ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಸೈಕಲ್ ಪೂರೈಕೆ!
ಮಂಡ್ಯ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗುವ ಸೈಕಲ್ ಸಂಪೂರ್ಣ ಕಳಪೆಯಾಗಿದ್ದು, ಗುತ್ತಿಗೆ ಪಡೆದಿರುವ ಕಂಪನಿ ಗುಣಮಟ್ಟ ಪರಿಶೀಲಬೇಡಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡುತ್ತಿದೆ. ಇದರಿಂದ ಕಂಗಾಲಾದ ಅಧಿಕಾರಿಗಳು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಸೈಕಲ್ ಪೂರೈಕೆ ಗುತ್ತಿಗೆ ಪಡೆದಿರುವ ಲೂದಿಯಾನದ ಹೆವನ್ ಸೈಕಲ್ ಲಿಮಿಟೆಡ್ ಕಂಪನಿಯು 'ನಾವು ಕೊಡುವ ಸೈಕಲ್ನ್ನು ನೀವು ಪಡೆದು ಸುಮ್ಮನೆ ಸ್ವೀಕೃತಿ ಪತ್ರ ನೀಡಿ. ಮಾದರಿ ಮತ್ತು ಸರಬರಾಜು ಮಾಡಿದ ಸೈಕಲ್ಗಳ ಗುಣಮಟ್ಟ ಪರಿಶೀಲಿಸುವ ಅಥವಾ ಹೋಲಿಕೆ ಮಾಡುವ ಗೋಜಿಗೆ ಹೋಗಬೇಡಿ' ಎಂದು ಡಿಡಿಪಿಐಗಳಿಗೆ ಹುಕುಂ ನೀಡುತ್ತಿದೆ. ಗುತ್ತಿಗೆ ಪಡೆದಿರುವ ಕಂಪನಿ ಇಷ್ಟೊಂದು ದರ್ಪದಿಂದ ವರ್ತಿಸಲು ಅವಕಾಶ ನೀಡಿದವರು ಯಾರು ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.
ಹೆವನ್ ಸೈಕಲ್ ಲಿಮಿಟೆಡ್ ಕಂಪನಿ ತರಾತುರಿಯಲ್ಲಿ ಕಳಪೆ ಸೈಕಲ್ಗಳನ್ನು ಪೂರೈಸುತ್ತಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ 17,002 ಕಳಪೆ ಸೈಕಲ್ನ್ನು ಪೂರೈಸಿದ್ದು, ಸುಮಾರು 34 ಕೋಟಿ ವಂಚಿಸಿರುವುದು ಸ್ಪಷ್ಟವಾಗಿದೆ. ಈ ಅವ್ಯವಹಾರಕ್ಕೆ ರಾಜ್ಯ ಶಿಕ್ಷಣ ಇಲಾಖೆ ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಸೈಕಲ್ ಸರಬರಾಜು ಮಾಡಿದ ಗುತ್ತಿಗೆದಾರರ ಸೈಕಲ್ಗಳ ಗುಣಮಟ್ಟವನ್ನು ಪರಿಶೀಲನೆ ಮಾಡಲು ಅವಕಾಶ ಮಾಡಿ ಕೊಡುತ್ತಿಲ್ಲ. ಸಲ್ಲದ ಒತ್ತಡ ಹೇರಿ ಸ್ವೀಕೃತಿ ಪತ್ರ ಕೇಳುತ್ತಿದ್ದಾರೆ. ಈಗಾಗಲೇ ಯಾವುದೇ ಗುಣಮಟ್ಟ ಪರೀಕ್ಷೆ ಮಾಡದೆ ಮಂಡ್ಯ ಜಿಲ್ಲೆಯ 4 ತಾಲೂಕುಗಳ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿರುವ ಡಿಡಿಪಿಐ ಶಿವಕುಮಾರ್, ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಗುತ್ತಿಗೆದಾರನ ಈ ಒತ್ತಡ ತಂತ್ರ ನೋಡಿದರೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಉಚಿತ ಬೈಸಿಕಲ್ ಯೋಜನೆಯ ಟೆಂಡರ್ನಲ್ಲಿ ಸಾಕಷ್ಟು ಭ್ರಷ್ಟಾಚಾರದ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಎಲ್ಲವೂ ಕಳಪೆ: ರಾಜ್ಯದ 1,12,809 ಮಕ್ಕಳಿಗೆ ಉಚಿತ ಬೈಸಿಕಲ್ ಸರಬರಾಜು ಮಾಡುವ ಟೆಂಡರ್ನ್ನು ಲೂದಿಯಾನದ ಹೆವನ್ ಸೈಕಲ್ ಲಿಮಿಟೆಡ್ ಕಂಪನಿ ಪಡೆದಿದೆ. ಈಗಾಗಲೇ ಮಂಡ್ಯ ಜಿಲ್ಲೆಗೆ 17,002 ಸೈಕಲ್ಗಳನ್ನು ಸರಬರಾಜು ಮಾಡಿದೆ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ನೀಡುವ ಎರಡು ಮಾದರಿ ಸೈಕಲ್ಗಳನ್ನು ಪ್ರತಿ ಜಿಲ್ಲೆಯ ಡಿಡಿಪಿಐ ಕಚೇರಿಗೆ ತಂದು ತೋರಿಸಲಾಗುತ್ತಿದೆ. ಆದರೆ ಸರಬರಾಜು ಮಾಡುವ ಸಂದರ್ಭದಲ್ಲಿ ಮಾದರಿ ತೋರಿಸಿದ್ದೇ ಒಂದು, ಸೈಕಲ್ ಸರಬರಾಜು ಮಾಡಿರುವ ವೇಳೆ ಕಳಪೆ ಗುಣಮಟ್ಟದ ಸೈಕಲ್ ನೀಡಿದ್ದಾರೆಂಬುದು ಅಧಿಕಾರಿಗಳ ದೂರು.
ಜೂನ್ಗೆ ಕೊಡಬೇಕಿತ್ತು: ರಾಜ್ಯದಲ್ಲಿ 2013-14 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಯ ಮಕ್ಕಳಿಗೆ ಕಳೆದ ವರ್ಷ ಜೂನ್ನಲ್ಲೇ ಸೈಕಲ್ ವಿತರಣೆ ಮಾಡಬೇಕಿತ್ತು. ಈವರೆಗೂ ಗುತ್ತಿಗೆದಾರ ಸೈಕಲ್ ಸರಬರಾಜು ಮಾಡಿರಲಿಲ್ಲ. ಮುಂದಿನ ತಿಂಗಳು ಮಾರ್ಚ್ ಅಂತ್ಯಕ್ಕೆ ಪರೀಕ್ಷೆಗಳೆಲ್ಲವೂ ಮುಗಿದು ರಜೆ ಬರುವ ವೇಳೆಗೆ ಕಳೆದ ವರ್ಷದ ಸೈಕಲ್ನ್ನು ಮಕ್ಕಳಿಗೆ ಫೆಬ್ರವರಿ-ಮಾರ್ಚ್ನಲ್ಲಿ ನೀಡದರೆ ಸರ್ಕಾರ ಉದ್ದೇಶಿತ ಯೋಜನೆಯ ಲಾಭ ಬಡ ಮಕ್ಕಳಿಗೆ ಸಿಕ್ಕಂತಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ರಾಜ್ಯದ ಎಲ್ಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆಗಾಗಿ 33.84 ಕೋಟಿ ವ್ಯಯ ಮಾಡುವ ಸರ್ಕಾರ, ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದ ಸೈಕಲ್ ವಿತರಣೆ ಮಾಡುವ ಸಂಬಂಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ನಿಯಮ ಏನು?
ಸರ್ಕಾರದ ಆದೇಶದಂತೆ ಮಾದರಿ ಹಾಗೂ ಸರಬರಾಜು ಮಾಡಿದ ಸೈಕಲ್ಗಳನ್ನು ರ್ಯಾಂಡಮ್ ಆಗಿ ಪರಿಶೀಲನೆ ಮಾಡಬೇಕು ಮತ್ತು ಸರಬರಾಜು ಮಾಡಿದ ಸೈಕಲ್ನಲ್ಲೇ ಒಂದೆರಡು ಸೈಕಲ್ಗಳ ಗುಣಮಟ್ಟದ ಸಮಗ್ರ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಆದರೆ ಗುತ್ತಿಗೆದಾರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂದು ನೋಡಲ್ ಅಧಿಕಾರಿಗಳು ಬರೆದಿರುವ ಪತ್ರವನ್ನು ಆಧರಿಸಿ ಡಿಡಿಪಿಐ ಶಿವಕುಮಾರ್ 2014, ಫೆ.11ರಂದು ಆಯುಕ್ತರಿಗೆ ದೂರು ನೀಡಿದ್ದಾರೆ.
ಕೆ.ಎನ್. ರವಿ