ಅಪ್ಪ ನಿನ್ನ ತೋಳಿನಲ್ಲಿ ಕಂದ ನಾನು...!
ಬಳ್ಳಾರಿ: 8 ವರ್ಷದ ಬಾಲಕನಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾದ ಮಗ 13 ವರ್ಷಗಳ ಬಳಿಕ ಪ್ರತ್ಯಕ್ಷನಾಗಿದ್ದಾನೆ!
ಇದೇನು ಸಿನಿಮಾ ಕಥೆಯಲ್ಲ. ಬಳ್ಳಾರಿಯಲ್ಲಿ ನಡೆದ ನೈಜ ಘಟನೆ. ಇದಕ್ಕೆ ನೆರವಾಗಿದ್ದು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆದ 'ಮೈಲಾರ ಕಾರ್ಣಿಕೋತ್ಸವ'. ನಾಪತ್ತೆಯಾಗಿದ್ದ ಮಗ ತಂದೆಯ ಎದುರು ನಿಂತಾಗ ಆನಂದಬಾಷ್ಪದ ಹೊರತು ಬೇರೇನೂ ಇರಲಿಲ್ಲ. 13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನನ್ನು ನಾಲ್ಕೈದು ವರ್ಷಗಳ ಕಾಲ ಹುಡುಕಾಡಿದರೂ ಸಿಗದ್ದರಿಂದ ಇನ್ನೆಂದೂ ನಮ್ಮ ಮಗ ಮರಳಿ ಬರಲಾರ ಎಂದು ಹೆತ್ತವರು ಕೈ ಚೆಲ್ಲಿದ್ದರು. ಮಗನ ನೆನಪಿನಲ್ಲೇ ತಾಯಿ ಕಾಯಿಲೆಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಬುಧವಾರ ಇದ್ದಕ್ಕಿದ್ದಂತೆ ಮಗ ಪ್ರತ್ಯಕ್ಷನಾಗಿದ್ದರಿಂದ ತಂದೆಯ ಖುಷಿಗೆ ಪಾರವೇ ಇಲ್ಲ. ಮಗನಿಗೂ ಮರಳಿ ಗೂಡು ಸೇರಿದ ಸಂಭ್ರಮ.
ಏನಿದು ಘಟನೆ?: ಬಳ್ಳಾರಿ ಸಾರಿಗೆ ಸಂಸ್ಥೆಯ 2ನೇ ಘಟಕದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರೆಹಮಾನ್ ಹಾಗೂ ಪಾರ್ವತಿ ಅಲಿಯಾಸ್ ರಜಿಯಾಬೇಗಂ 1995ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಆಜಿಬಾಬು ಹಾಗೂ ಒಬ್ಬಳು ಮಗಳಿದ್ದಾಳೆ. 2001ರಲ್ಲಿ ಆಜಿಬಾಬು ಇಂದಿರಾ ನಗರದ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಗ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಡಿದರೂ ಮಗ ಸಿಗದಿದ್ದಾಗ ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ಮನನೊಂದ ತಾಯಿ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಳು. ಜತೆಗೆ ಕ್ಯಾನ್ಸರ್ ಕೂಡ ಇದ್ದಿದ್ದರಿಂದ 2009ರಲ್ಲಿ ನಿಧನಳಾಗಿದ್ದಾರೆ.
ಕೋಲಾರದಲ್ಲಿ ಬಿಟ್ಟರು: 7ನೇ ವಯಸ್ಸಿನಲ್ಲಿ ನಾಪತ್ತೆಯಾದ ಆಜಿಬಾಬು ತನ್ನ ಸ್ನೇಹಿತರೊಂದಿಗೆ ರೈಲು ಹತ್ತಿ ಬೆಂಗಳೂರಿಗೆ ಹೋಗಿದ್ದಾನೆ. ಅಲ್ಲಿಂದ ಯಾರೋ ಕೋಲಾರದ ಸಮೀಪದಲ್ಲಿ ಆಶ್ರಮಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಆಶ್ರಮದವರೇ ಆತನಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಕೊಡಿಸಿದ್ದಾರೆ. ತಂದೆ-ತಾಯಿಯನ್ನು ಭೇಟಿ ಮಾಡುವುದಕ್ಕೆ ಹೋಗುವುದಾಗಿ ಹೇಳಿದಾಗ, ಓದು ಮುಗಿಸಿ ನಂತರ ಹೋಗು ಎಂದು ಆಶ್ರಮದವರು ಹೇಳಿದ್ದಾರೆ. ಆದರೆ ಕೋಲಾರದಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಮೊದಲನೇ ವರ್ಷ ಪೂರ್ಣಗೊಳಿಸಿ, 8 ತಿಂಗಳಿಂದ ಬೆಂಗಳೂರಿಗೆ ಹೋಗಿ ಮೊಬೈಲ್ ಕ್ಯಾಟರಿಂಗ್ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ವಿದ್ಯಾಭ್ಯಾಸದ ದಾಖಲಾತಿಯಲ್ಲಿ ಬಾಬು ಎಂದು ಬರೆಸಿಕೊಂಡಿದ್ದಾನೆ.
ಒಂದುಗೂಡಿಸಿದ ಮೈಲಾರ ಜಾತ್ರೆ: ದೇವರು ಯಾವುದೇ ರೂಪದಲ್ಲಾದರೂ ಮನುಷ್ಯನಿಗೆ ಸಹಾಯ ಮಾಡುತ್ತಾನೆ ಎಂಬುದು ನಮ್ಮ ಪೂರ್ವಜರ ನಂಬಿಕೆ. ಇದು ನಂಬಿಕೆಯೋ ಅಥವಾ ಕಾಕತಾಳೀಯವೊ ಗೊತ್ತಿಲ್ಲ. ಆದರೆ, ಆಜಿಬಾಬು ಅಲಿಯಾಸ್ ಬಾಬು ಕೋಲಾರದಲ್ಲಿ ಆಶ್ರಮದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿ ಬೆಂಗಳೂರಿನಲ್ಲಿ ಮೊಬೈಲ್ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ. ಎಸ್ಸೆಸ್ಸೆಲ್ಸಿ ಓದುತ್ತಿರುವಾಗ ಬಳ್ಳಾರಿಗೆ ತಂದೆಯನ್ನು ಹುಡುಕಿಕೊಂಡು ಬಂದಿದ್ದ ಬಾಬುಗೆ, ತಂದೆ ಸಿಗದ ಕಾರಣ ಮತ್ತೆ ಕೋಲಾರಕ್ಕೆ ಹೋಗಿದ್ದ. ಈತನಿಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಹುಡುಗರು ಪರಿಚಯವಾಗಿದ್ದರು. ಇತ್ತೀಚೆಗೆ ಮೈಲಾರ ಕಾರ್ಣಿಕೋತ್ಸವಕ್ಕೆ ಬಾಬುನನ್ನು ಸ್ನೇಹಿತ ಫಕ್ಕೀರೇಶ್ ಕರೆದುಕೊಂಡು ಬಂದಿದ್ದಾನೆ. ಬಾಬು ತನ್ನದು ಬಳ್ಳಾರಿ ಎಂದಾಗ ಫಕ್ಕಿರೇಶ್ನ ಸಂಬಂಧಿ ಲಿಂಗಪ್ಪ ಅವರು ಬಳ್ಳಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಾಬುವಿನ ವೃತ್ತಾಂತವನ್ನು ಲಿಂಗಪ್ಪನಿಗೆ ಹೇಳಿದ್ದಾರೆ. ಲಿಂಗಪ್ಪ ಮತ್ತು ಶಿವಶಂಕರ ಎಂಬವರು ಬಾಬುನನ್ನು ಬಳ್ಳಾರಿಗೆ ಕರೆಸಿಕೊಂಡು ಬುಧವಾರ ಸಾರಿಗೆ ಸಂಸ್ಥೆಯ 2ನೇ ಘಟಕಕ್ಕೆ ಬಂದಿದ್ದಾರೆ. ಅಲ್ಲಿಯೇ ಬಾಬುವಿನ ತಂದೆ ರೆಹಮಾನ್ಸಾಬ್ನನ್ನು ಪತ್ತೆ ಮಾಡಿ ಮಗನನ್ನು ತಂದೆಯ ಮಡಿಲಿಗೆ ಒಪ್ಪಿಸಿದ್ದಾರೆ.
ಅಮೃತ ಕುಡಿದಷ್ಟು ಸಂತೋಷ
ತಂದೆ ರೆಹಮಾನ್ ಮಾತನಾಡಿ, ಇಂದು ಪ್ರಪಂಚದಲ್ಲಿ ನನ್ನಷ್ಟು ಸಂತೋಷಪಡುವವರು ಯಾರೂ ಇಲ್ಲ, ನಾಲ್ಕೈದು ವರ್ಷಗಳ ಕಾಲ ಊರು ಊರುಗಳಲ್ಲಿ ಅಲೆದಾಡಿ ಹುಡುಕಿದ್ದೇವೆ, ಆದರೆ ಮಗ ಸಿಗಲಿಲ್ಲ. ಮಗನನ್ನು ಹುಡುಕಿ ಬೇಸತ್ತು ಹೋಗಿ ಹಣೆಬರೆಹದಲ್ಲಿ ಇದ್ದಂಗೆ ಆಗಲಿ ಎಂದು ಸುಮ್ಮನಾಗಿದ್ದೆವು. ನನ್ನ ಮಗ ಬರುತ್ತಾನೆಂದು ಕನಸು ಮನಸ್ಸಿನಲ್ಲಿ ತಿಳಿದುಕೊಂಡಿರಲಿಲ್ಲ. ಮಗನನ್ನು ಹುಡುಕಿ ಕೊಟ್ಟಿರುವ ಆತನ ಗೆಳೆಯರಿಗೆ, ಲಿಂಗಪ್ಪ, ಶಿವಶಂಕರ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಾಗ ಕಣ್ಣೀರು ಒದ್ದೆಯಾಗಿತ್ತು.
ನನಗೆ ತುಂಬಾ ಖುಷಿಯಾಗುತ್ತಿದೆ. ತಂದೆ ರೆಹಮಾನ್ ಎಂದು, ನನ್ನ ಊರು ಬಳ್ಳಾರಿ ಎಂದು ಗೊತ್ತಿತ್ತು. ಆದರೆ ಯಾವ ಪ್ರದೇಶ ಎಂಬುದು ನೆನಪಿರಲಿಲ್ಲ. ಇದರಿಂದಾಗಿ ಪೋಷಕರನ್ನು ಕಂಡುಹಿಡಿಯಲು ಆಗಿರಲಿಲ್ಲ. ಎಸ್ಸೆಸ್ಸೆಲ್ಸಿ ಓದುವಾಗ ಇಲ್ಲಿಗೆ ಬಂದಿದ್ದೆ. ಆದರೆ ಪೋಷಕರ ಸುಳಿವು ಸಿಗದ ಕಾರಣ ವಾಪಸ್ ಹೋಗಿದ್ದೆ. ಇದೀಗ ನನ್ನ ಗೆಳೆಯರ ಸಹಕಾರದಿಂದ ತಂದೆ ಸಿಕ್ಕಿದ್ದಾರೆ.
- ಆಜಿಬಾಬು
-ಶಶಿಧರ ಮೇಟಿ