ಡಿಕೆಶಿಗೆ ಪವರ್, ಬೇಗ್ಗೆ ಹಜ್
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾದ 24 ಗಂಟೆಗಳ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ. 2-
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾದ 24 ಗಂಟೆಗಳ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್ ಅವರಿಗೆ ಖಾತೆ ಹಂಚಿಕೆಯಾಗಿದೆ.
ತಮ್ಮ ಬಳಿ ಇದ್ದ ಇಂಧನ ಖಾತೆಯನ್ನು ಸಿದ್ದರಾಮಯ್ಯ ಅವರು ಶಿವಕುಮಾರ್ಗೆ ಹಂಚಿಕೆ ಮಾಡಿದ್ದಾರೆ. ರೋಷನ್ಬೇಗ್ಗೆ ವಾರ್ತೆ, ಮೂಲಭೂತ ಸೌಕರ್ಯ ಹಾಗೂ ಹಜ್ ಖಾತೆ ನೀಡಲಾಗಿದೆ.
ವಾರ್ತೆ ಮತ್ತು ಮೂಲಭೂತ ಸೌಕರ್ಯ ಈ ಹಿಂದೆ ಸಂತೋಷ್ಲಾಡ್ ಬಳಿ ಇತ್ತು. ಅವರು ರಾಜಿನಾಮೆ ನೀಡಿದ ಬಳಿಕ ಆ ಖಾತೆಗಳನ್ನೂ ಸಿದ್ದರಾಮಯ್ಯ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಹಜ್ ಖಾತೆ ಸಚಿವ ಖಮರುಲ್ ಇಸ್ಲಾಂ ಬಳಿ ಇತ್ತು.
ಚರ್ಚೆ ನಂತರ ಖಾತೆ ಹಂಚಿಕೆ: ಸಂಪುಟದ ಹಿರಿಯ ಸಚಿವರ ಜತೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಭಯ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಸಂಜೆ 5 ಗಂಟೆಗೆ ರಾಜಭವನಕ್ಕೆ ರವಾನಿಸಿದ ಪತ್ರಕ್ಕೆ ರಾಜ್ಯಪಾಲ ಭಾರದ್ವಾಜ್ ಒಪ್ಪಿಗೆ ನೀಡಿದರು. ಇದರೊಂದಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ನಿವಾರಣೆ ಆಯಿತು.
ಆದರೆ ಹಜ್ ಮತ್ತು ವಕ್ಫ್ ಖಾತೆ ಬಿಟ್ಟುಕೊಡಲು ಸಚಿವ ಖಮರುಲ್ ಇಸ್ಲಾಂ ನಿರಾಕರಿಸಿದರು. ಆದರೆ ತಮಗೆ ಆ ಖಾತೆ ಬೇಕೇ ಬೇಕು ಎಂದು ಪಟ್ಟುಹಿಡಿದ ರೋಷನ್ಬೇಗ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದಾದ ನಂತರ ಖಮರುಲ್ ಇಸ್ಲಾಂ ಮನವೊಲಿಸುವಲ್ಲಿ ಸಿದ್ದರಾಮಯ್ಯ ಸಫಲರಾದರು.
ಭಿನ್ನರ ಸಭೆ: ಈ ನಡುವೆ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಹಿರಿಯ ಶಾಸಕರ ಮುನಿಸು ಮತ್ತೆ ಮುಂದುವರಿದಿದೆ. ಸಿ.ಎಸ್.ನಾಡಗೌಡ, ಕೆ.ಬಿ.ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್, ಡಾ.ಮಾಲಕರೆಡ್ಡಿ, ಬಸವರಾಜ ರಾಯರೆಡ್ಡಿ ಮೊದಲಾದವರು ಸಭೆ ನಡೆಸಿ ಮುಂದಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಿದ್ದಾರೆ.
ಖರ್ಗೆಗೆ ಮೊರೆ: ಈ ನಾಯಕರು ತಮ್ಮ ಅಳಲನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಲುಪಿಸಲು ನಿರ್ಧರಿಸಿದ್ದಾರೆ. ಸಚಿವ ಸಂಪುಟದಲ್ಲಿ ಸೃಷ್ಟಿಯಾಗಿರುವ ಪ್ರಾದೇಶಿಕ ಅಸಮಾನತೆ ಬಗ್ಗೆ ಅವರ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಜತೆಗೆ ಜ.6ರಂದು ಬೆಂಗಳೂರಿಗೆ ಆಗಮಿಸಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೂ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಮ್ಮ ಸರ್ಕಾರ ಪರಿಶುದ್ಧ. ಸಂಪುಟದಲ್ಲಿ ಅಪರಾಧಿ ಗಳಾಗಲಿ, ಕಳಂಕಿತರಾಗಲಿ ಇಲ್ಲ. ಡಿ.ಕೆ. ಶಿವಕುಮಾರ್, ರೋಷನ್ಬೇಗ್ ಕಳಂಕಿತರಲ್ಲ. ಪ್ರತಿಪಕ್ಷಗಳ ಟೀಕೆಗೆ ಅಂಜುವುದಿಲ್ಲ.
- ಸಿದ್ದರಾಮಯ್ಯ, ಸಿಎಂ