ಒಎನ್ಜಿಸಿ ಅಧ್ಯಕ್ಷರ ನೇಮಕ ಮೊಯ್ಲಿಗೆ ಮುಖಭಂಗ
ನವದೆಹಲಿ: ಸಿವಿಸಿಯ ವಿರೋಧದ ಹೊರತಾಗಿಯೂ ಒಎನ್ಜಿಸಿಯ ಹಾಲಿ ಅಧ್ಯಕ್ಷ ಮುಂದುವರಿಕೆಯ ಪ್ರಸ್ತಾಪ ಇಟ್ಟಿದ್ದ ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿಗೆ ಮುಖಭಂಗವಾಗಿದೆ.
ಮೊಯ್ಲಿ ಶಿಫಾರಸು ತಿರಸ್ಕರಿಸಿರುವ ನೇಮಕಾತಿಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿ ನೂತನ ಅಧ್ಯಕ್ಷರನ್ನಾಗಿ ದಿನೇಶ್ ಕೆ. ಸರಾಫ್ ಅವರನ್ನು ನೇಮಕ ಮಾಡಿದೆ.
ಮಂಗಳವಾರವಷ್ಟೇ ನಿವೃತ್ತಿಯಾಗಿರುವ ಹಾಲಿ ಅಧ್ಯಕ್ಷ ಸುಧೀರ್ ವಾಸುದೇವ್ ಅವರ ಸೇವಾವಧಿ ವಿಸ್ತರಿಸುವಂತೆ ಮೊಯ್ಲಿ ಶಿಫಾರಸು ಮಾಡಿದ್ದರು. ಆದರೆ, ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ(ಎಸಿಸಿ)ಯು ಒಎನ್ಜಿಸಿಯ ನೂತನ ಮುಖ್ಯಸ್ಥರನ್ನಾಗಿ ಸರಾಫ್ರ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ. ಸರಾಫ್ ಅವರು ಒಎನ್ಜಿಸಿಯ ಅಂಗವಾದ ಒಎನ್ಜಿಸಿ ವಿದೇಶ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಳ್ಳು ದೂರಿನಿಂದಾಗಿ ವಾಸುದೇವ ಅವರ ನೇಮಕಾತಿ ಎಂಟು ತಿಂಗಳು ವಿಳಂಬವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಒಎನ್ಜಿಸಿಗೆ ವಾಸುದೇವ ಅವರ ಅಗತ್ಯವಿದೆ . ಹಾಗಾಗಿ ಅವರ ಸೇವಾವಧಿ ವಿಸ್ತರಿಸುವಂತೆ ಮೊಯ್ಲಿ ಕೇಳಿಕೊಂಡಿದ್ದರು ಎಂದು ಹೇಳಲಾಗಿದೆ