ಅಕ್ರಮ 'ವೃತ್ತಿ'ಗೆ 16 ವಿದ್ಯಾರ್ಥಿಗಳ ಒಪ್ಪಿಗೆ
ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ ಕೌನ್ಸೆಲಿಂಗ್ನಲ್ಲಿ ಅಕ್ರಮ ಎಸಗಿದ ಆರೋಪ ಹೊತ್ತಿರುವ 70 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಉತ್ತರ ನೀಡುವ ಗೋಜಿಗೆ ಹೋಗಿಲ್ಲ!
ಈ ಮೂಲಕ ಪರೋಕ್ಷವಾಗಿ ಅಕ್ರಮ ಎಸಗಿರುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆಂತರಿಕ ತನಿಖೆ ಪ್ರಕಾರ 70 ಪ್ರಕರಣಗಳಲ್ಲಿ ಸುಮಾರು 36 ಪ್ರಕರಣ ಗಂಭೀರ ಸ್ವರೂಪದ್ದಾಗಿವೆ. ಉತ್ತರ ನೀಡದ 16 ವಿದ್ಯಾರ್ಥಿಗಳು ಇದೇ 36 ಪ್ರಕರಣದಲ್ಲಿ ಸೇರಿದ್ದಾರೆ.
ದಾಖಲೆ ಪರಿಶೀಲನೆ ಬಳಿಕ ಜೂನ್ ಕೊನೆ ವಾರ ಹಾಗೂ ಜುಲೈ ತಿಂಗಳಲ್ಲಿ ಈ ಎಲ್ಲ 70 ವಿದ್ಯಾರ್ಥಿಗಳ ದಾಖಲೆ ತಿದ್ದಿರುವುದು ಬೆಳಕಿಗೆ ಬಂದಿದೆ. 'ಕನ್ನಡಪ್ರಭ'ಕ್ಕೆ ದೊರೆತಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರವೊಂದರಲ್ಲೇ 45 ಅಭ್ಯರ್ಥಿಗಳು ದಾಖಲೆ ತಿದ್ದಿದ್ದಾರೆ.
ವಿದ್ಯಾರ್ಥಿಗಳಿಗೆ ನೀಡಿರುವ ನೋಟಿಸ್ ಹಾಗೂ ಸಿಐಡಿ ತನಿಖೆಗೆ ಸಂಬಂಧಿಸಿ ಈಗಾಗಲೇ ಪ್ರಾಧಿಕಾರದ ಕಾನೂನು ಸಮಿತಿ ಮೂರು ಸಭೆ ನಡೆಸಿದೆ. ಸಲ್ಲಿಕೆಯಾಗಿರುವ ವಿದ್ಯಾರ್ಥಿಗಳ ಉತ್ತರ ಆಧರಿಸಿ ಮತ್ತೊಂದು ಹಂತದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಆ ಬಳಿಕ 70 ವಿದ್ಯಾರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಉತ್ತರ ನೀಡದ 16 ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶ ಕೊಡಲು ನಿರ್ಧರಿಸಲಾಗಿದ್ದು ಇನ್ನೊಂದು ವಾರದಲ್ಲಿ ಉತ್ತರಿಸುವಂತೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ.
ಅಕ್ರಮಕ್ಕೆ ಪ್ರಾಧಿಕಾರವೇ ಕಾರಣ!: ಪರೀಕ್ಷಾ ಪ್ರಾಧಿಕಾರದ ನೋಟಿಸ್ಗೆ ಉತ್ತರಿಸಿರುವ ಒಟ್ಟು 54 ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ತಮ್ಮ ತಪ್ಪುಗಳಿಗೆ ಪ್ರಾಧಿಕಾರದ ಅಧಿಕಾರಿಗಳತ್ತ ಬೊಟ್ಟು ಮಾಡಿದ್ದಾರೆ. ಇನ್ನು ಕೆಲವರು ತಮ್ಮಿಂದ ತಿಳಿಯದೇ ತಪ್ಪಾಗಿದೆ ಕ್ಷಮಿಸಿ ಎಂಬ ಹಾರಿಕೆ ಉತ್ತರ ನೀಡಿದ್ದಾರೆ.
'ಸಂಬಂಧಪಟ್ಟ ಕೆಟಗರಿಯ ದಾಖಲೆಗಳು ಲಭ್ಯವಿದ್ದರೂ ದಾಖಲೆ ಪರಿಶೀಲನೆ ವೇಳೆ ನಿರ್ಲಕ್ಷ್ಯದಿಂದ ಸಲ್ಲಿಸಿರಲಿಲ್ಲ. ಆದರೆ ದಾಖಲೆ ಪರಿಶೀಲನೆ ಮುಗಿದ ಬಳಿಕ ತಪ್ಪು ಮಾಡಿರುವುದು ಗಮನಕ್ಕೆ ಬಂದು ಸೂಕ್ತ ಮಾಹಿತಿ ಸಲ್ಲಿಸಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ಪ್ರಾಧಿಕಾರದ ಅಧಿಕಾರಿಗಳ ಗೊಂದಲದಿಂದ ಹೀಗಾಗಿದೆ. ಪ್ರಾಧಿಕಾರದಲ್ಲಿನ ಕೆಲ ಅಧಿಕಾರಿಗಳು ನಮ್ಮ ದಾರಿ ತಪ್ಪಿಸಿದರು. ಈ ಹಿನ್ನೆಲೆಯಲ್ಲಿ ನಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡಿ' ಎಂದು ಬಹುತೇಕ ವಿದ್ಯಾರ್ಥಿಗಳು ಪ್ರಾಧಿಕಾರದ ನೋಟಿಸ್ಗೆ ಉತ್ತರಿಸಿದ್ದಾರೆ.
'ನಾನಿನ್ನೂ ವಯಸ್ಕನಾಗಿರದ ಹಿನ್ನೆಲೆಯಲ್ಲಿ ಈ ತಪ್ಪುಗಳು ನನಗೆ ಗೊತ್ತಾಗಲಿಲ್ಲ. ನನ್ನ ಜಾತಿ ತಪ್ಪಾಗಿ ಪ್ರಕಟವಾಗಿರುವುದು ದಾಖಲೆ ಪರಿಶೀಲನೆಯ ಬಳಿಕ ಗೊತ್ತಾಗಿದೆ' ಎಂಬ ಉತ್ತರವನ್ನು ಕೆಲವರು ನೀಡಿದ್ದಾರೆ.
ಧಾರವಾಡ ನಗರದಲ್ಲಿ ಓದಿರುವ ಒಬ್ಬ ವಿದ್ಯಾರ್ಥಿ ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಧಾರವಾಡ ಎಂದೇ ನಮೂದಿಸಿ ಗ್ರಾಮೀಣ ವ್ಯಾಸಾಂಗ ಪ್ರಮಾಣಪತ್ರ ನೀಡಿದ್ದಾನೆ. ಆದರೆ ಆತ ಧಾರವಾಡ ಮಹಾನಗರವನ್ನೇ ಗ್ರಾಮಕ್ಕೆ ಸೇರಿಸಿಬಿಟ್ಟಿದ್ದಾನೆ.
ಬೆಂಗಳೂರು ಅಕ್ರಮಗಳ ಕೇಂದ್ರ: 72 ಸಾವಿರ ಸೀಟು ಹಂಚಿಕೆಗಳಲ್ಲಿ 70 ಸೀಟುಗಳ ಹಂಚಿಕೆಯಲ್ಲಿ ಅಕ್ರಮವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಇದರಲ್ಲಿ 36 ಪ್ರಕರಣಗಳು ತೀವ್ರ ಸ್ವರೂಪದ್ದು ಎನ್ನುವುದು ಪ್ರಾಥಮಿಕ
ತನಿಖೆಯಿಂದ ಗೊತ್ತಾಗಿದೆ. ಇದರಲ್ಲಿ 25 ಅಕ್ರಮಗಳು ಬೆಂಗಳೂರು ದಾಖಲೆ ಪರಿಶೀಲನೆ ಕೇಂದ್ರದಲ್ಲಿಯೇ ನಡೆದಿದೆ. ಒಟ್ಟಾರೆ 45 ವಿದ್ಯಾರ್ಥಿಗಳ ಕೆಟಗಿರಿ ಬದಲಾವಣೆ ಇಲ್ಲಿಯೇ ನಡೆದಿದೆ. 22 ಪ್ರಕರಣಗಳಲ್ಲಿ ಗ್ರಾಮೀಣ ಕೋಟಾಕ್ಕೆ ವರ್ಗಾಯಿಸಲಾಗಿದೆ. ಉಳಿದ 48 ಪ್ರಕರಣಗಳಲ್ಲಿ ಇತರೆ ಕೆಟಗರಿಗಳಿಗೆ ಬದಲಾಯಿಸಲಾಗಿದೆ.
70 ಪ್ರಕರಣಗಳಲ್ಲಿ 34 ವಿದ್ಯಾರ್ಥಿಗಳ ಸೀಟು ಹಂಚಿಕೆ ಅಕ್ರಮ ಎಂದು ಮೇಲ್ನೋಟಕ್ಕೆ ಕಾಣದಿದ್ದರೂ, ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿದಿರುವುದು ನಿಜವಾಗಿದೆ. ಅರ್ಜಿಯಲ್ಲಿ ದಾಖಲಿಸಿದ ವರ್ಗದಲ್ಲಿ ಸೀಟು ಸಿಗುವುದು ಕಷ್ಟ ಎಂಬ ಸಂದೇಹದಿಂದ ಬದಲಾಯಿಸಿಕೊಂಡಿದ್ದಾರೆ.
ಇತರ ಅಧಿಕಾರಿಗಳ ವಿರುದ್ಧ ಕ್ರಮವೇಕಿಲ್ಲ?
ಈ ಅಕ್ರಮ ಸಂಬಂಧ ಆಡಳಿತಾಧಿಕಾರಿಯನ್ನು ಮಾತ್ರ ಅಮಾನತು ಮಾಡಲಾಗಿದೆ. ಆದರೆ ನೆರವು ನೀಡಿದ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ, ದಾಖಲೆ ಪರಿಶೀಲನೆ ಮಾಡಿದ ಅಧಿಕಾರಿಗಳು ಹಾಗೂ ಕಂಪ್ಯೂಟರ್ ವಿಭಾಗದಲ್ಲಿನ ಸಿಬ್ಬಂದಿ ವಿರುದ್ಧ ಇನ್ನೂ ಕ್ರಮವಾಗಿಲ್ಲ. ಇವರ ನೇತೃತ್ವದಲ್ಲೇ ಪಿಜಿಸಿಇಟಿ ಕೌನ್ಸೆಲಿಂಗ್ ತಯಾರಿ ನಡೆಯುತ್ತಿದೆ.
ಇಲಾಖೆಗೆ ಬಂದೂ ಉತ್ತರ ನೀಡದ ಪಾಲಕರು!
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಗ್ರಾಮೀಣ ಕೋಟಾದಡಿ ಸೀಟು ಪಡೆದಿದ್ದ ವಿದ್ಯಾರ್ಥಿನಿಯೊಬ್ಬರ ತಂದೆ ಪ್ರಾಧಿಕಾರದ ಕಚೇರಿಗೆ ಬಂದು ಕೆಲ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಆದರೆ ನೋಟಿಸ್ಗೆ ಉತ್ತರ ನೀಡಿಲ್ಲ. ಇದೇ ರೀತಿ 10ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಕರು ಪ್ರಯತ್ನ ನಡೆಯಿಸಿದ್ದಾರೆ.
ರಾಜೀವ ಹೆಗಡೆ