ಅಗಸ್ಟಾ ಡೀಲ್ ರದ್ದು
ಇಟಲಿಯ ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿ ಜತೆಗಿನ 3600 ಕೋಟಿ ಮೊತ್ತದ ವಿವಿಐಪಿ ಕಾಪ್ಟರ್ ಡೀಲ್ ಅನ್ನು ಭಾರತ ಕೊನೆಗೂ ರದ್ದು...
-3600 ಕೋಟಿ ಡೀಲ್, 360 ಕೋಟಿ ಕಿಕ್‌ಬ್ಯಾಕ್ ನೀಡಿದ ಆರೋಪ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರ
ನವದೆಹಲಿ: ಇಟಲಿಯ ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿ ಜತೆಗಿನ 3600 ಕೋಟಿ ಮೊತ್ತದ ವಿವಿಐಪಿ ಕಾಪ್ಟರ್ ಡೀಲ್ ಅನ್ನು ಭಾರತ ಕೊನೆಗೂ ರದ್ದು ಮಾಡಿದೆ.
2010ರಲ್ಲಿ ನಡೆದ ಈ ವಿವಾದಾತ್ಮಕ ಒಪ್ಪಂದಕ್ಕೆ ಸಂಬಂಧಿಸಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಹಾಗೂ ಪ್ರಧಾನಿ ಮನಮೋಹನ ಸಿಂಗ್ ಅವರ ನಡುವೆ ಬುಧವಾರ ಬೆಳಗ್ಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಒಪ್ಪಂದದಂತೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಭಾರತಕ್ಕೆ 12 ಹೆಲಿಕಾಪ್ಟರ್‌ಗಳನ್ನು ಪೂರೈಸಬೇಕಿತ್ತು. ಆದರೆ, ಈ ಒಪ್ಪಂದ ಕುದುರಿಸಲು ಕಂಪನಿ 360 ಕೋಟಿ ಕಿಕ್ ಬ್ಯಾಕ್ ನೀಡಿದ ಆರೋಪ ಎದುರಿಸುತ್ತಿದೆ. ಇದು ಒಪ್ಪಂದದ ಪೂರ್ವಷರತ್ತಿನ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.
3 ಹೆಲಿಕಾಪ್ಟರ್ ಪೂರೈಕೆ: ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯು ಈಗಾಗಲೇ 3 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಸಿದೆ. ಅಲ್ಲದೆ, ಒಪ್ಪಂದದ ಶೇ.40ರಷ್ಟು ಹಣವನ್ನು ಭಾರತ ಈಗಾಗಲೇ ಕಂಪನಿಗೆ ಪಾವತಿಸಿದೆ. ಒಂದು ವೇಳೆ ಈ ಡೀಲ್ ರದ್ದಾದರೆ ಕಂಪನಿ ಭಾರಿ ನಷ್ಟಕ್ಕೆ ಗುರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ.
ನವೆಂಬರ್‌ನಲ್ಲೇ ಆರಂಭ: ಈ ಒಪ್ಪಂದ ರದ್ದುಪಡಿಸುವ ಪ್ರಕ್ರಿಯೆ ಕಳೆದ ವರ್ಷ ಆರಂಭವಾಗಿತ್ತು. ಕಿಕ್‌ಬ್ಯಾಕ್ ಕ್ರಮವು 'ಒಪ್ಪಂದದ ಷರತ್ತುಗಳ ಸ್ಪಷ್ಟ ಉಲ್ಲಂಘನೆ' ಎಂದು ಅಟಾರ್ನಿ ಜನರಲ್ ಹಾಗೂ ಕಾನೂನು ಸಚಿವಾಲಯವು ರಕ್ಷಣಾ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ನವೆಂಬರ್‌ನಲ್ಲೇ ಒಪ್ಪಂದ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿತ್ತು.
ಏನಿದು ಹಗರಣ?
ವಿವಿಐಪಿಗಳ ಪ್ರಯಾಣಕ್ಕಾಗಿ 12 ಎಡಬ್ಲ್ಯು 101 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಪೂರೈಸಲು ಇಟಲಿಯ ಫಿನ್‌ಮೆಕಾನಿಕಾ ಕಂಪನಿಯ ಸಹಸಂಸ್ಥೆ ಅಗಸ್ಟಾ ವೆಸ್ಟ್‌ಲ್ಯಾಂಡ್ 2010ರಲ್ಲಿ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಡೀಲ್ ಕುದುರಿಸಲು ಕಂಪನಿಯು 3 ಮಧ್ಯವರ್ತಿಗಳ ಮೂಲಕ 360 ಕೋಟಿ ಕಿಕ್‌ಬ್ಯಾಕ್ ನೀಡಿತ್ತು. ಆರೋಪಕ್ಕೆ ಸಂಬಂಧಿಸಿ ಕಂಪನಿಯ ಸಿಇಒ ಗಿಸುಪ್ಪೆ ಓರ್ಸಿರನ್ನು ಇಟಲಿ ಪೊಲೀಸರು ಬಂಧಿಸಿದ್ದರು. ಈ ಹಗರಣದಲ್ಲಿ ಐಎಎಫ್ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ, ಅವರ ಕುಟುಂಬ, ಕೆಲ ರಾಜಕಾರಣಿಗಳ ಹೆಸರೂ ಕೇಳಿ ಬಂದಿತ್ತು.