ವಿದೇಶಿ ಕಾಡಲ್ಲಿ ಮರ ಕಡಿದ್ರೆ ಜೈಲಿಗೆ ಹಾಕ್ತಾರಂತೆ, ಜಾತಿಗೀತಿ ಇಲ್ವಂತೆ, ಶಾಸಕರ ವಿದೇಶ ಪ್ರವಾಸದ ವರದಿ ಇದು!
ವಿಧಾನ ಪರಿಷತ್/ವಿಧಾನಸಭೆ ಫೆ.26
ಮರ ಕಡಿಯುವುದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಕೆಲವು ಶಾಸಕರಿಗೆ ಗೊತ್ತಾಗಿದ್ದು ನ್ಯೂಜಿಲೆಂಡ್ನಲ್ಲಿ! ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಶ್ರವಣಬೆಳಗೊಳಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಬೇಕಂತೆ!
ಬದಾಮಿ ಸೇರಿದಂತೆ ಎತ್ತರದ ಪ್ರವಾಸಿ ತಾಣಗಳಿಗೆ ರೋಪ್ ವೇ ಮಾಡಬೇಕಂತೆ!! ಇದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ವಿದೇಶ ಪ್ರವಾಸ ವರದಿಯ ಕೆಲವು ಅಂಶಗಳು!!
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಇವರು ಪ್ರವಾಸಕ್ಕೆ ಹೋದ ದೇಶಗಳಲ್ಲಿ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಂಬ ವ್ಯವಸ್ಥೆಯೇ ಇರಲಿಲ್ಲ! ಇದನ್ನು ನಾವು ಹೇಳುತ್ತಿಲ್ಲ. ಸಮಿತಿಯೇ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಪ್ರವಾಸಿ ತಾಣಕ್ಕೆ ಹೆಲಿಕಾಫ್ಟರ್ ಮತ್ತು ರೋಪ್ವೇ ಕಲ್ಪಿಸುವುದರಿಂದ ಯಾವ ರೀತಿಯಲ್ಲಿ ಹಿಂದುಳಿದ ವರ್ಗಕ್ಕೆ ಮತ್ತು ಅಲ್ಪಸಂಖ್ಯಾತರಿಗೆ ಸಹಾಯವಾಗುವುದೋ ವರದಿ ಸಲ್ಲಿಸಿದವರೇ ಬಲ್ಲರು!!
ನ್ಯೂಜಿಲೆಂಡ್, ಫಿಜಿ, ಆಸ್ಟ್ರೇಲಿಯಾ ದೇಶದ ಪ್ರವಾಸಿ ತಾಣಗಳಿಗೆ ಸುದೀರ್ಘ 15 ದಿನಗಳ ಪ್ರವಾಸ ಕೈಗೊಂಡ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, 26 ಪುಟಗಳ ವರದಿಯನ್ನು ಬುಧವಾರ ಉಭಯ ಸದನಗಳಲ್ಲಿ
ಮಂಡಿಸಿದೆ. ವರದಿಯ ಮುಕ್ಕಾಲು ಭಾಗ ಶಾಸಕರು ತಿರುಗಾಡಿದ ಪ್ರವಾಸಿ ತಾಣದಲ್ಲಿನ ಮಾಹಿತಿಗೇ ಮೀಸಲಾಗಿದೆ. ವರದಿಯಲ್ಲಿ ಅಲ್ಲಲ್ಲಿ ಕೃಷಿ ವ್ಯವಸ್ಥೆ ಬಗ್ಗೆ ತಮ್ಮ ಕಲ್ಪನೆಯನ್ನು ಸಮಿತಿ ಹರಿಯಬಿಟ್ಟಿದೆ. ಸಮಿತಿಯ ಕೆಲವು ಕಂಡಿಕೆಗಳಂತೂ ಬಾಲಿಶವಾಗಿವೆ.
ಸದನದಲ್ಲಿ ಮಂಡನೆ: ನ್ಯೂಜಿಲೆಂಡ್ನ ರೈನ್ ಫಾರೆಸ್ಟ್ ಎಂಬ ರಾಷ್ಟ್ರೀಯ ಉದ್ಯಾನವನವನ್ನು
ವೀಕ್ಷಿಸುತ್ತಿದ್ದಾಗ, ಅಲ್ಲಿರುವ ಮರಗಳನ್ನು ಕಡಿಯುವುದು ಶಿಕ್ಷಾರ್ಹ ಅಪರಾಧ ಎನ್ನುವ 'ಗಂಭೀರ' ವಿಚಾರ ಸಮಿತಿಯ ಗಮನಕ್ಕೆ ಬಂದಿದೆ ಎಂದು ಬರೆಯಲಾಗಿದೆ.
ಆದರೆ ಇದೇ ಶಾಸಕರು ಪ್ರತಿನಿಧಿಸುವ ರಾಜ್ಯದ ಉಭಯ ಸದನಗಳ ಒಪ್ಪಿಗೆ ಪಡೆದಿರುವ ಅರಣ್ಯ ನೀತಿ ಪ್ರಕಾರ ಸ್ವಂತ ಮನೆಯ ಆವರಣದಲ್ಲಿರುವ ಮರವನ್ನು ಕಡಿಯಲು ಕೂಡ ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ!
ಮರ ಕಡಿಯುವುದು ಅಪರಾಧ ಎಂದು ಗೊತ್ತಾಗಲು ನ್ಯೂಜಿಲೆಂಡ್ಗೆ ಹೋಗುವ ಅಗತ್ಯವಿತ್ತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವಿಸದೇ ಇರದು. ಇನ್ನು 9 ಶಾಸಕರು ಹಾಗೂ 3 ಅಧಿಕಾರಿಗಳ ತಂಡ ಮೌಂಟ್ ಕಾಕ್ ಶಿಖರದ ಮೇಲೆ ಹೆಲಿಕಾಪ್ಟರ್ ಮೂಲಕ ಇಳಿಯಿತಂತೆ. ಆಗ ಇದೇ ಮಾದರಿಯಲ್ಲಿ ರಾಜ್ಯದ ಪ್ರವಾಸಿ ತಾಣಗಳಾದ ಹಂಪಿ, ಬದಾಮಿ, ಬೇಲೂರು, ಹಳೇಬೀಡು, ಲಕ್ಕುಂಡಿ ಹಾಗೂ ಶ್ರವಣಬೆಳಗೊಳಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದರೆ ಹೇಗೆ ಎಂಬ ಐಡಿಯಾ ಶಾಸಕರಿಗೆ ಹೊಳೆದಿದೆ. ಸಮಯ ಉಳಿತಾಯ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಚಾಲನೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಎಷ್ಟು? ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಎಷ್ಟು? ಒಂದು ಹೆಲಿಕಾಫ್ಟರ್ ಇಡುವುದು ಲಾಭದಾಯಕವೇ? ಇದ್ಯಾವ ಪ್ರಶ್ನೆಯ ಬಗ್ಗೆಯೂ ಸಮಿತಿ ಗಮನಹರಿಸಿಲ್ಲ. ರಾಜ್ಯದ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲೆ ಒದ್ದಾಡುತ್ತಿರುವ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿಶೇಷ ಅಧ್ಯಯನ ಪ್ರವಾಸ ಮಾಡಿದ್ದ ಬಿ.ಆರ್. ಯಾವಗಲ್ ಅವರ ನೇತೃತ್ವದ ಸಮಿತಿಯು ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಸಾಕಷ್ಟು ಹೈಟೆಕ್ ಐಡಿಯಾ ನೀಡಿದೆ.
ಹೆಲಿಕಾಫ್ಟರ್ ಪ್ರೀತಿ: ರಾಜ್ಯದಲ್ಲಿಯೂ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಮಾದರಿಯಲ್ಲಿ ವೈಜ್ಞಾನಿಕ ಕೃಷಿ ಹಾಗೂ ಆಧುನಿಕ ಹೈನುಗಾರಿಕೆ ಅಳವಡಿಸಿಕೊಳ್ಳಬೇಕು ಎಂಬ ಸಮರ್ಪಕವಾದ ಶಿಫಾರಸನ್ನು ಸಮಿತಿ ಮಾಡಿದೆ. ಆದರೆ ವರದಿಯಲ್ಲೆಲ್ಲೂ ಈ ಆಧುನಿಕ ಹಾಗೂ ವೈಜ್ಞಾನಿಕ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ರಾಜ್ಯದಲ್ಲಿ ಹೇಗೆ ಅನುಷ್ಠಾನಕ್ಕೆ ತರಬಹುದು ಎಂಬ ಬಗ್ಗೆ ಚಕಾರವೆತ್ತಿಲ್ಲ. ಶಾಸಕರ ಹೆಲಿಕಾಪ್ಟರ್ ಪ್ರೀತಿ ಪ್ರವಾಸೋದ್ಯಮಕ್ಕೆ ಸೀಮಿತವಾಗದೆ, ಕೃಷಿ ವಲಯಕ್ಕೂ ವ್ಯಾಪಿಸಿದೆ. ನ್ಯೂಜಿಲ್ಯಾಂಡ್ನಲ್ಲಿ ಜಾರ್ಜ್ ಎಂಬುವವರಿಗೆ ಸೇರಿದ 500 ಹೆಕ್ಟೇರ್ ಕೃಷಿ ಭೂಮಿಗೆ ಹೆಲಿಕಾಪ್ಟರ್ ಮೂಲಕ ಔಷಧಿ ಸಿಂಪಡಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ರಾಜ್ಯದಲ್ಲಿ ಇದು ಎಷ್ಟು ರೈತರಿಗೆ ನೆರವಾಗುತ್ತದೆ ಎಂಬ ವೈಜ್ಞಾನಿಕ ಚಿಂತನೆ ಈ ವರದಿಯಲ್ಲಿ ಕಾಣಲಿಲ್ಲ.
ಮುಂದುವರಿದವರ ದೇಶದಲ್ಲಿ ಹಿಂದುಳಿದವರ ಅಧ್ಯಯನ
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಫಿಜಿ ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ಈ ದೇಶದಲ್ಲಿ ಮೇಲು ಕೀಳು ಎಂಬ ಭಾವನೆಯೇ ಬರುವುದಿಲ್ಲ. ಆ ದೇಶದಲ್ಲಿ ಉತ್ತಮ ಶಿಸ್ತು ಹಾಗೂ ಕರ್ತವ್ಯ ಪಾಲನೆಯಿದೆ. ಭಾರತದಲ್ಲಿಯೂ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಹಿಂದುಳಿದವರ ಕಲ್ಯಾಣಕ್ಕಾಗಿ ಮಾಡಿದ ಅಧ್ಯಯನ ಪ್ರವಾಸದಲ್ಲಿ ಹಿಂದುಳಿದವರ ಬಗ್ಗೆ ಇರುವ ಸಾರಾಂಶ. ಸಮಿತಿಯೇ ಹೇಳಿಕೊಂಡಂತೆ ಜಾತಿ ವ್ಯವಸ್ಥೆಯಿಲ್ಲದ ದೇಶದಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಬಗ್ಗೆ 'ವಿಶೇಷ ಅಧ್ಯಯನ' ಕೈಗೊಳ್ಳಲಾಗಿದೆ. ಇದೇ ಸಮಿತಿ ವರದಿಯಲ್ಲಿ ಒಂದು ಸಾಲನ್ನು ಬೋಲ್ಡ್ ಮಾಡಿ ಉಲ್ಲೇಖಿಸಿದೆ. 'ಈ ದೇಶಗಳಲ್ಲಿ ಬುಡಕಟ್ಟು ಜನರಿಗಾಗಿ ನೇಮಕದಲ್ಲಿಯೂ ಮೀಸಲು ವ್ಯವಸ್ಥೆ ಕಲ್ಪಿಸುತ್ತಿಲ್ಲ.'