ಏಳು ಗಂಟೆ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಬ್ಯಾಡಗಿ: ಕಳಪೆ ಬಿಟಿ ಹತ್ತಿ ಬೀಜಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕವು ಶುಕ್ರವಾರ ತಾಲೂಕಿನ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸತತ 7 ಗಂಟೆಗಳ ಕಾಲ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿತು. ಇದೇ ವೇಳೆ ರೈತರ ಬೃಹತ್ ಪ್ರತಿಭಟನೆಗೆ ಸರ್ಕಾರವು ಕಳಪೆ ಬೀಜದ ಪರಿಹಾರವನ್ನು ಪ್ರತಿ ಹೆಕ್ಟೇರ್ಗೆ ರು. 6000ಕ್ಕೆ ಹೆಚ್ಚಿಸಿದ್ದಲ್ಲದೇ, ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲು ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ಹಿಂದಕ್ಕೆ ಪಡೆಯಲಾಯಿತು. ಹಾವೇರಿ ಜಿಲ್ಲೆಯ 7 ತಾಲೂಕು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಾಹನಗಳಲ್ಲಿ ಹೆದ್ದಾರಿ ಬಳಿ ಜಮಾಯಿಸಿದ್ದ ಸಾವಿರಾರು ರೈತರು ಹೆದ್ದಾರಿ ಮಧ್ಯದಲ್ಲಿಯೇ ವೇದಿಕೆ ನಿರ್ಮಿಸಿ, ರಸ್ತೆ ಮಧ್ಯದಲ್ಲಿ ಕುಳಿತು ಸುಮಾರು 7 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ರಾಜ್ಯ ಘಟಕವೂ ಪ್ರತಿಭಟನೆಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ ರೈತ ಮುಖಂಡರ ದಂಡೇ ಅಲ್ಲಿ ನೆರೆದಿತ್ತು. ಸುಡು ಬಿಸಿಲನ್ನು ಲೆಕ್ಕಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ರೈತರು ರಸ್ತೆ ಮೇಲೆಯೇ ಕುಳಿತು ಧರಣಿ ನಡೆಸಿದರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾವಿರಾರು ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಕೆಲ ವಾಹನಗಳು ಮಾರ್ಗ ಬದಲಿಸಿ ಚಲಿಸಿದರೆ, ಇನ್ನೂ ಕೆಲ ಬೃಹತ್ ಲಾರಿಗಳು ರಸ್ತೆ ಬಿಟ್ಟು ಕದಲಲಿಲ್ಲ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಕಡೆಗೆ ಸಂಚರಿಸುವ ವಾಹನಗಳನ್ನು ಮಾರ್ಗ ಬದಲಿಸಿ ಹಲಗೇರಿ, ಲಿಂಗದೇವರಕೊಪ್ಪ, ಮತ್ತೂರು, ಕಾಗಿನೆಲೆ ಮಾರ್ಗವಾಗಿ ಹಾವೇರಿಗೆ ಸೇರುವಂತೆ ನೋಡಿಕೊಳ್ಳಲಾಗಿತ್ತು.