ಡಿಕೆಶಿ, ಬೇಗ್ ಸಚಿವ ಸಂಪುಟಕ್ಕೆ ಸೇರ್ಪಡೆ ಬೆನ್ನಲ್ಲೇ ಇತರ ಆಕಾಂಕ್ಷಿಗಳ ಒತ್ತಡ ತೀವ್ರ
ಅತೃಪ್ತರ ತೀವ್ರ ಅಸಮಾಧಾನದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟವನ್ನು ಬುಧವಾರ ವಿಸ್ತರಿಸಿದ್ದಾರೆ...
ಕನ್ನಡಪ್ರಭವಾರ್ತೆ ಬೆಂಗಳೂರು ಜ.1
ಅತೃಪ್ತರ ತೀವ್ರ ಅಸಮಾಧಾನದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟವನ್ನು ಬುಧವಾರ ವಿಸ್ತರಿಸಿದ್ದಾರೆ.
ಸರ್ಕಾರ ಅಸ್ತಿತ್ವಕ್ಕೆ ಬಂದ ಗಳಿಗೆಯಿಂದಲೂ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದ ಡಿ.ಕೆ. ಶಿವಕುಮಾರ್ ಮತ್ತು ಆರ್. ರೋಷನ್ಬೇಗ್ ಅವರು ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಸಿದ್ದರಾಮಯ್ಯ ಅವರ ಸಂಪುಟ ಸೇರಿದ್ದಾರೆ. ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವಕುಮಾರ್ ಮತ್ತು ರೋಷನ್ಬೇಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಜೆ 5.15ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇಬ್ಬರಿಗೂ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ಸಿದ್ದರಾಮಯ್ಯ ಅವರ ಸಂಪುಟ ಸದಸ್ಯರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿವಕುಮಾರ್ ಹಾಗೂ ರೋಶನ್ ಬೇಗ್ ಅವರ ಕುಟುಂಬ ಸದಸ್ಯರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ಶ್ರೀನಿವಾಸ್ ಪ್ರಸಾದ್, ಟಿ.ಬಿ.ಜಯಚಂದ್ರ, ಸ್ಪೀಕರ್ ಕಾಗೋಡು ತಿಮ್ಮಪ್ಪ, ಎಂ.ವಿ.ರಾಜಶೇಖರನ್, ತನ್ವೀರ್ ಸೇಠ್, ನರೇಂದ್ರಸ್ವಾಮಿ, ಪಿ.ಎಂ.ಅಶೋಕ್, ಡಿ.ಕೆ.ಸುರೇಶ್ ಬಿ.ಎಲ್.ಶಂಕರ್, ರಮೇಶ್ಕುಮಾರ್, ಕೆ.ಬಿ.ಕೋಳಿವಾಡ, ಸಿ.ಎಸ್. ನಾಡಗೌಡ, ಮಾಲಕರೆಡ್ಡಿ, ಮೋಟಮ್ಮ, ವೀರಣ್ಣ ಮತ್ತಿಕಟ್ಟಿ, ಪ್ರಿಯಾಂಕ ಖರ್ಗೆ, ಸಚಿವರಾದ ಅಂಬರೀಶ್, ಶರಣ ಪ್ರಕಾಶ್ ಪಾಟೀಲ್ ಮೊದಲಾದವರು ಭಾಗವಹಿಸಿದ್ದರು.
ವಿಜಯೋತ್ಸವ : ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರಣ ಬಂದ ಎಲ್ಲರಿಗೂ ಪ್ರವೇಶ ಇರಲಿಲ್ಲ. ಹೀಗಾಗಿ ಶಿವಕುಮಾರ್ ಮತ್ತು ಬೇಗ್ ಅವರ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ರಾಜಭವನ ಮುಂಭಾಗ ಸೇರಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಶಿವಕುಮಾರ್ ಅವರನ್ನು ಅಭಿಮಾನಿಗಳು ಎತ್ತಿ ಕುಣಿದಾಡಿದರು. ಬಳಿಕ ಉಭಯ ನಾಯಕರನ್ನು ಕೆಪಿಸಿಸಿ ಕಚೇರಿವರೆಗೆ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಭುಗಿಲೆದ್ದ ಅಸಮಾಧಾನ : ತಾತ್ವಿಕ ಭಿನ್ನಾಭಿಪ್ರಾಯವಿದ್ದರೂ ಹೈಕಮಾಂಡ್ ಸೂಚನೆ ಪಾಲಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದರು. ಆದರೆ ಈ ಬೆಳವಣಿಗೆ ಕಾಂಗ್ರೆಸ್ನಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ. ಈಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವಿರುದ್ಧ ಬಹಿರಂಗವಾಗಿ ಆಕ್ರೋಶ ಪ್ರಕಟಿಸಿದ್ದಾರೆ. ಹೈದ್ರಾಬಾದ್-ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ದಟ್ಟವಾಗಿ ಕೇಳಿ ಬಂದಿದೆ. ಇಷ್ಟು ಮಾತ್ರವಲ್ಲ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕುರುಬ ಸಮುದಾಯದ ಶಾಸಕರು ಕೂಡಾ ಸಂಪುಟದಲ್ಲಿ ತಮಗೆ ಅವಕಾಶ ಸಿಗದೇ ಇರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಾಗಿ ಹೊಸ ವರ್ಷದ ಆರಂಭದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ರಾಜಕೀಯ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.
ಭೇಟಿ ನಿರಾಕರಣೆ: ಒಂದೆಡೆ ಶಿವಕುಮಾರ್ ಹಾಗೂ ಬೇಗ್ ಸಂಪುಟ ಸೇರ್ಪಡೆ ಖಾತ್ರಿಯಾಗುತ್ತಿದ್ದಂತೆ ಅತೃಪ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ತೋಡಿಕೊಳ್ಳಲಾರಂಭಿಸಿದರು. ಡಾ.ಮಾಲಕರೆಡ್ಡಿ, ಕೆ.ಬಿ.ಕೋಳಿವಾಡ, ಬಸವರಾಜ ರಾಯರೆಡ್ಡಿ, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ನಾಡಗೌಡ, ಮಾಲೀಕಯ್ಯ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಹೊಸ ವರ್ಷಕ್ಕೆ ಶುಭ ಕೋರುವ ನೆಪದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಮುಂದಾದರು.
ಆದರೆ ಯಾವುದೇ ಕಾರಣಕ್ಕೂ ಅತೃಪ್ತ ಶಾಸಕರ ಜತೆ ಚರ್ಚೆಗೆ ಒಪ್ಪದ ಅವರು, ಮಧ್ಯಾಹ್ನ 3 ಗಂಟೆಯವರೆಗೆ ಯಾರ ಜತೆಯೂ ಮಾತನಾಡದೇ ಇರಲು ನಿರ್ಧರಿಸಿರುವುದಾಗಿ ಆಪ್ತರ ಮೂಲಕ ಹೇಳಿ ಕಳುಹಿಸಿದರು. ಅಧಿಕಾರಿಗಳು ಹಾಗೂ ಬೆಂಬಲಿಗರ ಭೇಟಿಯನ್ನೂ ನಿರಾಕರಿಸಿದರು.
ಎಸ್ಎಂಕೆ ಭೇಟಿ : ಆದರೆ ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಜತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿದ ಡಿ.ಕೆ.ಶಿವಕುಮಾರ್ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದರು. ಮಾತ್ರವಲ್ಲ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿವಕುಮಾರ್, ನನಗೆ ರಾಜಭವನಕ್ಕೆ ಬಾ ಎಂದು ಕರೆ ಬಂದಿದೆ. ಪ್ರಮಾಣ ವಚನ ಸ್ವೀಕರಿಸುತ್ತೇನೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಸಾಯಂಕಾಲ 5 ಗಂಟೆ ನಂತರ ಮಾತನಾಡುತ್ತೇನೆ ಎನ್ನುವ ಮೂಲಕ ಇನ್ನಷ್ಟು ನಿಗೂಢತೆ ಹುಟ್ಟು ಹಾಕಿದರು.
ಹೈಕಮಾಂಡ್ಗೆ ಪತ್ರ : ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲದೇ ಇದ್ದರು ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಶಿವಕುಮಾರ್ ಮತ್ತು ಬೇಗ್ ಸಚಿವರಾಗಿರುವುದು ಅತೃಪ್ತರ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ಗೆ ಪತ್ರ ಬರೆದು ತಮ್ಮ ಅಸಮಾಧಾನ ಪ್ರಕಟಿಸಲು, ಮಾಲೀಕಯ್ಯ ಗುತ್ತೇದಾರ್, ಸಿ.ಎಸ್.ನಾಡಗೌಡ ಅವರು ನಿರ್ಧರಿಸಿದ್ದಾರೆ.
ಒತ್ತಡಕ್ಕೆ ಸಿಲುಕಿರಲಿಲ್ಲ-ಸಿಎಂ
ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾದ ಕ್ಷಣದಿಂದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಸಿದ್ದಾಮಯ್ಯ, ಬುಧವಾರವೂ ಇದೇ ತಂತ್ರಕ್ಕೆ ಶರಣಾದರು. ಹೀಗಾಗಿ ರಾಜಭವನದೊಳಗೆ ಛಾಯಾಗ್ರಾಹಕರು ಮತ್ತು ಟಿವಿ ವಾಹಿನಿಗಳ ಕ್ಯಾಮರಾಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಪತ್ರಿಕಾ ವರದಿಗಾರರ ಜತೆ ಕೆಲ ಕ್ಷಣ ಮಾತನಾಡಿದ ಸಿದ್ದರಾಮಯ್ಯ, ' ನಾನು ಯಾವುದೇ ಒತ್ತಡಕ್ಕೆ ಸಿಲುಕಿ ಸಂಪುಟ ವಿಸ್ತರಣೆ ಮಾಡಿಲ್ಲ. ರಾಜಕೀಯ ಅನಿವಾರ್ಯತೆ ಎದುರಾಗಿರಲಿಲ್ಲ' ಎಂದರು. ಸಂಪುಟ ವಿಸ್ತರಣೆ ಸಹಜ ಪ್ರಕ್ರಿಯೆ. ಕಳಂಕಿತರು ಎಂಬ ಕಾರಣಕ್ಕೆ ಇವರಿಬ್ಬರನ್ನು ಹೊರಗೆ ಇಟ್ಟಿರಲಿಲ್ಲ. ನಾನು ಸರ್ಕಾರ ರಚಿಸುವಾಗ 30 ಸಚಿವರು ಪ್ರಮಾಣ ಸ್ವೀಕರಿಸಿದರು. ಈಗ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಎರಡು ಭರ್ತಿ ಮಾಡಿಕೊಂಡಿದ್ದೇವೆ. ಅತೃಪ್ತಿ ವ್ಯಕ್ತಪಡಿಸಿದವರ ಜತೆ ಮಾತನಾಡಿದ್ದೇನೆ ಎಂದರು. ಆದರೆ ಹೇಗೋ ನಿಭಾಯಿಸಿ ಸರ್ ಎಂದು ಪತ್ರಕರ್ತರು ಹೇಳಿದಾಗ, ಸಿದ್ದರಾಮಯ್ಯ ವಿಷಾದದ ನಗೆ ನಕ್ಕು ಮುಂದಡಿ ಇಟ್ಟರು.
ಯಾರೂ ಕಳಂಕಿತರಲ್ಲ: ಪರಮೇಶ್ವರ
ಒಂದೆಡೆ ಕಳಂಕಿತರ ಸಂಪುಟ ಸೇರ್ಪಡೆ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತ್ರ ನಮ್ಮ ಪಕ್ಷದಲ್ಲಿ ಯಾರೂ ಕಳಂಕಿತರಿಲ್ಲ ಎಂದು ಹೇಳಿದ್ದಾರೆ. ಶಿವಕುಮಾರ್ ಹಾಗೂ ರೋಶನ್ ಬೇಗ್ ಅವರನ್ನು ಯಾವುದೇ ಸಂವಿಧಾನಿಕ ಸಂಸ್ಥೆ ಕಳಂಕಿತರು ಎಂದು ಘೋಷಿಸಿಲ್ಲ. ಹೀಗಾಗಿ ಸಂಪುಟ ಸೇರ್ಪಡೆ ಸರಿಯೇ ? ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಸಂತೋಷ್ ಲಾಡ್ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೊಡಿ ಎಂದು ಪಕ್ಷ ಕೇಳಿರಲಿಲ್ಲ ಎಂದು ತಿಳಿಸಿದ್ದಾರೆ.
ಕಪಿಲ್ ಸಿಬಲ್ ನೀಡಿದ ಕ್ಲೀನ್ಚಿಟ್
ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಯಾವುದೇ ಕಾನೂನು ತೊಡಕಿಲ್ಲ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಹೈಕಮಾಂಡ್ಗೆ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ನಡೆದಿದೆ ಂದು ತಿಳಿದು ಬಂದಿದೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರೊಬ್ಬರಿಂದ ಕಾನೂನು ಸಲಹೆ ಪಡೆದ ನಂತರ ಸಿಬಲ್ ಈ ಅಭಿಪ್ರಾಯಕ್ಕೆ ಬಂದರು. ಹೀಗಾಗಿ ಸಂಪುಟ ವಿಸ್ತರಣೆ ನಡೆಸಿ ಎಂದು ಹೈಕಮಾಂಡ್ ಸೂಚನೆ ನೀಡಿತು ಎಂದು ತಿಳಿದು ಬಂದಿದೆ. ಆದರೆ ಈ ರೀತಿ ಒಪ್ಪಿಗೆ ನೀಡುವ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯಿಂದ ಉದ್ಭವವಾಗುವ ಸಮಸ್ಯೆಗಳಿಗೆ ನಾನು ಜವಾಬ್ದಾರನಾಗಲಾರೆ ಎಂದು ಸಿದ್ದರಾಮಯ್ಯ ಹೈಕಮಾಂಡ್ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ.ಕೆ. ಶಿವಕುಮಾರ್
1962ರ ಮೇ 15ರಂದು ಕನಕಪುರದಲ್ಲಿ ಜನಿಸಿದ ಡಿ.ಕೆ. ಶಿವಕುಮಾರ್ ಕೃಷಿಕ ಕುಟುಂಬದವರು. ಬಿ.ಕಾಂ. ಪದವೀಧರರಾಗಿರುವ ಇವರು ವ್ಯಾಪಾರ, ಶಿಕ್ಷಣ ಕ್ಷೇತ್ರದಲ್ಲಿ ಕೈಯಾಡಿಸಿದ್ದು, ಚಲನಚಿತ್ರ ಪ್ರದರ್ಶಕರಾಗಿಯೂ ಕಾರ್ಯನಿರ್ವಹಿಸಿದ್ದರು. 1985ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಅವರು, 1989ರಿಂದ ಸತತ ಆರು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಹಿಂದೆ 1991ರಲ್ಲಿ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಬಂಧೀಖಾನೆ ಮತ್ತು ಗೃಹರಕ್ಷಕ ಖಾತೆ ರಾಜ್ಯ ಸಚಿವರಾಗಿ, 1999ರಲ್ಲಿ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಹಕಾರ ಸಚಿವರಾಗಿ, 2002ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಯಾಧ್ಯಕ್ಷರಾಗಿ, ಬೆಂಗಳೂರು ವಿವಿ ಸೆನೆಟ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು.
ರೋಷನ್ ಬೇಗ್
1953ರ ಜುಲೈ 15ರಂದು ಜನಿಸಿದ್ದ ರೋಷನ್ ಬೇಗ್ ಅವರು ಎಲ್ಎಲ್ಬಿ ಅರ್ಧಕ್ಕೆ ಬಿಟ್ಟು ರಾಜಕೀಯ ಪ್ರವೇಶಿಸಿದವರು. 1985ರಲ್ಲಿ ಜನತಾ ಪಕ್ಷದ ಶಾಸಕರಾಗಿ ಮೊಟ್ಟ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು, ಜನತಾ ಪಕ್ಷ ಒಡೆದು ಹೋದಾಗ ಕಾಂಗ್ರೆಸ್ ಸೇರಿದರು. 1994ರಿಂದ ಸತತ ಆರನೇ ಬಾರಿ ಕಾಂಗ್ರೆಸ್ನಿಂದ ವಿಧಾನಸಭೆ ಪ್ರವೇಶಿಸಿದ ಬೇಗ್, 1985ರಲ್ಲಿ ಮೀನುಗಾರಿಕೆ, ಬಂದರು ಮತ್ತು ವಕ್ಫ್ ಸಚಿವರಾಗಿ, 1994ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಕ್ಫ್ ಸಚಿವರಾಗಿ, ಗೃಹ, ಪ್ರವಾಸೋದ್ಯಮ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಎಸ್.ಎಂ. ಕೃಷ್ಣ ಮಂತ್ರಿಮಂಡಲದಲ್ಲಿ ಪ್ರವಾಸೋದ್ಯಮ ಮತ್ತು ಹಜ್ ಸಚಿವರಾಗಿ ಕೆಲಸ ಮಾಡಿದ್ದರು.
ಒತ್ತಡಕ್ಕೆ ಸಿಲುಕಿರಲಿಲ್ಲ: ಸಿಎಂ
ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾದ ಕ್ಷಣದಿಂದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬುಧವಾರವೂ ಇದೇ ತಂತ್ರಕ್ಕೆ ಶರಣಾದರು. ಹೀಗಾಗಿ ರಾಜಭವನದೊಳಗೆ ಛಾಯಾಗ್ರಾಹಕರು ಮತ್ತು ಟಿವಿ ವಾಹಿನಿಗಳ ಕ್ಯಾಮರಾಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು. ಮಾಧ್ಯಮಗಳ ಜತೆ ಮಾತನಾಡಿದ ಸಿಎಂ, 'ನಾನು ಯಾವುದೇ ಒತ್ತಡಕ್ಕೆ ಸಿಲುಕಿ ಸಂಪುಟ ವಿಸ್ತರಣೆ ಮಾಡಿಲ್ಲ. ರಾಜಕೀಯ ಅನಿವಾರ್ಯತೆ ಎದುರಾಗಿರಲಿಲ್ಲ' ಎಂದರು.
ಸಂಪುಟ ವಿಸ್ತರಣೆ ಸಹಜ ಪ್ರಕ್ರಿಯೆ. ಕಳಂಕಿತರು ಎಂಬ ಕಾರಣಕ್ಕೆ ಇವರಿಬ್ಬರನ್ನು ಹೊರಗೆ ಇಟ್ಟಿರಲಿಲ್ಲ. ನಾನು ಸರ್ಕಾರ ರಚಿಸುವಾಗ 30 ಸಚಿವರು ಪ್ರಮಾಣ ಸ್ವೀಕರಿಸಿದರು. ಈಗ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಎರಡು ಭರ್ತಿ ಮಾಡಿಕೊಂಡಿದ್ದೇವೆ. ಅತೃಪ್ತಿ ವ್ಯಕ್ತಪಡಿಸಿದವರ ಜತೆ ಮಾತನಾಡಿದ್ದೇನೆ ಎಂದರು.
ಆದರೆ ಹೇಗೋ ನಿಭಾಯಿಸಿ ಸರ್ ಎಂದು ಪತ್ರಕರ್ತರು ಹೇಳಿದಾಗ, ಸಿದ್ದರಾಮಯ್ಯ ವಿಷಾದದ ನಗೆ ನಕ್ಕು ಮುಂದಡಿ ಇಟ್ಟರು.
ಯಾವುದೇ ಖಾತೆ ನಿಭಾಯಿಸುವೆ
ಪಕ್ಷಕ್ಕಾಗಿ ಅನೇಕ ವರ್ಷ ದುಡಿದಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟಾಗಲೂ ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಈಗ ಮಂತ್ರಿಯಾಗಿದ್ದೇನೆ. ಯಾವುದೇ ಖಾತೆ ಕೊಟ್ಟರೂ ಅದನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ.
- ರೋಷನ್ ಬೇಗ್, ನೂತನ ಸಚಿವ
ದ್ವೇಷ ಸಾಧಿಸುವುದಿಲ್ಲ
ಯಾರ ಬಗ್ಗೆಯೂ ದ್ವೇಷ ಇಟ್ಟುಕೊಳ್ಳದೆ ಕೆಲಸ ಮಾಡುತ್ತೇನೆ. 9 ವರ್ಷಗಳ ನಂತರ ಮತ್ತೆ ಮಂತ್ರಿಯಾಗಿದ್ದೇನೆ. ಹೀಗಾಗಿ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗೊತ್ತಿ ಪಕ್ಷ ಹೇಳಿದಂತೆ ಕೇಳುತ್ತೇನೆ. ಕಾಂಗ್ರೆಸ್, ಸಿಎಂ ಕೈ ಬಲಪಡಿಸುವುದೇ ನನ್ನ ಗುರಿ.
- ಡಿ.ಕೆ.ಶಿವಕುಮಾರ್, ನೂತನ ಸಚಿವ
ಎದ್ದು ಓಡಾಡಲು ಆಗದೇ ಇರುವವರು, ಕಣ್ಣು ಕಾಣಿಸದವರು, ಕಿವಿ ಕೇಳಿಸದವರಿಗೂ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಈಗ ವಿಸ್ತರಣೆ ಮಾಡುವ ಅಗತ್ಯವಿರಲಿಲ್ಲ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಬಗ್ಗೆ ಹೈಕಮಾಂಡ್ಗೆ ಪತ್ರ ಬರೆಯುತ್ತೇನೆ.
- ಮಾಲೀಕಯ್ಯ ಗುತ್ತೇದಾರ್