ವಿಕೃತ ಸ್ವಾಮಿಯ ಸಮಾಧಿ ಪವಾಡ
7 ವರ್ಷದ ಬಾಲಕಿಯನ್ನು ಸಮಾಧಿ ರೂಪದ ಗುಹೆಯ ಚಿಕ್ಕ ಕತ್ತಲ ಕೋಣೆಯಲ್ಲಿ ಕೈ-ಕಾಲು ಕಟ್ಟಿ ಹಾಕಿ, ಆಹಾರ ನೀಡದೆ ಚಿತ್ರಹಿಂಸೆ...
ಕನ್ನಡಪ್ರಭ ವಾರ್ತೆ ಬೆಳಗಾವಿ/ ಅಥಣಿ ಫೆ.26
7 ವರ್ಷದ ಬಾಲಕಿಯನ್ನು ಸಮಾಧಿ ರೂಪದ ಗುಹೆಯ ಚಿಕ್ಕ ಕತ್ತಲ ಕೋಣೆಯಲ್ಲಿ ಕೈ-ಕಾಲು ಕಟ್ಟಿ ಹಾಕಿ, ಆಹಾರ ನೀಡದೆ ಚಿತ್ರಹಿಂಸೆ ನೀಡಿದ ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಚಂದ್ರಮ್ಮದೇವಿ ಮಠದ ಅಪ್ಪಯ್ಯ ಸ್ವಾಮೀಜಿಯನ್ನು ಮಂಗಳವಾರ ಮಧ್ಯರಾತ್ರಿ ಬಂಧಿಸಲಾಗಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ.
ಡೋಂಗಿ ಅಪ್ಪಯ್ಯ ಸ್ವಾಮೀಜಿ ಬಾಲಕಿಯನ್ನು 21 ದಿನಗಳ ಕಾಲ ಸಮಾಧಿಯಲ್ಲಿ ಇಟ್ಟಿದ್ದೆ ಎಂದು ಹೇಳಿಕೊಳ್ಳುತ್ತಿದ್ದರೂ, ವೈದ್ಯರ ಪ್ರಕಾರ ಬಾಲಕಿಗೆ ಎರಡ್ಮೂರು ದಿನಗಳಿಂದ ಮಾತ್ರ ಆಹಾರ ನೀಡಿರಲಿಲ್ಲ. ಹೀಗಾಗಿ ಆಕೆಗೆ ರಕ್ತಹೀನತೆ ಕಂಡು ಬಂದಿದೆ.
ಬಾಲಕಿಯನ್ನು ಲೋಕಕಲ್ಯಾಣಕ್ಕಾಗಿ ಸಮಾಧಿ ಮಾಡಿ, ಸಮಾಧಿಯ ಮೇಲೆ ಐದು ಕ್ವಿಂಟಲ್ ಕಟ್ಟಿಗೆ ಇಟ್ಟು ಸುಡಲಾಗಿದೆ. ಅಗ್ನಿ ಸಮರ್ಪಣೆ ಮಾಡಿರುವ ಬಾಲಕಿ ಶಿವರಾತ್ರಿಯಂದು ಜೀವಂತವಾಗಿ ಎದ್ದು ಬರಲಿದ್ದಾಳೆ.
ಅವಳು ಅಕ್ಕಮಹಾದೇವಿಯಾಗಿ ಅವತರಿಸಲಿದ್ದಾಳೆ ಎಂದು ನಂಬಿಸಿ ಜನರ ಭಾವನೆ, ನಂಬಿಕೆ ಜೊತೆ ಈ ಸ್ವಾಮೀಜಿ ಚೆಲ್ಲಾಟವಾಡುತ್ತಿದ್ದ. ಆದರೆ ವಾಸ್ತವದಲ್ಲಿ ಸ್ವಾಮೀಜಿ ಬಾಲಕಿಗೆ ಬೆಂಕಿ ಹಚ್ಚಿರಲಿಲ್ಲ. ಬೂದಿಯಿಂದ ಅವಳನ್ನು ಮುಚ್ಚಲಾಗಿತ್ತು. ಸಮಾಧಿಯಂಥ ಕತ್ತಲ ಕೋಣೆಯ ಮೇಲ್ಭಾಗದಲ್ಲಿ ಕಟ್ಟಿಗೆ ಕೂಡಿ ಹಾಕಿ ನೂರಾರು ಭಕ್ತರ ಸಮ್ಮುಖದಲ್ಲಿ ಬೆಂಕಿ ಹಚ್ಚಿ ಅಪ್ಪಯ್ಯ ಸ್ವಾಮೀಜಿ ವಿಕೃತಿ ಮೆರೆದಿದ್ದ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಥಣಿ ತಹಸೀಲ್ದಾರ್ ಅಪರ್ಣಾ ಪಾವಟೆ, ಚಿಕ್ಕೋಡಿ ಡಿವೈಎಸ್ಪಿ ಎಸ್.ಆರ್. ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ತಡರಾತ್ರಿ ದಾಳಿ ನಡೆಸಿ, ಬಾಲಕಿಯನ್ನು ಹೊರತೆಗೆದು ರಕ್ಷಿಸಿದ್ದಾರೆ. ಬಾಲಕಿ ಮೈಬಣ್ಣ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ. ತೀವ್ರ ಅಸ್ವಸ್ಥಗೊಂಡು ರಕ್ತಹೀನತೆಯಿಂದ ಬಳಲುತ್ತಿರುವ ಬಾಲಕಿಯನ್ನು ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಅಪ್ಪಯ್ಯ ಸ್ವಾಮೀಜಿ ಹಾಗೂ ಈ ದುಷ್ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇರೆಗೆ ಮಹಾವೀರ ಗಿರಿಮಲ್ಲಗೌಡ ನ್ಯಾಮಗೌಡರ ಮತ್ತು ಗೋಪಾಲಗೌಡ ಶಂಕರಗೌಡ ಪಾಟೀಲ ಎಂಬವರನ್ನು ಬಂಧಿಸಲಾಗಿದೆ. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನು ಮಾಡಿದ್ದ?: 7 ವರ್ಷದ ಬಾಲಕಿ ನಿಜಲಿಂಗಮ್ಮ ಹಿರೇಮಠಳಿಗೆ ಅಪ್ಪಯ್ಯ ಸ್ವಾಮೀಜಿ ಕಳೆದ ಜೂನ್ ತಿಂಗಳಲ್ಲಿ ನೆಲದ ಮೇಲೆ ಮಲಗಿಸಿ ಆಕೆಯ ಬೆನ್ನಿನ ಮೇಲೆ ಕಾಲಿಟ್ಟು ದೀಕ್ಷೆ ನೀಡಿದ್ದ. ಇದಾದ ಬಳಿಕ ಬಾಲಕಿಯ ಕೈ, ಕಾಲು ಹಗ್ಗದಿಂದ ಕಟ್ಟಿ ಸಮಾಧಿಯಲ್ಲಿ ಕೂಡಿಸಿದ್ದ. ಅನ್ನ, ಆಹಾರ ನೀಡದೆ ಚಿತ್ರಹಿಂಸೆ ನೀಡಿದ್ದ. ಅಲ್ಲದೇ ಜನರ ಸಮ್ಮುಖದಲ್ಲೇ ಸಮಾಧಿಯ ಮೇಲೆ ಕಟ್ಟಿಗೆ ಇಟ್ಟು ಬೆಂಕಿ ಹಚ್ಚಿದ್ದ. ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ ತಿಳಿಸಿದ್ದಾರೆ.
ಆಶ್ರಮದಲ್ಲಿದ್ದ ಐದು ಮಕ್ಕಳ ರಕ್ಷಣೆ: ಚಂದ್ರಮ್ಮ ದೇವಿ ಆಶ್ರಮದಲ್ಲಿ ಅಪ್ಪಯ್ಯ ಸ್ವಾಮಿ ಕೂಡಿಟ್ಟ ಒಂದು ಹೆಣ್ಣು ಮಗು ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ರಾಧಿಕಾ (7), ಕಾಜಿ ಬೀಳಗಿ ಗ್ರಾಮದ ಪ್ರಶಾಂತ (10), ಸಚಿನ (8), ಪುರುಷೋತ್ತಮ (8) ಹಾಗೂ ಕಿರಣ (8) ಮಕ್ಕಳನ್ನು ರಕ್ಷಿಸಲಾಗಿದೆ. ಝುಂಜರವಾಡ ಗ್ರಾಮದ ಹೊರವಲಯದಲ್ಲಿರುವ ಮಠದ ಆಶ್ರಮದಲ್ಲಿ ಸಣ್ಣ ಮಕ್ಕಳನ್ನೇ ಸ್ವಾಮೀಜಿ ತನ್ನ ಕುಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಜಿಲ್ಲಾಧಿಕಾರಿ ಎನ್. ಜಯರಾಂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಭೇಟಿ ನೀಡಿ ಆಶ್ರಮದಲ್ಲಿ ಪರಿಶೀಲಿಸುತ್ತಿದ್ದ ವೇಳೆ ಆಶ್ರಮದಲ್ಲಿ ಐವರು ಮಕ್ಕಳಿರುವುದು ಕಂಡುಬಂದಿದೆ. ಆಶ್ರಮದಿಂದ ರಕ್ಷಣೆ ಮಾಡಿರುವ ಮಕ್ಕಳನ್ನು ಬೆಳಗಾವಿಯ ರಿಮ್ಯಾಂಡ್ ಹೂಂಗೆ ಸ್ಥಳಾಂತರಿಸಲಾಗಿದೆ. ಮಠ ಹಾಗೂ ಸಮಾಧಿಯನ್ನು ಧ್ವಂಸ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ನಾವು ಚಂದ್ರಮ್ಮದೇವಿ ಮಠದ ಭಕ್ತರು. ಸ್ವ ಪ್ರೇರಣೆಯಿಂದಲೇ ಮಗಳನ್ನು ಮಠಕ್ಕೆ ದತ್ತು ನೀಡಿದ್ದೇವೆ. ಕಳೆದ 14 ವರ್ಷಗಳಿಂದ ಈ ಮಠಕ್ಕೆ ನಾವು ನಡೆದುಕೊಂಡಿದ್ದೇವೆ. ನಮಗೆ ಏನೂ ತೊಂದರೆ ಇಲ್ಲ. ಈ ಬಗ್ಗೆ ತಮ್ಮದಾಗಲಿ, ತಮ್ಮ ಸಂಬಂಧಿಕರ ತಕರಾರು ಇಲ್ಲ. ನಾವೇನೂ ಮಠದ ಸ್ವಾಮೀಜಿ ವಿರುದ್ಧ ಆರೋಪ ಮಾಡಿಲ್ಲ. ಮಗಳನ್ನು ಶಾಲೆಗೆ ಕಳುಹಿಸುವುದು ಅವರಿಗೆ ಬಿಟ್ಟಿದ್ದು. ಅವರಿಂದ ನಾವೇನೂ ಹಣ ಪಡೆದಿಲ್ಲ. ನಮಗೆ ಎಲ್ಲ ಒಳ್ಳೆಯದಾಗಿದೆ. ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. ಒಬ್ಬಳು ಪುತ್ರಿಯನ್ನು ಮಠದ ಸ್ವಾಮೀಜಿಗೆ ದತ್ತು ನೀಡಲಾಗಿದೆ.
- ಕಸ್ತೂರವ್ವ, ಬಾಲಕಿ ತಾಯಿ
ಇದು ಅತ್ಯಂತ ಹೇಯ ಕೃತ್ಯ ಹಾಗೂ ಮುಗ್ಧ ಜನತೆಯನ್ನು ದಾರಿ ತಪ್ಪಿಸುವ ಕುತಂತ್ರವಾಗಿದೆ. ಈ ಘಟನೆ ಸಂಬಂಧ ಸ್ವಾಮೀಜಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮಗುವಿನ ಆರೋಗ್ಯ ಸುಧಾರಣೆಯಾದ ಬಳಿಕ ಆಕೆಗೆ ಉತ್ತಮ ಶಿಕ್ಷಣ ನೀಡಲು ಜಿಲ್ಲಾಡಳಿತ ಸಿದ್ಧವಿದೆ.
- ಎನ್. ಜಯರಾಂ, ಜಿಲ್ಲಾಧಿಕಾರಿ
ಅಪ್ಪಯ್ಯ ಸ್ವಾಮೀಜಿ 2006 ಮತ್ತು 2010ರಲ್ಲಿ ಜೀವಂತ ಸಮಾಧಿ ಅನುಷ್ಠಾನ ನೆಪದಲ್ಲಿ ಹುಚ್ಚಾಟ ನಡೆಸಿದ್ದಾನೆ. ಈ ಸ್ವಾಮೀಜಿ ವಿರುದ್ಧ ಮೋಸ, ವಂಚನೆ ಪ್ರಕರಣಗಳು ದಾಖಲಾಗಿವೆ. ಜನರು ಮೂಢನಂಬಿಕೆಗಳಿಗೆ ಮಾರು ಹೋಗದೆ ಇಂತಹ ಘಟನೆಗಳ ಬಗ್ಗೆ ಪೊಲೀಸ್ ಠಾಣೆಗಳಿಗೆ ಧೈರ್ಯವಾಗಿ ಮಾಹಿತಿ ನೀಡಬೇಕು. ಇಂಥ ಘಟನೆಗಳಿಗೆ ಸಹಕರಿಸಿ ಸಮಾಜದ ಸ್ವಾಸ್ಥ್ಯ ಹದಗೆಡಲು ಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
- ಡಾ.ಚಂದ್ರಗುಪ್ತ, ಬೆಳಗಾವಿ ಎಸ್ಪಿ
ಸಮಾಜ ಕಪಟಿ ಕಾವಿಧಾರಿ ಸ್ವಾಮೀಜಿಗಳಿಂದ ದೂರ ಉಳಿಯಬೇಕು. ಮುಗ್ಧ ಜನತೆಗೆ ಮಂಕು ಬೂದಿ ಎರಚುವವರ ವಿರುದ್ಧ ಸಮಾಜ ಜಾಗೃತವಾಗಬೇಕಿದೆ. ಕೆಲವರು ಕಾವಿ ಬಟ್ಟೆ ಧರಿಸಿ ವ್ಯವಸ್ಥಿತವಾಗಿ ಹಣ ಮಾಡುವ ದಂಧೆಯಲ್ಲಿ ತೊಡಗುತ್ತಾರೆ. ಇದಕ್ಕೆ ಸಮಾಜ ಅವಕಾಶ ಮಾಡಿಕೊಡಬಾರದು. ಧರ್ಮ, ದೆವರು ಹೆಸರಿನಲ್ಲಿ ಬಾಲಕಿಗೆ ಚಿತ್ರಹಿಂಸೆ ನೀಡಿರುವ ಸ್ವಯಂಘೋಷಿತ ಅಪ್ಪಯ್ಯ ಸ್ವಾಮೀಜಿ ಕುಕೃತ್ಯ ಖಂಡನಾರ್ಹ.
- ಗುರುಸಿದ್ದ ಸ್ವಾಮೀಜಿ,
ಕಾರಂಜಿ ಮಠ ಬೆಳಗಾವಿ
ಬಾಲಕಿಯನ್ನು ಸಮಾಧಿ ಮಾಡಿ, ಸಮಾಧಿ ಮೇಲೆ ಬೆಂಕಿ ಹಚ್ಚಿ ಬಾಲಕಿ ಪ್ರಾಣದೊಂದಿಗೆ ಚೆಲ್ಲಾಟವಾಡಿರುವುದು ಹುಂಬತನದ ಪರಮಾವಧಿ. ಇದು ಖಂಡನೀಯ. ಧರ್ಮದ ಹೆಸರಿನಲ್ಲಿ ಮೋಸ, ವಂಚನೆ ಮಾಡುವುದರಿಂದ ಜನತೆ ಕಲ್ಯಾಣವಾಗದು. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ದೀಕ್ಷೆಗೆ ಕ್ರೂರ ವಿಧಿವಿಧಾನಗಳಿಲ್ಲ. ದೀಕ್ಷೆ ಎಂದರೆ ಸಾಮಾನ್ಯ ತಿಳಿವಳಿಕೆ ಹಾಗೂ ಒಳ್ಳೆಯ ವಿಚಾರ.
- ಡಾ.ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ ಬೆಳಗಾವಿ
ಅತ್ಯಾಚಾರ ಆರೋಪ ಬಂದಾಗ ನಗ್ನವಾಗಿದ್ದ
2013, ಜೂ.14ರಂದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲೇ ಮಾಧ್ಯಮದವರ ಎದುರೇ ಕಾವಿ ಬಟ್ಟೆ ಕಳಚಿ ಬೆತ್ತಲಾಗಿದ್ದ. ತನ್ನ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳೆಲ್ಲ ಸುಳ್ಳು. ನಾನು ಎಲ್ಲ ಭೌತಿಕ ಸಂತೋಷಗಳನ್ನು ತ್ಯಜಿಸಿದವನು. ನಾನು ಲೈಂಗಿಕ ದೌರ್ಜನ್ಯ ಎಸಗಲು ಸಾಧ್ಯವೇ ಇಲ್ಲ. ನನಗೆ ಲೈಂಗಿಕ ವಾಂಛೆಗಳೇನೂ ಇಲ್ಲ. ಬೇಕಿದ್ದರೆ ನೀವೇ ನೋಡಿ ಎಂದು ಮರ್ಯಾದೆ ಬಿಟ್ಟವರಂತೆ ಪಂಚೆ ಕಳಚಿ ಅಧಿಕಾರಿಗಳು ಹಾಗೂ ಮಹಿಳಾ ಉದ್ಯೋಗಿಗಳ ಎದುರಿಗೆ ಸ್ವಾಮೀಜಿ ನಗ್ನವಾಗಿದ್ದ.
ಸ್ವಾಮೀಜಿಗೆ ಥಳಿತ
ಮಂಗಳವಾರ ಮಧ್ಯರಾತ್ರಿಯೇ ಬಂಧಿಸಲ್ಪಟ್ಟಿದ್ದ ಅಪ್ಪಯ್ಯ ಸ್ವಾಮೀಜಿಯನ್ನು ಹೆಚ್ಚಿನ ವಿಚಾರಣೆಗಾಗಿ ಬುಧವಾರ ಮಧ್ಯಾಹ್ನ ಮಠಕ್ಕೆ ಐಗಳಿ ಪೊಲೀಸರು ಕರೆ ತರುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡು ಕಬ್ಬಿನ ಗದ್ದೆಯಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರು ಸ್ವಾಮೀಜಿಯನ್ನು ಕಬ್ಬಿನ ಜಲ್ಲೆ ಹಾಗೂ ಲಾಠಿಯಿಂದ ಥಳಿಸಿ ಮತ್ತೆ ಬಂಧಿಸಿದ್ದಾರೆ.
ಅಪ್ಪಯ್ಯ ಕಪಟಿ, ಡೋಂಗಿ, ನಗ್ನ ಸ್ವಾಮಿ!
ಅಪ್ಪಯ್ಯ ಸ್ವಾಮಿ ಮೂಲ ಹೆಸರು ಸದಾಶಿವ ನೇಮಗೌಡ. ಕಾವಿ ತೊಟ್ಟು ಅಪ್ಪಯ್ಯ ಸ್ವಾಮಿ ಎಂದು ಸ್ವಘೋಷಿತ ಸ್ವಾಮಿ ಈತ. ಮುಗ್ಧ ಜನತೆಯನ್ನು ವಂಚನೆ ಮಾಡುವುದೇ ಈತನ ಖಯಾಲಿ. ಝುಂಜರವಾಡ ಗ್ರಾಮದ ಹೊರವಲಯದ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಈತ ಅಕ್ರಮವಾಗಿಯೇ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾನೆ. ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲಿ ತನ್ನ ಬಂಡವಾಳ ಬಯಲಾಗುತ್ತದೆಯೋ ಎಂಬ ಭಯದಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.