ಉಪ'ಸಿಂಹಾ'ರ
ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಹಾಗೂ ರಂಗಕರ್ಮಿ ಸಿ.ಆರ್. ಸಿಂಹ (72) ಶುಕ್ರವಾರ...
ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.28
ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಹಾಗೂ ರಂಗಕರ್ಮಿ ಸಿ.ಆರ್. ಸಿಂಹ (72) ಶುಕ್ರವಾರ ನಿಧನರಾಗಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಿಂಹ ಅವರು ವಿಧಿವಶರಾಗಿದ್ದಾರೆ.
ಪತ್ನಿ ಶಾರದಾ ಸಿಂಹ, ಪುತ್ರ ಋತ್ವಿಕ್ ಸಿಂಹ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಶನಿವಾರ (ಮಾ.1) ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಿಂಹ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಅದೇ ದಿನ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬ ವರ್ಗ ನಿರ್ಧರಿಸಿದೆ. ಕಳೆದ ಒಂದು ವಾರದಿಂದ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನನ್ನ ಅಣ್ಣ ಇಲ್ಲ ಎನ್ನಲು ಈಗಲೂ ಸಾಧ್ಯವಾಗುತ್ತಿಲ್ಲ. ಆರೋಗ್ಯವಾಗಿ ಮನೆಗೆ ಬರುತ್ತಾರೆಂಬ ನಂಬಿಕೆಯಲ್ಲಿದ್ದೆ. ಆದರೆ, ಅಣ್ಣ ನೋ ಮೋರ್. ಚಿತ್ರೋದ್ಯಮ, ಕುಟುಂಬವನ್ನು ಅವರು ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು.
- ಶ್ರೀನಾಥ್, ಹಿರಿಯ ನಟ