ಬಿಜೆಪಿಯಲ್ಲಿ ಕೆಜೆಪಿ ವಿಲೀನ, ತವರಿಗೆ ಮರಳಿದ ಬಿಎಸ್ವೈ ತಂಡ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿದ್ದು, ಶುಕ್ರವಾರದಿಂದಲೇ..
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ. 2-
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿದ್ದು, ಶುಕ್ರವಾರದಿಂದಲೇ ಅವರು ಪಕ್ಷ ಸಂಘಟನೆಯಲ್ಲಿ ಕೈಜೋಡಿಸುತ್ತಿದ್ದಾರೆ.
ತಮ್ಮ ಪಕ್ಷ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಯಡಿಯೂರಪ್ಪ ಅವರು ಘೋಷಿಸಿದ್ದು, ಈ ಸಂಬಂಧ ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳು ಮಾತ್ರ ಬಾಕಿ ಇದೆ. ಇದರ ಜತೆಗೆ ಯಡಿಯೂರಪ್ಪ ಅವರು ಅಧಿಕೃತವಾಗಿ ಬಿಜೆಪಿ ಸೇರಲು ಇನ್ನೆರಡು ದಿನಗಳಲ್ಲಿ ದಿನಾಂಕ ನಿಗದಿಪಡಿಸಲಾಗುತ್ತದೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮತ್ತು ಅನಂತಕುಮಾರ್ ನೇತೃತ್ವದ ತಂಡ ಗುರುವಾರ ಸಂಜೆ ಖಾಸಗಿ ಹೊಟೇಲ್ನಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿದರು. ಇದಕ್ಕೆ ಸಮ್ಮತಿಸಿದ ಯಡಿಯೂರಪ್ಪ, ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಪ್ರಕಟಿಸಿದರಲ್ಲದೆ, ತಕ್ಷಣದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ತಿಳಿಸಿದರು. ಈ ವಿಚಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದ ಬಳಿಕ ಅಧಿಕೃತವಾಗಿ ಪ್ರಕಟಿಸಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಅಧಿಕೃತ ತೀರ್ಮಾನ ಕೈಗೊಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಗಮನಕ್ಕೆ ತರಲಾಯಿತು. ಅದರಂತೆ ಪ್ರಕ್ರಿಯೆ ಮುಂದುವರಿಸಲು ಅವರು ಒಪ್ಪಿಗೆ ನೀಡಿದರು. ಇದಾದ ಬಳಿಕ ಬಿಜೆಪಿ ನಾಯಕರು ಯಡಿಯೂರಪ್ಪ ಭೇಟಿ ಮಾಡಿ ಆಹ್ವಾನ ನೀಡಿದರು.
ತಾಂತ್ರಿಕ, ಕಾನೂನು ಸಮಸ್ಯೆ: ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಬೇಕಾದರೆ ಯಡಿಯೂರಪ್ಪ ಅವರ ಜತೆಗೆ ಇನ್ನೂ ಮೂವರು ಶಾಸಕರು ಬರಲೇ ಬೇಕು. ಹೀಗಾಗಿ ಯಾರ್ಯಾರು ಯಡಿಯೂರಪ್ಪ ಅವರ ಜತೆಗೆ ಬಿಜೆಪಿಗೆ ಬರುತ್ತಾರೆ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಮೂಲಗಳ ಪ್ರಕಾರ ವಿಶ್ವನಾಥ ಪಾಟೀಲ್, ಯು.ಬಿ. ಬಣಕಾರ್ ಮತ್ತು ಗುರು ಪಾಟೀಲ್ ಅವರು ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಸೇರಲಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳನ್ನು ನಡೆಸುವಾಗ ಇದೆಲ್ಲವನ್ನೂ ಪರಿಗಣಿಸಲು ತೀರ್ಮಾನಿಸಲಾಗಿದೆ.
ಅನಂತಕುಮಾರ್ ಅವರನ್ನು ಕರೆಸಿಕೊಂಡರು: ಬೆಳಗ್ಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಅನಂತಕುಮಾರ್ ಹಾಜರಿದ್ದರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅವರು ಇರುವುದಿಲ್ಲ. ರಾಜ್ಯ ನಾಯಕರು ಮಾತ್ರ ಹೋಗುತ್ತಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದರು. ಯಡಿಯೂರಪ್ಪ ಅವರ ಭೇಟಿಗೆ ಬಿಜೆಪಿಯ ಇತರೆ ಮೂವರು ನಾಯಕರು ಹೋದರಾದರೂ ಅನಂತಕುಮಾರ್ ಬಂದಿರಲಿಲ್ಲ. ಆದರೆ, ಮಾತುಕತೆ ಸಂದರ್ಭದಲ್ಲಿ ಅನಂತಕುಮಾರ್ ಇಲ್ಲದೇ ಇದ್ದರೆ ಯಡಿಯೂರಪ್ಪ ಮತ್ತು ಅನಂತಕುಮಾರ್ ಮಧ್ಯೆ ವೈಮನಸ್ಯ ದೂರವಾಗಿಲ್ಲ. ಅದಕ್ಕಾಗಿಯೇ ಗೈರುಹಾಜರಾಗಿದ್ದಾರೆ ಎಂಬ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಅನಂತಕುಮಾರ್ ಬರಲೇ ಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದರು. ಹೀಗಾಗಿ ಮಾತುಕತೆ ಆರಂಭವಾಗಿ ಸ್ವಲ್ಪ ಹೊತ್ತಿಗೆ ಅವರು ಸೇರಿಕೊಂಡರು.
ಕಣ್ತಪ್ಪಿಸಲು ಪ್ರಯತ್ನಿಸಿದರು: ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ಭೇಟಿಯ ಸ್ಥಳ ಮತ್ತು ಸಮಯವನ್ನು ಗೌಪ್ಯವಾಗಿಟ್ಟು ಕಣ್ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಸಮಯ ಮತ್ತು ಸ್ಥಳ ನಿಗದಿಯಾಗಿದ್ದರೂ ಇಂದು ಅಥವಾ ನಾಳೆ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಮಂಗಳೂರಿನಲ್ಲಿರುವ ಡಿ.ವಿ. ಸದಾನಂದಗೌಡ ಅವರು ಬಂದ ಬಳಿಕ ಭೇಟಿ ನಡೆಯಲಿದೆ ಎಂದು ತಿಳಿಸಿದರು. ಕೊನೆಗೆ ಸಂಜೆ 6.30ರ ವೇಳೆಗೆ ಎರಡೂ ಪಕ್ಷಗಳ ನಾಯಕರು ತಮ್ಮ ವಾಹನಗಳಲ್ಲಿ ಖಾಸಗಿ ಹೊಟೇಲ್ನಲ್ಲಿ ಭೇಟಿ ಮಾಡಿದರು. ಆದರೆ, ಅಷ್ಟರಲ್ಲೇ ಮಾಹಿತಿ ಸೋರಿಕೆಯಾಗಿತ್ತು.
ಮಾತುಕತೆ ವೇಳೆ ಹಾಜರಿದ್ದವರು: ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ.
ಕೆಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಸಿ.ಎಂ. ಉದಾಸಿ.
ಯಡಿಯೂರಪ್ಪ ಅವರು ಬಿಜೆಪಿಗೆ ಸೇರುತ್ತಿರುವುದರಿಂದ ಪಕ್ಷದ ಶಕ್ತಿ ಹತ್ತು ಪಟ್ಟು ಹೆಚ್ಚಾಗಲಿದೆ. ಈ ಮಹತ್ವದ ನಿರ್ಧಾರದ ಮೂಲಕ ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಅನುಕೂಲವಾಗಿದೆ.
- ಅನಂತಕುಮಾರ್, ಸಂಸದ
ಬಿಜೆಪಿಯಲ್ಲಿ ಕೆಜೆಪಿ ವಿಲೀನ ನಿರ್ಧಾರ ಕೈಗೊಂಡಿದ್ದೇವೆ. ಎಲ್ಲರೂ ನಾಳೆಯಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಗೊಳಿಸುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಕಳೆದುಕೊಂಡದ್ದನ್ನು ಲೋಕಸಭೆ ಚುನಾವಣೆಯಲ್ಲಿ ಗಳಿಸುತ್ತೇವೆ.
- ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿಯಲ್ಲಿ ಕೆಜೆಪಿ ವಿಲೀನ ಮಾಡುತ್ತೇವೆ. ಎಲ್ಲರೂ ಒಮ್ಮತದಿಂದ ಹೋಗುತ್ತೇವೆ. ಹಳೆಯದೆಲ್ಲವನ್ನೂ ಮರೆತು ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆಯಲು ಯತ್ನಿಸುತ್ತೇವೆ.
- ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಜೆಡಿಎಸ್ಗೆ ತಪ್ಪಲಿದೆ ಪ್ರತಿಪಕ್ಷ ಸ್ಥಾನ
ಬೆಂಗಳೂರು: ಬಿಜೆಪಿ- ಕೆಜೆಪಿ ವಿಲೀನವಾಗುತ್ತಿದ್ದಂತೆ ಜೆಡಿಎಸ್ ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕಳೆದುಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ. ಜೆಡಿಎಸ್ ಬದಲಾಗಿ ಬಿಜೆಪಿ ಈ ಸ್ಥಾನಕ್ಕೆ ಏರಲಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರ ಬದಲು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಪ್ರತಿಪಕ್ಷ ನಾಯಕರಾಗುತ್ತಾರೆ.
ಪ್ರಸ್ತುತ ಜೆಡಿಎಸ್ ಮತ್ತು ಬಿಜೆಪಿ ವಿಧಾನಸಭೆಯಲ್ಲಿ ತಲಾ 40 ಸ್ಥಾನಗಳನ್ನು ಹೊಂದಿವೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಜೆಡಿಎಎಸ್ ಅಭ್ಯರ್ಥಿಗಳು ಬಿಜೆಪಿಯ ಗೆದ್ದ ಅಭ್ಯರ್ಥಿಗಳಿಗಿಂತ ಹೆಚ್ಚು ಸ್ಥಾನ ಪಡೆದಿದ್ದರಿಂದಾಗಿ ಪ್ರತಿಪಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು. ಇದೀಗ ಬಿಜೆಪಿ ಜತೆ ಕೆಜೆಪಿ ವಿಲೀನವಾಗುತ್ತಿದೆ. ಯಡಿಯೂರಪ್ಪ ಅವರ ಜತೆಗೆ ಕನಿಷ್ಠ ಮೂವರು ಶಾಸಕರು (ಒಟ್ಟು ನಾಲ್ಕು ಮಂದಿ) ಬಿಜೆಪಿ ಭಾಗವಾಗುತ್ತಾರೆ. ಹೀಗಾಗಿ ವಿಧಾನಸಭೆಯಲ್ಲಿ ಬಿಜೆಪಿ ಸ್ಥಾನ 40ಕ್ಕಿಂತ ಹೆಚ್ಚಾಗುತ್ತದೆ. ಇದರ ಪರಿಣಾಮ ಬಿಜೆಪಿ ಅಧಿಕೃತ ಪ್ರತಿಪಕ್ಷವಾಗಲಿದ್ದು, ಶಾಸಕಾಂಗ ಪಕ್ಷದ ನಾಯಕರೇ ಪ್ರತಿಪಕ್ಷ ನಾಯಕರಾಗುತ್ತಾರೆ. ಸದ್ಯಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು.