ಬಡ ರೈತರಿಗಿಲ್ಲ ಬಡ್ಡಿರಹಿತ ಸಾಲ!
ಕೊಪ್ಪಳ: ಬಡ ರೈತರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಬಡ್ಡಿ ರಹಿತ ಸಾಲ ಅಕ್ಷರಶಃ ಉಳ್ಳವರ ಪಾಲಾಗಿದೆ. ಇದು ಜಮೀನುದಾರರಿಗೇ ಹೆಚ್ಚು ಲಾಭದಾಯಕವಾಗಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಗಗನ ಕುಸುಮವಾಗಿದೆ.
ಬಜೆಟ್ ಮಂಡನೆ ವೇಳೆ ಈ ಬಾರಿ ರೈತರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿ, 2014ರ ಏ.1ರಿಂದಲೇ ಜಾರಿಯಾಗುತ್ತದೆ ಎಂದಿದ್ದಾರೆ. ಆದರೆ, ಯೋಜನೆಯ ವಾಸ್ತವ ನೋಡಿದಾಗ ಇದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕನ್ನಡಿಯೊಳಗಿನ ಗಂಟೇ ಆಗಲಿದೆ. ಭಾರಿ ಪ್ರಮಾಣದ ಜಮೀನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಈ ಸಾಲ ಸಿಗುತ್ತದೆ. ಹೀಗಾಗಿ, ಈ ಯೋಜನೆ ಬಗ್ಗೆ ರೈತ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಏನಾಗಿದೆ?: ಕಳೆದ ವರ್ಷ 2 ಲಕ್ಷ ಇದ್ದ ಬಡ್ಡಿ ರಹಿತ ಸಾಲದ ಮೊತ್ತವನ್ನು ಈ ಬಾರಿ 3 ಲಕ್ಷಕ್ಕೆ ಹೆಚ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ. ಆದರೆ, ಬೆಳೆ ಸಾಲ ಮಾದರಿಯಲ್ಲಿ ಎಕರೆಗೆ ತೋಟಗಾರಿಗೆ ಬೆಳೆಯಾದರೆ 30 ಸಾವಿರ, ಇತರ ಬೆಳೆಗೆ 20 ಸಾವಿರ ಸಾಲ ಸಿಗುತ್ತದೆ. ಇದು ಗರಿಷ್ಠ. ಕೆಲವೊಂದು ಬೆಳೆಗಳಿಗೆ 6, 8 ಸಾವಿರ ಸಾಲ ಸಿಗುವುದೂ ಇದೆ.
ಸಣ್ಣ ರೈತ ಗರಿಷ್ಠ 5 ಎಕರೆ ಭೂಮಿ ಹೊಂದಿರುತ್ತಾನೆ. ಗರಿಷ್ಠ ಸಾಲದ ಲೆಕ್ಕ ಹಾಕಿದರೂ ಅವನಿಗೆ ಸಿಗುವುದು 1.50 ಲಕ್ಷ ಸಾಲ ಮಾತ್ರ. ತೋಟಗಾರಿಕೆ ಅಲ್ಲದೆ ಇತರ ಬೆಳೆಗಳಿಗೆ ಇನ್ನೂ ಕಮ್ಮಿ. ಇನ್ನು 3 ಲಕ್ಷ ಸಾಲ ಸಿಗಬೇಕಿದ್ದರೆ ಆತನಿಗೆ ಕನಿಷ್ಠ 15ರಿಂದ 20 ಎಕರೆ ಜಮೀನು ಬೇಕು. ಅಂದರೆ, ಈ ಸಾಲ ದೊಡ್ಡ ಹಿಡುವಳಿದಾರರಿಗೆ ಮಾತ್ರ ಅನ್ವಯ. ಅವರು ಶ್ರೀಮಂತರಾಗಿರುತ್ತಾರೆ. ಸಾಲದ್ದಕ್ಕೆ ಬಡ್ಡಿ ರಹಿತ ಸಾಲವಾಗಿ 3 ಲಕ್ಷ ಸಿಗುತ್ತದೆ. ಇದು ಕಟು ವಾಸ್ತವ. ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಉಳ್ಳವರ ನೆರವಿಗೇ ಬಂದಂತಾಗಿದೆ.
ಬೆಳೆ ಸಾಲ ಮಾದರಿ ಪದ್ಧತಿ ಹಳೆಯ ಕಾಲದ್ದು. ಎಕರೆಗೆ ಕನಿಷ್ಠ 50 ಸಾವಿರ ಸಾಲದ ಮೊತ್ತ ನಿಗದಿ ಮಾಡಿದರೆ ರೈತರಿಗೂ ಅನುಕೂಲವಾಗುತ್ತದೆ. ಹೀಗಾಗಿ, ಐದು ಎಕರೆ ಒಳಗಿರುವ ರೈತರಿಗೂ 3 ಲಕ್ಷ ಸಾಲ ಸಿಗುವಂತೆ ಯೋಜನೆಯನ್ನು ಪರಿಷ್ಕರಿಸಬೇಕು ಎಂಬುದು ರೈತರ ಒತ್ತಾಯ.
800 ಕೋಟಿ: ರಾಜ್ಯ ಸರ್ಕಾರ ಬಡ್ಡಿ ರಹಿತ ಸಾಲ ಯೋಜನೆಯಲ್ಲಿ ರೈತರಿಗೆ 800 ಕೋಟಿ ನೀಡಲು ಮುಂದಾಗಿದೆ. ಆದರೆ, ಇದು ಉಳ್ಳವರ ಪಾಲಾಗುತ್ತಿರುವುದು ಮಾತ್ರ ದುರದೃಷ್ಟಕರ. ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಿಗುವಂತೆ ಆದಾಗ ಮಾತ್ರ ಯೋಜನೆಗೆ ಅರ್ಥ ಬರುತ್ತದೆ. ಇನ್ನು ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಜನಾಂಗದವರು 15 ಎಕರೆ ಜಮೀನು ಹೊಂದಿರುವುದು ವಿರಳ. ಕೂಡಲೇ ಈ ನ್ಯೂನತೆ ಸರಿಪಡಿಸಿ, ಅರ್ಹ ರೈತರಿಗೆ ಬಡ್ಡಿರಹಿತ ಸಾಲ ಸಿಗುವಂತೆ ಆಗಬೇಕು ಎನ್ನುವುದು ರೈತರ ಆಗ್ರಹ.
ಬೆಳೆ ಸಾಲ ನಿಗದಿಯಾಗೋದು ಹೇಗೆ?
ಅಂಕಿ-ಸಂಖ್ಯೆ ಇಲಾಖೆ, ಕೃಷಿ ಇಲಾಖೆ, ಲೀಡ್ ಬ್ಯಾಂಕ್ ಹಾಗೂ ಜನಪ್ರತಿನಿಧಿಯನ್ನು ಒಳಗೊಂಡ ಸಮಿತಿ ಬೆಳೆ ಸಾಲವನ್ನು ಬೆಳೆವಾರು ಇಂತಿಷ್ಟೇ ನೀಡಬೇಕು ಎಂದು ತೀರ್ಮಾನ ಮಾಡುತ್ತದೆ. ಇದು ಜಿಲ್ಲಾವಾರು ನಡೆದರೂ ಅದನ್ನು ರಾಜ್ಯಮಟ್ಟದ ಸಮಿತಿಯ ಸಭೆಯಲ್ಲಿ ಅಂತಿಮ ಮಾಡಲಾಗುತ್ತದೆ. ಈ ಆಧಾರದಲ್ಲಿ ರಾಜ್ಯದ ಎಲ್ಲ ಬ್ಯಾಂಕುಗಳು ಬೆಳೆ ಸಾಲ ನೀಡುತ್ತವೆ. ಉದಾಹರಣೆಗೆ, ಈಗ ಬತ್ತಕ್ಕೆ ಎಕರೆಗೆ 20 ಸಾವಿರ ಬೆಳೆ ಸಾಲ ನೀಡಬಹುದು ಎಂದು ಸಮಿತಿ ನಿರ್ಧಾರ ಮಾಡುತ್ತದೆ. ಅದರಂತೆ ಬ್ಯಾಂಕ್ಗಳು ಅದೇ ಮೊತ್ತದ ಸಾಲ ನೀಡುತ್ತವೆ. ರೈತರು ಸಂಕಷ್ಟದಲ್ಲಿರುವಾಗ ಹಾಗೂ ಕೃಷಿ ಖರ್ಚು ಗಗನಕ್ಕೆ ಏರಿರುವಾಗ ಈ ಮೊತ್ತ ಹೆಚ್ಚಿಸಬೇಕು. ಅಂದಾಗ ಮಾತ್ರ ರೈತರಿಗೆ ಲಾಭವಾಗುತ್ತದೆ.
ಸೋಮರಡ್ಡಿ ಅಳವಂಡಿ