ಕೈಕೊಟ್ಟ ಸಕ್ಕರೆ ಕಾರ್ಖಾನೆ: ಕೈಹಿಡಿದ ಸರ್ಕಾರ
ರಾಯಣ್ಣ ಆರ್.ಸಿ.
ಬೆಳಗಾವಿ: ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ಗೆ 2500 ನೀಡಬೇಕೆಂಬ ಸರ್ಕಾರದ ಆದೇಶಕ್ಕೆ ಸಕ್ಕರೆ ಕಾರ್ಖಾನೆ ಮಾಲಿಕರು ಕವಡೆ ಕಾಸಿನ ಕಿಮ್ಮತ್ತು ನೀಡದಿದ್ದರೂ ಕಬ್ಬು ಪೂರೈಸಿದ ರೈತರಿಗೆ ಸರ್ಕಾರ ನೀಡುವ 150 ಪ್ರೋತ್ಸಾಹ ಧನ ಮಾತ್ರ ಕರಾರುವಕ್ಕಾಗಿ ರೈತರ ಖಾತೆಗೆ ಜಮಾ ಆಗುತ್ತಿದೆ.
ಈಗಾಗಲೇ ಮೊದಲ ಹಂತದಲ್ಲಿ ಕಬ್ಬು ನುರಿಸಿದ ರೈತರಿಗೆ 193 ಕೋಟಿ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಿದ್ದ ಸರ್ಕಾರ ಇದೀಗ 2ನೇ ಹಂತದಲ್ಲಿ ಮತ್ತೆ 60.07 ಕೋಟಿ ಬಿಡುಗಡೆ ಮಾಡಿದೆ. ಇದರಿಂದ ಜ.15ರವರೆಗೆ ಕಬ್ಬು ನುರಿಸಿದ ರೈತರಿಗೆ ಸರ್ಕಾರದ ಪ್ರೋತ್ಸಾಹಧನ ದಕ್ಕಿದಂತಾಗಿದೆ. ಇದೀಗ ಸಕ್ಕರೆ ಇಲಾಖೆ ಫೆ.15ರವರೆಗೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಮಾಹಿತಿಯನ್ನು ಸಹ ಸಿದ್ಧಪಡಿಸಿದ್ದು, ಶೀಘ್ರವೇ ಮೂರನೇ ಕಂತಿನ ಹಣವೂ ರೈತರ ಬ್ಯಾಂಕ್ ಖಾತೆಗೆ ಸೇರಲಿದೆ. ಇದರಿಂದ ರೈತರು ನಿರಾಳರಾಗುತ್ತಿದ್ದಾರೆ.
ಆದರೆ ಸಕ್ಕರೆ ಕಾರ್ಖಾನೆಗಳು 2500 ನೀಡಬೇಕೆಂದು ಸರ್ಕಾರ ಸೂಚಿಸಿದ್ದ ಕಟ್ಟಪ್ಪಣೆಗೆ ಯಾವುದೇ ಕಾರ್ಖಾನೆಗಳು ಕಿಮ್ಮತ್ತು ನೀಡಿಲ್ಲ. ಒಂದೊಂದು ಸಕ್ಕರೆ ಕಾರ್ಖಾನೆಗಳು ಒಂದೊಂದು ದರ ನೀಡಿ ಕೈತೊಳೆದುಕೊಳ್ಳುತ್ತಿವೆ. ಕೆಲವು ಸಕ್ಕರೆ ಕಾರ್ಖಾನೆ 2000 ದರ ನೀಡಿದರೆ ಮತ್ತೆ ಕೆಲ ಕಾರ್ಖಾನೆ ಕೇವಲ 1800 ನೀಡಿವೆ. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಇನ್ನೊಂದು ತಿಂಗಳಲ್ಲಿ ಮುಗಿಯಲಿದ್ದು, ಕಬ್ಬು ಪೂರೈಸಿದ ರೈತರಿಗೆ ಸರ್ಕಾರ ಘೋಷಿಸಿದ ಬೆಲೆ ಸಿಗುವುದು ಮರೀಚಿಕೆಯಾಗಿಯೇ ಉಳಿಯಲಿದೆ.
ಪ್ರೋತ್ಸಾಹಧನವೇ ಆಧಾರ: ಸರ್ಕಾರ ಘೋಷಿಸಿರುವ ಪ್ರೋತ್ಸಾಹಧನವೇ ರೈತರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ಸಕ್ಕರೆ ಕಾರ್ಖಾನೆಗಳು ನೀಡುವ ದರದ ಜೊತೆಗೆ ಸರ್ಕಾರ ಪ್ರೋತ್ಸಾಹಧನ ಸಿಗುವುದರಿಂದ ರೈತರ ಬವಣೆ ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಮಾರಾಟವಾದ ಬಳಿಕ ಹಾಗೂ ಉಪ ಉತ್ಪನ್ನಗಳಿಂದ ಬರುವ ಲಾಭದ ಮೇಲೆ ಎರಡು ಹಾಗೂ ಮೂರನೇ ಕಂತಿನಲ್ಲಿ ಮತ್ತಷ್ಟು ಹಣ ರೈತರಿಗೆ ನೀಡುವ ಭರವಸೆ ನೀಡಿವೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಈ ರೀತಿ ರೈತರಿಗೆ ನೆರವಿಗೆ ಬರುವ ಸಾಧ್ಯತೆ ಇದ್ದರೂ ಖಾಸಗಿ ಕಾರ್ಖಾನೆಗಳು ಮತ್ತೆ ರೈತರಿಗೆ ಬಿಡಿಗಾಸನ್ನೂ ನೀಡುವ ನಿರೀಕ್ಷೆ ಇಲ್ಲ ಎನ್ನಲಾಗಿದೆ. ಸರ್ಕಾರದ ಸೂಚನೆಯ ಪ್ರಕಾರ ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಸಭೆ ಕರೆದು ಪ್ರತಿ ಟನ್ಗೆ 2500 ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಚಿಂತನೆ ನಡೆದಿದೆ. ಸರ್ಕಾರದ ಆದೇಶದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಎರಡನೇ ಕಂತಿನಲ್ಲಿ ಜಿಲ್ಲೆಗೆ 26 ಕೋಟಿ ಪ್ರೋತ್ಸಾಹಧನ ಬಿಡುಗಡೆಯಾಗಿದ್ದು, ಅದನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಂ ತಿಳಿಸಿದ್ದಾರೆ.
ರಾಜ್ಯದ 24 ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಸರ್ಕಾರ ಪ್ರಕಟಿಸಿದ ಪ್ರೋತ್ಸಾಹ ಧನದಂತೆ ಎರಡನೇ ಕಂತಾಗಿ (ಜ.15ರವರೆಗೆ) 60.07 ಕೋಟಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲಾಗಿದೆ. ಶೀಘ್ರವೇ ಅದನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು.
ಟಿ ಎಸ್.ಎಸ್.ಪಟ್ಟಣಶೆಟ್ಟಿ, ಕಬ್ಬು ಅಭಿವೃದ್ಧಿ ಆಯುಕ್ತ
ಸಕ್ಕರೆ ಉತ್ಪಾದನೆಯಲ್ಲಿ ಕುಸಿತ
ದೇಶದ 485 ಸಕ್ಕರೆ ಕಾರ್ಖಾನೆಗಳು ಫೆ.15ರವರೆಗೆ ಒಟ್ಟಾರೆ 143.7 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಸಕ್ಕರೆ ಉತ್ಪಾದನೆಯಲ್ಲಿ ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165.88 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು. ಅಂದರೆ ಸುಮಾರು 22 ಲಕ್ಷ ಟನ್ ಸಕ್ಕರೆ ಉತ್ಪಾದನೆ ಕಡಿಮೆ ಆಗಿದೆ. ಮಹಾರಾಷ್ಟ್ರ- 49.80 ಲಕ್ಷ ಟನ್, ಉತ್ತರ ಪ್ರದೇಶದ 35.7 ಲಕ್ಷ ಟನ್, ಕರ್ನಾಟಕ 27 ಲಕ್ಷ ಟನ್, ಆಂಧ್ರಪ್ರದೇಶ-6.60 ಲಕ್ಷಟನ್, ತಮಿಳುನಾಡು-4.50 ಲಕ್ಷ ಟನ್, ಗುಜರಾತ್ 7.50 ಟನ್ ಸಕ್ಕರೆ ಉತ್ಪಾದಿಸಿವೆ. ಇದೇ ಅವಧಿಯಲ್ಲಿ ಈ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಸುಮಾರು 12 ಸಾವಿರ ಕೋಟಿ ಹಣ ಬಾಕಿ ನೀಡಬೇಕಾಗಿದೆ. ಇದರಲ್ಲಿ ಉತ್ತರ ಪ್ರದೇಶ ರಾಜ್ಯವೊಂದೆ 8 ಸಾವಿರ ಕೋಟಿ ನೀಡಬೇಕಾಗಿದೆ. ಕರ್ನಾಟಕದಲ್ಲಿ 3 ಸಾವಿರ ಕೋಟಿ ರೈತರ ಕಬ್ಬಿನ ಬಿಲ್ ಬಾಕಿ ಇದೆ. ಉಳಿದೆಲ್ಲ ರಾಜ್ಯಗಳು 1 ಸಾವಿರ ಕೋಟಿ ಬಿಲ್ ನೀಡುವುದು ಬಾಕಿ ಇದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ ಹೇಳಿದೆ.
ವಿವಿಧ ಜಿಲ್ಲೆಗೆ ಬಿಡುಗಡೆಯಾದ ಸರ್ಕಾರದ ಪ್ರೋತ್ಸಾಹ ಧನ
ಬೆಳಗಾವಿ 26,25,95,550
ಬಾಗಲಕೋಟೆ 12,25,02,300
ವಿಜಾಪುರ 5,66,00,700
ಉತ್ತರಕನ್ನಡ 44,22,400
ಗದಗ 15,70,800
ಹಾವೇರಿ 1,03,14,900
ಬೀದರ್ 2,70,37,650
ಗುಲ್ಬರ್ಗ 3,15,26,550
ಯಾದಗಿರಿ 5,54,400
ಶಿವಮೊಗ್ಗ 29,83,800
ಧಾರವಾಡ 89,35,950
ದಾವಣಗೆರೆ 1,35,77,550
ಬಳ್ಳಾರಿ 1,31,91,300
ಚಿತ್ರದುರ್ಗ 34,23,900
ರಾಯಚೂರು 4,65,750
ಮಂಡ್ಯ 1,84,90,350
ತುಮಕೂರು 20,56,650
ಮೈಸೂರು 93,08,250
ಹಾಸನ 45,38,850
ರಾಮನಗರ 7,41,450
ಚಾಮರಾಜನಗರ 35,28,900
ಚಿಕ್ಕಮಗಳೂರು 18,01,200
ಚಿಕ್ಕಬಳ್ಳಾಪುರ 10650
ಒಟ್ಟು 60,07,07,250