ಮಗನ ಶವ ಬೀದಿಯಲ್ಲಿ ಇಟ್ಟು ರೋದಿಸಿದ ತಾಯಿ!
ನಾಪೋಕ್ಲು: ಅಗಲಿದ ಮಗನ ಮೃತದೇಹವನ್ನು ಆಸ್ಪತ್ರೆ ಶವಾಗಾರದಿಂದ ಹೊತ್ತೊಯ್ದ ತಾಯಿ ಬೀದಿಯಲ್ಲಿಯೇ ಶವದೊಂದಿಗೆ ರೋದಿಸಿದ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಚೆಯ್ಯಂಡಾಣೆಯಲ್ಲಿ ನಡೆದಿದೆ. ಅಸ್ಸಾಂನಿಂದ ಕೊಡಗು ಜಿಲ್ಲೆಯ ಚೆಯ್ಯಂಡಾಣೆ ಗ್ರಾಮಕ್ಕೆ ಬಂದ ಮುಸ್ಲಿಂ ಕುಟುಂಬವೊಂದು ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿತ್ತು. ಈ ದಂಪತಿಯ 10 ವರ್ಷದ ಮಗ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ತಂದೆತಾಯಿ ಬೈಯ್ದರೆಂದು ಮನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಈತನ ಶವವನ್ನು ಚೆಯ್ಯಂಡಾಣೆಯಲ್ಲಿನ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಮಗನ ದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಕತ್ತರಿಸುತ್ತಾರೆ ಎಂದು ತಿಳಿದ ತಾಯಿ, ಮಗನ ಮೇಲಿನ ವಾತ್ಸಲ್ಯದಿಂದ ಆಸ್ಪತ್ರೆ ಶವಾಗಾರದಿಂದಲೇ ಮಗನ ಪಾರ್ಥಿವ ಶರೀರವನ್ನು ಹೊತ್ತೊಯ್ದು ರಸ್ತೆಯಲ್ಲಿ ರಂಪಾಟ ಮಾಡುತ್ತಾ ಸುತ್ತಾಡತೊಡಗಿದಳು. ವೈದ್ಯರೂ ಸೇರಿದಂತೆ ಗ್ರಾಮಸ್ಥರು ಈಕೆಯನ್ನು ಸಮಾಧಾನಪಡಿಸಲು ಹೆಣಗಾಡಬೇಕಾಯಿತು.