ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಲೆಯ ಹೆಸರಲ್ಲಿ ಸತ್ಯ ಮರೆಮಾಚುವುದು ಸರಿಯಲ್ಲ: ಭೈರಪ್ಪ

'ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ, ಇತಿಹಾಸದ ತಿರುಚುವಿಕೆಯನ್ನು ತುಸುಮಟ್ಟಿಗೆ ತಹಬಂದಿಗೆ ತರಬಹುದು'...

Mainashree
Updated On : 27 Feb 2014, 11:35 am

'ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ, ಇತಿಹಾಸದ ತಿರುಚುವಿಕೆಯನ್ನು ತುಸುಮಟ್ಟಿಗೆ ತಹಬಂದಿಗೆ ತರಬಹುದು' ಎಂದಿದ್ದಾರೆ ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ. ಅವರ 'ಆವರಣ' ಕಾದಂಬರಿಯನ್ನು ಸಂದೀಪ್ ಬಾಲಕೃಷ್ಣ ಇಂಗ್ಲಿಷ್‌ಗೆ ಅನುವಾದಿಸಿದ್ದು, ರೂಪಾ ಪಬ್ಲಿಕೇಷನ್ ಈ ಕೃತಿಯನ್ನು ಪ್ರಕಟಿಸುತ್ತಿದೆ. ಇದು ಇಂಗ್ಲಿಷ್‌ಗೆ ಹೋಗುತ್ತಿರುವ ಭೈರಪ್ಪನವರ ಆರನೇ ಕಾದಂಬರಿ. ಈ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ಅವರು ವಿಶೇಷ ಸಂದರ್ಶನ ನೀಡಿದರು.
- 'ಆವರಣ' ಬರೆದು 6 ವರ್ಷವಾಯ್ತು. ಅದನ್ನು ಬರೆಯುವಾಗ ಭಾರತೀಯ ಬುದ್ಧಿಜೀವಿಗಳು, ಇತಿಹಾಸ ಪಠ್ಯ ಇತ್ಯಾದಿಗಳ ಬಗ್ಗೆ ನೀವು ಹೊಂದಿದ್ದ ಧೋರಣೆಯಲ್ಲಿ ಇಂದು ಏನಾದರೂ ವ್ಯತ್ಯಾಸವಾಗಿದೆಯಾ?
ಏನೂ ಇಲ್ಲ. ಬದಲಾಗಿ ಇನ್ನಷ್ಟು ಗಟ್ಟಿಯಾಗಿದೆ. ನನ್ನ ತಾತ್ವಿಕತೆಯನ್ನು ಸಮರ್ಥಿಸುವ ಇನ್ನಷ್ಟು ವಿದ್ವತ್‌ಪೂರ್ಣ ಗ್ರಂಥಗಳು ಈ ಅವಧಿಯಲ್ಲಿ ಬಂದಿವೆ. ಮೊದಲಿನಿಂದಲೂ 'ಸತ್ಯ' ಮತ್ತು 'ಸೌಂದರ್ಯ' ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದೆ. ಕಲೆಯ ಹೆಸರಿನಲ್ಲಿ ಸತ್ಯವನ್ನು ಮರೆಮಾಚುವುದು ಸರಿಯೇ ಎಂಬ ಜಿಜ್ಞಾಸೆ ನನ್ನದು.
-  ಇತಿಹಾಸದ ತಿರುಚುವಿಕೆಯ ಬಗ್ಗೆ ಹೇಳುವುದೇ ಆವರಣದ ಪ್ರಧಾನ ಕಾಳಜಿಯೇ?
ಹೌದು. ಅದರ ಹಿಂದೆ ಸಾಕಷ್ಟು ಅಧ್ಯಯನ, ಪ್ರವಾಸ ಎಲ್ಲವೂ ಇವೆ. ನಮ್ಮ ಶಾಲಾ ಪಠ್ಯದಲ್ಲಿ ಇತಿಹಾಸವನ್ನು ವಕ್ರವಾಗಿ ತೋರಿಸುವುದು ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಎನ್‌ಸಿಇಆರ್‌ಟಿಯಲ್ಲಿ 5 ಜನ ಸದಸ್ಯರ ಸಮಿತಿಯೊಂದನ್ನು ರಚಿಸಿದ್ದರು. ಅದರಲ್ಲಿ ನಾನೂ ಇದ್ದೆ. ಶಾಲಾ ಪಠ್ಯದಲ್ಲಿ ವಿಷ ತುಂಬಿದೆ, ಅದನ್ನು ಪರಿಷ್ಕರಿಸಬೇಕೆಂಬ ಅಜೆಂಡಾ ಅವರಿಗಿತ್ತು. ಹಿಂದೂ ದೇಗುಲಗಳ ಮೇಲೆ ಮುಸ್ಲಿಂ ದಾಳಿಗಳು ನಡೆದವು ಎಂಬುದೆಲ್ಲ ಸುಳ್ಳು ಎಂದು ಬರೆಯಬೇಕೆಂದು ಸಮಿತಿ ಸಭೆಯಲ್ಲಿ ಹೇಳಲಾಯ್ತು. ಇದನ್ನು ನಾನು ವಿರೋಧಿಸಿದೆ. ನನ್ನನ್ನು ಸಮಿತಿಯಿಂದಲೇ ಕಿತ್ತು ಹಾಕಲಾಯ್ತು. ಆದರೆ ಸತ್ಯವನ್ನು ಲೋಕದ ಕಣ್ಣಿನಿಂದ ಮರೆಮಾಚಲಾಗುತ್ತದೆಯೆ? ಹೀಗೆ ಜೆಎನ್‌ಯು, ಎಡಪಂಥೀಯರು ನಡೆಸುತ್ತಿದ್ದ ಇತಿಹಾಸದ ತಿರುಚುವಿಕೆಯನ್ನು ಗಮನಿಸುತ್ತಾ ಬಂದೆ. ನಾಶವಾದ ದೇಗುಲಗಳನ್ನು ಕಣ್ಣಾರೆ ನೋಡಿದೆ. ಬುದ್ಧರು ಸ್ಥಾಪಿಸಿದ ನಳಂದಾ ವಿಶ್ವವಿದ್ಯಾಲಯದ ಅವಶೇಷವನ್ನು ನೋಡಿದೆ. ಅದನ್ನು ಹಾಳುಗೆಡವಿದ್ದೂ ಮುಸಲ್ಮಾನ ದಾಳಿಕೋರರೇ. ಅದನ್ನೂ ತಿರುಚಲಾಯಿತು. ಬುದ್ಧರ ಏಳಿಗೆ ಸಹಿಸದೆ ಬ್ರಾಹ್ಮಣರು ಆ ವಿದ್ಯಾಲಯವನ್ನು ಒಡೆದುಹಾಕಿದರು ಎಂದು ಕಥೆ ಕಟ್ಟಿದರು. ವಾಸ್ತವವಾಗಿ, ಮುಸ್ಲಿಮರ ದಾಳಿಯಿಂದ ಬೌದ್ಧರೆಲ್ಲ ಅಲ್ಲಿಂದ ಎದ್ದು ಟಿಬೆಟ್ ಕಡೆಗೆ ಓಡಿಹೋದರು. ಬಳಿಕ ಬೌದ್ಧಧರ್ಮ ಅಲ್ಲಿ ಸ್ಥಾಯಿಯಾಗಿ ನಿಂತಿತು. ಹೀಗೆ 5 ವರ್ಷ ಅಧ್ಯಯನ ಮಾಡಿದೆ.
-  ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ಇತಿಹಾಸದ ತಿರುಚುವಿಕೆ ನಿಲ್ಲಬಹುದು ಅನಿಸುತ್ತದೆಯೇ?
ಸರ್ಕಾರಿ ಪ್ರಾಯೋಜಿತ ತಿರುಚುವಿಕೆ ನಿಲ್ಲಬಹುದು. ಆ ಬಗೆಯ ಇಚ್ಛಾಶಕ್ತಿ ಅವರಿಗಿದೆ ಅನಿಸುತ್ತದೆ. ಆದರೆ ಎಡಪಂಥೀಯ ಬುದ್ಧಿಜೀವಿಗಳ ಬೆಂಬಲ ಇರುವುದು ವಿದೇಶಿ ನಿಧಿಯ ಮೇಲೆ. ಅದು ಅವರಿಗೆ ಲಭಿಸುವಷ್ಟು ಕಾಲ ಅವರ ಯೋಜನೆಗಳು ನಿಲ್ಲುವುದಿಲ್ಲ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ, ಶಾಲಾ ಪಠ್ಯಗಳಲ್ಲಿರುವ ಇತಿಹಾಸವನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಅದಕ್ಕೆ ಎಡಪಂಥೀಯರು ಆಸ್ಪದ ನೀಡಲಿಲ್ಲ. ಇದು ನಮ್ಮ ಜಾತ್ಯತೀತ ಭಾರತಕ್ಕೆ ಅಂಟಿದ ರೋಗ. ಶ್ರೀರಾಮ ಭಾರತೀಯರಿಗೆ ಆದರ್ಶ ಅಂದರೆ ಗಲಾಟೆ ಮಾಡ್ತಾರೆ, ರಾಣಾ ಪ್ರತಾಪ್, ಶಿವಾಜಿ ಮುಂತಾದವರ ಬಗ್ಗೆ ಬರೆದರೂ ಗಲಾಟೆ ಮಾಡ್ತಾರೆ.
-  ತಾತ್ವಿಕವಾಗಿ ನಿಮ್ಮನ್ನು ವಿರೋಧಿಸುವವರು, ನಿಮ್ಮ ಕಾದಂಬರಿಗಳನ್ನು ಓದಿ ಬದಲಾಗುತ್ತಾರೆ ಅನ್ನುತ್ತೀರಾ?
ಹಾಗೆ ಹೇಳುವ ಧೈರ್ಯ ನನ್ನಲ್ಲಿಲ್ಲ. ಕೆಲವರು ಬದಲಾಗುವವರೂ ಅಲ್ಲ. ಕೆಲವರಿಗೆ ನಾನು ಹೇಳುವುದು ನಿಜ ಅನ್ನಿಸುತ್ತೆ, ಆದರೆ ಮುಕ್ತವಾಗಿ ಅದನ್ನು ಒಪ್ಪಿಕೊಳ್ಳಲ್ಲ. ಅವರಿಗೇನೋ ಅಂಜಿಕೆ. ಅಂಥ ಕೆಲವು ಘಟನೆಗಳೂ ಇವೆ.
-  ನಿಮ್ಮನ್ನು ವಿರೋಧಿಸುವ ಎಡಪಂಥೀಯರು, ನಿಮ್ಮನ್ನು ಬೆಂಬಲಿಸುವ ಬಲಪಂಥೀಯರು- ಇವರ ನಡುವೆ ನಿಮ್ಮ ಕಾದಂಬರಿಗೆ ಸಮತೂಕದ ವಿಮರ್ಶೆ ಸಿಗದೆ ಹೋಯಿತಾ?
'ಆವರಣ'ದ ತಂತ್ರದ ಬಗ್ಗೆ ಸರಿಯಾದ ಚರ್ಚೆ ನಡೆಯಲಿಲ್ಲ. ಅದನ್ನೊಂದು ಹೊಸ ಬಗೆಯ ಮುಕ್ತ ಸಾಹಿತ್ಯ ಕೃತಿಯಾಗಿ ಯಾರೂ ನೋಡಿ ಬರೆಯಲಿಲ್ಲ. ಅದರಲ್ಲಿರುವ ಹೊಸ ಬಗೆಯ ನಿರೂಪಣಾ ತಂತ್ರ, ವರ್ತಮಾನ- ಇತಿಹಾಸಗಳ ಜೋಡಣೆ, ರೆಫರೆನ್ಸ್ ಬುಕ್‌ಗಳನ್ನು ಕೃತಿಯ ಭಾಗವಾಗಿಯೇ ತಂದದ್ದು- ಇವುಗಳನ್ನು ಪರಿಗಣಿಸಬೇಕಿತ್ತು.
-  ಆವರಣ ಇಂಗ್ಲಿಷ್‌ಗೆ ಹೋಗುವುದರಿಂದ ನಿಮಗೆ ಹೊಸ ಓದುಗರು ಸಿಗುತ್ತಾರಾ?
ಸಿಗಬಹುದು ಎಂಬ ವಿಶ್ವಾಸವಿದೆ, ಜಾಗತಿಕ ಚಿಂತನ ವಲಯದಲ್ಲಿ.
-  ಹೊಸದೇನು ಬರೆಯುತ್ತಿದ್ದೀರಿ?
ಇನ್ನೂ ಯಾವ ವಿಚಾರವೂ ಮನದಲ್ಲಿ ಹರಳುಗಟ್ಟಿಲ್ಲ.

ಸಂದೀಪ್ ಬಾಲಕೃಷ್ಣ
'ಆವರಣ'ವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿರುವ ಸಂದೀಪ್ ಬಾಲಕೃಷ್ಣ ಅವರು ಐಟಿ ಉದ್ಯೋಗಿ, ಬರಹಗಾರ, ಅಂಕಣಕಾರ. 'ಟಿಪ್ಪು ಸುಲ್ತಾನ್: ದಿ ಟೈರಂಟ್ ಆಫ್ ಮೈಸೂರ್‌' ಇವರ ಇಂಗ್ಲಿಷ್ ಕೃತಿ. ಪ್ರಸ್ತುತ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಮಾಧ್ಯಮ ಹಾಗೂ ಸಾರ್ವಜನಿಕ ಚರ್ಚೆಯಲ್ಲಿ ವಾಸ್ತವಾಂಶಗಳ ಮೇಲೆ ಹದ್ದಿನ ಕಣ್ಣಿಡುವ 'ಇಂಡಿಯಾ ಫ್ಯಾಕ್ಟ್ಸ್‌' ಪೋರ್ಟಲ್ ನಡೆಸುತ್ತಿದ್ದಾರೆ.

-ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement