ಕಾಮುಕರಿಗೆ ಬಲಿಯಾಗಿ ತಾಯಿಯಾದ ಬುದ್ಧಿಮಾಂದ್ಯೆ
ಸಕಲೇಶಪುರ: ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಬುದ್ಧಿಮಾಂದ್ಯೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ. ಸಾಕು ತಾಯಿಯನ್ನು ಭಿಕ್ಷೆ ಬೇಡಿ ಸಾಕುತ್ತಿದ್ದ 25 ವರ್ಷದ ಬುದ್ಧಿಮಾಂದ್ಯೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಚೇತರಿಸಿಕೊಳ್ಳುತ್ತಿದಾಳೆ. ಕಾಮುಕರ ಅತ್ಯಾಚಾರದಿಂದ ಗರ್ಭಿಣಿಯಾಗಿದ್ದ ಬುದ್ಧಿಮಾಂದ್ಯೆ ಸೋಮವಾರ ರಾತ್ರಿ ಹೊಟ್ಟೆ ನೋವು ಎಂದು ತಾನು ವಾಸಿಸುವ ಮನೆಯಲ್ಲಿ ನರಳುತ್ತಿದ್ದಾಗ ನೆರವಿಗೆ ಬಂದ ನೆರೆಹೊರೆಯವರು ಕೆಲ ಕಾಲ ಆರೈಕೆ ಮಾಡಿದರು. ಆದರೆ ರಾತ್ರಿ ಸುಮಾರು 11 ಗಂಟೆಯಲ್ಲಿ ಆಕೆ ತನ್ನ ಕೈಯಲ್ಲಿ ಶಿಶು ಹಿಡಿದುಕೊಂಡು ಬೀದಿಯಲ್ಲಿ ನಿಂತಿದ್ದನ್ನು ನೋಡಿದ ನೆರೆಹೊರೆಯ ಮಹಿಳೆಯರು ದಿಗ್ಬ್ರಮೆಗೊಳಗಾದರು. ನಂತರ ನೆರವಿಗೆ ಬಂದು ಬಾಣಂತಿಯ ಆರೈಕೆ ಮಾಡಿ ಅಂಗನವಾಡಿ ಕಾರ್ಯಕರ್ತರಿಗೆ ವಿಚಾರ ಮುಟ್ಟಿಸಿದರು. ಸಂಬಂಧಪಟ್ಟ ಅಧಿಕಾರಿಗಳ ಹಾಗೂ ನೆರೆಹೊರೆಯವರ ನೆರವಿನೊಂದಿಗೆ ಬುದ್ಧಿಮಾಂದ್ಯೆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಾಂತ್ವನ ಕೇಂದ್ರಕ್ಕೆ ರವಾನಿಸುವ ಕ್ರಮ ಕೈಗೊಳ್ಳಲಾಗಿದೆ.