ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚನ್ನಪಟ್ಟಣ ರಾಮಸ್ವಾಮಿಶಾಸ್ತ್ರಿ ಸಿಂಹ...

Mainashree
Updated On : 28 Feb 2014, 11:50 am

ರಾಮನಗರ: ಚನ್ನಪಟ್ಟಣ ರಾಮಸ್ವಾಮಿಶಾಸ್ತ್ರಿ ಸಿಂಹ...
ಹೀಗೆ ಅಮೆರಿಕ ವಿಮಾನ ನಿಲ್ದಾಣದಲ್ಲಿ ಹುಟ್ಟೂರಿನೊಂದಿಗೆ ಹೆಸರಿಡಿದು ಕರೆದಾಗ ನನ್ನ ಮೈ, ಮನ ಪುಳಕಗೊಂಡಿತ್ತು ಎಂದು ಕೆಲ ವರ್ಷಗಳ ಹಿಂದೆ ಚನ್ನಪಟ್ಟಣದ ಸಮಾರಂಭವೊಂದರಲ್ಲಿ ಸ್ವತಃ ಸಿಂಹ ಹೇಳಿಕೊಂಡಿದ್ದರು.  ವಿಮಾನ ನಿಲ್ದಾಣಕ್ಕೆ ನಾನು ತಡವಾಗಿ ಹೋಗಿದ್ದೆ. ಅಷ್ಟರಲ್ಲಿ ನಾನು ಪ್ರಯಾಣ ಬೆಳೆಸಬೇಕಿದ್ದ ವಿಮಾನ ಹೊರಡುವುದರಲ್ಲಿತ್ತು. ಆಗ ಅನೌನ್ಸರ್ ನನ್ನ ಪೂರ್ಣ ಹೆಸರಿನೊಂದಿಗೆ ಅಂತಿಮ ಕರೆ ನೀಡಿದರು. ದೂರದ ದೇಶದಲ್ಲಿ ಹುಟ್ಟೂರಿನ ಹೆಸರು ಕೇಳಿ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ ಎಂದಿದ್ದರು.  ಅದು, 2000ನೇ ಇಸವಿಯಲ್ಲಿ ಚನ್ನಪಟ್ಟಣದಲ್ಲಿ ಜರುಗಿದ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ. ಅಲ್ಲಿ ನೆರೆದಿದ್ದ ಎಷ್ಟೋ ಮಂದಿಗೆ ಸಿಂಹ ನಮ್ಮೂರಿನವರೆನ್ನುವುದೇ ತಿಳಿದಿರಲಿಲ್ಲ.  
ಸಮಾರೋಪ ಭಾಷಣದ ಸರದಿ ಬಂದಾಗ ಸಿಂಹ ತಮ್ಮ ಅಮೆರಿಕ ಪ್ರವಾಸದಲ್ಲಿ ವಿಮಾನಕ್ಕೆ ತಡವಾಗಿ ತೆರಳಿದ ಪ್ರಸಂಗದೊಂದಿಗೆ ತಮ್ಮ ಜನ್ಮ ಸ್ಥಳ ಇದೇ ಎಂದು ಹೇಳಿದಾಗ ನೆರೆದಿದ್ದ ಸಭಿಕರಿಂದ ಕರತಾಡನ ಮುಗಿಲು ಮುಟ್ಟಿತ್ತು. ಸಿಂಹ ನಮ್ಮೂರಿನವರೆನ್ನುವ ಅಭಿಮಾನದ ಪ್ರತೀಕ ಅದರಲ್ಲಿ ಅಡಗಿತ್ತು.  ಕನ್ನಡ ಸಾರಸ್ವತ ಲೋಕ, ಚಿತ್ರರಂಗ ಸಹಿತ ನಾನಾ ಕ್ಷೇತ್ರಗಳಿಗೆ ಅನನ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿರುವ ಬೊಂಬೆಯ ನಾಡು ರಂಗಭೂಮಿ ಮತ್ತು ಜಾನಪದ ಕಲೆಗಳ ತವರೂರು ಕೂಡ ಹೌದು. ಈ ಊರಿನ ಮುಕುಟಗಳಲ್ಲಿ ಸಿಂಹ ಒಬ್ಬರು.
ಸಿಕೆವಿ ಮೊಮ್ಮಗ: ಮೈಸೂರು ಸಂಸ್ಥಾನದಿಂದ ರಾಜಸೇವಾಸಕ್ತ ಬಿರುದು ಮತ್ತು ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಸಿ.ಕೆ.ವೆಂಕಟರಾಮಯ್ಯ ಅವರ ಮೊಮ್ಮಗ ಸಿ.ಆರ್.ಸಿಂಹ. ಇವರ ತಂದೆ ರಾಮಸ್ವಾಮಿಶಾಸ್ತ್ರಿ ಖ್ಯಾತ ವಕೀಲರಾಗಿದ್ದರು.   ವೆಂಕಟರಾಮಯ್ಯ ಅವರು ಪಟ್ಲು ಗ್ರಾಮದವರಾದರೂ ಚನ್ನಪಟ್ಟಣದ ಕೋಟೆಯಲ್ಲಿ ನೆಲೆಸಿದ್ದರು. ಸಿಂಹ ಮತ್ತು ಶ್ರೀನಾಥ್ ಸಹೋದರರ ಜನನವಾಗಿದ್ದು ಚನ್ನಪಟ್ಟಣದಲ್ಲೇ. ಸಿಂಹ ಅವರಿಗೆ ಆರೇಳು ವರ್ಷವಾಗಿದ್ದಾಗಲೇ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಯಿತು.  
ತವರಿನ ಸ್ಮರಣೆ: ಚನ್ನಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ಬಂದಾಗ, ಚನ್ನಪಟ್ಟಣದವರು ಯಾರಾದರೂ ತಮ್ಮನ್ನು ಭೇಟಿಯಾದಾಗ ಸಿಂಹ ತಮ್ಮ ಬಾಲ್ಯದ ದಿನಗಳು, ಮನೆ ಮಗ್ಗುಲಲ್ಲೇ ಇದ್ದ ಶ್ರೀ ವರದರಾಜಸ್ವಾಮಿ ದೇಗುಲಕ್ಕೆ ಹೋಗುತ್ತಿದ್ದುದನ್ನು ಮೆಲುಕು ಹಾಕುತ್ತಿದ್ದರು.
ನೆನಪಿನಲ್ಲಿದ್ದ ಕೆಲವೇ ಬಾಲ್ಯದ ಗೆಳೆಯರು, ಸಂಬಂಧಿಕರನ್ನು ಸ್ಮರಿಸಿಕೊಳ್ಳುತ್ತಿದ್ದರು. ನಾನು ಚನ್ನಪಟ್ಟಣದವನೆಂದು ಪರಿಚಯಿಸಿಕೊಂಡು ಯಾರೇ ಮಾತನಾಡಿಸಿದರೂ ಅವರನ್ನು ಅತ್ಯಂತ ಆತ್ಮೀಯತೆಯಿಂದ ಕಾಣುತ್ತಿದ್ದರು. ಟೀ, ಕಾಫಿ ಕುಡಿಯದೆ ಹೋಗಲು ಬಿಡುತ್ತಿರಲಿಲ್ಲ.
ಮಾರಾಟವಾದ ಮನೆ: ತವರಿನಲ್ಲಿ ಮನೆ, ಆಸ್ತಿಪಾಸ್ತಿ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ಸಿಂಹ ಮತ್ತು ಕುಟುಂಬದವರು ಹೆಚ್ಚು ಒಡನಾಟವನ್ನೇನೂ ಇರಿಸಿಕೊಂಡಿರಲಿಲ್ಲ. ಚನ್ನಪಟ್ಟಣದ ಕೋಟೆಯಲ್ಲಿ ಸದ್ಯ ನ್ಯೂ ಮಿಲೇನಿಯಂ ಸ್ಕೂಲ್ ನಡೆಯುತ್ತಿರುವ ಕಟ್ಟಡದ ಎದುರಿಗೆ ಇರುವ ನಾಟಿ ಹೆಂಚಿನ ಮನೆಯೇ ಸಿ.ಆರ್.ಸಿಂಹ ಹಾಗೂ ಶ್ರೀನಾಥ್ ವಂಶಸ್ಥರು ವಾಸವಿದ್ದ ಮನೆ. ರಾಮಸ್ವಾಮಿಶಾಸ್ತ್ರಿ ಅವರು ಚನ್ನಪಟ್ಟಣ ತೊರೆಯುವಾಗಲೇ ತಮ್ಮ ಮನೆಯನ್ನು ಮಾರಾಟ ಮಾಡಿದ್ದರು. ಕೊಂಡುಕೊಂಡವರು ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿಕೊಂಡು, ಆ ಮನೆಯಲ್ಲೇ ವಾಸವಿದ್ದಾರೆ. ಮನೆಯ ಮೂಲ ಸ್ವರೂಪ ಮಾತ್ರ ಬದಲಾಗಿಲ್ಲ.  

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement