ರಾಜ್ಯದ ಬಜೆಟ್‌ಗಿಂತಲೂ ಹೆಚ್ಚು ಹಣ ಕೊಟ್ಟ ಕೇಂದ್ರ!
ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಅಭಿವೃದ್ಧಿ ರಾಜಕೀಯಕ್ಕೆ ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕರ್ನಾಟಕಕ್ಕೆ ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಅಭಿವೃದ್ಧಿ ರಾಜಕೀಯಕ್ಕೆ ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕರ್ನಾಟಕಕ್ಕೆ ಅತಿ ದೊಡ್ಡ ಕೊಡುಗೆ ನೀಡಿದೆ. ಜೆನರ್ಮ್ ಯೋಜನೆಯಡಿ 1,41,276.21 ಕೋಟಿ ಮೊತ್ತದ ಹತ್ತು ಯೋಜನೆಗಳಿಗೆ ಅನುಮೋದನೆ ನೀಡಿದೆ.
ಈ ಪೈಕಿ ಕೇಂದ್ರ ಸರ್ಕಾರ 52,440 ಕೋಟಿ ಒದಗಿಸಲಿದೆ. ಈ ಹತ್ತು ಯೋಜನೆಗಳಿಗೆ ಮೊದಲ ಕಂತಿನಲ್ಲೇ ಕರ್ನಾಟಕಕ್ಕೆ ನೀಡುವ ಮೊತ್ತ 13111.21 ಕೋಟಿ. ಇದೇ ಪ್ರಥಮ ಬಾರಿಗೆ ಕೇಂದ್ರ ಇಷ್ಟೊಂದು ದೊಡ್ಡ ಪ್ರಮಾಣದ ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಿದೆ.
ಕೇಂದ್ರ ಅನುಮೋದನೆ ನೀಡಿರುವ ಹತ್ತು ಯೋಜನೆಗಳ ಒಟ್ಟು ಗಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್‌ಗಿಂತ (1,36,249 ಕೋಟಿ) ದೊಡ್ಡದು. ಕೇಂದ್ರ ನೀಡುತ್ತಿರುವ ಅನುದಾನ ಹೆಚ್ಚು ಕಮ್ಮಿ ರಾಜ್ಯ ಸರ್ಕಾರದ ಯೋಜನಾ ಗಾತ್ರದಷ್ಟಿದೆ. ನಗರಾಭಿವೃದ್ಧಿ ಇಲಾಖೆಯಡಿಯಲ್ಲಿರುವ ಜೆನರ್ಮ್ ಯೋಜನೆಯ ಕೇಂದ್ರೀಯ ಅನುಮೋದನೆ ಮತ್ತು ನಿಗಾ ಸಮಿತಿ ಹತ್ತು ಯೋಜನಗಳಿಗೆ ಅನುಮೋದನೆ ನೀಡಿದೆ.
ಈ ಪೈಕಿ ಅಗ್ರಪಾಲು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಮೀಸಲಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಮೈಸೂರಿಗೆ 6662.23 ಕೋಟಿಯ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ನಾಲ್ಕೂ ಕೇಂದ್ರ ಸರ್ಕಾರ ಶೇ.80ರಷ್ಟು ವೆಚ್ಚ ಭರಿಸುವ ಯೋಜನೆಗಳು. ಹೀಗಾಗಿ ಕೇಂದ್ರದಿಂದ ಈ ನಾಲ್ಕು ಯೋಜನೆಗಳಿಗೆ ದಕ್ಕುವ ಮೊತ್ತ 5329.78 ಕೋಟಿ.
ಯೋಜನೆಗಳ ವಿವರ
ಬೆಂಗಳೂರು
ಈಜಿಪುರ ಮುಖ್ಯರಸ್ತೆ ಜಂಕ್ಷನ್-ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಕೇಂದ್ರೀಯ ಸದನದ ನಡುವೆ ಎಲಿವೇಟೆಡ್ ಕಾರಿಡಾರ್. ಒಟ್ಟು ವೆಚ್ಚ 16,335 ಕೋಟಿ, ಕೇಂದ್ರದ ಪಾಲು 5717.25 ಕೋಟಿ.
ಮಿನರ್ವ್ ಸರ್ಕಲ್ ಜಂಕ್ಷನ್‌ನಿಂದ ಹಡ್ಸನ್ ಸರ್ಕಲ್‌ವರೆಗೆ ಎಲಿವೇಟೆಡ್ ರಸ್ತೆ. ಒಟ್ಟು ವೆಚ್ಚ 12910 ಕೋಟಿ. ಕೇಂದ್ರದ ಪಾಲು 4518.50 ಕೋಟಿ.
ದಾಸರಹಳ್ಳಿ ವಲಯ-1ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 37479.45 ಕೋಟಿ. ಕೇಂದ್ರದ ಪಾಲು 13117.81 ಕೋಟಿ.
ದಾಸರಹಳ್ಳಿ ವಲಯ-2ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 15303.12 ಕೋಟಿ. ಕೇಂದ್ರದ ಪಾಲು 5356.09 ಕೋಟಿ.
ಮಹದೇವಪುರ ಮೊದಲ ಹಂತದಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 30504.69 ಕೋಟಿ. ಕೇಂದ್ರದ ಪಾಲು 10676.64 ಕೋಟಿ.
ಯಲಹಂಕ ವಲಯ ಯೋಜನೆ-2ರಲ್ಲಿ ಒಳಚರಂಡಿ ತಿರುವು, ಮಳೆ ನೀರು ನಿರ್ವಹಣೆ, ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ 22082.23 ಕೋಟಿ. ಕೇಂದ್ರದ ಪಾಲು 7728.78 ಕೋಟಿ.
ಮಹದೇವಪುರ ನಗರಸಭೆ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ 1018 ಕೋಟಿ. ಕೆಂಗೇರಿ ಒಳಚರಂಡಿ ಅಭಿವೃದ್ಧಿಗೆ 1876.36 ಕೋಟಿ.
ಮೈಸೂರಿನಲ್ಲಿ
ಜೆಎಸ್‌ಎಸ್-ನಂಜನಗೂಡು ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ, ಒಟ್ಟು ವೆಚ್ಚ 2698.75 ಕೋಟಿ. ಕೇಂದ್ರದ ಪಾಲು 2159 ಕೋಟಿ.
ಹುಣಸೂರು ರಸ್ತೆ-ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ. ಒಟ್ಟು ವೆಚ್ಚ 1214.60 ಕೋಟಿ. ಕೇಂದ್ರದ ಪಾಲು 303.65 ಕೋಟಿ.
ಕೆಆರ್‌ಎಸ್ ರಸ್ತೆ-ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ. ಒಟ್ಟು ವೆಚ್ಚ 982.58 ಕೋಟಿ. ಕೇಂದ್ರದ ಪಾಲು 196.52 ಕೋಟಿ.
ಬೆಂಗಳೂರು- ಮೈಸೂರು ರೋಡ್- ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ, ಒಟ್ಟು ವೆಚ್ಚ 1462.65 ಕೋಟಿ. ಕೇಂದ್ರದ ಪಾಲು 1170.12 ಕೋಟಿ.