ಎಂಜಿನಿಯರಿಂಗ್ ಶುಲ್ಕ ಹೆಚ್ಚಳ ಎದುರಾಗಿದೆ ಹೊಸ ಬಿಕ್ಕಟ್ಟು
ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಶೇ.30 ರಷ್ಟು ಹೆಚ್ಚಿಸದಿದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಖಾಸಗಿ...
ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಶೇ.30 ರಷ್ಟು ಹೆಚ್ಚಿಸದಿದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಖಾಸಗಿ ಕಾಲೇಜುಗಳು ಹೊಸ ವರಸೆ ಪ್ರಾರಂಭಿಸಿದ್ದು, ಸಿಇಟಿ ಬಿಕ್ಕಟ್ಟು ಮುಂದುವರಿಯುವ ಲಕ್ಷಣ ಗೋಚರಿಸಿದೆ.
ಸೀಟು ಹಂಚಿಕೆ ಹಾಗೂ ಶುಲ್ಕ ಬದಲಾವಣೆಯಿಲ್ಲದೆ ಮುಂದಿನ ಶೈಕ್ಷಣಿಕ ವರ್ಷಕ್ಕೂ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕೇವಲ ಐದು ದಿನಗಳಲ್ಲಿ ಯೂ ಟರ್ನ್ ತೆಗೆದುಕೊಂಡಿವೆ. ಪ್ರಸಕ್ತ ಸೀಟು ಹಂಚಿಕೆ ಹಾಗೂ ಶುಲ್ಕದಿಂದ ಕಾಲೇಜು ನಡೆಸಲು ಸಾಧ್ಯವಿಲ್ಲ ಎಂದು ಕಾಲೇಜುಗಳು ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿವೆ.
ಮಂಗಳವಾರ ರಾತ್ರಿ ನಗರದ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ನಡೆದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ 90 ಕಾಲೇಜುಗಳ ಪ್ರತಿನಿಧಿಗಳು ಸರ್ಕಾರದ ನಿರ್ಣಯಕ್ಕೆ ತಮ್ಮ ಸಹಮತವಿಲ್ಲ. ಇದೇ ರೀತಿ ಸರ್ಕಾರ ವರ್ತನೆ ಮುಂದುವರೆಸಿದರೆ ಒಪ್ಪಂದಕ್ಕೂ ಸಹಿ ಹಾಕುವುದಿಲ್ಲ, ಸೀಟುಗಳನ್ನು ನೀಡುವುದಿಲ್ಲ ಎಂದು ಬೆದರಿಕೆ ಹಾಕಿವೆ.
ಶುಕ್ರವಾರ ನಡೆದ ಸಭೆಯಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟ ತಮ್ಮ ಅಭಿಪ್ರಾಯವನ್ನು ಹೇಳಿಲ್ಲ. ಕೇವಲ ಮಾಜಿ ಶಾಸಕ ಹೇಮಚಂದ್ರ ಸಾಗರ್ ಅವರ ವೈಯಕ್ತಿಕ ಅಭಿಪ್ರಾಯ ಆಧರಿಸಿ ಶುಲ್ಕ ಹಾಗೂ ಸೀಟು ಹಂಚಿಕೆಯಲ್ಲಿ ಬದಲಾವಣೆಯಿಲ್ಲ ಎಂದು ಹೇಳಿಕೆ ನೀಡಿದೆ. ಆದರೆ ಖಾಸಗಿ ಕಾಲೇಜುಗಳ ಮಾತುಗಳನ್ನು ಸರ್ಕಾರ ಆಲಿಸಿಲ್ಲ.
ಮುಖ್ಯಮಂತ್ರಿಗಳು ತರಾತುರಿಯಲ್ಲಿ ಈ ನಿರ್ಣಯ ಕೈಗೊಂಡಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಪಾಂಡುರಂಗ ಶೆಟ್ಟಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಖಾಸಗಿ ಕಾಲೇಜುಗಳ ನಿರ್ಣಯವನ್ನು ತಿಳಿಸಲು ನಿರ್ಧರಿಸಲಾಗಿದೆ.
ಪ್ರಸಕ್ತ ಶುಲ್ಕವನ್ನು ಒಪ್ಪಲು ಸಾಧ್ಯವಿಲ್ಲ: ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ ಜಾರಿಗೆ ತರುವಂತೆ ಎಂಜಿನಿಯರಿಂಗ್ ಕಾಲೇಜುಗಳು ಸರ್ಕಾರಕ್ಕೆ ಆಗ್ರಹಿಸಿದ್ದವು. ಇದಕ್ಕೆ ಸಂಬಂಧಿಸಿ ಎರಡು ಸಮಿತಿಗಳನ್ನು ರಚಿಸಿ ಕಾಲೇಜುಗಳಿಂದ ನಿರ್ವಹಣಾ ವೆಚ್ಚದ ಮಾಹಿತಿ ಪಡೆಯಲಾಗಿತ್ತು. ಆದರೆ ಈಗ ಕಾಯಿದೆ ಅನುಷ್ಠಾನಕ್ಕೆ ಸರ್ಕಾರ ಹಿಂದೇಟು ಹಾಕಿದೆ. ಕಾಯಿದೆಯನ್ನು ಜಾರಿಗೆ ತರಬೇಕು, ಇಲ್ಲವಾದಲ್ಲಿ ಶುಲ್ಕ ಹೆಚ್ಚಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನ್ಯಾಕ್‌ನ ಮಾನ್ಯತೆ ಪಡೆಯುವಂತೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೂಚನೆ ನೀಡಿದೆ. ಇದಕ್ಕೆ ಖಾಸಗಿ ಕಾಲೇಜುಗಳು ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಬೇಕು. ಈಗಿರುವ ಶುಲ್ಕದಿಂದ ನ್ಯಾಕ್ ಮಾನ್ಯತೆ ಪಡೆಯುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಶುಲ್ಕವನ್ನು ಶೇ.30ರಷ್ಟು ಹೆಚ್ಚಿಸಲೇಬೇಕು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಕಳೆದ 6 ವರ್ಷಗಳಿಂದ ನಡೆದುಬಂದ ಸಂಪ್ರದಾಯಕ್ಕೆ ಅಂತ್ಯ ಹಾಡಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಖಾಸಗಿ ಕಾಲೇಜುಗಳು ಸರ್ಕಾರದ ಸಿಇಟಿ ಹಾಗೂ ಇತರ ಪ್ರಕ್ರಿಯೆಗಳಿಂದ ಹೊರಗುಳಿಯಲು ಖಾಸಗಿ ಕಾಲೇಜುಗಳು ಸರ್ವಸಮ್ಮತವಾಗಿ ನಿರ್ಧರಿಸಿವೆ. ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ಸಮ್ಮತಿ ಸೂಚಿಸಿದ್ದ ಹೇಮಚಂದ್ರಸಾಗರ್ ಅವರ ಕಾಲೇಜಿನ ಆಡಳಿತ ಮಂಡಳಿ ಕೂಡ ಸಭೆಯಲ್ಲಿ ಭಾಗಿಯಾಗಿತ್ತು.