ಅಂಬಾನಿ ಜತೆಗಿನ ಸಂಬಂಧ ಕಡಿತ ಅಸಾಧ್ಯ, ಪ್ರಧಾನಿ ಸಿಂಗ್‌ಗೆ ಪತ್ರ ಬರೆದ ವೀರಪ್ಪ ಮೊಯ್ಲಿ
ಏನೇ ಬರಲಿ, ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜತೆಗಿನ ಅನಿಲ ಒಪ್ಪಂದ ರದ್ದುಗೊಳಿಸಲು ಸಾಧ್ಯವಿಲ್ಲ....
ಪಿಟಿಐ ನವದೆಹಲಿ ಫೆ.24
ಏನೇ ಬರಲಿ, ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜತೆಗಿನ ಅನಿಲ ಒಪ್ಪಂದ ರದ್ದುಗೊಳಿಸಲು ಸಾಧ್ಯವಿಲ್ಲ.
- ಹೀಗೆಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಖಂಡತುಂಡವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿಳಿಸಿದ್ದಾರೆ. ವಿವಾದದ ಬಗ್ಗೆ ಅವರು ಹದಿಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ. ಅನಿಲ ಹಂಚಿಕೆ ಬಗ್ಗೆ ಸದ್ಯ ಮಧ್ಯಸ್ಥಿಕೆ ನಡೆಯುತ್ತಿದೆ. ಹೀಗಾಗಿ ಒಪ್ಪಂದ ರದ್ದು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿಗೆ ಸ್ಪಷ್ಟನೆ ನೀಡಿದ್ದಾರೆ
ದರ ಏರಿಕೆ ಸಮರ್ಥನೆ
ಮೊಯ್ಲಿ ತಮ್ಮ ಪತ್ರದಲ್ಲಿ ಅನಿಲ ಒಪ್ಪಂದ ಪ್ರಕ್ರಿಯೆ, ಏಪ್ರಿಲ್ 1ರಿಂದ ಕೃಷ್ಣಾ-ಗೋದಾವರಿ ವ್ಯಾಪ್ತಿಯಿಂದ ಅನಿಲ ತೆಗೆಯಲು ಅನುಸರಿಸಲಾದ ಗುತ್ತಿಗೆ ಕ್ರಮಗಳನ್ನು ವಿವರಿಸಿದ್ದಾರೆ. ಏ.1ರಿಂದ ಅನ್ವಯವಾಗುವಂತೆ ಅನಿಲ ದರ ಹೆಚ್ಚಿಸದಿದ್ದರೆ ಆರ್‌ಐಎಲ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಓಎನ್‌ಜಿಸಿಗೂ ಕೂಡ ಅನಿಲ ತೆಗೆಯುವ ಕಾರ್ಯ ಸಾಧುವಾಗಲಾರದು ಎಂದಿದ್ದಾರೆ. ನೈಸರ್ಗಿಕ ಅನಿಲಕ್ಕೆ ಸದ್ಯ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್‌ಗೆ 4.2 ಡಾಲರ್ ಇದೆ. ಇದೇ ದರದಲ್ಲಿ ಅನಿಲ ಹೊರ ತೆಗೆಯುವ ಕಾರ್ಯ ಯಾವುದೇ ಸಂಸ್ಥೆಗೆ ಸಾಧ್ಯವಾಗದು. ಈ ಮೊತ್ತ ಅನಿಲೋದ್ಯಮದ ಮೇಲೂ ಪರಿಣಾಮ ಬೀರಲಿದೆ ಎಂದು ಸಮರ್ಥನೆ ನೀಡಿದ್ದಾರೆ.
ಕೇಜ್ರಿ ಆರೋಪ ಸರಿಯಲ್ಲ
ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವ ಮುನ್ನ, ಮೊಯ್ಲಿ ಆರ್‌ಐಎಲ್‌ಗೆ ಅನುಕೂಲವಾಗುವಂತೆ ವರ್ತಿಸಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಅವರು ಆದೇಶಿಸಿದ್ದರು. ತಮ್ಮ ವಿರುದ್ಧದ ಆರೋಪ ಸರಿಯಲ್ಲ ಎಂದು ಮೊಯ್ಲಿ ಪ್ರಧಾನಿಗೆ ಮನವರಿಕೆ ಮಾಡಿದ್ದಾರೆ.
ಜೈಪಾಲ್ ರೆಡ್ಡಿಯಿಂದ ಹಿನ್ನಡೆ
ಕೆಜಿ-ಡಿ6ರಿಂದ ಅನಿಲ ನಿಕ್ಷೇಪವನ್ನು ಹೊರತೆಗೆಯುವಲ್ಲಿ ಪೆಟ್ರೋಲಿಯಂ ಖಾತೆಯ ಹಿಂದಿನ ಸಚಿವರಾಗಿದ್ದ ಜೈಪಾಲ್ ರೆಡ್ಡಿ ಅಡ್ಡಿಯಾಗಿದ್ದರು ಎಂದು ಪರೋಕ್ಷವಾಗಿ ಮೊಯ್ಲಿ ಟೀಕಿಸಿದ್ದಾರೆ. 2010-11ನೇ ಸಾಲಿನಲ್ಲಿ ಆರ್‌ಐಎಲ್ ನಿಗದಿತ ಗುರಿಗಿಂತ ಕಡಿಮೆ ಅನಿಲ ತೆಗೆದಿದೆ ಎಂದು ಆರೋಪಿಸಿ ಜೈಪಾಲ್ ರೆಡ್ಡಿ ಕಂಪನಿಗೆ ಭಾರಿ ಮೊತ್ತದ ದಂಡ ವಿಧಿಸಿದ್ದರು.
ಆಮದು ಅನಿವಾರ್ಯ
ದೇಶೀಯವಾಗಿ ಅನಿಲ ಹೊರತೆಗೆಯುವುದು ಮತ್ತು ಉತ್ಪಾದನೆ (ಇಆ್ಯಂಡ್‌ಪಿ) ಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದರೆ ವಿದೇಶಗಳಿಂದ ಹೆಚ್ಚಿನ ಬೆಲೆ ಪಾವತಿ ಮಾಡಿ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ರಾಹುಲ್‌ಗೆ ಕೇಜ್ರಿ ಪತ್ರ
ರಿಲಯನ್ಸ್ ಅನಿಲ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿಅರವಿಂದ ಕೇಜ್ರಿವಾಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಈ ಬಗೆಗಿನ ವಿವಾದದ ಬಗ್ಗೆ ರಾಹುಲ್ ಮೌನ ವಹಿಸಿರುವುದನ್ನು ಪ್ರಶ್ನಿಸಿದ್ದಾರೆ. ಯುಪಿಎ ಸರ್ಕಾರ ನಿಮ್ಮ ಕುಟುಂಬದ ಅನುಮತಿ ಇಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಜನರಿಗೆ ತಿಳಿದಿದೆ. ಮುಕೇಶ್ ಅಂಬಾನಿಯವರಿಗೆ ಪ್ರತಿ ಯುನಿಟ್ ಗ್ಯಾಸ್‌ಗೆ 8 ಡಾಲರ್ ನಿಗದಿ ಮಾಡಿದ ಸರ್ಕಾರದ ನಿರ್ಧಾರದ ಬಗ್ಗೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.