ಶೌಚಕ್ಕೆ ಹೋದವರು ಸೀಟಿಗೆ ಎದ್ದೋಡಿದರು!
ಕೊಪ್ಪಳ: ಶೌಚಕ್ಕಾಗಿ ಬಯಲಿಗೆ ಬಂದವರೆಲ್ಲ ಸೀಟಿ ಸದ್ದು ಕೇಳಿ ಬೆಚ್ಚಿಬಿದ್ದರು. ಎದ್ದು ಬಿದ್ದು ಓಡಿದರು. ಕೆಲವರು ಬಿಚ್ಚಿಕೊಳ್ಳುತ್ತಿದ್ದ ಲುಂಗಿ ಒಂದು ಕೈಯಲ್ಲಿ, ತಂಬಿಗೆಯನ್ನು ಇನ್ನೊಂದು ಕೈಯಲ್ಲಿ ಹಿಡಿದು ಓಡುತ್ತಿದ್ದ ದೃಶ್ಯ ಮೋಜೆನಿಸಿತ್ತು.
ಕೊನೆಗೆ ಜಿಪಂ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ ಅವರನ್ನೆಲ್ಲ ಕರೆದು ನಿಲ್ಲಿಸಿ, ನಿಮಗೆ ಇನ್ನು ಇಂಥ ಮುಜುಗರದ ಸ್ಥಿತಿ ಬರಬಾರದು. ದಯ ಮಾಡಿ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಬೇಡಿಕೆ ಮುಂದಿಟ್ಟರು. ಶೌಚಾಲಯ ಜಾಗೃತಿಗಾಗಿ ಜಿಪಂ ಅಧ್ಯಕ್ಷ ಜನಾರ್ದನ್ ಹಮ್ಮಿಕೊಂಡಿರುವ ವಿಷಲ್ ಊದುವ ಅಭಿಯಾನದ ಝಲಕ್ ಇದು.
ಗುರುವಾರ ಕೊಪ್ಪಳ ತಾಲೂಕಿನ ಇಂದರಗಿ, ಅಗಳಿಗೇಕೇರಿ ಮುಂತಾದ ಗ್ರಾಮಗಳಲ್ಲಿ ಬೆಳ್ಳಂಬೆಳಗ್ಗೆ ಸೀಟಿ ಊದುತ್ತಾ ಜಿಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಶೌಚಾಲಯ ಜಾಗೃತಿ ಅಭಿಯಾನ ಕೈಗೊಂಡರು. ಬಯಲು ಶೌಚಾಲಯಕ್ಕೆ ತೆರಳುವ ಸ್ಥಳಗಳಿಗೆಲ್ಲ ಹೋಗಿ, ಜನರ ಬೆನ್ನು ಬಿದ್ದು, ಸರ್ಕಾರವೇ ಅನುದಾನ ಕೊಡುತ್ತಿದೆ. ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಿ. ಅದನ್ನು ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾದ್ಯಂತ ಗ್ರಾಪಂ ಅಧಿಕಾರಿಗಳು, ವಿದ್ಯಾರ್ಥಿಗಳೂ ವಿಷಲ್ ಬಜಾವೋ ಆಂದೋಲನ ನಡೆಸಿದರು.