ರಂಗದ ರಸಋಷಿ
ಕನ್ನಡ ಚಿತ್ರರಂಗದಿಂದ ಮತ್ತೊಂದು ಸಿನಿಮಾ ಸಿಂಹ ಕಾಣೆಯಾಗಿದೆ. 1942ರಲ್ಲಿ ಹುಟ್ಟಿ ಪ್ರಭಾತ್ ಕಲಾವಿದರು ತಂಡದ ಮೂಲಕ ಬೆಳಕಿಗೆ ಬಂದ ಸಿ.ಆರ್.ಸಿಂಹ ಎಂಬ ಪ್ರತಿಭೆ ಈಗ ಅಸ್ತಂಗತವಾಗಿದೆ. ನಟರಂಗದ ನಿರ್ಮಾತೃ ಈಗ ರಂಗದಿಂದ ದೂರ. ಶೇಕ್ಸ್ಪಿಯರ್ನ ಮಿಡ್ಸಮ್ಮರ್ ನೈಟ್ಸ್ ನಾಟಕವನ್ನು ನಿರ್ದೇಶಿಸಿ ನಟಿಸಿದ್ದ ಸಿಂಹ ಈಗ ಸಿನಿಮಾ, ಸಾಹಿತ್ಯ ನಾಟಕಪ್ರಿಯರ ಕನಸಿನ ಕನವರಿಕೆಗಳಲ್ಲಿ ಮಾತ್ರ ಕಾಣಿಸಬಹುದು.
ಸಿನಿಮಾ ಕರ್ಮಿ ಋತ್ವಿಕ್ ಘಟಕ್ನ ನೆನಪಿನಲ್ಲಿ ಮಗನಿಗೆ ಋತ್ವಿಕ್ ಎಂದು ಹೆಸರಿಟ್ಟ ಸಿ.ಆರ್.ಸಿಂಹ ಪುತ್ರನ ನಿರ್ದೇಶನದಲ್ಲೇ ರಸಋಷಿ ಕುವೆಂಪು ಚಿತ್ರದಲ್ಲಿ ಅಭಿನಯಿಸಿದ್ದರು. ವರುಷಗಳ ಹಿಂದೆ ಅಪಘಾತಕ್ಕೆ ಸಿಲುಕಿ ಹಲವು ದಿನಗಳು ಹಾಸಿಗೆಯ ಮೇಲೆ ಇರಬೇಕಾಗಿ ಬಂದಾಗ ಗೆಳೆಯ, ಗಾಯಕ ಶಿವಮೊಗ್ಗ ಸುಬ್ಬಣ್ಣ ಕುವೆಂಪು ಬರೆದ ನೆನಪಿನ ದೋಣಿ ಪುಸ್ತಕವನ್ನು ಕೊಟ್ಟಿದ್ದರಂತೆ. ಅದನ್ನು ಓದುತ್ತಾ ಹೋದಂತೆ ಸಿಂಹ ಅವರಿಗೆ ಕುವೆಂಪು ಎಂಬ ರಸಋಷಿಯನ್ನು ರಂಗದ ಮೇಲೆ ಕರೆತರುವ ಐಡಿಯಾ ಹೊಳೆದಿತ್ತು. ನಂತರ ಅದು ಸಿನಿಮಾ ಕೂಡ ಆಗಿ ರೂಪತಾಳಿದ್ದು ಈಗ ಇತಿಹಾಸ.
ನಾಟಕಕಾರ, ನಿರ್ದೇಶಕ ಎಲ್ಲವೂ ಆಗಿದ್ದರೂ ಸಿಂಹ ಕೇವಲ ಗಂಭೀರ ಕಲಾತ್ಮಕ ಜಗತ್ತಿಗೆ ಸೀಮಿತವಾದವರಲ್ಲ. ನಮ್ಮ ಪಕ್ಕಾ ಕಮರ್ಷಿಯಲ್ ಸಿನಿ ಪ್ರೇಕ್ಷಕರಿಗೂ ಸಿಂಹ ಎಂದರೆ ಅಚ್ಚುಮೆಚ್ಚು. ಅವರ ವ್ಯಕ್ತಿತ್ವವಾಗಲೀ, ವಿಶಿಷ್ಠ ಕಂಠವಾಗಲೀ ಎಲ್ಲರಿಗೂ ಇಷ್ಟವಾಗುವಂಥದ್ದು. ಪೋಷಕ ನಟರಾಗಿಯೂ, ಹಾಸ್ಯನಟರಾಗಿಯೂ, ಹೊಡೆದಾಡುವ ಖಳನಟರಾಗಿಯೂ ಕಮರ್ಷಿಯಲ್ ಸಿನಿಮಾಗಳ ಒಡನಾಟ ಇಟ್ಟುಕೊಂಡವರು ಸಿಂಹ. 'ಸುಖಸಂಸಾರಕ್ಕೆ 12 ಸೂತ್ರಗಳು' ಚಿತ್ರದಲ್ಲಿ 'ಡೀಟೈಲ್ಸ್ ಮಾತ್ರ ಕೇಳ್ಬೇಡ' ಎನ್ನುವ ಕಾಮಿಡಿ ಪಾತ್ರಕ್ಕೂ, ಜೋಕೆ ಜೆ.ಕೆ ಎನ್ನುತ್ತಾ ನಾಯಕನಿಗೆ ಸೆಡ್ಡು ಹೊಡೆಯುವ, ಜೋಷಿ ನಿರ್ದೇಶನದ 'ನ್ಯೂಡೆಲ್ಲಿ' ಚಿತ್ರದ ಅಜಾನುಬಾಹು ಖಳನಾಯಕನಿಗೂ, ಅಜಗಜಾಂತರ ವ್ಯತ್ಯಾಸ ಎನ್ನುವಂತೆ ಮಾಡುವ ತಾಕತ್ತಿದ್ದ ನಟ ಸಿ.ಆರ್.ಸಿಂಹ.
ಆದರೆ ಖಳನಟರಾಗಿ ತೆರೆಯ ಮೇಲೆ ಇನ್ನಿಲ್ಲದ ಖದರ್ ತೋರಿಸುತ್ತಿದ್ದ ಸಿಂಹ ವೈಯಕ್ತಿಕವಾಗಿ ಮೃದು ಹೃದಯಿ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅದು ಡಾ.ರಾಜ್ಕುಮಾರ್ ಅಭಿನಯದ 'ಪರಶುರಾಮ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯ. ತಮ್ಮ ಕುಟುಂಬವನ್ನು ನಾಶಮಾಡಿದ ವಿಲನ್ಗಳ ಮೇಲೆ ಅಣ್ಣಾವ್ರು ಸೇಡು ತೀರಿಸಿಕೊಳ್ಳುವ ದೃಶ್ಯವನ್ನು ನಿರ್ದೇಶಕ ವಿ. ಸೋಮಶೇಖರ್ ಚಿತ್ರೀಕರಿಸುತ್ತಿದ್ದರು. ಈ ದೃಶ್ಯದಲ್ಲಿ ರಾಜ್ ಅವರು ವಿಲನ್ಗಳ ಮೇಲೆ ನಾಯಿಗಳನ್ನು ಛೂ ಬಿಟ್ಟು ಸಾಯಿಸುವ ಸನ್ನಿವೇಶ ಇತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಜೀಪಿನಲ್ಲಿ ನಾಯಕ, ಖಳನಾಯಕರನ್ನು ಎತ್ತಿಕೊಂಡು ಬಂದು ಅವರ ಮೇಲೆ ನಾಯಿ ಛೂ ಬಿಡುತ್ತಾನೆ ಎಂದು ನಿರ್ದೇಶಕರು ವಿವರಣೆ ಕೊಡುತ್ತಿದ್ದರು. ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡೇ ಚಿತ್ರೀಕರಣ ನಡೆಸಲಾಗುತ್ತಿತ್ತು. ಖಳನಾಯಕರಲ್ಲೊಬ್ಬರಾದ ಸಿ.ಆರ್.ಸಿಂಹ ಅವರಿಗೆ ನಿರ್ದೇಶಕರು ಸಿನಿಮಾದ ದೃಶ್ಯ ವಿವರಿಸುತ್ತಿದ್ದರು 'ನೋಡಿ ಸಾರ್, ಹೀಗೆ ನಾಯಿ ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತೆ. ನಂತರದ ಫ್ರೇಮ್ನಲ್ಲಿ ನಿಮ್ಮ ಮುಖ, ಮೈ ಎಲ್ಲ ರಕ್ತಸಿಕ್ತವಾಗಿರುವುದನ್ನು ತೋರಿಸುತ್ತೇನೆ. ಮೊದಲು ನಟ ಪೃಥ್ವಿರಾಜ್ ಅವರ ಸರದಿ. ನಂತರ ನಿಮ್ಮದು' ಎಂದರು. ಇದಕ್ಕೆ ಸಿಂಹ ಅವರ ಬಳಿ ಐಡಿಯಾ ಒಂದಿತ್ತು. ನಿರ್ದೇಶಕ ಸೋಮಶೇಖರ್ ಅವರಿಗೆ ಸಲಹೆ ಕೊಡುತ್ತ ಸರ್, ಹೇಗಿದ್ದರೂ ನಾಯಿ ಒಬ್ಬ ಖಳನ ಮೇಲೆ ಅಟ್ಯಾಕ್ ಮಾಡುವುದನ್ನು ಆಗಲೇ ತೋರಿಸುತ್ತೀರಿ. ಅದೇ ಶಾಟ್ ಅನ್ನು ನನ್ನ ಮೇಲೂ ಪ್ರಯೋಗಿಸಿದರೆ ರಿಪೀಟ್ ಆದ ಹಾಗಾಗುತ್ತದೆ. ಸೋ, ನನ್ನ ಸರದಿ ಬಂದಾಗ ನಾಯಿ ಹಾರುವುದನ್ನು ತೋರಿಸಿ. ನಂತರ ನಾನು ರಕ್ತಸಿಕ್ತ ಮುಖ ಹೊತ್ತು ಕಿರುಚುವುದನ್ನು ತೋರಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿ ಒಪ್ಪಿಸಿದರಂತೆ. ಆದರೆ ಈ ಮಾತಿನ ನಂತರ ಅಲ್ಲೇ ಇದ್ದ ರಾಜ್ಕುಮಾರ್ ಸಿಂಹ ಅವರನ್ನು 'ಏನು ಸಿಂಹ ಅವರು ನಿರ್ದೇಶಕರಿಗೆ ಏನೋ ಐಡಿಯಾ ಕೊಡ್ತಾ ಇದ್ದ ಹಾಗಿತ್ತು?' ಅಂತ ಪ್ರಶ್ನೆ ಹಾಕಿದಾಗ ಸಿ.ಆರ್.ಸಿಂಹ ಯಾವುದೇ ಎಗ್ಗಿಲ್ಲದೆ ತಮಗೆ ನಾಯಿಯನ್ನು ಕಂಡರೆ ಭಯ ಎಂದು ರಾಜ್ ಬಳಿ ಹೇಳಿಕೊಂಡರಂತೆ. ಅದನ್ನು ಕೇಳಿ ನಗುತ್ತಾ 'ಅಯ್ಯೋ, ಸಿಂಹ ಎಂದು ಹೆಸರಿಟ್ಟುಕೊಂಡಿದ್ದೀರಿ, ನಾಯಿಗೆ ಹೆದರೋದಾ?' ಅಂತ ಅಣ್ಣಾವ್ರು ಅಂದು ತಮಾಷೆ ಮಾಡಿದ್ದನ್ನು ನೆನಪಿಸಿಕೊಂಡು ಸಿ.ಆರ್.ಸಿಂಹ, ಹಲವು ಬಾರಿ ಆ ಪ್ರಶ್ನೆಗೆ ನನಗೆ ಈಗಲೂ ಉತ್ತರ ಸಿಕ್ಕಿಲ್ಲ ಎನ್ನುತ್ತಿದ್ದರು.