ಅಡುಗೆ ಅನಿಲದ ಸಬ್ಸಿಡಿ ಬರುವ 'ಆಧಾರ'ವಿಲ್ಲ
ಬೆಂಗಳೂರು: ಆಧಾರ್ ವಿವರವನ್ನು ಅಡುಗೆ ಅನಿಲ ವಿತರಕರಿಗೆ ಹಾಗೂ ಬ್ಯಾಂಕ್ಗೆ ಸಲ್ಲಿಸಿದರೆ ಅಡುಗೆ ಅನಿಲದ ಸಬ್ಸಿಡಿ ಹಣ ಗ್ರಾಹಕರಿಗೆ ಸಿಕ್ಕೇ ಸಿಗುತ್ತದೆ ಎಂಬುದು ಖಚಿತವಿಲ್ಲ..!
ಏಕೆಂದರೆ, ಹಾಗೆ ಸಂಬಂಧಿತ ಬ್ಯಾಂಕ್ ಹಾಗೂ ಅನಿಲ ವಿತರಕರಿಗೆ ಆಧಾರ್ ವಿವರ ಸಲ್ಲಿಸಿದ ಮೇಲೂ ಸಬ್ಸಿಡಿ ಹಣ ಲಭಿಸದೇ ಇರುವುದಕ್ಕೆ ಈಗ 'ಆಧಾರ' ಸಿಕ್ಕಿದೆ..!
ಇಂಡೇನ್ ಅಡುಗೆ ಅನಿಲದ ಗ್ರಾಹಕರೊಬ್ಬರಿಗೆ ಇಂಥದ್ದೊಂದು ಅನುಭವವಾಗಿದ್ದು, ಸಬ್ಸಿಡಿ ಹಣ ಮಾತ್ರವಲ್ಲ, ಅದು ಏಕೆ ಸಿಕ್ಕಿಲ್ಲ ಎಂಬ ಬಗ್ಗೆಯೂ ಸಂಬಂಧಿತರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ.
ಆಗಿದ್ದೇನು?: ಕೆಂಪಾಪುರ ವಾಯುನಂದನ ಬಡಾವಣೆಯ ಎಂ. ಶ್ರೀನಿವಾಸ ರೆಡ್ಡಿ ಅವರು ನಾಗಶೆಟ್ಟಿಹಳ್ಳಿ ಆರ್ಎಂವಿ 2ನೇ ಹಂತ ಸಪ್ತಗಿರಿ ಬಡಾವಣೆಯಲ್ಲಿರುವ ವೀರೇಶ್ ಗ್ಯಾಸ್ ಏಜೆನ್ಸಿಯಲ್ಲಿ ಇಂಡೇನ್ ಗ್ರಾಹಕರು. ಅಡುಗೆ ಅನಿಲ ಸಬ್ಸಿಡಿ ಪಡೆಯಲು ಆಧಾರ್ ವಿವರ ಸಲ್ಲಿಸಬೇಕು ಎಂಬ ಸಂದೇಶ ಬರುತ್ತಿದ್ದ ಹಿನ್ನೆಲೆಯಲ್ಲಿ ನವಂಬರ್ನಲ್ಲಿ ತಮ್ಮ ಖಾತೆ ಇರುವ ಬ್ಯಾಂಕ್ ಹಾಗೂ ತಮಗೆ ಅನಿಲ ಒದಗಿಸುತ್ತಿರುವ ವಿತರಕರಿಗೂ ವಿವರ ಸಲ್ಲಿಸಿದ್ದಾರೆ. ಅವರು ಇತ್ತೀಚೆಗೆ ಬುಕ್ ಮಾಡಿದ್ದ ಗ್ಯಾಸ್ ಸಿಲಿಂಡರ್ ಅನ್ನು ಡಿ.6ರಂದು ವಿತರಕರು ಒದಗಿಸಿದ್ದಾರೆ. ಆದರೆ ಆ ಬಾಬ್ತು 1,041 ಬಿಲ್ ಬಂದಿತ್ತು. ಜತೆಗೆ, ಬಿಲ್ನಲ್ಲಿ ಇದು ನಿಮ್ಮದು 11ನೇ ಸಿಲಿಂಡರ್ ಹಾಗೂ ನೋ ಸಬ್ಸಿಡಿ ಟು ಬ್ಯಾಂಕ್ ಎಂಬ ಒಕ್ಕಣೆ ಬೇರೆ. ಬಿಲ್ ಮೊತ್ತ ಪಾವತಿಸಿ ವಿತರಕರಲ್ಲಿಗೆ ಹೋಗಿ ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗದ ಕಾರಣ ಅವರು 'ಕನ್ನಡಪ್ರಭ'ಕ್ಕೆ ವಿಷಯ ತಿಳಿಸಿದ್ದಾರೆ.
ಸಬ್ಸಿಡಿ ಸಿಗಲೇಬೇಕು: ನಿಯಮಗಳ ಪ್ರಕಾರ ಒಬ್ಬ ಗ್ರಾಹಕರಿಗೆ ವರ್ಷಕ್ಕೆ 9 ಸಿಲಿಂಡರ್ಗೆ ಸಬ್ಸಿಡಿ ನೀಡಲಾಗುತ್ತದೆ. ಅದಕ್ಕೂ ಮೀರಿ ಸಿಲಿಂಡರ್ ಪಡೆದಲ್ಲಿ ಅದಕ್ಕೆ ಸಬ್ಸಿಡಿ ಇರುವುದಿಲ್ಲ. ಸಬ್ಸಿಡಿ ಹಣ ಆಧಾರ್ ಸಂಖ್ಯೆ ಆಧಾರದ ಮೇಲೆ ಗ್ರಾಹಕರ ಬ್ಯಾಂಕ್ ಖಾತೆಗೆ ಬರುತ್ತದೆ. ಇದು ಹಂತ ಹಂತವಾಗಿ ಜಾರಿಗೆ ಬಂದಿದ್ದು, ಬೆಂಗಳೂರಿನಲ್ಲಿ ಡಿ.1 ರಿಂದ ಜಾರಿಯಾಗಿದೆ. (ಆಧಾರ್ ವಿವರ ಸಲ್ಲಿಸದವರಿಗೆ ಫೆಬ್ರವರಿವರೆಗೂ ಅವಕಾಶವಿದೆ.) ಈ ನಡುವೆ ಆಧಾರ್ ಸಂಖ್ಯೆ ಸಲ್ಲಿಸಿದವರಿಗೆ ಸಬ್ಸಿಡಿ ಹಣ ನೇರ ಅವರ ಖಾತೆಗೆ ಹೋಗಿ ಸೇರುತ್ತಿದೆ ಎನ್ನಲಾಗುತ್ತಿದೆ. ಆ ಪ್ರಕಾರ ಸಬ್ಸಿಡಿ ಹಣ ರೆಡ್ಡಿ ಅವರ ಬ್ಯಾಂಕ್ ಖಾತೆಗೆ ಸೇರಬೇಕಿತ್ತು. ಅಲ್ಲದೆ, ಇದು ಅವರ 6ನೇ ಸಿಲಿಂಡರ್ ಅಷ್ಟೇ. ಹಾಗಾಗಿ, ಅವರಿಗೆ ಸಬ್ಸಿಡಿ ಸಿಗಲೇಬೇಕು.
'ಪ್ರಿಯ ಇಂಡೇನ್ ಗ್ರಾಹಕರೇ.. ನಿಮ್ಮ ಖಾತೆಯಲ್ಲಿ ಅಡುಗೆ ಅನಿಲದ ಸಬ್ಸಿಡಿ ಪಡೆಯಬೇಕಿದ್ದರೆ ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆ ವಿವರವನ್ನು ಅನಿಲ ವಿತರಕರು ಮತ್ತು ಬ್ಯಾಂಕ್ಗೆ ಸಲ್ಲಿಸಿ..' ಗ್ರಾಹಕರ ಮೊಬೈಲ್ ಫೋನ್ಗಳಿಗೆ ಬರುತ್ತಿರುವ ಈ ಎಸ್ಎಂಎಸ್ ಪ್ರಕಾರ ಆಧಾರ್ ವಿವರ ಸಲ್ಲಿಸಿದ ಎಲ್ಲರಿಗೂ ಸಬ್ಸಿಡಿ ಹಣ ಸಿಗುತ್ತಿದೆಯೇ ಎಂಬ ಬಗ್ಗೆ ಸಂಶಯವಿದೆ. ಏಕೆಂದರೆ ಈಗಾಗಲೇ ಒಬ್ಬ ಗ್ರಾಹಕರಿಗೆ ಆಧಾರ್ ವಿವರ ಸಲ್ಲಿಸಿದಾಗ್ಯೂ ಸಬ್ಸಿಡಿ ಹಣ ಜಮೆಯಾಗಿಲ್ಲ. ಆ ಬಗ್ಗೆ ವಿತರಕರಲ್ಲಿ ಕೇಳಿದರೆ ನಾವು ಸಬ್ಸಿಡಿ ನಮೂದು ಮಾಡಿದ್ದೇವೆ, ಬರುತ್ತೆ, ಬ್ಯಾಂಕ್ನಲ್ಲಿ ವಿಚಾರಿಸಿ ಎನ್ನುತ್ತಾರೆ. ಬ್ಯಾಂಕ್ನಲ್ಲಿ ಕೇಳಿದರೆ ಸಬ್ಸಿಡಿ ಬಂದಿದ್ದರೆ ನೇರ ನಿಮ್ಮ ಖಾತೆಗೆ ಜಮೆಯಾಗಿರುತ್ತದೆ ಎನ್ನುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿಗೆ ವಿತರಕರು ನೀಡಿರುವ ಇಂಡೇನ್ ಕೇಂದ್ರ ಕಚೇರಿ ಸಂಖ್ಯೆ(22239473)ಗೆ ಕರೆ ಮಾಡಿದರೆ ಸಿಗುವ ಉತ್ತರ 'ನೀವು ಕರೆ ಮಾಡಿರುವ ಸಂಖ್ಯೆ ದುರಸ್ತಿಯಲ್ಲಿದೆ'. ಇಂಥ ಸಂದರ್ಭಗಳಲ್ಲಿ ಯಾರನ್ನು ಕೇಳಬೇಕು, ಉತ್ತರ ನೀಡಬೇಕಾದವರು ಯಾರು ಎಂಬುದು ಸದ್ಯ ಎಲ್ಪಿಜಿ ಗ್ರಾಹಕರನ್ನು ಕಾಡುತ್ತಿರುವ ಪ್ರಶ್ನೆ. ಸಬ್ಸಿಡಿ ದೊರೆಯದೇ ಸಾಮಾನ್ಯ ಜನ ಗೃಹಬಳಕೆ ಸಿಲಿಂಡರ್ ಖರೀದಿ ಮಾಡುವುದು ಕೂಡ ಅಸಾಧ್ಯವಾಗಿದೆ.
ನ.21ರಂದು ಆಧಾರ್ ವಿವರ ಸಲ್ಲಿಸಿದ್ದೇನೆ. ಕ್ಯಾಲೆಂಡರ್ ವರ್ಷ ಪ್ರಕಾರ ನಮ್ಮ ಮನೆಗಿದು 8ನೇ ಸಿಲಿಂಡರ್. ಆರ್ಥಿಕ ವರ್ಷ ಪ್ರಕಾರ 6ನೇ ಸಿಲಿಂಡರ್. ಸಬ್ಸಿಡಿಗಿರುವ ಮಿತಿ 9 ಸಿಲಿಂಡರ್. ಹೇಗೆ ಲೆಕ್ಕ ಹಾಕಿದರೂ ನನಗೆ ಸಬ್ಸಿಡಿ ಸಿಗಲೇಬೇಕು. ಆದರೆ ಸಿಕ್ಕಿಲ್ಲ. ಆ ಬಗ್ಗೆ ವಿತರಕರಲ್ಲಿ ಕೇಳಿದರೆ ನಾವು ಎಂಟ್ರಿ ಮಾಡಿದ್ದೇವೆ, ಬ್ಯಾಂಕ್ನಲ್ಲಿ ವಿಚಾರಿಸಿ ಅಂತಾರೆ. ಬ್ಯಾಂಕ್ನಲ್ಲಿ ಕೇಳಿದರೆ ಸಬ್ಸಿಡಿ ಬಂದಿದ್ದರೆ ನೇರ ನಿಮ್ಮ ಖಾತೆಗೆ ಜಮೆಯಾಗಿರುತ್ತದೆ ಅಂತಾರೆ. ಆದರೆ ಖಾತೆಗೆ ಹಣ ಜಮೆಯಾಗಿಲ್ಲ.
- ಶ್ರೀನಿವಾಸ ರೆಡ್ಡಿ, ಗ್ರಾಹಕ
ಸಬ್ಸಿಡಿ ಹಣ ಜಮೆ ಆಗುವುದರಲ್ಲಿ ಸ್ವಲ್ಪ ಗೊಂದಲವಿದೆ. ಕೆಲವರು ನಾವು ಗ್ಯಾಸ್ ಪಡೆದೇ ಇಲ್ಲ, ಆದರೂ ಹಣ ಜಮೆಯಾಗಿದೆ ಎನ್ನುತ್ತಾರೆ. ಕೆಲವರು ಗ್ಯಾಸ್ ಪಡೆದಿದ್ದೇವೆ ಇನ್ನೂ ಸಬ್ಸಿಡಿ ಬಂದಿಲ್ಲ ಎನ್ನುತ್ತಾರೆ. ಏನಾಗುತ್ತಿದೆ ಎಂದು ನಮಗೇ ಗೊತ್ತಾಗುತ್ತಿಲ್ಲ.
- ಇಂಡೇನ್ ಅನಿಲ ವಿತರಕ ಸಿಬ್ಬಂದಿ
ರವಿಕಾಂತ ಕುಂದಾಪುರ