ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಬ್ಬಿಗೆ ಪ್ರೋತ್ಸಾಹ ಧನ, ಸನ್ನಡತೆ ಕೈದಿಗಳ ಬಿಡುಗಡೆ, ಹೈ.ಕರ್ನಾಟಕ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

ಕಬ್ಬು ಬೆಳೆಗಾರರಿಗೆ 450 ಕೋಟಿ ಪ್ರೋತ್ಸಾಹ ಧನ ಬಿಡುಗಡೆ, ಸನ್ನಡತೆ ಆಧಾರದ ಮೇಲೆ ಕೈದಿಗಳ ಅವಧಿಪೂರ್ವ...

Mainashree
Updated On : 4 Jan 2014, 12:07 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜ.3-
ಕಬ್ಬು ಬೆಳೆಗಾರರಿಗೆ 450 ಕೋಟಿ ಪ್ರೋತ್ಸಾಹ ಧನ ಬಿಡುಗಡೆ, ಸನ್ನಡತೆ ಆಧಾರದ ಮೇಲೆ ಕೈದಿಗಳ ಅವಧಿಪೂರ್ವ ಬಿಡುಗಡೆ ಸೇರಿದಂತೆ ಮಹತ್ವದ ಆಡಳಿತಾತ್ಮಕ ವಿಚಾರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಹಲವು ವಲಯಗಳಿಂದ ಒತ್ತಡ ತೀವ್ರವಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಈ ಸಂಬಂಧ ಮಾರ್ಗದರ್ಶಿ ಸೂತ್ರ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರಿಂದ ವಿಳಂಬವಾಗಿತ್ತು.
ಈ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, 14 ವರ್ಷ ಪೂರೈಸಿದ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಾರ್ಗದರ್ಶಿ ಸೂತ್ರವನ್ನೂ ರಚಿಸಲಾಗಿದೆ. ಇದರ ಪ್ರಕಾರ, ಕೋಮು ಗಲಭೆ, ಸರ್ಕಾರಿ ನೌಕರರ ಹತ್ಯೆ, ರಾಷ್ಟ್ರದ್ರೋಹ, ಸಂಘಟಿತ ಅಪರಾಧ, ಅಪಹರಣ ಹತ್ಯೆ, ಮಾದಕ ವಸ್ತು ಸಾಗಣೆ ಸೇರಿದಂತೆ 21 ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಿಡುಗಡೆಗೆ ಪರಿಗಣಿಸದೇ ಇರಲು ನಿರ್ಧರಿಸಲಾಗಿದೆ.
ಬಿಡುಗಡೆ ಪ್ರಕ್ರಿಯೆಗೆ ಅರ್ಹರ ಪಟ್ಟಿ ತಯಾರಿಸುವಂತೆ ಕಾರಾಗೃಹ ಇಲಾಖೆ ಎಡಿಜಿಪಿ ಅವರಿಗೆ ಸೂಚಿಸಲಾಗಿದ್ದು ಪರಿಶೀಲನೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದ ನಂತರ ಬಿಡುಗಡೆಗೆ ಅನುಮತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಭೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹಾಗೂ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ವಿವರಣೆ ನೀಡಿದರು.                    
2013- 14ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರು. 150 ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ 450 ಕೋಟಿ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಈ ಭರವಸೆ ನೀಡಿತ್ತು.
ಸಕ್ಕರೆ ಕಾರ್ಖಾನೆಗೆ ಪೂರೈಕೆಯಾದ ಕಬ್ಬಿನ ವಿವರವನ್ನು ಪಡೆದು ರೈತರಿಗೆ ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ಈ ಹಣ ತಲುಪಿಸಲು ನಿರ್ಧರಿಸಲಾಗಿದೆ. ಇದರಿಂದ ಬೆಳಗಾವಿ ಭಾಗದ ರೈತರಿಗೆ 170 ಕೋಟಿ, ಬಾಗಲಕೋಟೆಗೆ 105 ಕೋಟಿ, ವಿಜಾಪುರದ ರೈತರಿಗೆ 30 ಕೋಟಿ ಲಾಭವಾಗಲಿದ್ದು, ಮೊದಲ ಹಂತದಲ್ಲಿ 300 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.

371 ಜೆ ತಿದ್ದುಪಡಿ: ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ಸಂವಿಧಾನದ ವಿಶೇಷ ಸೌಲಭ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದ 371 ಜೆ ತಿದ್ದುಪಡಿ ಹಿನ್ನೆಲೆಯಲ್ಲಿ ರಚನೆಯಾದ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ಜಾರಿಗೆ ತರಲು ಕೆಲ ಆಡಳಿತಾತ್ಮಕ ತಿದ್ದುಪಡಿಗೆ ಸಂಪುಟ ಒಪ್ಪಿಗೆ ನೀಡಿದ್ದು, ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿಕೊಡಲಾಗುವುದು. ಇದರ ಜತೆಗೆ ಹಿಂದೆ ಅಸ್ಥಿತ್ವದಲ್ಲಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಹೊಸದಾಗಿ ರಚನೆಯಾದ ಮಂಡಳಿಯಲ್ಲಿ ವಿಲೀನಗೊಳಿಸಿ ಅದರ ಸ್ಥಿರ ಮತ್ತು ಚರಾಸ್ಥಿಯನ್ನು ಇದರ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.

ಸಂಪುಟದ ಇತರೆ ಪ್ರಮುಖ ನಿರ್ಣಯಗಳು

- 331 ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಒಪ್ಪಿಗೆ. ಆದರೆ ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯ ಕಾಲೇಜುಗಳಿಗೆ ಭಾರತೀಯ ಪಶುವೈದ್ಯ ಪರಿಷತ್ ಮಾನ್ಯತೆ ಸಮಸ್ಯೆ ಇದೆ. ಜತೆಗೆ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಬೆಂಗಳೂರು ಮತ್ತು ಬೀದರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 260 ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ನೇಮಕ ಮಾಡಿಕೊಳ್ಳುವುದು. ಇದರೊಂದಿಗೆ ಶಿವಮೊಗ್ಗ ಮತ್ತು ಹಾಸನದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಸುಪ್ರೀಂ ಕೋರ್ಟ್ ಮತ್ತು ಪಶುವೈದ್ಯ ಪರಿಷತ್ ತೀರ್ಮಾನಕ್ಕೆ ಒಳಪಟ್ಟು ಎಂಬ ನಿಬಂದನೆ ಆಧಾರದ ಮೇಲೆ 71 ಜನರನ್ನು ನೇಮಕ ಮಾಡಿಕೊಳ್ಳಲು ನಿರ್ಧಾರ.
- ನಂಜನಗೂಡು- ಚಾಮರಾಜನಗರ ರೈಲು ಮಾರ್ಗದಲ್ಲಿ ಎರಡು ಕಡೆ ಮೇಲ್ಸೇತುವೆ ನಿರ್ಮಿಸಲು ತಲಾ 20 ಕೋಟಿ
- ಗಿರಣಿ ಮಾಲೀಕರಿಂದ 2.5 ಲಕ್ಷ ಟನ್ ಅಕ್ಕಿ ಲೆವಿ ರೂಪದಲ್ಲಿ ಸಂಗ್ರಹ. ಕೇಂದ್ರ ಸರ್ಕಾರ ರೂಪಿಸಿದ ಕಾನೂನಿನಲ್ಲಿ 5 ಲಕ್ಷ ಟನ್ ಲೆವಿ ಅಕ್ಕಿ ಸಂಗ್ರಹಿಸಬೇಕೆಂಬ ನಿಯಮವಿದೆ. ಆದರೆ ಗಿರಣಿ ಮಾಲೀಕರ ಬೇಡಿಕೆ ಪೂರೈಸಲು ಈ ನಿರ್ಧಾರ
- ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ವೇತನ, ಪಿಂಚಣಿ ಸೇರಿದಂತೆ ಹಲವು ಸೌಲಭ್ಯ ಕೋರಿ ನ್ಯಾಯಾಲಯದಲ್ಲಿ 942 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಸರ್ಕಾರದ ಆರ್ಥಿಕ ವಿಚಾರಗಳಲ್ಲಿ ನ್ಯಾಯಾಲಯ ಭಾಗವಹಿಸುವ ಅಧಿಕಾರ ಇಲ್ಲದೇ ಇರುವ ಹಿನ್ನೆಲೆಯಲ್ಲಿ ವೇತನ- ಪಿಂಚಣಿ ನಿಯಂತ್ರಣ ಅಧ್ಯಾದೇಶ ಜಾರಿಗೆ ತರಲು ನಿರ್ಧಾರ.
- ಮರಳು ಲಾರಿ ಮಾಲೀಕರ ಒತ್ತಡಕ್ಕೆ ಮಣಿಯದೇ ಹೊಸ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿರ್ಧಾರ. ಲಾರಿ ಮಾಲೀಕರು ಒಂದೇ ಪರ್ಮಿಟ್ ಪಡೆದು ಎಲ್ಲಿ ಬೇಕೆಂದರಲ್ಲಿಂದ ಮರಳು ತುಂಬಿಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಿದ್ದಾರೆ. ಇದೆಲ್ಲ ಬ್ಲ್ಯಾಕ್‌ಮೇಲ್ ತಂತ್ರ. ಇದಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು. ಹೊಸ ನೀತಿ ಜಾರಿಯಿಂದ ಸರ್ಕಾರಕ್ಕೆ ವಾರ್ಷಿಕ 1000 ಕೋಟಿ ಆದಾಯ ಬರುತ್ತದೆ. ಹೀಗಾಗಿ ಕಾನೂನು ಜಾರಿಗೆ ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಸಂಪುಟ ಸಭೆ ನಿರ್ಧರಿಸಿದೆ.

ಪ್ರಮುಖ ನಿರ್ಣಯಗಳು
- ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಸಾರ್ವಜನಿಕ ಆಹಾರ ಪೂರೈಕೆಗೆ ರಾಜ್ಯಾದ್ಯಂತ ದಾಸ್ತಾನು ಕೇಂದ್ರ ಸ್ಥಾಪಿಸಲು ನಬಾರ್ಡ್‌ನಿಂದ 2776.82 ಲಕ್ಷ ನಬಾರ್ಡ್‌ನಿಂದ ಸಾಲ ಪಡೆಯಲು ತಾತ್ವಿಕ ಒಪ್ಪಿಗೆ
-  ದಾವಣಗೆರೆಯಲ್ಲಿ ಐಟಿಐ ತರಬೇತುದಾರರ ತರಬೇತಿ ಸಂಸ್ಥೆ ಸ್ಥಾಪನೆಗೆ 5 ಕೋಟಿ
- ಚಾಮರಾಜನಗರದ ಹ್ಯೂಂಗ್ಯಂನಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಸ್ಥಾಪನೆಗೆ 3.8 ಕೋಟಿ, ಗದಗದ ಕುರ್ತುಕೋಟಿಗೆ 8.51 ಕೋಟಿ, ಸೋಮವಾರಪೇಟೆಗೆ 9.31 ಕೋಟಿ ಬಿಡುಗಡೆ
-  ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಶ್ಟ ಜಾತಿ ಮತ್ತು ಪಂಗಡದವರಿಗೆ ಸಾಲ ಸೌಲಭ್ಯ ನೀಡಲು 50 ಕೋಟಿ ಸಾಲಕ್ಕೆ ಖಾತರಿ
- ಮೈಸೂರಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ 115 ಕೋಟಿ ಬಿಡುಗಡೆ
-  ಚಾಮರಾಜನಗರಕ್ಕೆ ಪ್ರತ್ಯೇಕ ಹಾಲು ಉತ್ಪಾದಕ ಸಂಘ ಸ್ಥಾಪಿಸಲು 83 ಕೋಟಿ ಬಿಡುಗಡೆ ಮತ್ತು 45 ಎಕರೆ ಜಾಗ ನಿಗದಿ
- ಕೊಪ್ಪಳ ಜಿಲ್ಲೆ ಯಲಬುರ್ಗ, ಗಂಗಾವತಿ ಮತ್ತು ಕುಷ್ಟಗಿ ತಾಲೂಕಿನ ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಗೆ 135 ಕೋಟಿ
- ಬೆಳಗಾವಿ ಜಿಲ್ಲೆಗೆ ಬಳ್ಳಾರಿ ನಾಲಾ ಯೋಜನೆಗೆ 635.5 ಕೋಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement