ಇಂಡಿಕಾಗೆ ಗುದ್ದಿದ ಕಾರುಗಳು; 6 ಸಾವು
ಚನ್ನರಾಯಪಟ್ಟಣ: ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಬುಧವಾರ ರಾತ್ರಿ ಮೂರು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ 6 ಮಂದಿ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂಡಿಕಾ ಕಾರ್‌ಗೆ ಹಿಂಭಾಗ ಹಾಗೂ ಮುಂಭಾಗದಿಂದ ಎರಡು ಕಾರುಗಳು ಗುದ್ದಿದ್ದರಿಂದ ಇಂಡಿಕಾ ಕಾರ್‌ನಲ್ಲಿದ್ದ 2 ವರ್ಷದ ಹೆಣ್ಣು ಮಗು, ನಾಲ್ವರು ಪುರುಷರು ಮತ್ತು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನೆರಡು ಕಾರುಗಳಲ್ಲಿದ್ದ 5 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರ ದೇಹಗಳು ಗುರುತು ಸಿಗದಷ್ಟು ನಜ್ಜುಗುಜ್ಜಾಗಿವೆ. ಹೀಗಾಗಿ ಮೃತರು ಎಲ್ಲಿಯವರು, ಯಾರು ಎಂಬ ವಿವರ ಲಭ್ಯವಾಗಿಲ್ಲ. ಗಾಯಾಳುಗಳನ್ನು ಕುಂದಾಪುರ ಪ್ರಿಯ (20), ವಿಜಯ್ (21), ಪ್ರಿಯ (30), ತುಮಕೂರಿನ ದೊಡ್ಡಗುಣಿಯ ಪ್ರಕಾಶ್ (25), ಗುಬ್ಬಿಯ ಸಂತೋಷ್ (24) ಎಂದು ಗುರುತಿಸಲಾಗಿದೆ.
ಹ್ಯಾಂಡ್‌ಪೋಸ್ಟ್ ಬಳಿ ಇರುವ ಬೈಪಾಸ್‌ನಲ್ಲಿ ರಾತ್ರಿ 7.20ರ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರಿಗೆ ಇಂಡಿಕಾ ಕಾರು ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ಕಡೆಯಿಂದ ಬಂದ ಹೊಂಡಾ ಸಿಟಿ ಕಾರು ಹಾಗೂ ಹಾಸನದಿಂದ ಬರುತ್ತಿದ್ದ ಫೋರ್ಡ್ ಕಾರು ಇಂಡಿಕಾ ಕಾರಿಗೆ ಹಿಂಬದಿ ಹಾಗೂ ಮುಂಬದಿಯಲ್ಲಿ ಜೋರಾಗಿ ಡಿಕ್ಕಿ ಹೊಡೆದಿವೆ.
ಅಪಘಾತದ ತೀವ್ರತೆಗೆ ಇಂಡಿಕಾ ಕಾರ್‌ನಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ. ಇಂಡಿಕಾ ಕಾರ್‌ನ ಹಿಂಭಾಗ ಹಾಗೂ ಮುಂಭಾಗದ ನಂಬರ್ ಪ್ಲೇಟ್‌ಗಳು ಕೂಡ ಜಜ್ಜಿ ಹೋಗಿವೆ. ಕಾರಿನಲ್ಲಿದ್ದ ಶವಗಳನ್ನು ಹೊರತೆಗೆಯಲು ಒಂದು ಗಂಟೆಗೂ ಹೆಚ್ಚು ಕಾಲ ಪರದಾಡಬೇಕಾಯಿತು.