ಬದಲಿ ರಕ್ತ ನೀಡಿದ ವೈದ್ಯ ನಿರ್ದೋಷಿ!
ಬೆಂಗಳೂರು: ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿ ರಕ್ತ ಬದಲು ಮಾಡಿ ರಾಜೇಶ್ವರಿ ಎಂಬ ಯುವತಿ ಸಾವಿಗೆ ಕಾರಣರಾಗಿದ್ದ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ, ದಾದಿ ನಿರ್ದೋಷಿಗಳಂತೆ..!
ಇದು ಆಶ್ಚರ್ಯವಾದರೂ ಸತ್ಯ. ಹೀಗೆಂದು ತೀರ್ಪು ನೀಡಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಧಿಕಾರಿ ವಿ.ಬಿ. ಪಾಟೀಲ್ ಅವರು.
ಘಟನೆ ನಡೆದ 2 ತಿಂಗಳಲ್ಲೇ ಡಾ. ಸುರೇಶ್ ಹಾಗೂ ದಾದಿ ಲಲಿತಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವಜಾಗೊಂಡಿರುವ ಮತ್ತಿಬ್ಬರು ದಾದಿಯರಾದ ಭಾಗ್ಯಲಕ್ಷ್ಮಿ ಹಾಗೂ ರೇಣುಕಾ ಸದ್ಯ ರಜೆಯಲ್ಲೇ ಇದ್ದಾರೆ.
ಏಕೆ ಹೀಗಾಯ್ತು: ತನಿಖೆ ವೇಳೆ ರಾಜೇಶ್ವರಿಗೆ ನೀಡಿದ್ದ ರಕ್ತದ ಮಾದರಿಯನ್ನು ವಿಕ್ಟೋರಿಯಾ ಆಸ್ಪತ್ರೆ ಕಳುಹಿಸುವಂತೆ ಸೂಚಿಸಲಾಗಿತ್ತು.
ಕಿತಾಪತಿ ಮಾಡಿದ ವೈದ್ಯರು ರಾಜೇಶ್ವರಿಗೆ ನೀಡಿದ್ದ ಬಿ ಪಾಸಿಟಿವ್ ರಕ್ತದ ಬಾಟೆಲ್ಲನ್ನು ತನಿಖೆಗೆ ಕಳಿಸುವ ಬದಲು ನಾವು ಓ ಪಾಸಿಟಿವ್ ರಕ್ತ ನೀಡಿದ್ದೇವೆ ಎಂದು ಹೇಳಿ ಬೇರೆ ರಕ್ತದ ಬಾಟೆಲ್ ಕಳುಹಿಸಿದ್ದರು. (ರಕ್ತದ ಬಾಟೆಲ್ 1097(ಬಿ) ಬದಲು ಐಶ್ವರ್ಯ ಎಂಬ ಯುವತಿಗೆ ನೀಡಿದ್ದ ಬಾಟೆಲ್ 1091(ಓ) ತನಿಖೆಗೆ ಕಳುಹಿಸಿದ್ದರು).
1091ನಲ್ಲಿದ್ದ ಓ ರಕ್ತ ಪರೀಕ್ಷಿಸಿದ ತನಿಖಾಧಿಕಾರಿಗಳು ಸರಿಯಾದ ರಕ್ತ ನೀಡಿದ್ದಾರೆ. ವೈದ್ಯರದ್ದು ತಪ್ಪಿಲ್ಲ ಎಂದು ವರದಿ ನೀಡಿದ್ದಾರೆ. ಆದರೆ ನಿಜವಾಗಿ 1097 ನಂಬರ್ನ ರಕ್ತದ ಬಾಟೆಲ್ ನೀಡುವ ಬದಲು ಹೀಗೆ ಮಾಡಿ ತನಿಖಾಧಿಕಾರಿಗಳಿಗೆ ಯಾಮಾರಾಸಿದ್ದಾರೆ.
ಸಿಹಿ ಹಂಚಿದ ವೈದ್ಯ: ಈ ಸಂತಸದಲ್ಲಿ ವೈದ್ಯ ಸುರೇಶ್ ಆಸ್ಪತ್ರೆ ಸಿಬ್ಬಂದಿಗೆ ಸಿಹಿ ಹಂಚಿ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಕ್ತದ ಬಾಟೆಲ್ ಬದಲಿಸಿರುವ ಸುದ್ದಿ ತಿಳಿದ ಜಯಲಕ್ಷ್ಮಿ, ಕುಟುಂಬ ಸದಸ್ಯರು ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದರು.
ಪರಿಶೀಲಿಸಿದ ಸಚಿವರು ಪ್ರಕರಣದ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸುವ ಭರವಸೆ ನೀಡಿದ್ದಾರೆ. ಈ ಸಂಬಂಧ ಜಯಲಕ್ಷ್ಮಿ ಅವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದು, ಶೀಘ್ರದಲ್ಲಿ ಪ್ರಕರಣ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಕನ್ನಡ ಪ್ರಭ ಪತ್ರಿಕೆಗೆ ಪ್ರತಿಕ್ರಿಯಿಸಿದ ರಾಜೇಶ್ವರಿಯ ಸಹೋದರಿ ಜಯಲಕ್ಷ್ಮಿ, ರಾಜೇಶ್ವರಿ ಮೃತಪಟ್ಟು 2 ತಿಂಗಳಲ್ಲೇ ಆ ಘಟನೆಗೆ ಕಾರಣರಾದ ವೈದ್ಯ, ದಾದಿ ಕೆಲಸಕ್ಕೆ ಹಾಜರಾಗಿರುವುದು ತಿಳಿದಿದೆ.
ಈ ಬಗ್ಗೆ ಪೊಲೀಸರನ್ನು ವಿಚಾರಿಸಿದಾಗ ಇನ್ನೂ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿಲ್ಲ. ತನಿಖೆ ಸಂಪೂರ್ಣ ಆಗಿಲ್ಲ ಹಾಗಾಗಿ ಚಾರ್ಜ್ಶೀಟ್ ಸಲ್ಲಿಸಲು ತಡವಾಗಿದೆ. ಆದಷ್ಟು ಬೇಗ ಚಾರ್ಜ್ಶೀಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಹಿಂದಿನ ಘಟನೆ
ಲಗ್ಗೆರೆ ನಿವಾಸಿ ಬಿ.ವಿ. ಗೋವಿಂದಪ್ಪ ಹಾಗೂ ಸುಭದ್ರಮ್ಮರ 7 ಮಕ್ಕಳಲ್ಲಿ ರಾಜೇಶ್ವರಿ ಕೊನೆಯವರು. ಮನೆ ಸಮೀಪದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ರಕ್ತಹೀನತೆಯಿಂದ ಬಳಲುತ್ತಿದ್ದ ಕಾರಣ ಆಗಾಗ ಆಸ್ಪತ್ರೆಗೆ ಹೋಗಿ ರಕ್ತ ಹಾಕಿಸಿಕೊಂಡು ಬರುತ್ತಿದ್ದರು. ಆಸ್ಪತ್ರೆ ಹಾಗೂ ಮನೆಗೆ ದೂರ ಎಂಬ ಕಾರಣಕ್ಕೆ ವೈಯಾಲಿಕಾವಲ್ನಲ್ಲಿನ ಸಹೋದರಿ ಮನೆಯಲ್ಲಿದ್ದರು. ರಕ್ತ ಹಾಕಿಸಿಕೊಳ್ಳಲು ಕೆ.ಸಿ. ಜನರಲ್ ಆಸ್ಪತ್ರೆಗೆ ಹೋಗಿದ್ದರು. ಆಕೆಯನ್ನು ಪರೀಕ್ಷಿಸಿದ ಡಾ. ಸುರೇಶ್ ರಕ್ತ ನೀಡುವಂತೆ ಸಿಬ್ಬಂದಿಗೆ ಸೂಚಿಸಿ ಕೆಲಸ ಮುಗಿಯುವ ಮುನ್ನ ಮನೆಗೆ ಹೋಗಿದ್ದರು. ಅಲ್ಲಿನ ಸಿಬ್ಬಂದಿ 'ಒ' ಪಾಸಿಟಿವ್ ಬದಲು 'ಬಿ' ಪಾಸಿಟಿವ್ ರಕ್ತ ನೀಡಿದ್ದರು. ಬಾಟೆಲ್ ಮೇಲಿನ ಲೇಬಲ್ ಗಮನಿಸಿದ ರಾಜೇಶ್ವರಿ ಪೋಷಕರಿಗೆ ಮಾಹಿತಿ ನೀಡಿದ್ದರು. ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದರು.
ಆರೋಪ ಪಟ್ಟಿ ಸಲ್ಲಿಸುತ್ತೇವೆ...
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ನೀಡಿರುವ ಮಾಹಿತಿಗೂ ತಮಗೂ ಸಂಬಂಧವಿಲ್ಲ. ಎಲ್ಲಾ ವರದಿಗಳು ಬಂದಿದ್ದು, ಇನ್ನು 1 ವರದಿಗಾಗಿ ಕಾಯುತ್ತಿದ್ದೇವೆ. ಅವರು ಆರೋಪಿಗಳೇ ಅಲ್ಲವೇ ಎಂಬುದನ್ನು ಈಗಲೇ ಬಹಿರಂಗಪಡಿಸುವುದಿಲ್ಲ. ಆದರೆ ಅತಿಶೀಘ್ರದಲ್ಲಿ ಆರೋಪಪಟ್ಟಿ ಸಲ್ಲಿಸುವುದು ಖಚಿತ ಎಂದರು.
ಶಾಂತ ತಮ್ಮಯ್ಯ