ವಿದ್ಯುತ್ ಬರ ತಪ್ಪಿಸಲಿರುವ ದಾಮೋದರ
ಪರೀಕ್ಷೆ ಮತ್ತು ಬೇಸಿಗೆಯ ಸಮಯದಲ್ಲಿ ವಿದ್ಯುತ್ ಅಭಾವ ಉಂಟಾಗುವುದನ್ನು ತಡೆಯಲು ವಿದ್ಯುತ್ ಖರೀದಿಗೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.22
ಪರೀಕ್ಷೆ ಮತ್ತು ಬೇಸಿಗೆಯ ಸಮಯದಲ್ಲಿ ವಿದ್ಯುತ್ ಅಭಾವ ಉಂಟಾಗುವುದನ್ನು ತಡೆಯಲು ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದ್ದು, ಪರೀಕ್ಷೆ ಸಮಯದಲ್ಲಿ ಪವರ್ಕಟ್ ಮಾಡಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಾಮೋದರ್ ವ್ಯಾಲಿಯಿಂದ 450 ಮೆಗಾ ವ್ಯಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದು, ಸದ್ಯದಲ್ಲೇ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗುವುದು. ಆ ಮೂಲಕ ಔದ್ಯೋಗಿಕ ಹಾಗೂ ಗೃಹ ಬಳಕೆಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಒಟ್ಟು 1000 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡುವುದಕ್ಕೆ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. 450 ಮೆ. ವ್ಯಾ. ವಿದ್ಯುತ್ ನೀಡಲು ದಾಮೋದರ್ ವ್ಯಾಲಿಯಿಂದ ಒಪ್ಪಿಗೆ ದೊರೆತಿದೆ. ಸೆಂಟ್ರಲ್ ಗ್ರಿಡ್ ಮೂಲಕವೇ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕ ಪದ್ಧತಿಯಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಬಳಕೆ ಶುಲ್ಕ ಸಂಗ್ರಹವಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಶುಲ್ಕ ಇಳಿಕೆಯಂತ ಗಿಮಿಕ್ ಮೂಲಕ ಪ್ರಚಾರ ಗಿಟ್ಟಿಸಲು ನಾನು ಸಿದ್ಧನಿಲ್ಲ. ಆದರೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತೇನೆ. ಔದ್ಯಮಿಕ, ವಾಣಿಜ್ಯ, ಕೃಷಿ ಹಾಗೂ ಗೃಹ ಬಳಕೆ ಕ್ಷೇತ್ರದಲ್ಲಿ ಇಂಧನ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ನನ್ನ ಗುರಿ ಎಂದು ಹೇಳಿದರು.
ಪವರ್ ಕಟ್ ಇಲ್ಲ: ಬೇಸಿಗೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕೊರತೆ ಸಹಜ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಮುತುವರ್ಜಿ ವಹಿಸಲಿದೆ. ಪರೀಕ್ಷಾ ಸಂದರ್ಭದಲ್ಲಿ ಗ್ರಾಮೀಣ, ನಗರ ಎಂಬ ಭೇದವಿಲ್ಲದೆ ಪವರ್ ಕಟ್ ಮಾಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಹೀಗಾಗಿ ವಿದ್ಯಾರ್ಥಿ ಸಮುದಾಯ ಆತಂಕ ಪಡಬೇಕಾದ ಸಂದರ್ಭ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ನೇಮಕ ವಿಳಂಬ: ಆದರೆ ನಿಗಮ- ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದ ಶಿವಕುಮಾರ್, ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಜಿಲ್ಲಾ ಹಾಗೂ ತಾಲೂಕು ಸಮಿತಿಗಳಿಗೆ ಕಾರ್ಯಕರ್ತರನ್ನು ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಕ ಮಾಡಲಾಗಿದೆ. ಸದ್ಯದಲ್ಲೇ ಆದೇಶ ಪತ್ರ ತಲುಪುತ್ತದೆ ಎಂದು ಹೇಳಿದರು.
ಹಿರೇಮಠ್ ಮಾತಿನಲ್ಲಿ ಎಚ್ಡಿಕೆ ಧ್ವನಿ: ಡಿಕೆಶಿ
ನಾನು ಎಸ್.ಆರ್. ಹಿರೇಮಠ್ ಅವರ ಅಭಿಮಾನಿ. ಅವರಿಗೆ ಪ್ರತಿ ದಿವಸ ನನ್ನ ನೆನಪು ಮಾಡಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ. ಆದರೆ ಹಿರೇಮಠ್ರ ಪ್ರತಿ ಮಾತಿನ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರ ಧ್ವನಿ ಕೇಳಿಸುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಹೆಸರು ಬಳಸಿಕೊಳ್ಳುವುದರಿಂದಲೇ ಅವರಿಗೆ ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ಸಿಗುತ್ತಿದೆ. ಪ್ರತಿ ದಿನ ಹೊಸ ಬಾಂಬ್ ಸಿಡಿಸುತ್ತೇನೆ ಎಂದು ನನಗೆ ಪುಷ್ಪ ಗುಚ್ಛ ಕಳಿಸುತ್ತಿದ್ದಾರೆ. ಆದರೆ ಇದೆಲ್ಲವನ್ನೂ ಗೌರವಾನ್ವಿತ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮಾಡಿದ ಆರೋಪವೇ ಆಗಿದೆ. ಹಿಂದೆ ಅವರು ಮಾಡಿದ ಆರೋಪವನ್ನು ಈಗ ಹಿರೇಮಠ್ ಪುನರುಚ್ಚರಿಸುತ್ತಿದ್ದಾರೆ ಎಂದು ಕಟಕಿಯಾಡಿದರು. ಹಿರೇಮಠ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ರಮೇಶ್ಕುಮಾರ್ ಅವರು ಆಗ್ರಹಿಸಿರುವ ಬಗ್ಗೆ ಪ್ರಶ್ನಿಸಿದಾಗ, ನಾನು ಹಿರೇಮಠ್ರ ವೈಯಕ್ತಿಕ ವಿಚಾರಗಳಿಗೆ ಕೈ ಹಾಕಲು ಹೋಗುವುದಿಲ್ಲ. ಇಂಧನ ಸಚಿವನಾಗಿ ನಾನು ನನ್ನ 'ಫ್ಯಾನ್'ಗೆ ಹೆಚ್ಚು ಶಕ್ತಿ ನೀಡಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.