ನಿಧಿ ಆಸೆಗಾಗಿ ಮಹಿಳೆ ಬಲಿಗೆ ಯತ್ನ
ಬಿಜಾಪುರ: ನಿಧಿ ಆಸೆಗಾಗಿ ಮಹಿಳೆಯನ್ನು ಬಲಿ ಕೊಡಲು ವಿಫಲ ಯತ್ನ ನಡೆಸಿದ ಘಟನೆ ತಾಲೂಕಿನ ದದಾಮಟ್ಟಿ ಗ್ರಾಮದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅದೇ ಗ್ರಾಮದ ಶಂಕ್ರಪ್ಪ ಕಾಳಗಿ ಹಾಗೂ ಆತನ ಪುತ್ರ ಮಲ್ಲಪ್ಪ ಬಂಧಿತ ಆರೋಪಿಗಳು. ವಿವಾಹಿತ ಮಹಿಳೆ ಹೇಮಾ ಅಬಲಾಪುರ (22) ಎಂಬಾಕೆಯನ್ನು ನಿಧಿ ಆಸೆಗಾಗಿ ಬಲಿ ಕೊಡಲು ಶಂಕ್ರಪ್ಪ ಕಾಳಗಿ ಕುಟುಂಬದವರು ಸಂಚು ರೂಪಿಸಿದ್ದರು.
ಶಂಕ್ರಪ್ಪನ ಇಬ್ಬರು ಸೊಸೆಯಂದಿರು 'ನಿನ್ನ ಕಣ್ಣಿಗೆ ನಿಧಿ ಗೋಚರಿಸುತ್ತದೆ. ಸ್ವಲ್ಪ ನಮ್ಮ ಮನೆಗೆ ಬಂದು ನಿಧಿ ತೋರಿಸುವಂತೆ ಹೇಮಾಳನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಬಲಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಬಹಳ ಹೊತ್ತಿನವರೆಗೆ ಕಾಳಗಿ ಕುಟುಂಬ ಹೇಮಾಳನ್ನು ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟಿತ್ತು. ಆದರೆ, ಹೇಮಾ ಜೋರಾಗಿ ಚೀರಾಟ, ಕೂಗಾಟ ಮಾಡಿದ್ದರಿಂದಾಗಿ ಆಕೆಯನ್ನು ಬಿಟ್ಟಿದ್ದರು. ನಂತರ ಹೇಮಾ ಈ ವಿಚಾರವನ್ನು ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಪತಿಗೆ ವಿಷಯ ತಿಳಿಸಿದ್ದಾಳೆ. ನಂತರ ಗ್ರಾಮಕ್ಕೆ ಆಗಮಿಸಿದ ಪತಿ, ಹೇಮಾಳೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಶಂಕ್ರಪ್ಪ ಕಾಳಗಿ ಹಾಗೂ ಆತನ ಪುತ್ರ ಮಲ್ಲಪ್ಪರನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಾದ ನಾಗಪ್ಪ ಕಾಳಗಿ, ಶ್ರೀಶೈಲ ದೊಡಮನಿ, ಮಹಾದೇವಿ ಕಾಳಗಿ ಹಾಗೂ ಶಂಕ್ರಪ್ಪನ ಇಬ್ಬರು ಸೊಸೆಯಂದಿರು ಪರಾರಿಯಾಗಿದ್ದಾರೆ. ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ಲಕ್ಷ ಖರ್ಚು ಮಾಡಿದ್ದ: ಕಳೆದ 3 ವರ್ಷಗಳ ಹಿಂದೆ ಶಂಕ್ರಪ್ಪ ಕಾಳಗಿಗೆ ಬಿಜಾಪುರದಲ್ಲಿ ಸ್ವಾಮಿಯೊಬ್ಬ, ನಿನ್ನ ಮನೆಯಲ್ಲಿ ನಿಧಿ ಇದೆ ಎಂದು ಹೇಳಿದ್ದನಂತೆ. ಈ ಸ್ವಾಮಿ ಮಾತು ನಂಬಿದ ಶಂಕ್ರಪ್ಪ ಕಾಳಗಿ, ಕಳೆದ 3 ವರ್ಷದಲ್ಲಿ ನಿಧಿ ವಶಪಡಿಸಿಕೊಳ್ಳಲು 5 ಲಕ್ಷ ಖರ್ಚು ಮಾಡಿದ್ದ. ಕೊನೆಯದಾಗಿ ಒಬ್ಬ ಮಹಿಳೆಯನ್ನು ಬಲಿ ನೀಡಿದರೆ ನಿಧಿ ಒಲಿಯುತ್ತದೆ ಎಂಬ ಮೂಢನಂಬಿಕೆಯಿಂದ ಶಂಕ್ರಪ್ಪ ಕಾಳಗಿ, ಹೇಮಾಳನ್ನು ಬಲಿ ಕೊಡಲು ಮುಂದಾಗಿತ್ತು.