ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗ್ರಾಮೀಣಾಭಿವೃದ್ಧಿ ವಿವಿ ಪ್ರಕ್ರಿಯೆ ಚುರುಕು

Mainashree
Updated On : 2 Jan 2014, 12:19 pm

ಗ್ರಾಮೀಣಾಭಿವೃದ್ಧಿ ಕುರಿತಂತೆ ಸಮಗ್ರ ಮುನ್ನೋಟ ತಯಾರಿಕೆ, ಸಂಸೋಧನೆ. ಬಿಪಿಎಲ್ ಹಾಗೂ ಶೋಷಿತ ಹಿಂದುಳಿದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಹಾಗೂ ಸಂಶೋಧನೆ. ಬಡತನ, ಅನಕ್ಷರತೆಯ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಸಂಶೋಧನೆ ಹಮ್ಮಿಕೊಳ್ಳುವುದು.

ಶಿವಮೊಗ್ಗ/ಮೈಸೂರು:
ಸರ್ಕಾರದ ಪ್ರಸ್ತಾವಿತ ಹೊಸ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿ ರಾಷ್ಟ್ರಮಟದಲ್ಲಿ ಹೆಸರು ಮಾಡಿರುವ ಧರ್ಮಸ್ಥಳ ರುಡ್‌ಸೆಟ್, ಹುಲಕೋಟಿಯ ಕೆವಿಕೆ, ಬೆಂಗಳೂರಿನ ಐಸೆಕ್ ಮಾರ್ಗದರ್ಶನ ಪಡೆಯಲು ತೀರ್ಮಾನಿಸಲಾಗಿದೆ.
ಹೊಸ ವಿಶ್ವವಿದ್ಯಾಲಯ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ 2013ರ ಕೊನೆ ದಿನ ತಜ್ಞರ ಸಮಿತಿ ರಚಿಸಿದ್ದು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ.

ವಿಶ್ವವಿದ್ಯಾಲಯ ಹಿನ್ನೆಲೆ: 2013-14ನೇ ಸಾಲಿನ ಆರ್ಥಿಕ ಆಯವ್ಯಯದಲ್ಲಿ ರಾಜ್ಯದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿವಿಧ ಯೋಜನೆಗಳ ವಾರ್ಷಿಕ ಒಟ್ಟಾರೆ 10 ಸಾವಿರ ಕೋಟಿ ರುಪಾಯಿ ಹಣ ವಿನಿಯೋಗಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ವಿವಿಧ ಅಭಿವೃದ್ಧಿ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆ ಪ್ರಕ್ರಿಯೆಯನ್ನು ಗ್ರಹಿಸದಿದ್ದರೆ, ಇಲಾಖೆಯ ಕಾರ್ಯಕ್ರಮಗಳ ಗರಿಷ್ಠ  ಪ್ರಯೋಜನವಾಗಲಿ ಅಥವಾ ಅಂತಹ ಯೋಜನೆಗಳಿಗೆ ಕಾರ್ಯಕ್ರಮಗಳಿಗೆ ಸಮರ್ಥವಾಗಿ ಹಣ ಖರ್ಚು ಮಾಡುವುದಾಗಲಿ ಸಾದ್ಯವಾಗುವುದಿಲ್ಲ. ಅದೇ ರೀತಿ ರಾಜ್ಯದ ಜನಸಂಖ್ಯೆಯಲ್ಲಿ ಸೇಕಡಾ 65ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ಹೂಡಿದವರಾಗಿರುತ್ತಾರೆ. ಹೀಗಾಗಿ ಕೆಲವು ಧ್ಯೇಯೋದ್ದೇಶದೊಂದಿಗೆ ಹೊಸ ವಿವಿ ಸ್ಥಾಪಿಸಲು ಉದ್ದೇಶಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಗ್ರಾಮೀಣ ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಕ್ರಿಯೆ ಹಾಗೂ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ರಾಜ್ಯದ ವಿವಿಧ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಅನೇಕ ಉತ್ತಮ ಪದ್ಧತಿಗಳ ತಾತ್ವಿಕವಾಗಿ ವಿಶ್ಲೇಷಣೆಗೊಂಡು ಅವುಗಳಿಗೆ ರಾಜ್ಯಮಟ್ಟದಲ್ಲಿ ಮಹತ್ವ ದೊರಕಿಸುವುದು.

ಸಂಶೋಧನೆ: ಗ್ರಾಮೀಣಾಭಿವೃದ್ಧಿ ಕುರಿತಂತೆ ಸಮಗ್ರ ಮುನ್ನೋಟ ತಯಾರಿಸುವುದು ಹಾಗೂ ಸಂಸೋಧನೆ ನಡೆಸುವುದು. ಬಿಪಿಎಲ್ ಹಾಗೂ ಶೋಷಿತ ಹಿಂದುಳಿದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಹಾಗೂ ಸಂಶೋಧನೆ ಮಾಡುವುದು.
ಗ್ರಾಮೀಣ ಪ್ರದೇಶಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಿಂದ ಅಭಿವೃದ್ಧಿಗೆ ಸಂಪನ್ಮೂಲ ತರಲು ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮ ವಹಿಸುವುದು. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸುವುದು. ಬಡತನ ಮತ್ತು ಅನಕ್ಷರತೆಯ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಸಂಶೋಧನೆ ಹಮ್ಮಿಕೊಳ್ಳುವುದು. ಸರ್ಕಾರದ ಪೈಲಟ್ ಪ್ರಾಜೆಕ್ಟ್‌ಗಳನ್ನು ಪಡೆದು ಅವುಗಳ ಅಧ್ಯಯನ ಮಾಡಿ ಸಂಬಂಧಪಟ್ಟವರಿಗೆ ವರದಿ ಕೊಡುವುದು.

ಉದ್ಯೋಗಾವಕಾಶ: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿ ವಲಸೆ ಹೋಗುವುದನ್ನು ತಡೆಗಟ್ಟಲು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವುದು, ಕೃಷಿ ಮತ್ತು ಕೃಷಿಯೇತರ ಕ್ಷೇತ್ರವನ್ನು ಅಧ್ಯಯನಕ್ಕೆ ಒಳಪಡಿಸುವುದು. ನಿರುದ್ಯೋಗ ನಿವಾರಣೆಗೆ ಉದ್ಯಮ ಶೀಲತನೆಯನ್ನು ಅಭಿವೃದ್ಧಿ ಪಡಿಸುವುದು ಹೇಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕುಡಿವ ನೀರು, ನೈರ್ಮಲ್ಯ, ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ಉದ್ಯೋಗ ಖಾತ್ರಿ, ಮಹಿಳಾ ಸಬಲೀಕರಣ, ಗ್ರಾಮೀಣ ನಿರುದ್ಯೋಗ ನಿವಾರಣೆ ಮೊದಲಾದ ವಲಯಗಳಲ್ಲಿ ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತಿದೆ. ಅವುಗಳ ಅಧ್ಯಯನ ಹಾಗೂ ಮೌಲ್ಯಮಾಪನ ಮಾಡುವುದು.
ಗ್ರಾಮ ಪ್ರದೇಶದಲ್ಲಿ ಪಾರಂಪರಿಕವಾದ ಜಲ ಸಂಪನ್ಮೂಲ ರಕ್ಷಣೆ, ಅಂತರ್ಜಲದ ಸದುಪಯೋಗ, ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಕ್ರೋಡೀಕರಿಸಲು ಅಧ್ಯಯನ, ಸಲಹೆ ಮತ್ತು ಸಹಕಾರ ನೀಡುವುದು ಇತ್ಯಾದಿ.
ಈ ವಿಚಾರಗಳ ಬಗ್ಗೆ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ವಿಶ್ವವಿದ್ಯಾಲಯ ಪರ್ಯಾಲೋಚಿಸಬೇಕು. ಈ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾಗಿರಬೇಕೆ ಅಥವಾ ಕೋರ್ಸ್‌ಗಳನ್ನು ಪ್ರಾರಂಭಿಸಬೇಕೆ ಹಾಗೆಯೇ ಪ್ರಾರಂಭಿಸುವ ಅಧ್ಯಯನ ವಿಷಯಗಳಾವುವು, ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ ಇವುಗಳಲ್ಲಿ ತಕ್ಷಣ ಯಾವುದನ್ನು ಆರಂಭಿಸಬೇಕು, ಇತರೆ ವಿವಿಗಳೊಂದಿಗೆ ಸಮನ್ವಯತೆ ಹೇಗಿರಬೇಕು ಎಂಬುದರ ಕುರಿತು ತಜ್ಞರ ತಂಡದಿಂದ ಶಿಫಾರಸು ಅಪೇಕ್ಷಿಸಲಾಗಿದೆ. ಹಾಗೆಯೇ ವಿಶ್ವವಿದ್ಯಾಲಯ ಕರ್ನಾಟಕದ ಯಾವ ಭಾಗದಲ್ಲಿದ್ದರೆ ಉತ್ತಮ ಎಂಬುದರ ಬಗ್ಗೆಯೂ ಸಲಹೆ ಕೇಳಲಾಗಿದೆ.

ತಜ್ಞರ ಸಮಿತಿ ರಚನೆ
ವಿವಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಎರಡು ತಿಂಗಳೊಗಾಗಿ ಸರ್ಕಾರಕ್ಕೆ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ (ಅಧ್ಯಕ್ಷರು),  ಐಟಿ ತಜ್ಞ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಅಜೀಂ ಪ್ರೇಮ್‌ಜಿ, ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಎ.ಎನ್. ಯಲ್ಲಪ್ಪರೆಡ್ಡಿ, ಐಎಎಸ್ ನಿವೃತ್ತ ಅಧಿಕಾರಿ ಆರ್.ಬಿ. ಅಗವಾನೆ, ಕೃಷಿ ಮಿಷನ್ ಅಧ್ಯಕ್ಷ ಡಾ.ಎಸ್.ಎ. ಪಾಟೀಲ್, ಧಾರವಾಡದ ಕರ್ನಾಟಕ ವಿವಿ ಕುಲಪತಿ ಡಾ. ವಾಲೇಕಾರ್, ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞ ಪ್ರಕಾಶ್ ಭಟ್, ಕುಡಿಯುವ ನೀರಿನ ತಜ್ಞ ಡಾ. ಅರುಣ್ ಪಾಟೀಲ್, ಡಾ.ಸಿ.ಎಸ್. ಪಾಟೀಲ್, ಟೀಮ್‌ಲೀಸ್ ಸಂಸ್ಥೆಯ ನೀತಿ ಶರ್ಮ, ಹುಲಕೋಟಿ ಕೆವಿಕೆ ನಿರ್ದೇಶಕರು, ಧರ್ಮಸ್ಥಳದ ರುಡ್‌ಸೆಟ್ ನಿರ್ದೇಶಕರು, ಬೆಂಗಳೂರಿನ ಐಸೆಕ್ ನಿರ್ದೇಶಕರು (ಸದಸ್ಯರು), ಸಯ್ಯದ್ ಜಮಾಲ್ (ಸದಸ್ಯ ಕಾರ್ಯದರ್ಶಿ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement