ಅರುಣಾಗೆ ಸದ್ಯಕ್ಕಿಲ್ಲ ನೋವಿನ ಮುಕ್ತಿ
ಕಳೆದ 40 ವರ್ಷಗಳಿಂದ ಜೀವಚ್ಛವವಾಗಿ 4 ಗೋಡೆಗಳ ನಡುವೆ ಬದುಕುತ್ತಿರುವ ...
ನವದೆಹಲಿ: ಕಳೆದ 40 ವರ್ಷಗಳಿಂದ ಜೀವಚ್ಛವವಾಗಿ 4 ಗೋಡೆಗಳ ನಡುವೆ ಬದುಕುತ್ತಿರುವ ಅರುಣಾ ಶಾನ್ ಭಾಗ್‌ಗೆ ಸದ್ಯಕ್ಕಂತೂ ಮುಕ್ತಿ ಸಿಗುವ ಸಾಧ್ಯತೆಗಳಿಲ್ಲ. ಉಸಿರು ತನ್ನಿಂತಾನೇ ನಿಲ್ಲುವವರೆಗೂ ಆಕೆ ಇದೇ ಸ್ಥಿತಿಯಲ್ಲಿ ದಿನದೂಡಬೇಕಾದ ದುಸ್ಥಿತಿ.
ದಯಾಮರಣವನ್ನು ಕಾನೂನುಬದ್ಧಗೊಳಿಸಬೇಕೇ, ಬೇಡವೇ ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸುಪ್ರೀಂ ಮಂಗಳವಾರ ಸಂವಿಧಾನ ಪೀಠಕ್ಕೆ ವಹಿಸಿದೆ. ಹೀಗಾಗಿ ಶಾನ್‌ಭಾಗ್‌ಗೆ ಪರೋಕ್ಷ ದಯಾಮರಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಈ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವ ಸಾಧ್ಯತೆ ಅಧಿಕವಾಗಿದೆ.
ಸಂವಿಧಾನ ಪೀಠಕ್ಕೆ ಸೂಚನೆ: ಮಂಗಳವಾರ ಸುಪ್ರೀಂ ಕೋರ್ಟ್ 'ಕಾಮನ್ ಕಾಝ್' ಎಂಬ ಎನ್‌ಜಿಓವೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು. ಚೇತರಿಸಿಕೊಳ್ಳಲಾರದಂಥ ಸ್ಥಿತಿ ತಲುಪಿರುವ ರೋಗಿಗಳಿಗೆ ಅಳವಡಿಸಲಾದ ಕೃತಕ ಜೀವರಕ್ಷಕ ಸಾಧನವನ್ನು ತೆಗೆದು ಅಂತಹ ರೋಗಿಗಳಿಗೆ ಸಾಯಲು ಅವಕಾಶ ನೀಡಬೇಕು ಎಂದು ಎನ್‌ಜಿಓ ಅರ್ಜಿಯಲ್ಲಿ ಕೋರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ತ್ರಿಸದಸ್ಯ ಪೀಠ, ದಯಾಮರಣಕ್ಕೆ ಸಂಬಂಧಿಸಿ ಸ್ಪಷ್ಟ ಕಾನೂನಿನ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳತ್ತಲೂ ಗಮನಹರಿಸಿ, ಸೂಕ್ತ ಮಾರ್ಗದರ್ಶಿ ಸಿದ್ಧಪಡಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಸಂವಿಧಾನ ಪೀಠಕ್ಕೆ ಸೂಚಿಸಿದೆ.
ಪೀಠದ ತೀರ್ಪಲ್ಲೇ ಭಿನ್ನ ಅಭಿಪ್ರಾಯ: ಅರುಣಾ ಶ್ಯಾನುಭಾಗ್ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಸಂವಿಧಾನ ಪೀಠ ನೀಡಿದ್ದ ತೀರ್ಪಿನಲ್ಲೇ ಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಪೀಠವು, ದಯಾಮರಣವನ್ನು ಕಾನೂನುಬದ್ಧಗೊಳಿಸಬೇಕು ಎಂಬ ನಿಲುವು ತಾಳಿತ್ತು. ಆದರೆ ಮತ್ತೊಂದು ಹಂತದಲ್ಲಿ ಈ ನಿಲುವನ್ನು ಬದಲಿಸಿತ್ತು. ಈ ರೀತಿ ತೀರ್ಪಿನಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗ ಸ್ಪಷ್ಟ ನಿರ್ಧಾರ ತಾಳುವಂತೆ ಸಂವಿಧಾನ ಪೀಠಕ್ಕೆ ಸೂಚಿಸಿದೆ.
ಅರ್ಜಿಯಲ್ಲಿ ಏನಿತ್ತು?
2008ರಲ್ಲಿ ಎನ್‌ಜಿಓ ದಯಾಮರಣಕ್ಕೆ ಸಂಬಂಧಿಸಿ ಪಿಐಎಲ್ ಸಲ್ಲಿಸಿತ್ತು. ರೋಗಿಯೊಬ್ಬ ಕೋಮಾ ಅಥವಾ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದ್ದಾನೆ ಎಂದು ವೈದ್ಯರು ಹೇಳಿದರೆ, ಅಂತಹ ವ್ಯಕ್ತಿಗೆ ಅಳವಡಿಸಲಾದ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದುಹಾಕಬೇಕು. ಕ್ರೂರ ಮತ್ತು ಅನಪೇಕ್ಷಿತ ವೈದ್ಯಕೀಯ ಚಿಕಿತ್ಸೆಯನ್ನು ತಿರಸ್ಕರಿಸುವ ಹಕ್ಕನ್ನು ಆತನಿಗೆ ನೀಡಬೇಕು. ಇಲ್ಲದಿದ್ದರೆ ಆತ ಜೀವಚ್ಛವವಾಗಿ ದಾರುಣ ಸ್ಥಿತಿಯಲ್ಲೇ ದಿನದೂಡಬೇಕಾಗುತ್ತದೆ ಎಂದು ಎನ್‌ಜಿಓ ಹೇಳಿತ್ತು. ಈ ವಾದವನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಇದು ಆತ್ಮಹತ್ಯೆಗೆ ಸಮಾನವಾಗುತ್ತದೆ. ಆತ್ಮಹತ್ಯೆ ಎಂಬುದು ನಮ್ಮ ದೇಶದ ಕಾನೂನಿನ ಪ್ರಕಾರ ಅಪರಾಧ ಎಂದಿತ್ತು.
ಶಾನ್‌ಭಾಗ್ ಪ್ರಕರಣ ಸುಪ್ರೀಂ ಹೇಳಿದ್ದೇನು?
1973ರಲ್ಲಿ ಮುಂಬೈನ ಆಸ್ಪತ್ರೆಯಲ್ಲಿ ಕಸ ಗುಡಿಸುವಾತ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಅರುಣಾ ಶಾನ್‌ಭಾಗ್ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿದ್ದ. ಈ ಸಂದರ್ಭದಲ್ಲಿ ಆಕೆಯ ಕುತ್ತಿಗೆಗೆ ಸರಳನ್ನು ಬಿಗಿದ ಕಾರಣ ಮೆದುಳಿಗೆ ರಕ್ತ ಸಂಚಾರ ಸ್ಥಗಿತಗೊಂಡು ಅರುಣಾ ನಿಶ್ಚಲ ಸ್ಥಿತಿಗೆ ತಲುಪಿದ್ದಳು. ಅಂದಿನಿಂದ ಇಂದಿನವರೆಗೂ ಆಕೆ ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಜೀವಂತ ಶವವಾಗಿ ಬಿದ್ದುಕೊಂಡಿದ್ದಾಳೆ. ಅಲ್ಲಿನ ನರ್ಸ್‌ಗಳೇ ಆಕೆಯ ಆರೈಕೆ ಮಾಡುತ್ತಿದ್ದಾರೆ. 2011ರಲ್ಲಿ ಅರುಣಾಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಆಕೆಯ ಗೆಳತಿ ಪಿಂಕಿ ವಿರಾನಿ ಸುಪ್ರೀಂ ಮೆಟ್ಟಿಲೇರಿದ್ದರು. ಈ ಬಗ್ಗೆ ತೀರ್ಪು ನೀಡಿದ್ದ ಕೋರ್ಟ್, ಅರುಣಾಳ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ದಯಾಮರಣ ನೀಡಲು ಸಾಧ್ಯವಿಲ್ಲ. ಆದರೆ ಪರೋಕ್ಷ ದಯಾಮರಣಕ್ಕೆ ಅವಕಾಶವಿದೆ ಎಂದು ಹೇಳಿತ್ತು.