ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೇಖಾನುದಾನಕ್ಕೆ ಸಮ್ಮತಿ ಅಧಿವೇಶನ ಮುಂದಕ್ಕೆ

ಧನವಿನಿಯೋಗ ವಿಧೇಯಕವೂ ಸೇರಿದಂತೆ 14 ಮಹತ್ವದ ವಿಧೇಯಕಕ್ಕೆ ಒಪ್ಪಿಗೆ ಸಿಗುವುದರೊಂದಿಗೆ ವಿಧಾನಸಭೆ ಮತ್ತು ...

Mainashree
Updated On : 27 Feb 2014, 1:15 am

ವಿಧಾನಸಭೆ : ಧನವಿನಿಯೋಗ ವಿಧೇಯಕವೂ ಸೇರಿದಂತೆ 14 ಮಹತ್ವದ ವಿಧೇಯಕಕ್ಕೆ ಒಪ್ಪಿಗೆ ಸಿಗುವುದರೊಂದಿಗೆ ವಿಧಾನಸಭೆ ಮತ್ತು ವಿಧಾನಪರಿಷತ್‌ನ ಬಜೆಟ್ ಅಧಿವೇಶನಕ್ಕೆ ಬುಧವಾರ ತೆರೆಬಿದ್ದಿದೆ.
ತುರ್ತು ಸಾರ್ವಜನಿಕ ವಿಚಾರಗಳ ಚರ್ಚೆ ಸೇರಿದಂತೆ 81 ಗಂಟೆಗಳ ಸುದೀರ್ಘ ಚರ್ಚೆ ಬಜೆಟ್ ಅಧಿವೇಶನದಲ್ಲಿ ನಡೆದಿದೆ. ಮುಂದಿನ ನಾಲ್ಕು ತಿಂಗಳಿಗೆ ಅನ್ವಯವಾಗುವಂತೆ 2014-15ನೇ ಸಾಲಿನ ಧನವಿನಿಯೋಗ ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿದರು. ಬಜೆಟ್ ಗಾತ್ರದಲ್ಲಿ ಬದಲಾವಣೆ ಮಾಡದೆ, ನಾಲ್ಕು ತಿಂಗಳ ಲೇಖಾನುದಾನಕ್ಕೆ ಅನುಮೋದನೆ ಕೋರಿದರು. ನಂತರ, ಧ್ವನಿಮತದಿಂದ ಉಭಯ ಸದನಗಳಲ್ಲಿ ಲೇಖಾನುದಾನಕ್ಕೆ ಅಂಗೀಕಾರ ದೊರೆಯಿತು.
ಅಧಿವೇಶನದ ಕೊನೆಯ ದಿನವಾದ ಬುಧವಾರ ಉಭಯ ಸದನಗಳಲ್ಲಿ ಹಲವು ಮಹತ್ವದ ಘಟನೆಗಳು ನಡೆದವು. ಧನವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಸತಾಯಿಸಿ ಒಪ್ಪಿಗೆ ನೀಡಿದರೆ, ಸಾರ್ವಜನಿಕ ಚರ್ಚೆಯಿಂದ ಮರೆಯಾಗಿ ಹೋಗಿದ್ದ ಮೌಢ್ಯ ಪ್ರತಿಬಂಧಕ ಕಾನೂನಿಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಧಾನಸಭೆಯಲ್ಲಿ ಮತ್ತೆ ಜೀವ ನೀಡಿದರು. ಕುಡಿಯುವ ನೀರು ಯೋಜನೆಗೆ ಮಾಸ್ಟರ್ ಪ್ಲಾನ್ ತಯಾರಿಸುವುದು, ಅಡಕೆ ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸುವುದು, ಹೊಸ ತಾಲೂಕು ರಚನೆ ಬಗ್ಗೆ ಹೊಸ ಅಧ್ಯಯನ ಸೇರಿದಂತೆ ಹಲವು ವಿಚಾರಗಳು ಕೊನೆಯ ದಿನ ಚರ್ಚೆಗೆ ಬಂದವು.
ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮಾಡಿದ ವಂದನಾ ನಿರ್ಣಯದ ಚರ್ಚೆಯೂ ಸೇರಿದಂತೆ 14ನೇ ವಿಧಾನಸಭೆಯ ಮೂರನೇ ಅಧಿವೇಶನ ಒಟ್ಟು 16 ದಿನಗಳ ಕಾಲ ನಡೆದಿದ್ದು, 81 ಗಂಟೆಗಳ ಕಾಲ ಚರ್ಚೆ ನಡೆದಿದೆ. ಈ ಅವಧಿಯಲ್ಲಿ 14 ವಿಧೇಯಕಗಳು ಅಂಗೀಕಾರಗೊಂಡಿದ್ದು, ನಿಯಮ 69ರ ಅಡಿ ಸಾರ್ವಜನಿಕ ತುರ್ತು ವಿಚಾರದ 19 ಸೂಚನೆಗಳನ್ನು ಸ್ವೀಕರಿಸಿ 6 ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ.
ಒಟ್ಟು 3412 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, 2959 ಪ್ರಶ್ನೆಗಳು ಅಂಗೀಕಾರವಾಗಿವೆ. ಈ ಪೈಕಿ ಸದನದಲ್ಲಿ ಉತ್ತರಿಸುವ 195 ಪ್ರಶ್ನೆಗಳ ಪೈಕಿ 187ಕ್ಕೆ ಉತ್ತರ ನೀಡಲಾಗಿದ್ದು, 2310 ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಸರ್ಕಾರ ಉತ್ತರ ನೀಡಿದೆ. ಆದರೆ ಈ ಉತ್ತರಗಳು ಸಕಾಲಕ್ಕೆ ತಮಗೆ ತಲುಪಿಲ್ಲ ಎಂದು ಶಾಸಕರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಪ್ರಶ್ನಿಸಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತೊಮ್ಮೆ ಸರ್ಕಾರಕ್ಕೆ ಛಾಟಿ ಏಟು ನೀಡಿದ್ದು ಸದನದ ಕೊನೆಯ ದಿನದ ವಿಶೇಷ.            

30 ಗಂಟೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮೇಲೆ ಈ ಬಾರಿ 30 ಗಂಟೆಗಳ ಸುದೀರ್ಘ ಚರ್ಚೆ ನಡೆದಿದ್ದು, 36 ಸದಸ್ಯರು ಭಾಗವಹಿಸಿದ್ದು ವಿಶೇಷ. ಇದರ ಜತೆಗೆ 2013ರ ಆರ್ಥಿಕ ವರ್ಷಕ್ಕೆ ಕೊನೆಗೊಂಡ ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ, ರಾಜಸ್ವ ವಿಭಾಗ ವರದಿ, ಆರ್ಥಿರ ವರದಿ, ರಾಜ್ಯ ಹಣಕಾಸು ವ್ಯವಹಾರಗಳ ವರದಿ ಸೇರಿದಂತೆ ಮಹತ್ವದ ಆಡಳಿತಾತ್ಮಕ ವಿಚಾರಗಳಿಗೆ ಅಧಿವೇಶನ ಸಾಕ್ಷಿಯಾಗಿದೆ.
ಮೌಢ್ಯಕ್ಕೆ ಜೀವ: ಅಧಿವೇಶನದ ಕೊನೆಯ ಕ್ಷಣದಲ್ಲಿ ಸಚಿವ ಎಚ್.ಆಂಜನೇಯ ಮೌಢ್ಯ ಪ್ರತಿಬಂಧಕ ಕಾನೂನಿಗೆ ಮತ್ತೆ ಜೀವ ನೀಡಿದರು. ಕಾಂಗ್ರೆಸ್ ಶಾಸಕ ರಾಜು ಅಲಗೂರು ಅವರು ನಿಯಮ 73ರ ಅನ್ವಯ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ನೀಡಿದ ಲಿಖಿತ ಉತ್ತರದಲ್ಲಿ ಮೌಢ್ಯ ಪ್ರತಿಬಂಧಕ ಕಾನೂನನ್ನು ಜಾರಿಗೆ ತರುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದ ಅವರು, ವಿವರಣೆ ನೀಡುವ ಸಂದರ್ಭದಲ್ಲಿ ಸರ್ಕಾರಮೌಢ್ಯ ಮತ್ತು ನಂಬಿಕೆ ಯಾವುದು ಎಂಬ ಬಗ್ಗೆ ಮಾತುಕತೆ ನಡೆಸುತ್ತಿದೆ. ಇದಕ್ಕೆ ಸಮಯ ಬೇಕು ಎಂದಿದ್ದಾರೆ.
ಮಾಸ್ಟರ್ ಪ್ಲಾನ್: ಅದೇ ರೀತಿ ರಾಜ್ಯದ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಮಾಸ್ಟರ್ ಪ್ಲಾನ್ ರೂಪಿಸುವ ನಿರ್ಧಾರವನ್ನು ಈ ಅಧಿವೇಶನದಲ್ಲಿ ತೆಗೆದುಕೊಳ್ಳಲಾಗಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಾರ್ಯಕ್ರಮ ಸ್ಥಗಿತಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದೆ. ಆದರೆ ಸರ್ಕಾರ ರಾಜ್ಯದ ಜನತೆಗೆ ಇಷ್ಟೆಲ್ಲ ಮಹತ್ವದ ಭರವಸೆ ನೀಡುವ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರನ್ನು ಸೇರಿಸಿ ಆಡಳಿತ ಪಕ್ಷದ ಪರ 15 ಶಾಸಕರಿದ್ದರೆ, ಪ್ರತಿಪಕ್ಷ ಬಿಜೆಪಿಯ ಪ್ರತಿನಿಧಿಯಾಗಿ ಉಪಸ್ಥಿತರಿದದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ. ಜೆಡಿಎಸ್ ಪಾಳಯದಿಂದ ಹಾಜರಿದ್ದ ಸದಸ್ಯರ ಸಂಖ್ಯೆ ಕೇವಲ 4!

ಅಡಕೆ ನಿಷೇಧವಿಲ್ಲ
ಅಡಕೆ ನಿಷೇಧ ವಿಚಾರದ ಬಗ್ಗೆ ಜೆಡಿಎಸ್‌ನ ಮಧು ಬಂಗಾರಪ್ಪ, ಬಿ.ಬಿ.ನಿಂಗಯ್ಯ, ಬಿಜೆಪಿಯ ವಿಶ್ವೇಶ್ವರ ಹೆಗಡೆ, ಸುನೀಲ್‌ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಅಡಕೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಲಿಖಿತ ಹೇಳಿಕೆಗೆ ಪ್ರತಿಯಾಗಿ ಪ್ರಮಾಣಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ನಾನೇ ಖುದ್ದಾಗಿ ಈ ಪ್ರಕರಣದ ದಾಖಲೆಗಳನ್ನು ತರಿಸಿಕೊಂಡಿದ್ದೇನೆ. ಜತೆಗೆ ಈ ಸಂಬಂಧ ಹಿರಿಯ ವಕೀಲರನ್ನು ರಾಜ್ಯದ ಪರವಾಗಿ ನೇಮಿಸಲಾಗಿದೆ. ಅಡಕೆ ನಿಷೇಧದ ಭೀತಿಯಲ್ಲಿ ರಾಜ್ಯದ ಜನತೆ ಬದುಕಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement