ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಮೌಲ್ಯ' ಮರೆತ ಉಪನ್ಯಾಸಕರಿಗೆ ಕಾದಿದೆ ಶಾಸ್ತಿ

Mainashree
Updated On : 2 Jan 2014, 9:11 am

ಕ.ಪ್ರ.ವಾರ್ತೆ ಬೆಂಗಳೂರು  ಜ. 2
ಮೌಲ್ಯಮಾಪನ ಬಗ್ಗೆ ಅಸಡ್ಡೆ ತೋರುತ್ತಿರುವ ಉಪನ್ಯಾಸಕರಿಗೆ ಬಿಸಿ ಮುಟ್ಟಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.
ಕಳೆದ ಮೇದಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಂದರ್ಭ ವಿದ್ಯಾರ್ಥಿಗಳ ಅಂಕವನ್ನೇ ಬುಡಮೇಲು ಮಾಡಿದ 168 ಉಪನ್ಯಾಸಕರಿಗೆ ಇಲಾಖೆ ನೋಟಿಸ್ ನೀಡಿದೆ. ಇದಲ್ಲದೇ ಮೌಲ್ಯಮಾಪನಕ್ಕೆ ಚಕ್ಕರ್ ಹಾಕಿದ್ದ ಸುಮಾರು ಮೂರೂವರೆ ಸಾವಿರ ಉಪನ್ಯಾಸಕರ ಮೇಲೂ ಕೆಂಗಣ್ಣು ಬೀರಿದೆ.
2012-13ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಉತ್ತರ ಪತ್ರಿಕೆಗಳ ಮಾಲ್ಯಮಾಪನದಲ್ಲಿ ದೊಡ್ಡ ಪ್ರಮಾಣದ ಎಡವಟ್ಟುಗಳಾಗಿದ್ದವು. ಪಾಲಕರು ಹೈಕೋರ್ಟ್  ಮೆಟ್ಟಿಲನ್ನೂ ಏರಿದ್ದರು. ಆದರೆ ಆಗ  ಅಧಿಕಾರಿಗಳು ಯಾವುದೇ ಕಠಿಣ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಪ್ರತಿ ಉತ್ತರ ಪತ್ರಿಕೆಗೂ ಸಂಭಾವನೆ ಪಡೆಯುವುದರ ಜತೆಗೆ, ಮೌಲ್ಯಮಾಪನಕ್ಕಾಗಿಯೇ ಉಪನ್ಯಾಸಕರು ಸಾವಿರಾರು ರುಪಾಯಿ ಸಂಭಾವನೆ ಗಿಟ್ಟಿಸುತ್ತಾರೆ. ಆದರೆ ನಿರ್ಲಕ್ಷ್ಯ ತೋರಿದವರಿಗೆ ನೋಟಿಸ್ ನೀಡಲು ಹಿಂದಿನ ಕಾರ್ಯದರ್ಶಿಗಳು ಹಿಂಜರಿದಿದ್ದರು. ಆದರೆ ಈಗ ಉಪನ್ಯಾಸಕರ ಸಂಘದ ವಿರೋಧದ ನಡುವೆಯೂ
ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಸಡ್ಡೆ ತೋರುವವರಿಗೆ ಪಾಠ ಕಲಿಸಲು ಇಲಾಖೆ ನಿರ್ಧರಿಸಿದೆ.
ಉಪನ್ಯಾಸಕರಿಗೆ ನೋಟಿಸ್: ಒಬ್ಬ ಉಪನ್ಯಾಸಕರು ನಿತ್ಯ 24 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಾರೆ. ಪ್ರತಿ ಉತ್ತರ ಪತ್ರಿಕೆಗೆ ರು. 21 ಸಂಭಾವನೆ ನೀಡಲಾಗುತ್ತದೆ. ಇದಲ್ಲದೇ ರು. 575 ದಿನ ಭತ್ಯೆ ಜತೆಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಈ ಮೂಲಕ ಪ್ರತಿ ಉಪನ್ಯಾಸಕರು ಸಂಬಳದ ಜತೆ ಪ್ರತಿ ದಿನ ಸುಮಾರು 1100 ಗಳಿಸುತ್ತಾರೆ. ಆದರೆ ಮೌಲ್ಯಮಾಪನದಲ್ಲಿನ ಪ್ರಮಾದಕ್ಕೆ ಸಂಬಂಧಿಸಿದಂತೆ 1200ಕ್ಕೂ ಅಧಿಕ ಪ್ರಕರಣಗಳನ್ನು ಇಲಾಖೆ ಪತ್ತೆಹಚ್ಚಿದೆ. ಇದರಲ್ಲಿ 168 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಈ ಪ್ರಕರಣಗಳಲ್ಲಿ ಮೌಲ್ಯಮಾಪಕರು ಹಾಗೂ ಆ ತಂಡದ ಮುಖ್ಯಸ್ಥರು ಅಂಕಗಳನ್ನು ತಪ್ಪಾಗಿ ಮುದ್ರಿಸಿದ್ದಾರೆ. ಕಣ್ತಪ್ಪಿನಿಂದ ಒಂದೆರಡು ಅಂಕ ಏರುಪೇರಾಗಿದ್ದರೆ ದೊಡ್ಡ ವಿಷಯವಾಗುತ್ತಿರಲಿಲ್ಲ. ಒಬ್ಬ ವಿದ್ಯಾರ್ಥಿಗೆ 87 ಅಂಕ ನೀಡುವಲ್ಲಿ 17 ಅಂಕ ನೀಡಲಾಗಿದೆ. ಇನ್ನು ಕೆಲ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ದೂರಿನ ಹೊರತಾಗಿಯೂ ಸಮರ್ಪಕವಾಗಿ ಮೌಲ್ಯಮಾಪನ ಮಾಡಲಾಗಿಲ್ಲ. ಇಂತಹ 168 ಪ್ರಕರಣಗಳನ್ನು ಪತ್ತೆ ಹಚ್ಚಿ ನೋಟಿಸ್ ನೀಡಲು ನಿರ್ಧರಿಸಲಾಗಿದೆ.
ಎರಡು ವರ್ಷದ ಹಿಂದೆ ಇದೇ ರೀತಿ ತಪ್ಪು ಪತ್ತೆ ಮಾಡಿ ಸಂಬಳ ಕಡಿತ ಹಾಗೂ ಬಡ್ತಿ ರದ್ದು ಮಾಡಿದ್ದಕ್ಕೆ ಕೋರ್ಟ್‌ನಲ್ಲಿ ಇಲಾಖೆಗೆ ಮುಖಭಂಗವಾಗಿತ್ತು. ಇವೆಲ್ಲ ಮಾನವ ಸಹಜ ತಪ್ಪುಗಳು ಎಂದು ಇಲಾಖೆ  ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಈ 168 ಉಪನ್ಯಾಸಕರಿಗೆ ಪ್ರತ್ಯೇಕ ರೂಪದಲ್ಲಿ ದಂಡ ವಿಧಿಸಲು ಇಲಾಖೆ ಮುಂದಾಗಿದೆ. ತಪ್ಪಿತಸ್ಥ ಉಪನ್ಯಾಸಕರಿಗೆ ಮೌಲ್ಯಮಾಪನದ ಸಮಯದಲ್ಲಿ ನೀಡಿದ್ದ ಸಂಪೂರ್ಣ ಗೌರವಧನ ಹಾಗೂ ಭತ್ಯೆ ವಾಪಸ್ ಪಡೆವ ಜತೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಮತ್ತೊಂದೆಡೆ ಎಲ್ಲ ಡಿಡಿಪಿಯುಗಳಿಗೆ
ನಿರ್ದೇಶನ ನೀಡಲಾಗಿದ್ದು ಇಂತಹ ಉಪನ್ಯಾಸಕರನ್ನು ಕಪ್ಪುಪಟ್ಟಿಗೆ ಸೇರಿಸಿ ಮುಂದಿನ ಶೈಕ್ಷಣಿಕ ವರ್ಷದ ಮೌಲ್ಯಮಾಪನಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ.


ಚಕ್ಕರ್ ಹಾಕಿದವರಿಗೆ ತಟ್ಟಿದ ಬಿಸಿ
ಕಳೆದ ಮೇನಲ್ಲಿ ನಡೆದ ಮೌಲ್ಯಮಾಪನಕ್ಕೆ ಒಟ್ಟು 18,500 ಉಪನ್ಯಾಸಕರು ಹಾಜರಾಗಬೇಕಿತ್ತು. ಆದರೆ, 15 ಸಾವಿರ ಮಂದಿ ಮಾತ್ರ ಹಾಜರಾಗಿದ್ದರು. ಇವರಲ್ಲಿ ಹೆಚ್ಚಿನ ಉಪನ್ಯಾಸಕರು ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.  ಇದರ ಜತೆಗೆ ಮೌಲ್ಯಮಾಪನಕ್ಕೆ ಪ್ರತಿ ವರ್ಷ ಹಳೆ ತಂಡವೇ ಬರುತ್ತಿದೆ.  ಈ ಹಿನ್ನೆಲೆಯಲ್ಲಿ ತಪ್ಪಿಸಿಕೊಳ್ಳುವ ಉಪನ್ಯಾಸಕರ ಮೇಲೆ ನಿಗಾ ಇಡಲು ಡಿಡಿಪಿಯುಗಳಿಗೆ ಸೂಚಿಸಲಾಗಿದೆ. ಉದ್ದೇಶ ಪೂರ್ವಕವಾಗಿ ತಪ್ಪಿಸಿಕೊಳ್ಳುವ ಉಪನ್ಯಾಸಕರನ್ನು ಕೂಡ ಕಪ್ಪು ಪಟ್ಟಿಗೆ ಸೇರಿಸಿ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿದ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಟಿಸ್ ನೀಡಿ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಇದರಿಂದ ಭವಿಷ್ಯದ ಮೌಲ್ಯಮಾಪನದಲ್ಲಿ ಗುಣಮಟ್ಟ ಹೆಚ್ಚಳವಾಗುವ ನಿರೀಕ್ಷೆಯಿದೆ.
- ಜಂಟಿ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಪರೀಕ್ಷಾ ವಿಭಾಗ

 ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement