ನಾಳೆಯಿಂದ ಸಿಲಿಂಡರ್ ಬಂದ್
ಎಲ್ಪಿಜಿ ಸಿಲಿಂಡರ್ಗೆ ಏಕರೂಪ ದರ ನಿಗದಿಪಡಿಸುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಸಿಲಿಂಡರ್...
ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗೆ ಏಕರೂಪ ದರ ನಿಗದಿಪಡಿಸುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಸಿಲಿಂಡರ್ ವಿತರಕರು ಫೆ.25ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಕೇಂದ್ರದ ಇಂಧನ ಸಚಿವರು ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಅಖಿಲ ಭಾರತ ಎಲ್ಪಿಜಿ ಸರಬರಾಜು ಸಂಘದ ಅಧ್ಯಕ್ಷ ರಾಧಾಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
ಎಲ್ಪಿಜಿ ಸಿಲಿಂಡರ್ ವಿತರಕರ ಮುಷ್ಕರದಿಂದ ಸಿಲಿಂಡರ್ ನೋಂದಾಯಿಸಲು ಯಾವುದೇ ತೊಂದರೆ ಇಲ್ಲ. ಆದರೆ, ಸರಬರಾಜು ಸ್ಥಗಿತವಾಗುತ್ತದೆ. ಆಸ್ಪತ್ರೆ, ಹೊಟೇಲ್ನಂತಹ ತುರ್ತು ಅಗತ್ಯ ಇರುವಲ್ಲಿಗೂ ಸಿಲಿಂಡರ್ ಸರಬರಾಜು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಇದರಿಂದ ವಾಣಿಜ್ಯ ಬಳಕೆ ಹಾಗೂ ಗೃಹಬಳಕೆಗೆ ಬಳಸುವ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದರು.
ದೇಶಾದ್ಯಂತ ಸುಮಾರು 15 ಸಾವಿರ ಸಿಲಿಂಡರ್ ವಿತರಕರಿದ್ದು, ರಾಜ್ಯದಲ್ಲಿ ಸುಮಾರು 622 ವಿತರಕ ಕೇಂದ್ರಗಳಿವೆ. ಎಲ್ಲಾ ಕೇಂದ್ರಗಳನ್ನೂ ಬಂದ್ ಮಾಡಲಿದ್ದು, ಎಲ್ಲರೂ ಮುಷ್ಕರಕ್ಕೆ ಕೈಜೋಡಿಸಲಿದ್ದಾರೆ. ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಎಂಡಿಜಿ 2014 ಎಂಬ ಕಾನೂನು ಸಿಲಿಂಡರ್ ವಿತರಕರಿಗೆ ಮಾರಕವಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿತರಕರಿಗೆ ದಂಡ ವಿಧಿಸಲಾಗುತ್ತದೆ. ಹಾಗಾಗಿ ಈ ಕಾನೂನು ನಿಷೇಧಿಸಬೇಕು. ಸಾಕಷ್ಟು ಕಡೆ ಅನಿಲ ಸೋರಿಕೆಯಾಗುತ್ತಿದೆ. 2, 3 ಹಾಗೂ 5 ಕೆ.ಜಿ.ಯ ಸಿಲಿಂಡರ್ ಮಾರಾಟ ಆಗುತ್ತಿದ್ದರೂ ಅದನ್ನು ನಿಲ್ಲಿಸುವ ಬಗ್ಗೆ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಅವರು ಕಾನೂನಿಗೆ ಒಳಪಡುವುದಿಲ್ಲ. ಹಾಗಾಗಿ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿತರಕರು, ಅನಿಲ ಕಂಪನಿಗಳ ನಡುವಿನ ಕೆಲ ಒಪ್ಪಂದ ಸುಮಾರು 50 ವರ್ಷ ಹಳೆಯದಾಗಿದೆ. ಈ ಒಪ್ಪಂದವನ್ನು ನವೀಕರಿಸಬೇಕು. ಅನಿಲ ಸಿಲಿಂಡರ್ಗಳಿಗೆ ವಿವಿಧ ರೀತಿಯ ದರಗಳಿದ್ದು, ಎಲ್ಲ ರೀತಿಯ ಬಳಕೆಯ ಸಿಲಿಂಡರ್ಗಳಿಗೂ ಒಂದೇ ಬೆಲೆ ನಿಗದಿಪಡಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಇದರಿಂದ ಗ್ರಾಹಕರಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ವಿತರಕರು ಕಳೆದ ಹಲವು ಕೇಂದ್ರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಮುಷ್ಕರ ಆರಂಭಿಸಬೇಕಾಗಿದೆ. ಈ ನಡುವೆ ರಾಜ್ಯದ ವಿವಿಧೆಡೆ ಸಿಲಿಂಡರ್ ಸರಬರಾಜಿನಲ್ಲಿ ಈಗಾಗಲೇ ವ್ಯತ್ಯಯವಾಗಿದ್ದು, ಮುಂದಿನ ದಿನಗಳಲ್ಲಿ ಇದು ಗಂಭೀರವಾಗಲಿದೆ ಎಂದರು.