಷದ ಹಿಂದೆ ಹೇಳಿದ ಪ್ರಕಾರ, ಇಂದಿನಿಂದಲೇ ಹಂತಹಂತವಾಗಿ ಶಾಲಾ ಕಾಲೇಜುಗಳನ್ನು ಅಭಿವೃದ್ಧಿ ಪಡಿಸದಿದ್ದರೆ ಶಾಲಾ ಸಂಯೋಜನೆ ಅಸಾಧ್ಯದ ಮಾತಾದೀತು. ಇಲ್ಲವಾದಲ್ಲಿ ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ಶಿಕ್ಷಣ ಇಲಾಖೆ ಅಥವಾ ರಾಜ್ಯ ಸರ್ಕಾರ ಗೋವಿಂದ್ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಇವತ್ತಿನವರೆಗೆ ಪರಿಗಣಿಸಿಲ್ಲ.
ರಾಜೀವ ಹೆಗಡೆ