ಅಧಿಕಾರಕ್ಕೆ ಬಂದ್ರೆ ಪ್ರತಿ ಪೈಸೆಗೂ ಲೆಕ್ಕ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಪ್ರತಿ ಪೈಸೆಯ ಲೆಕ್ಕ ಹಾಗೂ ಪ್ರತಿ ಕ್ಷಣವೂ ಜನರಿಗೆ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಹುಬ್ಬಳ್ಳಿ, ಫೆ.28
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಪ್ರತಿ ಪೈಸೆಯ ಲೆಕ್ಕ ಹಾಗೂ ಪ್ರತಿ ಕ್ಷಣವೂ ಜನರಿಗೆ ಉತ್ತರದಾಯಿಗಳಾಗಿರುತ್ತೇವೆ ಎಂದು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಾಗ್ದಾನ ಮಾಡಿದರು.
ಗುಲ್ಬರ್ಗ ಹಾಗೂ ಹುಬ್ಬಳ್ಳಿಯಲ್ಲಿ ಶುಕ್ರವಾರ 'ಭಾರತ ಗೆಲ್ಲಿಸಿ' ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ತಾವು ಮಾಡಿರುವ ಪಾಪ ಕರ್ಮಗಳ ಫಲ ಭೋಗಿಸುತ್ತಿರುವ ಕಾಂಗ್ರೆಸ್ ಒಮ್ಮೆಯೂ ಜನರಿಗೆ ಉತ್ತರದಾಯಿಯಾಗಿ ಹೊರಹೊಮ್ಮಲೇ ಇಲ್ಲ. ಈ ಚುನಾವಣೆಯಲ್ಲಿ ಅಧಿಕಾರ ಕೊಟ್ಟರೆ, ಒಂದೊಂದು ಕ್ಷಣದ ವಿವರ ಜನರ ಮುಂದಿಡುತ್ತೇವೆ. ಅಷ್ಟೇ ಅಲ್ಲ, ಪೈಸೆ ಪೈಸೆಯ ಲೆಕ್ಕ ಕೊಡುತ್ತೇವೆ. ಒಂದು ಕ್ಷಣವನ್ನೂ ಸ್ವಾರ್ಥಕ್ಕಾಗಿ ಬಳಕೆ ಮಾಡೋದಿಲ್ಲ. 10 ವರ್ಷದಲ್ಲಿ ಹಾಳಾಗಿರುವ ದೇಶದ ಲೋಕತಂತ್ರಕ್ಕೆ ಮರುಜೀವ ತುಂಬಲು ಬಿಜೆಪಿಗೆ ಬೆಂಬಲಿಸಿ' ಎಂದು ಸೇರಿದ್ದ ಜನಸ್ತೋಮಕ್ಕೆ ಕರೆ ನೀಡಿದರು.
ತಮ್ಮ ಮಾತಿನುದ್ದಕ್ಕೂ ಲೇವಡಿ ಮಾಡುತ್ತ, ಮಾತಿನ ಚಾಟಿ ಬೀಸುತ್ತ ಕಾಂಗ್ರೆಸ್ ಅನ್ನು, ಅದರ ನಾಯಕರನ್ನು, ಅಧಿನಾಯಕಿ ಸೋನಿಯಾರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಒಂದು ಹಂತದಲ್ಲಿ 'ದಸ್ ನಂಬರಿ ಗಾಂಧಿ' ಎಂದು ಸೋನಿಯಾರನ್ನು ತಿವಿದರು.
ದೇಶಕ್ಕೆ ಶಾಸಕರಲ್ಲ ಸೇವಕರು ಬೇಕಾಗಿದ್ದಾರೆ: ಅರವತ್ತು ವರ್ಷದ ರಾಜಕೀಯ ಇತಿಹಾಸದಲ್ಲಿ ದೇಶ ಸಾಕಷ್ಟು ಶಾಸಕರನ್ನು ನೋಡಿದೆ. ಇದೀಗ ದೇಶಕ್ಕೆ ಮೆರೆಯುವ ಶಾಸಕರು ಬೇಕಾಗಿಲ್ಲ. ಬದಲಾಗಿ ಸೇವೆಕರು ಬೇಕಾಗಿದ್ದಾರೆ ಎಂದು ಮೋದಿ ಹೇಳಿದರು.
ಸ್ವಾತಂತ್ರ್ಯದ ನಂತರ ದೇಶವನ್ನು 60 ವರ್ಷಗಳ ಕಾಲ ಶಾಸಕರೆಂಬುವವರು ಆಳಿದ್ದಾಯಿತು. ಇದೀಗ ಸೇವಕರು ಸೇವೆಗಿಳಿಯಲಿದ್ದಾರೆ. ನಾನು ನಿಮ್ಮ ಸೇವಕನಾಗಿ ಆಗಲೇ ನಿಮ್ಮ ಮುಂದೆ ಹಾಜರಾಗಿದ್ದೇನೆ ಎಂದರು.
ಕಾಂಗ್ರೆಸ್ ನಾಮಾವಶೇಷ: ನಾನು ಸಾಕಷ್ಟು ಚುನಾವಣೆ ನೋಡಿದ್ದೇನೆ. ಬಹಳ ಜನಸಭೆಯಲ್ಲಿಯೂ ಪಾಲ್ಗೊಂಡಿದ್ದೇನೆ. ಆದರೆ, ಈ ಭಾರಿಯ ಚುನಾವಣೆಯೇ ವಿಭಿನ್ನ. ಜನರೇ ಈ ಚುನಾವಣೆಯ ನೇತೃತ್ವ ವಹಿಸಿದ್ದಾರೆ. ಇನ್ನೂ ಚುನಾವಣೆ ಘೋಷಣೆಯಾಗಿಲ್ಲ ಆಗಲೇ ಬಿರುಗಾಳಿ ಎದ್ದಿದೆ. ಚುನಾವಣೆ ಘೋಷಣೆಯಾದರೆ ಸಾಕು ಸುನಾಮಿ ಬಂದಪ್ಪಳಿಸಿ ಕಾಂಗ್ರೆಸ್ ಪಕ್ಷವನ್ನು ನಾಮಾವಶೇಷ ಮಾಡಲಿದೆ. ಈ ಬಾರಿ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷಗಳು ಹೋರಾಡುತ್ತಿಲ್ಲ, ರಾಜಕೀಯ ಮುಖಂಡರು ಹೋರಾಡುತ್ತಿಲ್ಲ, ಬದಲಾಗಿ ದೇಶದ ಜನರೇ ಹೋರಾಟಕ್ಕಿಳಿದಿದ್ದಾರೆಂಬಂತೆ ಭಾಸವಾಗುತ್ತಿದೆ. ದೇಶದ ಅಧೋಗತಿ ನೋಡಿ ಬೇಸತ್ತಿರುವ ಜನ ಪರಿವರ್ತನೆಗೆ ಸಂಕಲ್ಪ ಮಾಡಿದ್ದಾರೆ. ಮತದಾನಕ್ಕೂ ಮುನ್ನವೇ ಕಾಂಗ್ರೆಸ್ನ್ನು ಕಿತ್ತೊಗೆಯುವ ಫಲಿತಾಂಶ ಘೋಷಿಸಿ ಬಿಟ್ಟಿದ್ದಾರೆಂದರು.
ಮಂಗಳ ಗ್ರಹದಿಂದಿಳಿದವರು: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಮಾತಿನಲ್ಲಿ ಕುಟುಕಿದ ಮೋದಿ, ಕಾಂಗ್ರೆಸ್ ನಾಯಕರು ಅದೇಕೋ ಇತ್ತೀಚೆಗೆ ಮಂಗಳಗ್ರಹದಿಂದ ಬಂದಿಳಿದವರಂತೆ ವರ್ತಿಸುತ್ತಿದ್ದಾರೆ. ಇವರು ಕರ್ನಾಟಕಕ್ಕೂ ಬಂದಿದ್ದರು. ದೇಶವೇ ಬೆಚ್ಚಿ ಬೀಳಿಸುವಷ್ಟು ಭ್ರಷ್ಟಾಚಾರ ನಡೆದರೂ ಏನೂ ನಡೆದೇ ಇಲ್ಲ ಎನ್ನುವಂತೆ ಬಾಯಿ ಮುಚ್ಚಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಕೇಂದ್ರ ಬಿಜೆಪಿ ಮುಖಂಡ ಅನಂತಕುಮಾರ, ಮಾಜಿ ಸಚಿವರಾದ ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ ಅನೇಕ ನಾಯಕರು ಭಾಗವಹಿಸಿದ್ದರು.
ಮೋದಿ ಭಾಷಣದ ಹೈಲೈಟ್ಸ್ ಕನ್ನಡದಲ್ಲಿ ಸಿದ್ಧಾರೂಢರ ಸ್ಮರಣೆ
'ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರೆಯ ಈ ಶುಭ ದಿನದಂದು ಕರ್ನಾಟಕದ ಜನತೆಗೆ ಶುಭಾಶಯ. ಸದ್ಗುರು ಶ್ರೀ ಸಿದ್ಧಾರೂಢರ ಆಶೀರ್ವಾದ ನಮ್ಮೆಲ್ಲರಿಗೆ ಪ್ರಾಪ್ತವಾಗಲಿ.' ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ 'ಭಾರತ ಗೆಲ್ಲಿಸಿ' ರ್ಯಾಲಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಪ್ರಾರಂಭಿಸಿದ ಭಾಷಣದ ಮೊದಲ ಸಾಲಿದು. ಶುಕ್ರವಾರ ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವ. ರಾಜ್ಯ ಹಾಗೂ ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಶ್ರೀ ಸಿದ್ಧಾರೂಢರನ್ನು ಸ್ಮರಿಸಿ ಕನ್ನಡದಲ್ಲಿಯೇ ಪ್ರಾರಂಭಿಸಿದ ಭಾಷಣ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಜನರನ್ನು ಪುಳಕಿತರನ್ನಾಗಿಸಿತು.
ನೀವು ಕಮಲ ಕಳಿಸಿ ನಾನು ಲಕ್ಷ್ಮೀ ಕಳಿಸ್ತೀನಿ
ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ. ಕೆಸರು ಎರಚಿದಷ್ಟೂ ಕಮಲ ಅರಳುತ್ತದೆ. ಕಮಲ ಇದ್ದಲ್ಲಿ ಲಕ್ಷ್ಮೀ ವಿರಾಜಮಾನಳಾಗುತ್ತಾಳೆ. ಲಕ್ಷ್ಮೀ ಇದ್ದಲ್ಲಿ ಸಮೃದ್ಧಿ ಇರುತ್ತದೆ. ಮತದಾರರು ದೇಶದಾದ್ಯಂತ ಕಮಲವನ್ನು ಚುನಾಯಿಸಿ ಕಳಿಸಿ. ನಿಮ್ಮ ಮನೆಗೆ ಲಕ್ಷ್ಮೀ ಕಳಿಸುವ ಗ್ಯಾರಂಟಿ ನೀಡುತ್ತೇನೆ.
ಇದು ಮ್ಯಾಥ್ಸ್ ಅಲ್ಲ, ಕೆಮೆಸ್ಟ್ರಿ
ರಾಜಕೀಯ ಪಂಡಿತರ ಮೈನಸ್-ಪ್ಲಸ್ ಲೆಕ್ಕಾಚಾರ ದಿನರಾತ್ರಿ ನಡೀತಿದೆ. ಆದರೆ ಈ ಬಾರಿಯ ಚುನಾವಣೆ ಪ್ಲಸ್-ಮೈನಸ್ಗಳ ಮ್ಯಾಥ್ಸ್ ಅಲ್ಲ. ಬದಲಾಗಿ ಇದೊಂದು ಕೆಮೆಸ್ಟ್ರಿ ಆಗಲಿದೆ. ಈ ಬಾರಿಯ ಚುನಾವಣೆ ಫಲಿತಾಂಶ ರಾಜಕೀಯ ಪಂಡಿತರೆಂದು ಹೇಳಿಕೊಳ್ಳುವವರನ್ನೂ ದಿಗ್ಭ್ರಮೆಯಾಗಿಸಲಿದೆ.
ಸಿದ್ದು ಕಾರ್, ಖರ್ಗೆ ರೈಲು ಕೆಟ್ಟು ನಿಂತಿವೆ!
ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಮೋದಿ ತಮ್ಮ ಮಾತುಗಳಲ್ಲಿ ಲೇವಡಿ ಮಾಡಿ, 'ಆಡಳಿತ ನಡೆಸಲು ಶುರು ಮಾಡಿ 9 ತಿಂಗಳಾದರೂ ಇನ್ನೂ ಹಾರ- ತುರಾಯಿಗೆ ಕೊರಳೊಡ್ಡುತ್ತಲೇ ಸಿಎಂ ಸಿದ್ದು, ಮಂತ್ರಿಮಂಡಳ ಕಾಲಹರಣ ಮಾಡುತ್ತಿದೆ' ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರ ಕಾರು, ಖರ್ಗೆಯವರ ರೈಲು ಕೆಟ್ಟು ನಿಂತಿವೆ. ಅದಕ್ಕೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಂಡಿದ್ದ ವೇಗದ ಪ್ರಗತಿಗೆ ಇಂದು ಮಂಕು ಕವಿದಿದೆ ಎಂದು ಮಾತಿನಿಂದಲೇ ಮೋದಿ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಟೀಕಿಸಿದರು.
ವಿರಾಟ್ ದರ್ಶನ
'ಭಾರತ ಗೆಲ್ಲಿಸಿ' ರ್ಯಾಲಿ ಆಯೋಜಿಸಿರುವ ಹುಬ್ಬಳ್ಳಿಯ ಮೈದಾನ ಕೇಸರಿ ಸಮುದ್ರದಂತೆ ಹರೀತಿದೆ. ಇಂಥ ದೃಶ್ಯ ನೋಡುವುದೇ ಒಂದು ಸೌಭಾಗ್ಯ. ದೃಷ್ಟಿ ಹರಿಸಿದಲ್ಲೆಲ್ಲ ಜನರೇ ಕಾಣಿಸುತ್ತಿದ್ದಾರೆ. ಇಂಥ ಜನಸ್ತೋಮ ಇದುವರೆಗೂ ಕಂಡಿಲ್ಲ. ಇದೊಂದು ವಿರಾಟ್ ದರ್ಶನ.
ರ್ಯಾಲಿಗಾಗಿ ಸ್ಪರ್ಧೆ
'ಭಾರತ ಗೆಲ್ಲಿಸಿ' ರ್ಯಾಲಿ ಆಯೋಜಿಸುವಲ್ಲಿ ಕರ್ನಾಟಕದ ಬಿಜೆಪಿಯಲ್ಲಿಯೇ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತದೆ. ಒಂದು ರ್ಯಾಲಿಗಿಂತ ಮುಂದಿನ ರ್ಯಾಲಿ ಸಂಪೂರ್ಣ ಭಿನ್ನವಾಗಿರುತ್ತದೆ. ಪ್ರತಿ ರ್ಯಾಲಿಯೂ ಹಿಂದಿನ ರ್ಯಾಲಿಗಿಂತ ಹೆಚ್ಚಿನ ಯಶಸ್ಸು ಸಾಧಿಸಿರುತ್ತದೆ. ನ ಭೂತೋ...ಎಂಬಂತೆ 'ಭಾರತ ಗೆಲ್ಲಿಸಿ' ಆಯೋಜಿಸುತ್ತಿರುವ ಕರ್ನಾಟಕ ಬಿಜೆಪಿ, ತನ್ನ ಹಿಂದಿನ ರ್ಯಾಲಿಯ ದಾಖಲೆಯನ್ನು ತಾನೇ ಮುರಿದು, ಹೊಸ ದಾಖಲೆ ಸೃಷ್ಟಿಸುತ್ತಿದೆ ಎಂದು ಮೋದಿ ರ್ಯಾಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಮ್ಮ ಋಣ ತೀರಿಸುತ್ತೇನೆ
ನನ್ನ ಭಾಷಣ ಕೇಳಲು ಹುಬ್ಬಳ್ಳಿಯಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೇ 3 ತಾಸು ಕಾದಿದ್ದೀರಿ. ನಿಮ್ಮ ಈ ಶ್ರಮ ವ್ಯರ್ಥವಾಗಲು ನಾನು ಬಿಡುವುದಿಲ್ಲ. ನಿಮ್ಮ ಋಣ ಖಂಡಿತವಾಗಿಯೂ ತೀರಿಸುತ್ತೇನೆ. ಭಾವುರಾವ್ ದೇಶಪಾಂಡೆ, ಜಗನ್ನಾಥರಾವ್ ಜೋಶಿ ಅವರು ಬೆಳೆದ ನೆಲ ಹುಬ್ಬಳ್ಳಿ. ಅಂಥ ಮಹಾನ್ ವ್ಯಕ್ತಿಗಳ ಸಾಂಗತ್ಯದಲ್ಲಿ ಬೆಳೆದ ಹುಬ್ಬಳ್ಳಿ ಜನತೆ ಪುಣ್ಯವಂತರು ಎಂದರು ಮೋದಿ.
ಬಾಳುವಿರೆಲ್ಲ ಹಾಯಾಗಿ..
ನಾನಿರುವುದೇ ನಿಮಗಾಗಿ...ಕಣ್ಣೀರೇಕೆ..ಬಿಸಿಉಸಿರೇಕೆ..ಬಾಳುವಿರೆಲ್ಲ ಹಾಯಾಗಿ....ವರನಟ ಡಾ. ರಾಜ್ಕುಮಾರ ಅಭಿನಯದ ಮಯೂರ ಚಿತ್ರದ ಹಾಡು ಕೇಳಿಬಂದಿದ್ದು ಹುಬ್ಬಳ್ಳಿ ರ್ಯಾಲಿಯಲ್ಲಿ. ಯುಪಿಎ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನತೆಗೆ ಮೋದಿ ಸಮಾಧಾನ ಹೇಳುವಂಥ ಸಾಂದರ್ಭಿಕ ದೃಶ್ಯದಂತಿತ್ತು ಈ ಹಾಡು.