ಎನ್ಡಿಎ ವಿಸ್ತರಣೆ, 12 ವರ್ಷ ಬಳಿಕ ಮರಳಿದ ಪಾಸ್ವಾನ್
ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ)ಕ್ಕೆ ಲೋಕಜನಶಕ್ತಿ ಪಕ್ಷ ಗುರುವಾರ ....
ಪಿಟಿಐ ನವದೆಹಲಿ ಫೆ.27
ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ)ಕ್ಕೆ ಲೋಕಜನಶಕ್ತಿ ಪಕ್ಷ ಗುರುವಾರ ರಾತ್ರಿ ವಾಪಸಾಗಿದೆ. ಎರಡೂ ಪಕ್ಷಗಳ ನಡುವಿನ ಮೈತ್ರಿಯನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅಧಿಕೃತವಾಗಿ ಪ್ರಕಟಿಸಿದರು. ಅದಕ್ಕೆ ಪೂರಕವಾಗಿ ಬಿಹಾರದಲ್ಲಿನ 40 ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಕೇಂದ್ರದ ಮಾಜಿ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷ ಸ್ಪರ್ಧಿಸಲಿದೆ. ಈ ಮೂಲಕ ಎನ್ಡಿಎ ತನ್ನ ಹರವನ್ನು ವಿಸ್ತರಿಸಿಕೊಳ್ಳಲಾರಂಭಿಸಿದೆ. ಶೀಘ್ರದಲ್ಲೇ ಟಿಡಿಪಿ ಕೂಡ ಎನ್ಡಿಎಗೆ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿದೆ.
ಗುರುವಾರ ದಿನವಿಡೀ ನವದೆಹಲಿಯಲ್ಲಿ ಬಿಹಾರದ ಬಿಜೆಪಿ ನಾಯಕರಾದ ಷಹನವಾಜ್ ಹುಸೇನ್, ರವಿಶಂಕರ ಪ್ರಸಾದ್ ಮತ್ತು ರಾಜೀವ್ ಪ್ರತಾಪ್ ರೂಡಿ ಎಲ್ಜೆಪಿ ನಾಯಕ ರಾಮ್ವಿಲಾಸ್ ಪಾಸ್ವಾನ್ ನಿವಾಸದಲ್ಲಿ ಸ್ಥಾನ ಹೊಂದಾಣಿಕೆ ಮತ್ತು ಮೈತ್ರಿ ಬಗ್ಗೆ ಬಿರುಸಿನ ಸಮಾಲೋಚನೆ ನಡೆಸಿದ್ದರು. ಅಂತಿಮವಾಗಿ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಎರಡೂ ಪಕ್ಷಗಳ ನಾಯಕರು ಮೈತ್ರಿ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಬಿಹಾರದಲ್ಲಿ ಎಲ್ಜೆಪಿ ಜತೆಗಿನ ಮೈತ್ರಿಯಿಂದ ಬಿಜೆಪಿ ವಿಶೇಷವಾಗಿ ಎನ್ಡಿಎಗೆ ಲಾಭವಾಗಲಿದೆ. ನಮ್ಮ ನಿರ್ಧಾರದಿಂದಾಗಿ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬರಲಿದೆ ಎಂದರು.
ಮೋದಿ, ಆಡ್ವಾಣಿ ಜತೆ ಭೇಟಿ: ಪಾಸ್ವಾನ್ ಶೀಘ್ರದಲ್ಲೇ ಪಕ್ಷದ ಹಿರಿಯ ತಲೆಯಾಳು ಆಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದರು ರಾಜನಾಥ್ ಸಿಂಗ್.
ಏನೇನೂ ಆಗಿರಲಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಪಾಸ್ವಾನ್ ಮುಂದಿನ ಚುನಾವಣೆಯಲ್ಲಿ ಎನ್ಡಿಎ ನೇತೃತ್ವದ್ದೇ ಸರ್ಕಾರ ರಚನೆಯಾಗಲಿದೆ ಎಂದರು. 'ನೀವು ಮೋದಿ ಬಗ್ಗೆ ಕೇಳುತ್ತೀರಾ? ನಮ್ಮ ಪಕ್ಷ ಈಗ ಎನ್ಡಿಎ ಅಂಗವಾಗಿದೆ. ನಾವು ನಮ್ಮ ಪ್ರಧಾನಿ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದ್ದೇವೆ' ಎಂದರು.
ಮಾ.3ಕ್ಕೆ ರ್ಯಾಲಿ: ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಬಳಿಕ ಮೊದಲ ಬಾರಿಗೆ ಮಾ.3ರಂದು ಬಿಹಾರದ ಮುಜಾಫರ್ಪುರದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ನರೇಂದ್ರ ಮೋದಿ ಜತೆ ಪಾಸ್ವಾನ್ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಬಿಜೆಪಿ ಪಟ್ಟಿ ಪ್ರಕಟ: ಲೋಕಸಭೆ ಚುನಾವಣೆಗಾಗಿ ಬಿಜೆಪಿ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ರಾತ್ರಿ ಪ್ರಕಟಿಸಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ 17, ಒಡಿಶಾದಿಂದ 6, ಜಮ್ಮು-ಕಾಶ್ಮೀರದಿಂದ 5, ಹಿಮಾಚಲಪ್ರದೇಶದಿಂದ 3, ಗೋವಾ ಮತ್ತು ಅರುಣಾಚಲಪ್ರದೇಶದಿಂದ ತಲಾ 2 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಮಹಾರಾಷ್ಟ್ರದ ಪಟ್ಟಿಯಲ್ಲಿ ಕನ್ನಡಿಗ, ಮುಂಬೈ ಉತ್ತರ ಕ್ಷೇತ್ರದ ಶಾಸಕ ಗೋಪಾಲ ಶೆಟ್ಟಿ, ನಾಗ್ಪುರ ಕ್ಷೇತ್ರದಿಂದ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ, ಭೀಡ್ನಿಂದ ಗೋಪಿನಾಥ್ ಮುಂಡೆ ಸೇರಿದ್ದಾರೆ. ಪ್ರಕಟಿತ ಪಟ್ಟಿಯಲ್ಲಿ ಇಬ್ಬರು ಮುಸ್ಲಿಮ್ ನಾಯಕರೂ ಸೇರಿದ್ದಾರೆ.
ನಾಳೆ ಜ.ಸಿಂಗ್ ಸೇರ್ಪಡೆ
ಭೂಸೇನೆಯ ನಿವೃತ್ತ ಮುಖ್ಯಸ್ಥ ಜ.ವಿ.ಕೆ.ಸಿಂಗ್ ಶನಿವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡದಿದ್ದರೂ, ಪಕ್ಷದ ಉನ್ನತ ಮೂಲಗಳು ಈ ಅಂಶ ಖಚಿತಪಡಿಸಿವೆ. ಜತೆಗೆ ಉತ್ತರಪ್ರದೇಶದ ಕಾಂಗ್ರೆಸ್ ನಾಯಕ ಜಗದಂಬಿಕಾ ಪಾಲ್ ಕೂಡ ಬಿಜೆಪಿ ತೆಕ್ಕೆಗೆ ಬರುವುದು ಖಚಿತವಾಗಿದೆ.