ಮಾ. 3 ರಂದು ಕರಾಳ ದಿನಕ್ಕೆ ಕರೆ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರ ಸ್ವಾರ್ಥ ರಾಜಕಾರಣ ವಿರೋಧಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಾ. 3ರಂದು ಕರಾಳ ದಿನ ಆಚರಿಸಲು ನಿರ್ಧರಿಸಿದ್ದು, ದ.ಕ. ಬಂದ್ಗೆ ಕರೆ ನೀಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ದ.ಕ. ಜಿಲ್ಲೆಯ ಜನರ ಭಾವನೆಗಳಿಗೆ ಬೆಲೆ ಕೊಡದೆ ಪಶ್ಚಿಮಘಟ್ಟದ ಸರ್ವ ನಾಶಕ್ಕೆ ಕಾರಣವಾಗುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಖಂಡನೀಯ. ಇದಕ್ಕೆ ಜಿಲ್ಲೆಯ ಎಲ್ಲ ಸಚಿವರು, ಲೋಕಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಬೆಂಬಲಿಸುತ್ತಿರುವುದರ ವಿರುದ್ಧ ಜನತೆ ಜಾತಿ ಬೇಧ ಮರೆತು ಪ್ರತಿಭಟಿಸಬೇಕಾಗಿದೆ ಎಂದರು.
ಯಾವುದೇ ಪಕ್ಷ ಯೋಜನೆಯ ನಿಲುವು ಸ್ಪಷ್ಟಪಡಿಸುತ್ತಿಲ್ಲ. ಹರ್ಷ ಮೊಯ್ಲಿಯವರೂ ಇದನ್ನು ಬೆಂಬಲಿಸುತ್ತಿದ್ದು, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೀರಪ್ಪ ಮೊಯ್ಲಿ, ಹರ್ಷ ಮೊಯ್ಲಿ ಹಾಗೂ ಸದಾನಂದ ಗೌಡರನ್ನು ಜಿಲ್ಲೆಯ ಯಾವುದೇ ಸಮಾರಂಭಕ್ಕೂ ಆಹ್ವಾನಿಸಬಾರದು ಎಂದರು.
ಈಗಾಗಲೇ ವಿದ್ಯಾರ್ಥಿ ಸಂಘಟನೆ ಎತ್ತಿನಹೊಳೆ ಯೋಜನೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ, ಅವರು ಇದನ್ನು ಸ್ವೀಕರಿಸಿಲ್ಲ. ಮಾ. 3ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ವೀರಪ್ಪ ಮೊಯ್ಲಿ ಹಾಗೂ ಸದಾನಂದ ಗೌಡರಪ್ರತಿಕೃತಿ ದಹನ ಮಾಡಲಾಗುವುದು ಎಂದು ತಿಳಿಸಿದರು.