ಸ್ವಹಿತಕ್ಕೆ ಬಲಿಯಾಯಿತೇ ಕನ್ನಡ ಸಾಹಿತ್ಯ ಸಮ್ಮೇಳನ?
ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂಬ ಆಸೆ ಇರುವವರಿಗೆ, ಭಾಗವಹಿಸಲು ಸಂಭ್ರಮದ ತಯಾರಿ ಮಾಡಿಕೊಳ್ಳುವವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಈ ಬಾರಿ ತಣ್ಣೀರೆರಚಿದೆ.
ಪ್ರತಿ ಬಾರಿ ಸಾಮಾನ್ಯವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿತ್ತು. ಸಮ್ಮೇಳನದಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಾಗಲಿ ಎಂಬುದು ಇದರ ಮೂಲ ಉದ್ದೇಶ. ಆದರೆ ಇದೇ ಮೊದಲು ಸಾಹಿತ್ಯ ಸಮ್ಮೇಳನವನ್ನು ಮಂಗಳವಾರ, ಬುಧವಾರ ಮತ್ತು ಗುರುವಾರ (ಜ.7,8,9) ಆಯೋಜಿಸಲಾಗುತ್ತಿದೆ!
ಇದರರ್ಥ ಕನ್ನಡ ಪ್ರೇಮಿಗಳೇ ಕನ್ನಡ ಸಾಹಿತ್ಯ ಸಮ್ಮೇಳನದತ್ತ ಹೆಚ್ಚು ಬರಬೇಡಿ ಎಂಬ ಸಂದೇಶವನ್ನು ಸಾಹಿತ್ಯ ಪರಿಷತ್ತೇ ಸಾರುತ್ತಿರುವಂತಿದೆ. ಈ ಬಗ್ಗೆ 'ಕನ್ನಡಪ್ರಭ' ಸಾಹಿತ್ಯ ಪರಿಷತ್ನ ಕೊಡಗು ಜಿಲ್ಲಾ ಅಧ್ಯಕ್ಷ ರಮೇಶ್ ಅವರನ್ನು ಸಂಪರ್ಕಿಸಿದಾಗ, 'ಕೊಡಗು ಜಿಲ್ಲೆಗೆ ಶನಿವಾರ-ಭಾನುವಾರ ಪ್ರವಾಸಿಗರ ದಂಡೇ ಬರುತ್ತದೆ. ಅದರ ಜತೆ ಸಾಹಿತ್ಯ ಸಮ್ಮೇಳನವೂ ಸೇರಿದರೆ ಜನ ಜಂಗುಳಿ ನಿಯಂತ್ರಿಸುವುದು ಕಷ್ಟವಾಗುತ್ತದೆ. ಕೊಡಗಿನ ಹೊಟೇಲ್ಗಳು ಶನಿವಾರ-ಭಾನುವಾರ ಬುಕ್ ಆಗಿರುತ್ತವೆ. ಆದ್ದರಿಂದ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮಂಗಳವಾರದಿಂದ ಸಮ್ಮೇಳನ ಆರಂಭಿಸಲಾಗುತ್ತಿದೆ' ಎಂದಿದ್ದಾರೆ.
ಸ್ಥಳೀಯ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಅಲ್ಲದೇ ಶಿಕ್ಷಕರಿಗೆ, ಸರ್ಕಾರಿ ನೌಕರರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಒಡಿ ನೀಡಲಾಗುತ್ತದೆ. ಆದ್ದರಿಂದ ಭಾಗವಹಿಸುವವರಿಗೆ ಯಾವುದೇ ತೊಂದರೆಯಿಲ್ಲ ಎಂಬುದು ಅವರ ವಾದ. ಆದರೆ ಖಾಸಗಿ ಕಂಪನಿಗಳಲ್ಲಿ, ಸ್ವ ಉದ್ಯೋಗದಲ್ಲಿರುವ ಕನ್ನಡ ಸಾಹಿತ್ಯ ಪ್ರೇಮಿಗಳ ಗತಿ? ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.
ಹೊರ ಜಿಲ್ಲೆಯ ಮಕ್ಕಳೂ ಕೂಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ವಂಚಿತರಾಗಲಿದ್ದಾರೆ. ಮಂಗಳವಾರದಿಂದ ಗುರುವಾರ ಅಂದರೆ ಬಹುತೇಕ ಕಚೇರಿ, ಅಂಗಡಿ, ಬ್ಯಾಂಕುಗಳು ತೆರೆದಿರುತ್ತವೆ. ಮನೆಯಲ್ಲಿ ತಂದೆ-ಗಂಡನಿಗೆ ಸಾಹಿತ್ಯ ಸಮ್ಮೇಳನಕ್ಕೆ ಹೋಗಲಾಗದಿದ್ದರೆ, ಮಡದಿ-ಮಕ್ಕಳು ಕೂಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಧೈರ್ಯ ಮಾಡುವುದಿಲ್ಲ. ಇದರಿಂದಾಗಿ ಸಾಕಷ್ಟು ಜನ ಆಸಕ್ತರು ಈ ಬಾರಿ ಸಾಹಿತ್ಯ ಸಮ್ಮೇಳನದಿಂದ ವಂಚಿತರಾಗಲಿದ್ದಾರೆ.
ಕೊಡಗಿನಲ್ಲಿ ಪ್ರತ್ಯೇಕತೆ ಕೂಗಿದೆ. ಅಂತಹ ಕೂಗಿಗೆ ಅವಕಾಶ ನೀಡಬಾರದು. ಕೊಡಗು ಕೂಡ ಕನ್ನಡದ ಭಾಗವಾಗಿ ಇರಬೇಕು ಎಂಬ ಕಾರಣಕ್ಕೆ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಅದೇ ಉದ್ದೇಶದಿಂದಲೇ ಕೊಡಗಿಗೆ ಸದಸ್ಯರು ಬೆಂಬಲಿಸಿದ್ದರು. ಆದರೆ ಕೊಡಗಿನವರು ಮಾತ್ರ ಇತರೆ ಜಿಲ್ಲೆಗಳ ಕನ್ನಡಪ್ರೇಮಿಗಳನ್ನು ಗಮನಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಎಲ್ಲೇ ಆಗಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವವರು ಉತ್ತರ ಕರ್ನಾಟಕದ ಜನ. ವಾರದ ದಿನಗಳಲ್ಲಿ ಇಟ್ಟಿರುವುದು ಈ ಬಾರಿ ಸಾಮಾನ್ಯ ಜನರು ಸಾಹಿತ್ಯ ಸಮ್ಮೇಳನದತ್ತ ಸುಳಿಯದಂತೆ ಮಾಡಲಿದೆ.
ಸಂಘಟಕರಿಗೆ ಕಾಡಿದ ವ್ಯವಸ್ಥೆಯ ಚಿಂತೆ
ಸಾಹಿತ್ಯ ಪರಿಷತ್ನ ಮೂಲಗಳ ಪ್ರಕಾರ ಕೊಡಗಿನಲ್ಲಿ ವ್ಯವಸ್ಥೆ ಮಾಡುವುದು ಕಷ್ಟ. ಚಳಿ ಬೇರೆ. ತುಂಬಾ ಜನ ಬಂದರೆ ಅವರಿಗೆಲ್ಲ ವಸತಿ ಮತ್ತು ಹೊದಿಕೆ ವ್ಯವಸ್ಥೆ ಮಾಡುವುದು ಕಷ್ಟ ಎಂಬ ಅನುಮಾನ ಸಂಘಟಕರನ್ನು ಕಾಡಿದೆ. ಇದಕ್ಕಾಗಿ ಉಪಾಯ ಹೂಡಿ ವಾರದ ದಿನಗಳಲ್ಲಿ ಸಮ್ಮೇಳನ ಆಚರಿಸುವ ದಾರಿ ಕಂಡುಕೊಂಡಿದ್ದಾರೆ ಎಂದು ಸಾಹಿತ್ಯ ಪರಿಷತ್ ಮೂಲಗಳೇ ಹೇಳುತ್ತಿವೆ. ಹೀಗಾಗಿ ನೀವು ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದಿದ್ದರೆ ಅಗತ್ಯ ಕಾಳಜಿ ತೆಗೆದುಕೊಳ್ಳುವುದು ಒಳಿತು.
ಈ ನಡುವೆ ಜಿಲ್ಲಾಧಿಕಾರಿಗಳೇ ಇದಕ್ಕೆಲ್ಲ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಕೊಡಗಿನಲ್ಲಿ ಸಾಹಿತ್ಯ ಸಮ್ಮೇಳನ ಸಾಹಿತ್ಯ ಪರಿಷತ್ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಸರ್ಕಾರಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಅಧಿಕಾರಿಗಳೇ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಸಮ್ಮೇಳನ ಮಾಡುವುದು ಮುಖ್ಯವೇ ಹೊರತು ಜನರು ಭಾಗವಹಿಸುವುದಲ್ಲ. ಆದ್ದರಿಂದಲೇ ಹೀಗಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಬರುವ ಸಾಹಿತ್ಯ ಪ್ರೇಮಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದಲೇ ಇಂತಹ ಸಮ್ಮೇಳನಗಳನ್ನು ರಜೆಯ ದಿನಗಳಲ್ಲಿ ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ಮಾತ್ರ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಹೆಚ್ಚು ಜನ ಭಾಗವಹಿಸಬಾರದು ಎಂಬ ಉದ್ದೇಶ ಇರಿಸಿಕೊಂಡು ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಸಾಹಿತ್ಯ ಪರಿಷತ್ನ ಅನಿವಾರ್ಯಗಳು ಏನೇ ಇರಲಿ, ಸಾಹಿತ್ಯ ಸಮ್ಮೇಳನಕ್ಕೆ ಹೋಗದಿರುವುದು ಕೂಡ ಜನರ ಪಾಲಿಗೆ ಅನಿವಾರ್ಯವಾಗಲಿದೆ.
ಕೊಡಗು ಪ್ರವಾಸಿ ತಾಣವಾದ್ದರಿಂದ ಅಲ್ಲಿ ವಾರಾಂತ್ಯಕ್ಕೆ ವಸತಿಗೆ ಕೊಠಡಿಗಳು ಸಿಗುತ್ತಿಲ್ಲ. ಹೋಂ ಸ್ಟೇ, ಹೊಟೇಲ್ಗಳನ್ನು ಗ್ರಾಹಕರು ಮೊದಲೇ ಕಾದಿರಿಸಿರುತ್ತಾರೆ. ನಾವು ಅವರಿಗೆ ಕೊಡುವ ಬಾಡಿಗೆ ಕೂಡ ಕಡಿಮೆ. ಅದಕ್ಕೇ ಅನಿವಾರ್ಯವಾಗಿ ವಾರದ ದಿನದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇಲ್ಲವಾದಲ್ಲಿ ಯಾವತ್ತೂ ವಾರಾಂತ್ಯಕ್ಕೇ ಸಮ್ಮೇಳನ ನಡೆಸುತ್ತಿದ್ದೆವು. ಕನ್ನಡಿಗರು ನಮ್ಮನ್ನು ಅರ್ಥಮಾಡಿಕೊಂಡು ಸಹಕರಿಸುತ್ತಾರೆ ಅಂದುಕೊಂಡಿದ್ದೇವೆ.
-ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ವೀಕೆಂಡ್ಗಳಲ್ಲಿ ಕೊಡಗಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆಗ ಸಾಹಿತ್ಯ ಸಮ್ಮೇಳನದ ಜನರೂ ಸೇರಿದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವಾರದ ದಿನಗಳಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಒಡಿ ಸಿಗುವುದರಿಂದ ಭಾಗವಹಿಸುವಿಕೆಗೆ ಏನೂ ತೊಂದರೆಯಿಲ್ಲ.
-ರಮೇಶ್, ಕಸಾಪ ಕೊಡಗು ಜಿಲ್ಲಾಧ್ಯಕ್ಷ
ವಿನಾಯಕ ಭಟ್ಟ ಮೂರೂರು