ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಟೋ, ಸಬ್ಸಿಡಿರಹಿತ ಅಡುಗೆ ಅನಿಲ ದರ ಭಾರಿ ಏರಿಕೆ

ಹೊಸ ವರ್ಷದ ಸಂಭ್ರಮಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಆಟೋ ಚಾಲಕರು ಮತ್ತು ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ...

Mainashree
Updated On : 1 Jan 2014, 10:41 am

ನವದೆಹಲಿ/ಮಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಆಟೋ ಚಾಲಕರು ಮತ್ತು ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ಶಾಕ್ ಆಗಿದೆ. ಅದೇನೆಂದರೆ, ಆಟೋ ಮತ್ತು ಕಾರ್‌ಗಳಿಗೆ ಬಳಕೆ ಮಾಡುವ ಗ್ಯಾಸ್ ಲೀಟರ್‌ಗೆ 11.13ರಷ್ಟು ಹೆಚ್ಚಾಗಿದ್ದರೆ, ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ದರ (14.2 ಕೆಜಿ) 220ರಷ್ಟು ಹೆಚ್ಚಳ ಮಾಡಿ ತೈಲ ಕಂಪನಿಗಳು ಆದೇಶ ಹೊರಡಿಸಿವೆ. ಇದರಿಂದಾಗಿ ಸಬ್ಸಿಡಿರಹಿತ ಸಿಲಿಂಡರ್ ದರ ಇನ್ನು ಮುಂದೆ 1,241 ಆಗಲಿದೆ. ಏಕಾಎಕಿ ಗ್ಯಾಸ್ ದರ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರತಿಭಟನೆ ನಡೆಸಿದವು .
ಗ್ಯಾಸ್ ದರ ಹೆಚ್ಚಳ: ಹೊಸ ವರ್ಷದ ಸಂಭ್ರಮ ಮುಕ್ತಾಯವಾಗುತ್ತಿದ್ದಂತೆ ಆಟೋ ಮತ್ತು ಕಾರುಗಳಿಗೆ ಬಳಕೆ ಮಾಡುವ ಗ್ಯಾಸ್ ದರ ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ಗೆ  11.13ರಷ್ಟು ಹೆಚ್ಚಿಸಲಾಗಿದೆ. ಗ್ಯಾಸ್ ಅಳವಡಿಸಿಕೊಂಡವರು ಎಂಜಿನ್ ಕ್ಷಮತೆ ಕುಸಿದು, ಮೈಲೇಜ್ ಕಡಿಮೆಯಾದ ಬಗ್ಗೆ ತಲೆಬಿಸಿ ಮಾಡಿಕೊಳ್ಳುತ್ತಿದ್ದರೆ, ಒಂದೇ ದಿನದಲ್ಲಿ ಗ್ಯಾಸ್ 11.13 ಏರಿಕೆಯಿಂದ ಪೂರ್ಣ ಕುಸಿದು ಹೋಗಿದ್ದಾರೆ.
ಕಡ್ಡಾಯವಾಗಿತ್ತು:  2008ರಿಂದ ಆಟೋರಿಕ್ಷಾಗಳು ಪೆಟ್ರೋಲ್‌ನಿಂದ ಗ್ಯಾಸ್‌ಗೆ ಪರಿವರ್ತಿಸುವುದನ್ನು ಸಾರಿಗೆ ಇಲಾಖೆ ಕಡ್ಡಾಯ ಮಾಡಿತ್ತು. ಆರಂಭದಲ್ಲಿ ಗ್ಯಾಸ್ ಅಳವಡಿಕೆ ಯಂತ್ರಕ್ಕೆ 15 ಸಾವಿರಕ್ಕೂ ಮಿಕ್ಕಿ ಖರ್ಚಾಗುವುದರಿಂದ ರಿಕ್ಷಾ ಚಾಲಕರು ಹಿಂದೇಟು ಹಾಕುತ್ತಿದ್ದರು. ಕಡ್ಡಾಯ ಮಾಡಿದ ಬಳಿಕ ಗ್ಯಾಸ್ ದರ ಪೆಟ್ರೋಲ್‌ಗಿಂತ ಕಡಿಮೆ ಮತ್ತು ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಗ್ಯಾಸ್‌ಗೆ ಪರಿವರ್ತನೆ ಮಾಡಿಸಿದ್ದರು. ಮಾರುಕಟ್ಟೆಗೆ ಹೊಸ ಮಾಡೆಲ್ ಕಾರ್‌ಗಳು ಗ್ಯಾಸ್ ಎಂಜಿನ್ ಸಹಿತವಾಗಿ ಬರುತ್ತಿವೆ. ಗ್ಯಾಸ್ ಫಿಟ್ ಮಾಡಿದ ಲಕ್ಷಾಂತರ ಕಾರುಗಳಿವೆ.          

ಗ್ಯಾಸ್ ಅಗ್ಗ ಎಂದು ಕಾರುಗಳ ಎಂಜಿನ್‌ಗೆ ಗ್ಯಾಸ್ ಅಳವಡಿಸಿದವರು ಈಗ ಪರಿತಪಿಸುತ್ತಿದ್ದಾರೆ. ಅತ್ತ ಎಂಜಿನ್ ಹಾಳಾಯಿತು, ಗ್ಯಾಸ್ ದರ ಪೆಟ್ರೋಲ್ ಹತ್ತಿರವೇ ಬಂದಿದೆ. ಗ್ಯಾಸ್‌ಗೆ ಲೀಟರ್‌ಗೆ 5 ಕಿ.ಮೀ. ಕಡಿಮೆ ಮೈಲೇಜ್. ಹೀಗಾಗಿ ಮತ್ತೆ ಪೆಟ್ರೋಲ್ ಹಾಕಿಸಿಯೇ ಕಾರು ಓಡಿಸುತ್ತೇನೆ ಎನ್ನುತ್ತಾರೆ ಗ್ಯಾಸ್ ಎಂಜಿನ್ ಇರುವ ಕಾರು ಚಾಲಕ ಸಂಜೀವ.
'ಸಾರಿಗೆ ಇಲಾಖೆ ಕಡ್ಡಾಯ ಮಾಡಿದಾಗ ಒಪ್ಪಿದೆವು. ಆಟೋ ರಿಕ್ಷಾ ಪೆಟ್ರೋಲ್‌ನಲ್ಲಿ ಮೈಲೇಜ್ ಲೀ. 25ರಿಂದ ಗರಿಷ್ಠ 30ಕಿ.ಮೀ. ನೀಡುತ್ತದೆ. ಆದರೆ ಗ್ಯಾಸ್‌ಗೆ 20 ಕಿ.ಮೀ. ಮಾತ್ರ. ಎಂಜಿನ್ ಆಯುಷ್ಯವೂ ಕಡಿಮೆ. ವಾಪಸ್ ಪೆಟ್ರೋಲ್‌ಗೆ ಹೋಗಲು ನಮಗೆ ಸಾಧ್ಯವಿಲ್ಲ. ಗ್ಯಾಸ್ ಹಾಕಿದರೆ ಎಲ್ಲ ದೃಷ್ಟಿಕೋನದಲ್ಲಿಯೂ ಪೆಟ್ರೋಲ್‌ಗಿಂತ ದುಬಾರಿ. ನಾವೀಗ ತ್ರಿಶಂಕು ಸ್ವರ್ಗದಲ್ಲಿದ್ದೇವೆ' ಎಂಬುದು ರಿಕ್ಷಾ ಚಾಲಕರ ಅಳಲು.
ಗ್ಯಾಸ್ ಸಿಲಿಂಡರ್ ದುಬಾರಿ:  ಮತ್ತೊಂದೆಡೆ, ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ. 14.2 ಕೆಜಿ ತೂಕದ ಪ್ರತಿ ಸಿಲಿಂಡರ್‌ನ ದರವನ್ನು 220ರಷ್ಟು ಹೆಚ್ಚಳ ಮಾಡಲಾಗಿದೆ. ಹೀಗಾಗಿ ಈ ಸಿಲಿಂಡರ್ ದರ 1,241 ಆಗಲಿದೆ. ಈವರೆಗೆ ಸಬ್ಸಿಡಿರಹಿತ ಸಿಲಿಂಡರ್ 1,021ಕ್ಕೆ ಮಾರಾಟವಾಗುತ್ತಿತ್ತು.
ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ಬೇರೆ ಬೇರೆ ನಗರಗಳಲ್ಲಿ ಸಿಲಿಂಡರ್ ದರದಲ್ಲಿ ಬದಲಾವಣೆಯಾಗಲಿದೆ. ಇದೇ ವೇಳೆ, ವಾಣಿಜ್ಯಿಕ ಸಿಲಿಂಡರ್‌ಗಳ ದರದಲ್ಲೂ ಸುಮಾರು 350ರಷ್ಟು ಏರಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್ ದರ 2013 ಆಗಲಿದೆ. ಈವರೆಗೆ ಇದರ ದರ 1,660 ಆಗಿತ್ತು.
ಸಬ್ಸಿಡಿರಹಿತ ಸಿಲಿಂಡರ್ ದರ ಏರಿಕೆಯಾಗುತ್ತಿರುವುದು ಕಳೆದ ತಿಂಗಳಿಂದ ಇದು 3ನೇ ಬಾರಿ. ಎಲ್‌ಪಿಜಿ ಡೀಲರ್‌ಗಳು ಹಾಗೂ ವಿತರಕರ ಕಮಿಷನ್ ಹೆಚ್ಚಳದ ನೆಪದಲ್ಲಿ ಡಿ.1ರಂದು ಸಿಲಿಂಡರ್ ದರವನ್ನು 63, ಡಿ.11ರಂದು 3.50ರಷ್ಟು ಏರಿಕೆ ಮಾಡಲಾಗಿತ್ತು.



ಒಂದೇ ದಿನದಲ್ಲಿ 11 ಗ್ಯಾಸ್ ದರ ಏರಿಕೆಯಿಂದ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ. ರಿಕ್ಷಾ ಬಾಡಿಗೆ ದರ ಏರಿಕೆಯಾಗದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬಾಡಿಗೆ ದರ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.
- ಐವನ್ ಡಿ ಸೋಜಾಮಂಗಳೂರು ಮಹಾನಗರ ಆಟೋರಿಕ್ಷಾ ಸಂಘದ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement