ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಎಂಗೆ ಜಾಮರ್ ಅಲರ್ಜಿ

Mainashree
Updated On : 22 Feb 2014, 10:19 am

ಬೆಂಗಳೂರು: ತಮ್ಮ ಬೆಂಗಾವಲು ಪಡೆಯಲ್ಲಿ ಜಾಮರ್ ವಾಹನ ಬೇಡವೇ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಠ ಹಿಡಿದಿದ್ದಾರೆ...!
ಕಳೆದೊಂದು ವಾರದಿಂದ ಸಿಎಂ ಸಿದ್ದರಾಮಯ್ಯನವರ ಈ ಬೇಡಿಕೆಯಿಂದ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಹಾಗೂ ಗುಪ್ತದಳದ ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದ್ದು, ಅತ್ತ ದರಿ ಇತ್ತ ಹುಲಿ ಎಂಬಂತಾಗಿದೆ. ಉನ್ನತ ಸ್ಥಾನದಲ್ಲಿ ಇರುವವರೆಲ್ಲರ ತಮ್ಮ ಭದ್ರತೆಗೆ ಇನ್ನಿಲ್ಲದ ಒತ್ತು ನೀಡುವಂತೆ ಆಗ್ರಹಿಸಿದ್ದರೂ, ಸಿಎಂ ಸಿದ್ದರಾಮಯ್ಯ ಅವರಿಗೆ ಜಾಮರ್ ವಾಹನದ ಮೇಲೇಕೆ 'ವೈರಾಗ್ಯ' ? ಎಂಬ ಪ್ರಶ್ನೆಯ ಹಿಂದೆ ಕುತೂಹಲಕಾರಿ ವಿಷಯವಿದೆ.
ಸಿಎಂ ಬೆಂಗಾವಲು ಪಡೆಯ ಮುಂದೆ ಜಾಮರ್ ವಾಹನ ಹೋಗುತ್ತಿದ್ದರೆ, ಹಿಂಬದಿಯಲ್ಲಿರುವ 'ಟೇಲ್‌' ವಾಹನವನ್ನು ಬಿಟ್ಟು ಇನ್ಯಾವುದರಿಂದಲೂ ಸಂಪರ್ಕ ಸಾಧಿಸುವುದಕ್ಕೆ ಸಾಧ್ಯವಾಗುದಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ಮೊಬೈಲ್‌ಗೆ ಬರುವ ತುರ್ತು ಕರೆಗಳು ಮತ್ತು ತುರ್ತಾಗಿ ಯಾವುದಾದರೂ ಸಂದೇಶವನ್ನು ಕಳುಹಿಸಬೇಕಿದ್ದರೆ ತೊಂದರೆಯಾಗುತ್ತಿದೆ. ಜಾಮರ್ ವಾಹನ ರಸ್ತೆಯಲ್ಲಿ ಹೋಗುತ್ತಿದ್ದರೆ ಅಕ್ಕಪಕ್ಕದಲ್ಲಿ ಹೋಗುವವರ ಮೊಬೈಲ್ ಸಂಪರ್ಕವೂ ಕಡಿತವಾಗುತ್ತದೆ. ಅಷ್ಟು ಮಾತ್ರವಲ್ಲ ಸಿಎಂ ಹೋಗುವ ಸಭೆ, ಬಹಿರಂಗ ಸಮಾವೇಶಗಳಿಗೂ ಈ ವಾಹನವನ್ನು ಕೊಂಡೊಯ್ಯಲಾಗುತ್ತದೆ. ಆದರೆ ದೊಡ್ಡ ಆಂಟೆನಾ ರೀತಿಯಲ್ಲಿರುವ ಈ ವಾಹನವನ್ನು ನೋಡಿದರೆ ಜನರು ಹತ್ತಿರ ಬರುವುದಿಲ್ಲ. ಹೀಗಾಗಿ 'ಇಂಥವೆಲ್ಲಾ ಬೇಕಾ?' ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಬೆಂಗಾವಲು ಪಡೆಯಲ್ಲಿ ನಿಯೋಜಿಸಬೇಡಿ ಎಂದು ಹೇಳಿದ್ದಾರೆ.
ನಿರಾಕರಣೆ: ಆದರೆ ವಿವಿಐಪಿಗಳ ಬೆಂಗಾವಲು ಪಡೆಗೆ ಜಾಮರ್ ವಾಹನ ತೀರಾ ಅನಿವಾರ್ಯ ಎಂಬುದು ಭದ್ರತಾ ಪಡೆ ಅಭಿಪ್ರಾಯ. ಏಕೆಂದರೆ ನಕ್ಸಲ್ ಪೀಡಿತ ಪ್ರದೇಶಗಳೂ ಸೇರಿ ಗಣ್ಯರನ್ನು ಗುರಿಯಾಗಿಸಿ ಹುದುಗಿಸಿಡುವ ಸುಧಾರಿತ ಸ್ಫೋಟಕ (ಐಇಡಿ)ಗಳನ್ನು ಕೆಲವು ಕಿಮೀ ದೂರದಿಂದಲೇ ಜಾಮರ್ ಗ್ರಹಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ದೂರದಿಂದಲೇ ಐಇಡಿಯನ್ನು ಸ್ಫೋಟಿಸುವ ನೆಟ್‌ವರ್ಕ್‌ಗಳಿದ್ದರೆ ಅದನ್ನು ಜಾಮ್ ಮಾಡಿ, ಸ್ಫೋಟವನ್ನು ತಪ್ಪಿಸುತ್ತದೆ. ಹೀಗಾಗಿ ಬೆಂಗಾವಲು ಪಡೆಯಿಂದ ಜ್ಯಾಮರ್ ವಾಹನ ಬೇರ್ಪಡಿಸುವುದು ಅಸಾಧ್ಯ ಎಂಬುದು ಅಧಿಕಾರಿಗಳ ವಾದ.
ಎಲ್ಲಿ ನಿಯೋಜನೆ?: ಗಣ್ಯರ ಬೆಂಗಾವಲು ಪಡೆ ವಾಹನ ನಿಯೋಜನೆಯಲ್ಲೂ ಒಂದು ಕ್ರಮವಿದೆ. ಈ ಪಡೆಯ ಮುಂಭಾಗದಲ್ಲಿ ವಾರ್ನಿಂಗ್ ವಾಹನ ಇರುತ್ತದೆ. ಸೈರನ್ ಮೊಳಗಿಸುತ್ತಾ ಮುಂದೆ ಸಾಗುವ ಈ ವಾಹನದ ಹಿಂಭಾಗದಲ್ಲಿ ಪೈಲಟ್ ವಾಹನ ಇರುತ್ತದೆ. ಅದರ ಹಿಂಭಾಗದಲ್ಲಿ ಜ್ಯಾಮರ್ ವಾಹನ ಇರುತ್ತದೆ. ನಂತರ ಎಸ್ಕಾರ್ಟ್ -1, ಎಸ್ಕಾರ್ಟ್-2 ಮಧ್ಯದಲ್ಲಿ ಸಿಎಂ ಅಥವಾ ರಾಜ್ಯಪಾಲರು, ರಾಜ್ಯಕ್ಕೆ ಆಗಮಿಸುವ ಗಣ್ಯರ ವಾಹನ, ಅದರ ಹಿಂಭಾಗದಲ್ಲಿ ಬಿಪಿ ಕಾರ್ (ಬುಲೆಟ್‌ಫ್ರೂಫ್ ಕಾರ್ ) ನಂತರ ಅಧಿಕಾರಿಗಳ ವಾಹನ ಹಾಗೂ ಕೊನೆಯಲ್ಲಿ 'ಟೇಲ್‌' ವಾಹನ ಇರುತ್ತದೆ.
ಈ ಟೇಲ್ ವಾಹನ ಜಾಮರ್ ಇದ್ದರೂ ಸಂಕೇತವನ್ನು ರವಾನಿಸಬಲ್ಲದು. ವಾರ್ನಿಂಗ್ ವಾಹನ ಮತ್ತು ಇತರೆ ವಾಹನಗಳ ನಡುವಿನ ಅಂತರ ಎಷ್ಟಿರಬೇಕು?, ತುರ್ತು ಮಾರ್ಗ ಬದಲಾವಣೆ ಯಾವಾಗ ಮಾಡಬೇಕು? ಎಂಬಿತ್ಯಾದಿ ವಿವರವನ್ನು ಇಲ್ಲಿಂದಲೇ ನೀಡಲಾಗುತ್ತದೆ. ಜಾಮರ್‌ನಿಂದ ಮೊಬೈಲ್ ಸಂಪರ್ಕ ಸಾಧ್ಯವಾಗುವುದಿಲ್ಲ ಎಂಬುದನ್ನು ಬಿಟ್ಟರೆ ಅನುಕೂಲತೆಗಳು ಭದ್ರತಾ ದೃಷ್ಟಿಯಿಂದ ಹೆಚ್ಚಿವೆ. ಆದರೆ ಸಿದ್ದರಾಮಯ್ಯನವರಿಗೆ ಇಷ್ಟೊಂದು ಉಸಿರುಗಟ್ಟಿಸುವ ಭದ್ರತೆ ಬಗ್ಗೆ ಒಲವಿಲ್ಲ. ಹೀಗಾಗಿ ಜಾಮರ್ ವಾಹನವನ್ನು ಬೇಡ ಎನ್ನುತ್ತಿದ್ದಾರೆ ಎಂದು ಅವರ ಆಪ್ತಮೂಲದಿಂದ ತಿಳಿದು ಬಂದಿದೆ.
ಬೆಂಗಾವಲು ಪಡೆಯಿಂದ ಜಾಮರ್ ವಾಹನ ಬೇರ್ಪಡಿಸುವುದು ಅಸಾಧ್ಯ. ಆದರೆ ಸಿಎಂ ಕಚೇರಿಯಿಂದ ಇಂಥದೊಂದು ಸಂದೇಶ ಬಂದಿದೆ. ಭದ್ರತಾ ದೃಷ್ಟಿಯಿಂದ ಇದು ಸೂಕ್ತವಲ್ಲ ಎಂದು ನಾವು ಹೇಳಿದ್ದೇವೆ.
-ಹೆಸರು ಹೇಳಲು ಇಚ್ಚಿಸದ ವಿವಿಐಪಿ ಅಧಿಕಾರಿ


ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement