ಲೋಕಾ ಕಾಯ್ದೆ ವಾಪಸ್, ಬರ ಪಟ್ಟಿಗೆ 28 ತಾಲೂಕುಗಳ ಸೇರ್ಪಡೆಗೆ ಸಂಪುಟ ಒಪ್ಪಿಗೆ
ಭಾರೀ ವಿರೋಧಕ್ಕೆ ಕಾರಣವಾದ ಲೋಕಾಯುಕ್ತ ಕಾಯಿದೆ ತಿದ್ದುಪಡಿಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದ್ದು, 28 ತಾಲೂಕುಗಳನ್ನು...
ಬೆಂಗಳೂರು: ಭಾರೀ ವಿರೋಧಕ್ಕೆ ಕಾರಣವಾದ ಲೋಕಾಯುಕ್ತ ಕಾಯಿದೆ ತಿದ್ದುಪಡಿಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದ್ದು, 28 ತಾಲೂಕುಗಳನ್ನು ಹೊಸದಾಗಿ ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಸೋಮವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸೋಮವಾರ ತಡರಾತ್ರಿಯವರೆಗೂ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರಗಳನ್ನು ಹಿಂಪಡೆಯುವುದೇ ಪ್ರಮುಖ ವಿಷಯಗಳಾಗಿದ್ದವು.
ಲೋಕಾಯುಕ್ತ ಕಾಯಿದೆ ತಿದ್ದುಪಡಿ ತರಲು 4 ದಿನದ ಹಿಂದಷ್ಟೇ ನಡೆದ ಸಚಿವ ಸಂಪುಟ ತೀರ್ಮಾನಿಸಿತ್ತು. ಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಲೋಕಾಯುಕ್ತ ವ್ಯಾಪ್ತಿಗೆ ತರಲು ನಿರ್ಧರಿಸುವುದು ಒಳ್ಳೆಯ ಹೆಜ್ಜೆಯಾಗಿದ್ದರೂ, ಲೋಕಾಯುಕ್ತರ ಬದಲಿಗೆ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರಲು ಹೊರಟಿರುವುದು ಚರ್ಚೆಗೆ ಕಾರಣವಾಗಿತ್ತು. ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರೇ ಇದನ್ನು ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದರ ಜತೆಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಅದನ್ನು ತರಾತುರಿಯಲ್ಲಿ ಸದನದಲ್ಲಿ ಮಂಡಿಸದೇ, ಕಾನೂನು ಇಲಾಖೆ ಸಲಹೆಪಡೆದು ಮುಂದುವರಿಯಲು ತೀರ್ಮಾನಿಸಲಾಯಿತು.
ಈಗಾಗಲೇ 98 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿತ್ತು. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸದಾಗಿ 28 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಲಾಗಿದ್ದು, ಇದಕ್ಕಾಗಿ 1.2 ನೀಡಲು ಸಮ್ಮತಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು 126 ಬರಪೀಡಿತ ತಾಲೂಕು ಎಂದು ಘೋಷಣೆಯಾದಂತಾಗಿದೆ.
ಲೆವಿ ಅಕ್ಕಿ ಕಡಿತ
ಅನ್ನಭಾಗ್ಯ ಯೋಜನೆಯ ಸಮರ್ಪಕ ಜಾರಿಗೆ ಅಕ್ಕಿ ಗಿರಣಿಗಳಿಂದ 2.5 ಲಕ್ಷ ಮೆಟ್ರಿಕ್ ಟನ್ ಲೆವಿ ಅಕ್ಕಿ ಸಂಗ್ರಹಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ತನ್ನದೇ ನಿರ್ಧಾರವನ್ನು ಬದಲಿಸಿರುವ ಸರ್ಕಾರ ಗಿರಣಿಗಳಿಂದ 1.5 ಲಕ್ಷ ಮೆಟ್ರಿಕ್ ಟನ್ ಲೆವಿ ಅಕ್ಕಿಯನ್ನು ಮಾತ್ರ ಸಂಗ್ರಹಿಸಲು ತೀರ್ಮಾನಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಖಚಿತ ಕಾರಣ ತಿಳಿದುಬರದಿದ್ದರೂ, ಲೆವಿ ಅಕ್ಕಿ ಸಂಗ್ರಹ ಪ್ರಮಾಣ ಹೆಚ್ಚಿರುವ ಬಗ್ಗೆ ಗಿರಣಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
987 ಬಸ್ ಖರೀದಿ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಗೆ ಒಟ್ಟು 987 ಬಸ್‌ಗಳನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ. ಕೆಎಸ್‌ಆರ್‌ಟಿಸಿಗೆ ಟಾಟಾ ಕಂಪನಿಯಿಂದ 487 ಬಸ್ ಖರೀದಿಸಲು 184 ಕೋಟಿ ಪ್ರಸ್ತಾಪಕ್ಕೆ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ. ಬಿಎಂಟಿಸಿಗೆ ಅಶೋಕ ಲೈಲೆಂಡ್ ಕಂಪನಿಯಿಂದ 500 ಬಸ್ ಖರೀದಿಸಲು 274 ಕೋಟಿ ಪ್ರಸ್ತಾಪಕ್ಕೂ ಇದೇ ಸಂದರ್ಭ ಹಸಿರುನಿಶಾನೆ ತೋರಲಾಗಿದೆ.
ಬೆಸ್ತರನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು, ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ ತುಮಕೂರು ಜಿಲ್ಲೆಯ ವಿವಿಧ ನೀರಾವರಿ ಕಾಮಗಾರಿಗಳಿಗೆ ಕೂಡ ಸಮ್ಮತಿ ಸೂಚಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಭೆಯಲ್ಲಿ ವೃತ್ತಿಶಿಕ್ಷಣಕ ಕಾಲೇಜುಗಳ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿವರ್ಷ ಪದ್ಧತಿಯನ್ನೇ ಪಾಲಿಸುವ ಒಪ್ಪಂದಕ್ಕೆ ಬರಲಾಗಿತ್ತು. ಈ ಹಿನ್ನೆಲೆಯಲ್ಲಿ 2006ರ 2006ರ ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು ಅಮಾನತ್ತಿನಲ್ಲಿಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.