ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಜನಿ ಸಲಹೆ ಮೇರೆಗೆ ಅಂಬರೀಷ್ ಸಿಂಗಾಪುರಕ್ಕೆ, ಏರ್ ಆಂಬುಲೆನ್ಸ್ ಮೂಲಕ ಶಿಫ್ಟ್, ಸುಮಲತಾ ಸಾಥ್

ವಸತಿ ಸಚಿವ ಹಾಗೂ ಚಿತ್ರನಟ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ...

Rashmi Kasaragodu
Updated On : 1 Mar 2014, 1:20 am

ಕನ್ನಡಪ್ರಭವಾರ್ತೆ    ಬೆಂಗಳೂರು    ಫೆ.28
ವಸತಿ ಸಚಿವ ಹಾಗೂ ಚಿತ್ರನಟ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ.
ಅಂಬರೀಷ್ ಅವರಿಗೆ ಶ್ವಾಸಕೋಶದ ಸೋಂಕು ನಿವಾರಣೆಯಾಗಲು ಇನ್ನೂ 2 ವಾರದ ಚಿಕಿತ್ಸೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಆಧುನಿಕ ಚಿಕಿತ್ಸೆ ನೀಡುವ ಉದ್ದೇಶದಿಂದ ಅವರನ್ನು ಏರ್ ಆ್ಯಂಬುಲೆನ್ಸ್‌ನಲ್ಲಿ ಶನಿವಾರ ಬೆಳಗ್ಗಿನ ಜಾವ ಸಿಂಗಾಪುರಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ. ಶನಿವಾರ ಬೆಳಗ್ಗಿನ ಜಾವ 5 ಕ್ಕೆ ಏರ್‌ಆ್ಯಂಬುಲೆನ್ಸ್ ಬೆಂಗಳೂರಿನಿಂದ ಹೊರಡಲಿದೆ ಎಂದು ತಿಳಿದುಬಂದಿದೆ.
ಸಿಂಗಾಪುರದಿಂದಲೇ ಆಗಮಿಸಿದ ಏರ್ ಆ್ಯಂಬುಲೆನ್ಸ್‌ನಲ್ಲಿ ಇಬ್ಬರು ವೈದ್ಯರು, ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ, ಇಬ್ಬರು ಗೆಳೆಯರು, ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ್ ಅವರು ಅಂಬರೀಷ್ ಜತೆಗೆ ಏರ್ ಆ್ಯಂಬುಲೆನ್ಸ್‌ನಲ್ಲಿ ಇರಲಿದ್ದಾರೆ.
ವೈದ್ಯರ ಪ್ರಕಾರ ಅಂಬರೀಷ್ ಅವರಿಗೆ ಇನ್ನೂ ಎರಡು ವಾರ ವಿಶ್ರಾಂತಿ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿದೆ. ಅವರು ದೇಹಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಂಡು ಬಂದರೂ ಮಾತನಾಡಿಸುವ ನೆಪದಲ್ಲಿ ಹಿತೈಷಿಗಳು ಹಾಗೂ ಅಭಿಮಾನಿಗಳು ಬರುವುದರಿಂದ ತೊಂದರೆಯಾಗಬಹುದು ಎನ್ನಲಾಗಿದೆ. ಹೀಗಾಗಿ ಕುಟುಂಬ ವರ್ಗ ಬಯಸಿದರೆ ಸಿಂಗಾಪುರಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಏಮ್ಸ್‌ನಿಂದ ತಜ್ಞ ವೈದ್ಯರು: ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರ ಸೂಚನೆ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ನುರಿತ ವೈದ್ಯರೊಬ್ಬರು ಬೆಂಗಳೂರಿಗೆ ಆಗಮಿಸಿದ್ದಾರೆ. ಏಮ್ಸ್ ವೈದ್ಯ ಡಾ.ರಂಜಿತ್ ಬುಲೇರಿಯಾ ಅವರು ಅಂಬರೀಷ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜತೆ ಚರ್ಚೆ ನಡೆಸಿದರು. ನಂತರ ಅವರ ಆರೋಗ್ಯ ಪರಿಶೀಲನೆ ನಡೆಸಿದ ಡಾ.ಬುಲೇರಿಯಾ, ಚೇತರಿಕೆಗೆ ಇನ್ನು ಎರಡು ವಾರಗಳು ಬೇಕು ಎಂದು ಏಮ್ಸ್ ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.
ನಂತರ ಮಾತನಾಡಿದ ಅವರು, ಅಂಬ ರೀಷ್ ಆರೋಗ್ಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ವೈದ್ಯರ ಜತೆ ನಾನು ಸತತ ಸಂಪರ್ಕದಲ್ಲಿರುತ್ತೇನೆ. ಅವರ ದೇಹಸ್ಥಿತಿ ಈಗ ಸುಧಾರಿಸುತ್ತಿದೆ. ಶ್ವಾಸಕೋಶದ ಸೋಂಕಿನಿಂದ ಅಂಬರೀಷ್ ಇನ್ನೂ ಹೊರಬರಬೇಕಿದೆ. ಸದ್ಯಕ್ಕೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಎಂದಿದ್ದರು.             



ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಂಬರೀಷ್ ಅಭಿಮಾನಿಗಳು ವಿಕ್ರಮ್ ಆಸ್ಪತ್ರೆ ಹೊರಗೆ ಜಮಾಯಿಸಿದ್ದಾರೆ. ಅಂಬರೀಷ್ ಬೇಗ ಗುಣಮುಖರಾಗಲಿ ಎಂದು ಹಾರೈಸಿ ಆಸ್ಪತ್ರೆ ಎದುರಿಗೇ ಟೆಂಟ್ ಹಾಕಿ ಕುಳಿದ್ದ ಅಭಿಮಾನಿಗಳು, ಅಂಬರೀಷ್ ಅವರನ್ನು ನೋಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ, ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಅಂಬರೀಷ್ ಗುಣಮುಖರಾಗುತ್ತಿದ್ದಾರೆ ಎಂದು ನಮಗೆ ಹೇಳುತ್ತಿದ್ದರು. ಈಗ ದಿಢೀರನೆ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಅಂಬರೀಷ್ ಅವರನ್ನು ನೋಡಲು ನಮಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ನಮ್ಮ ಸಂಘದ ಅಧ್ಯಕ್ಷರಿಗಾದರೂ ಅವಕಾಶ ನೀಡಬೇಕು. ಅವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.




ಸಿಎಂ ಭೇಟಿ
ಮೆಟ್ರೋ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ವಿಕ್ರಂ ಆಸ್ಪತ್ರೆಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಷ್ ಅವರ ಆರೋಗ್ಯದ ವಿಚಾರಣೆ ನಡೆಸಿದರು. ಜೊತೆಗೆ ಸಿಂಗಾಪುರಕ್ಕೆ ಕಳುಹಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ತಪಾಸಣೆ ನಡೆಸಿದರು. ಸಿಎಂ ಜೊತೆಗೆ ಸಂಪುಟದ ಕೆಲ ಸಚಿವರು ಕೂಡ ಭೇಟಿ ನೀಡಿದ್ದರು.



ರಜನಿ ಸಲಹೆ
ಅಂಬರೀಷ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದೊಯ್ಯಲು ಖ್ಯಾತ ನಟ ಚಿತ್ರನಟ ರಜನಿಕಾಂತ್ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. ರಜನಿಕಾಂತ್ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ, ಅಂಬರೀಷ್ ಆರೋಗ್ಯ ವಿಚಾರಿಸಿದ್ದಾರೆ. ಜತೆಗೆ ಅಂಬರೀಷ್ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸಹಾಯ ಮಾಡುವುದಾಗಿ ಹೇಳಿದ್ದಾರೆ. ರಜನಿ ಸಲಹೆಯೇ ಅಂಬರೀಷ್ ಅವರನ್ನು ಸಿಂಗಾಪುರಕ್ಕೆ ಕರೆದುಕೊಂಡಲು ಹೋಗಲು ಕಾರಣ ಎನ್ನಲಾಗಿದೆ. ರಜನಿಕಾಂತ್ ಅವರು ಈ ಹಿಂದೆ ಸಿಂಗಾಪುರದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ಆಸ್ಪತ್ರೆಯಲ್ಲಿ ಅಂಬರೀಷ್‌ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂಬರೀಷ್ ಅನಾರೋಗ್ಯದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಮೂರು ದಿನಗಳಿಂದ ನಗರದಲ್ಲೇ ಇದ್ದು, ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement